Site icon Vistara News

‌Yathindra Siddaramaiah : ‘ಅಪ್ಪಾ ಜಿ’ ಪೋಸ್ಟರ್‌ ಬಿಟ್ಟು ಕಾಲೆಳೆದ ಬಿಜೆಪಿ!

APPA G tweet from BJP

ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM siddaramaiah) ಅವರ ಸರ್ಕಾರದಲ್ಲಿ ಮಗ ಯತೀಂದ್ರ ಸಿದ್ದರಾಮಯ್ಯ (‌Yathindra Siddaramaiah) ಹಸ್ತಕ್ಷೇಪ ಹೆಚ್ಚಾಗಿದ್ದು, ವರ್ಗಾವಣೆ ದಂಧೆ ನಡೆಯುತ್ತಿದೆ ಎಂಬ ಆರೋಪಕ್ಕೆ ಪೂರಕವಾಗಿ ಲಭ್ಯವಾಗಿರುವ ವಿಡಿಯೊ ಸಾಕ್ಷಿಯನ್ನು ಇಟ್ಟುಕೊಂಡು ಬಿಜೆಪಿ ಈಗ ಪೋಸ್ಟರ್‌ ಅಭಿಯಾನವನ್ನು ಪ್ರಾರಂಭ ಮಾಡಿದೆ. ಎರಡು ದಿನಗಳ ಹಿಂದಷ್ಟೇ “ಹೆಲೋ ಅಪ್ಪ..!” ಎಂಬ ಅಡಿ ಶೀರ್ಷಿಕೆ ಅಡಿ ಶ್ಯಾಡೋ ಸಿಎಂ ಪೋಸ್ಟರ್‌ ಮಾಡಿ ಬಿಟ್ಟಿದ್ದ ಬಿಜೆಪಿ, ಈಗ ಪಾರ್ಲೆ ಜಿ ಬಿಸ್ಕೆಟ್‌ ಮಾದರಿಯಲ್ಲಿ “ಅಪ್ಪಾ ಜಿ” ಎಂಬ ಪೋಸ್ಟರ್‌ ಒಂದನ್ನು ಸಿದ್ಧಪಡಿಸಿ ಸಿಎಂ ಸಿದ್ದರಾಮಯ್ಯ ಸಹಿತ ಕಾಂಗ್ರೆಸ್‌ ಸರ್ಕಾರದ ಕಾಲೆಳೆದಿದೆ.

ಈ ಬಗ್ಗೆ ತನ್ನ ಸೋಷಿಯಲ್‌ ಮೀಡಿಯಾ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಬಿಜೆಪಿ, “ಅಪ್ಪಾ ಜಿ” ಎಂಬ ಪೋಸ್ಟರ್‌ ಮೂಲಕ ಕಾಂಗ್ರೆಸ್‌ ಸರ್ಕಾರವನ್ನು ಟೀಕೆ ಮಾಡಿದೆ. ಇದರಲ್ಲಿ “ಒಬ್ಬರು ಕಲೆಕ್ಷನ್‌ ಮಾಸ್ಟರ್. ಇನ್ನೊಬ್ಬರು ಡೀಲ್‌ ಮಾಸ್ಟರ್. ಇದೇ #‌ATMSarkara ದ ಮ್ಯಾಟರ್!” ಎಂದು ಸಹ ಬರೆದುಕೊಂಡಿದೆ. ಜತೆಗೆ #ShadowCM, #CongressFailsKarnataka ಎಂಬ ಹ್ಯಾಷ್‌ಟ್ಯಾಗ್‌ ಅನ್ನು ಹಾಕಲಾಗಿದೆ.

ವೈರಲ್‌ ಆಗಿದ್ದ ಶ್ಯಾಡೋ ಸಿಎಂ ಪೋಸ್ಟ್‌

ಬಿಜೆಪಿ ಹರಿಬಿಟ್ಟಿದ್ದ ಶ್ಯಾಡೋ ಸಿಎಂ ಪೋಸ್ಟ್‌ ಸಖತ್‌ ವೈರಲ್‌ ಆಗಿತ್ತು. ಶ್ಯಾಡೋ ಸಿಎಂ ಪೋಸ್ಟರ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಫೋಟೊವನ್ನು ಚಿಕ್ಕದಾಗಿ ಹಾಕಿ ಅವರ ನೆರಳನ್ನು ದೊಡ್ಡದು ಮಾಡಿ ಅದರಲ್ಲಿ ಯತೀಂದ್ರ ಸಿದ್ದರಾಮಯ್ಯ ಮೂಡುವಂತೆ ಮಾಡಿದ್ದಾರೆ. ಜತೆಗೆ ಆ ಫೋಟೊ ಒಳಗೆ ಸಿಎಂ ಸಿದ್ದರಾಮಯ್ಯ ಅವರ ಲೆಟರ್‌ ಹೆಡ್‌ ಇರುವ ಪತ್ರಗಳನ್ನು ಮಸುಕು ಮಸುಕಾಗಿ ಹಾಕಲಾಗಿದೆ. ಜತೆಗೆ “Shadow CM The Yathindra” ಎಂಬುದಾಗಿ ಬರೆಯಲಾಗಿದೆ. ಈ ಮೂಲಕ ಬಿಜೆಪಿಯು ಸಿಎಂ ಸಿದ್ದರಾಮಯ್ಯ ಹಾಗೂ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಕಾಲೆಳೆದಿತ್ತು. ಈಗ ಅಪ್ಪಾ ಜಿ ಪೋಸ್ಟರ್‌ ಅನ್ನು ಬಿಡುಗಡೆ ಮಾಡಿದೆ.

ಇದನ್ನೂ ಓದಿ: Yathindra siddaramaiah : ಪರಿಷತ್‌ ಸ್ಥಾನವನ್ನೂ ಬಿಟ್ಟಿರುವ ಯತೀಂದ್ರ ಬಗ್ಗೆ ಮಾತನಾಡಬೇಡಿ ಎಂದ ಡಿಕೆಶಿ

ಏನಿದು ಪ್ರಕರಣ?

ಮೈಸೂರು ತಾಲೂಕಿನ ಕೀಳನಪುರ ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿದ್ದ ವೇಳೆ ಸಿದ್ದರಾಮಯ್ಯ ಅವರಿಂದ ಬಂದ ಫೋನ್‌ ಕರೆಗೆ ಉತ್ತರಿಸುವ ವೇಳೆ ಯತೀಂದ್ರ ಸಿದ್ದರಾಮಯ್ಯ ಎಡವಟ್ಟು ಮಾಡಿಕೊಂಡಿದ್ದಾರೆ. ಸಾರ್ವಜನಿಕರ ಮುಂದೆಯೇ ತಾನು ನೀಡಿದ ಲಿಸ್ಟ್ ಬಗ್ಗೆ ಅವರು ತಂದೆಯ ಜತೆ ಮಾತುಕತೆ ನಡೆಸಿದ್ದರು. ಫೋನ್‌ ಮಾಡಿ ಮಾತನಾಡಿದ ಯತೀಂದ್ರ, ತಾನು ನೀಡಿದ ಲಿಸ್ಟ್​ ಬಗ್ಗೆ ಮಾತನಾಡಿದ್ದಾರೆ. ಸಿದ್ದರಾಮಯ್ಯ ಅವರು ವಿವೇಕಾನಂದರ ಹೆಸರು ಎತ್ತಿದ್ದು, ಇದಕ್ಕೆ ಯಾರು ಎಂದು ಯತೀಂದ್ರ ಅವರು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಬೇರೊಂದು ಲಿಸ್ಟ್​ ನೀಡಿದ ಬಗ್ಗೆ ಅಸಮಾಧಾನಗೊಂಡ ಯತೀಂದ್ರ, ನಾನು ಕೊಟ್ಟಿರುವುದೇ ಐದು ಅಂತ ಹೇಳಿ ಮಹದೇವರಿಗೆ‌ ಫೋನ್ ನೀಡುವಂತೆ ಸಿದ್ದರಾಮಯ್ಯಗೆ ಸೂಚಿಸಿದ್ದರು. ಬಳಿಕ ಮಹದೇವ್ ಜತೆ ಮಾತನಾಡಿದ ಯತೀಂದ್ರ, ʼಮಹದೇವ್​ ಯಾಕೆ ಯಾವುದ್ಯಾವುದನ್ನೋ ಕೊಡುತ್ತಾ ಇದ್ದೀರಿ? ಮತ್ತೆ ಇದೆಲ್ಲ ಯಾರು ಕೊಡುತ್ತಿರೋದುʼ ಅಂತ ಪ್ರಶ್ನೆ ಮಾಡಿದ್ದಾರೆ. ʼಅದೆಲ್ಲ ಬೇಡ. ನಾನು ಯಾವುದು ನಾಲ್ಕೈದು ಕೊಟ್ಟಿದ್ದೇನೋ ಅಷ್ಟು ಮಾತ್ರ ಮಾಡಿʼ ಅಂತ ಯತೀಂದ್ರ ಅವರು ಮಹದೇವ ಅವರಿಗೆ ಸೂಚಿಸಿದ್ದರು. ಈ ವಿಡಿಯೊ ಈಗ ಪ್ರತಿಪಕ್ಷಗಳಿಗೆ ದೊಡ್ಡ ಅಸ್ತ್ರವಾಗಿದೆ.

ಈಗ ಸದ್ದು ಮಾಡುತ್ತಿದೆ ಇನ್ಸ್‌ಪೆಕ್ಟರ್‌ ವರ್ಗಾವಣೆ

ಪೊಲೀಸ್ ಇಲಾಖೆಯಲ್ಲಿ ಮತ್ತೆ 71 ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ (transfer) ಮಾಡಲಾಗಿದ್ದು, ಇದರಲ್ಲಿ ವಿವೇಕಾನಂದ ಎಂಬವರನ್ನು ಮೈಸೂರು ನಗರದ ವಿವಿ ಪುರಂ ಪೊಲೀಸ್‌ ಠಾಣೆಗೆ ವರ್ಗಾಯಿಸಿ ಆದೇಶ ನೀಡಲಾಗಿದೆ. ಇದು ಈಗ ಯತೀಂದ್ರ ವಿಡಿಯೊ ವಿವಾದಕ್ಕೆ ಮತ್ತಷ್ಟು ಪುಷ್ಟೀಕರಿಸುವಂತೆ ಮಾಡಿದೆ. ಆರೋಪ-ಪ್ರತ್ಯಾರೋಪಕ್ಕೂ ಕಾರಣವಾಗಿದೆ.

ವೀಡಿಯೊ ಸಂಭಾಷಣೆಯಲ್ಲಿ ವಿವೇಕಾನಂದ ಎಂಬ ಹೆಸರನ್ನು ಯತೀಂದ್ರ (yathindra siddaramiah) ಪ್ರಸ್ತಾಪ ಮಾಡಿದ್ದಕ್ಕೂ ಇದೀಗ ಅದೇ ವಿವೇಕಾನಂದ ಅನ್ನೋ ಹೆಸರಿನ ಇನ್ಸ್‌ಪೆಕ್ಟರ್‌ ವರ್ಗಾವಣೆಯಾದದ್ದಕ್ಕೂ ತಾಳೆಯಾಗಿದೆ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ವರ್ಗಾವಣೆ ದಂಧೆ ಆರೋಪ, ಪಾರದರ್ಶಕ ತನಿಖೆ ಅಗತ್ಯ

ರಾಜ್ಯ ಗುಪ್ತಚರ ಇಲಾಖೆಯ ಆದೇಶದಲ್ಲಿದ್ದ ವಿವೇಕಾನಂದ ಮೈಸೂರಿಗೆ ವರ್ಗಾವಣೆಯಾಗಿದ್ದಾರೆ. ಜತೆಗೆ, ಮೈಸೂರು ಜಿಲ್ಲೆಯಲ್ಲಿ ನಾಲ್ಕು ಮಂದಿ ಇನ್ಸ್‌ಪೆಕ್ಟರ್‌ಗಳ ವರ್ಗವಾಗಿದೆ. ಅದರಲ್ಲಿ ವಿವೇಕಾನಂದ ಅವರೂ ಒಬ್ಬರು. ʼʼನಾನು ಹೇಳಿರೋ ನಾಲ್ಕು ಮಾತ್ರ ಮಾಡಿʼʼ ಎಂದು ಮಹದೇವ್‌ಗೆ ಯತೀಂದ್ರ ಫೋನ್‌ನಲ್ಲಿ ಆದೇಶಿಸಿದ್ದರು. ಇದೀಗ ನಾಲ್ಕು ಮಂದಿಯ ವರ್ಗವಾಗಿರುವುದು, ಈ ಮಾತಿಗೆ ಇನ್ನಷ್ಟು ಪುಷ್ಟಿ ತುಂಬುವಂತಿದೆ. ಯತೀಂದ್ರ ಮಾತನಾಡಿರೋ ವಿವೇಕಾನಂದ ಇವರೇನಾ, ಆ ʼನಾಲ್ಕುʼ ಈ ನಾಲ್ಕೇನಾ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಮೂಡಿದ್ದು, ಸರ್ಕಾರದ ವಿರುದ್ಧದ ಆರೋಪಪಟ್ಟಿಯನ್ನು ಇನ್ನಷ್ಟು ಬಿಗಿ ಮಾಡಲು ಪ್ರತಿಪಕ್ಷಗಳ ನಾಯಕರು ಮುಂದಾಗಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಜತೆಗೆ ಬಿಜೆಪಿ ಸೋಷಿಯಲ್‌ ಮೀಡಿಯಾ ಘಟಕವು ಒಂದೊಂದೇ ಪೋಸ್ಟ್‌ಗಳನ್ನು ಅಪ್ಲೋಡ್‌ ಮಾಡುತ್ತಾ ಬರುತ್ತಿದೆ.

Exit mobile version