Site icon Vistara News

Yathindra Siddaramaiah: ಲೋಕಸಭೆ ಚುನಾವಣೆಯಲ್ಲಿ ಯತೀಂದ್ರ ಸ್ಪರ್ಧೆ ಖಚಿತ; ಸುಳಿವು ನೀಡಿದ ಸಿದ್ದರಾಮಯ್ಯ

Siddaramaiah

ಹುಬ್ಬಳ್ಳಿ: ಸಿಎಂ ಸಿದ್ದರಾಮಯ್ಯ ಅವರಿಗಾಗಿ ಕ್ಷೇತ್ರ ತ್ಯಾಗ ಮಾಡಿದ್ದ ಪುತ್ರ ಯತೀಂದ್ರ ಸಿದ್ದರಾಮಯ್ಯಗೆ ಮೈಸೂರು ಲೋಕಸಭಾ ಕ್ಷೇತ್ರ ಟಿಕೆಟ್‌ ನೀಡಬೇಕು ಎಂಬ ಒತ್ತಾಯ ಕಾಂಗ್ರೆಸ್‌ ಕಾರ್ಯಕರ್ತರಿಂದ ಕೇಳಿಬಂದಿದೆ. ಮತ್ತೊಂದೆಡೆ ಪಕ್ಷ ಸೂಚಿಸಿದರೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧ ಎಂದು ಯತೀಂದ್ರ ಅವರು ಕೂಡ ಇತ್ತೀಚೆಗೆ ಹೇಳಿದ್ದರು. ಇದರ ಬೆನ್ನಲ್ಲೇ ಯತೀಂದ್ರ (Yathindra Siddaramaiah) ಅವರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಸುಳಿವನ್ನು ಸಿಎಂ ಸಿದ್ದರಾಮಯ್ಯ ಅವರೇ ನೀಡಿದ್ದಾರೆ.

ಸಂಸತ್‌ ಭದ್ರಾತಾ ಲೋಪ ಪ್ರಕರಣದಲ್ಲಿ ಪ್ರತಾಪ್ ಸಿಂಹರನ್ನು ಟ್ರ್ಯಾಪ್ ಮಾಡಲಾಗಿದೆ ಎಂಬ ಲೆಹರ್ ಸಿಂಗ್ ಆರೋಪಕ್ಕೆ ನಗರದಲ್ಲಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ಅವರು, ಬಿಜೆಪಿಯವರಿಗೆ ಸ್ವಲ್ಪ ಬುದ್ಧಿ ಕಡಿಮೆ. ಲೆಹರ್ ಸಿಂಗ್ ಅವರೇನು ಆರೋಪ ಮಾಡುವುದು. ಯತೀಂದ್ರ ಅವರನ್ನು ಲೋಕಸಭೆಗೆ ನಿಲ್ಲಿಸಲ್ಲ. ಆದರೆ ಜನ ಬಯಸಿದ್ರೆ ಏನ್ ಮಾಡುವುದು ಎನ್ನುವ ಮೂಲಕ ಪರೋಕ್ಷವಾಗಿ ಯತೀಂದ್ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಸುಳಿವು ನೀಡಿದ್ದಾರೆ.

ಸಂಸತ್ ಭವನದಲ್ಲಿ ಭದ್ರತಾ ಲೋಪ ಆಗಿದೆ ಎಂದರೆ ಅದು ರಾಜಕೀಯಾನಾ? ಜಾತಿ ಗಣತಿ ವರದಿಯೇ ಬಂದಿಲ್ಲ. ಅದರಲ್ಲಿ ಏನಿದೆ ಅನ್ನೋದು ಗೊತ್ತಾ ನಿಮಗೆ? ನನಗೂ ಗೊತ್ತಿಲ್ಲ, ಶಾಸಕರಿಗೂ ಗೊತ್ತಿಲ್ಲ ಎಂದಿರುವ ಅವರು, ವಂಟಮೂರಿ ಘಟನೆಯಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಸರ್ಕಾರ ಎಲ್ಲಾ ಕಾನೂನು ಕ್ರಮ ಕೈಗೊಂಡಿದೆ. ಹೆಣ್ಮಗಳ ಮೇಲೆ ದೌರ್ಜನ್ಯ ಆಗಿರುವುದು ಖಂಡನೀಯ. ನಮ್ಮ ಗೃಹ ಸಚಿವರು ಕೂಡಲೇ ಅಲ್ಲಿ ಹೋಗಿದ್ದರು. ಆರೋಪಿಗಳನ್ನು ಕೂಡಲೇ ಅರೆಸ್ಟ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ನಡ್ಡಾ ಮತ್ತು ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ನ್ಯಾಷನಲ್ ಕ್ರೈಂ ರಿಫೋರ್ಟ್ ತೆಗೆದು ನೋಡಿದರೆ ಬಿಜೆಪಿ ಕಾಲದಲ್ಲಿ ಏನಾಗಿದೆ ಗೊತ್ತಾಗುತ್ತದೆ. ಉತ್ತರ ಪ್ರದೇಶದಲ್ಲಿ ಬಾಲಕಿ ಮೇಲೆ ಬಿಜೆಪಿ ಶಾಸಕ ರೇಪ್ ಮಾಡಿದ್ದಾರೆ. ಇದಕ್ಕೆ ನಡ್ಡಾ ಏನು ಹೇಳುತ್ತಾರೆ? ನಾಗರಿಕ ಸಮಾಜದಲ್ಲಿ ನಾಗರಿಕರು ತಲೆ ತಗ್ಗಿಸುವ ಕೆಲಸ ಆಗಿದೆ. ಯಾರ ಕಾಲದಲ್ಲಿ ಆದರೇನು? ಜೋಶಿ ಅವರು ಇದಕ್ಕೇನು ನೀಡುತ್ತಾರೆ. ಬಿಜೆಪಿ ಶಾಸಕನಿಗೆ ಶಿಕ್ಷೆಯಾಗಿದೆ ಅಂತ ಜೋಶಿ ಅವರನ್ನು ಕೇಳಿ ಎಂದು ಹೇಳಿದ್ದಾರೆ.

ಇದನ್ನೂ ಓದಿ | CM Siddaramaiah: ನಾನು ಮತ್ತು ಬೆಲ್ಲದ್‌, ಗೋಕಾಕ್ ಚಳವಳಿಯ ಒಡನಾಡಿಗಳು: ಸಿದ್ದರಾಮಯ್ಯ

ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಸರ್ಕಾರ ತೀರ್ಮಾನ ಮಾಡಿಲ್ಲ. ಅದು ವೈಯಕ್ತಿಕ ಅಭಿಪ್ರಾಯ ಎಂದು ಸಿಎಂ ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version