ಬೆಂಗಳೂರು: ವಿಧಾನಮಂಡಲ ಅಧಿವೇಶನದಲ್ಲಿ (Assembly Session) ಡೆಪ್ಯುಟಿ ಸ್ಪೀಕರ್ (Deputy Speaker) ಮೇಲೆ ಕಾಗದ ಎಸೆದಿದ್ದ 10 ಬಿಜೆಪಿ ಸದಸ್ಯರನ್ನು ಅಧಿವೇಶನದಿಂದ ಅಮಾನತು ಮಾಡಿ ಆದೇಶ ಮಾಡಿದ ಬೆನ್ನಲ್ಲೇ ಸದನದೊಳಗೆ ಬಿಜೆಪಿಯಿಂದ ಭಾರಿ ಪ್ರತಿಭಟನೆ ವ್ಯಕ್ತವಾಗಿದೆ. ಈ ವೇಳೆ ನಡೆದ ನೂಕಾಟ, ತಳ್ಳಾಟದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಸ್ವಸ್ಥಗೊಂಡು ಕೆಳಗೆ ಬಿದ್ದಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಮಹಾಘಟಬಂಧನದ (Mahagathbandhan) ಸಭೆಗೆ ಐಎಎಸ್ ಅಧಿಕಾರಿಗಳ (IAS Officers) ಬಳಕೆ ಮಾಡಿಕೊಳ್ಳಲಾಗಿದೆ ಎನ್ನುವುದನ್ನು ವಿರೋಧಿಸಿ ವಿಧಾನಮಂಡಲ ಅಧಿವೇಶನದಲ್ಲಿ ಡೆಪ್ಯುಟಿ ಸ್ಪೀಕರ್ ಮೇಲೆ ಬಿಜೆಪಿ ಸದಸ್ಯರು ಕಾಗದಗಳನ್ನು ಎಸೆದಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸ್ಪೀಕರ್ ಯು.ಟಿ. ಖಾದರ್ (Speaker UT Khadar) ಬಿಜೆಪಿಯ 10 ಸದಸ್ಯರನ್ನು ಅಮಾನತು ಮಾಡಿ ಆದೇಶಿಸಿದ್ದಾರೆ. ಈ ಕ್ರಮವನ್ನು ಪ್ರಶ್ನೆ ಮಾಡಿದ ಬಿಜೆಪಿ ಆದೇಶವನ್ನು ಹಿಂಪಡೆಯುವಂತೆ ಆಗ್ರಹಿಸಿದ್ದಾರೆ. ಈ ವೇಳೆ ತಳ್ಳಾಟ-ನೂಕಾಟಗಳು ನಡೆದಿವೆ. ಆಗ ಯತ್ನಾಳ್ ಅವರು ಕುಸಿದು ಬಿದ್ದಿದ್ದಾರೆ.
ಇದನ್ನೂ ಓದಿ: MLA Abu Azmi: ವಂದೇ ಮಾತರಂ ಎನ್ನಲು ಎಸ್‌ಪಿ ಶಾಸಕ ನಕಾರ; ಧರ್ಮವೇ ಮೇಲು ಎಂದ ಅಬು ಅಜ್ಮಿ
ಆಸ್ಪತ್ರೆಗೆ ಸ್ಥಳಾಂತರ, ಚಿಕಿತ್ಸೆ
ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಅಧಿಕ ರಕ್ತದೊತ್ತಡ ಆಗಿದೆ ಎನ್ನಲಾಗಿದೆ. ಈ ಕಾರಣಕ್ಕಾಗಿಯೇ ಅವರು ಕುಸಿದು ಬಿದ್ದಿದ್ದಾರೆ ಎಂಬ ಮಾಹಿತಿ ಬಂದಿದೆ. ಕೂಡಲೇ ಅವರನ್ನು ಆಂಬ್ಯುಲೆನ್ಸ್ ಮೂಲಕ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಯತ್ನಾಳ್ ಅವರ ಜತೆಗೆ ಬಿಜೆಪಿ ಸದಸ್ಯರು ಹೋಗಿದ್ದಾರೆ. ಅಲ್ಲಿ ಅವರಿಗೆ ಚಿಕಿತ್ಸೆ ಮುಂದುವರಿದಿದೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಸ್ವಸ್ಥ; ಆಸ್ಪತ್ರೆಗೆ ಕರೆದೊಯ್ಯುವ ವಿಡಿಯೊ ಇಲ್ಲಿದೆ
10 ಬಿಜೆಪಿ ಸದಸ್ಯರು ಸಸ್ಪೆಂಡ್; ಎಳೆದು ಹೊರಹಾಕಿದ ಮಾರ್ಷಲ್
ಡೆಪ್ಯುಟಿ ಸ್ಪೀಕರ್ (Deputy Speaker) ಮೇಲೆ ಕಾಗದ ಎಸೆದಿದ್ದ 10 ಬಿಜೆಪಿ ಸದಸ್ಯರಾದ ಡಾ. ಸಿ.ಎನ್. ಅಶ್ವತ್ಥನಾರಾಯಣ, ಆರ್. ಅಶೋಕ್, ವಿ. ಸುನಿಲ್ ಕುಮಾರ್, ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್, ಯಶಪಾಲ್ ಸುವರ್ಣ, ಭರತ್ ಶೆಟ್ಟಿ, ಧೀರಜ್ ಮುನಿರಾಜು, ಆರಗ ಜ್ಞಾನೇಂದ್ರ, ಅರವಿಂದ ಬೆಲ್ಲದ್ ಅವರನ್ನು ಈ ಅಧಿವೇಶನ ಮುಗಿಯುವವರೆಗೆ ಸದನದಿಂದ ಅಮಾನತು ಮಾಡುವ ಪ್ರಸ್ತಾವನೆಯನ್ನು ಸ್ಪೀಕರ್ ಅಂಗೀಕರಿಸಿದರು.
ಐಎಎಸ್ ಅಧಿಕಾರಿಗಳನ್ನು ಬಳಸಿಕೊಂಡಿರುವುದಕ್ಕೆ ಮಧ್ಯಾಹ್ನ ಬಿಜೆಪಿ ಸದಸ್ಯರು ಗದ್ದಲ ನಡೆಸಿದ್ದರು. ಸ್ಪೀಕರ್ ಯು.ಟಿ. ಖಾದರ್ ಏಕಪಕ್ಷೀಯವಾಗಿ ಸರ್ಕಾರದ ಪರವಾಗಿದ್ದಾರೆ ಎಂದು ಆರೋಪಿಸಿದರು. ನಂತರ ಕುರ್ಚಿಯಲ್ಲಿ ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ ಆಸೀನರಾಗಿದ್ದರು. ಅಧ್ಯಕ್ಷರ ಆಸನದ ಎದುರು ಪ್ರತಿಭಟನೆ ಮಾಡುತ್ತಿದ್ದ ಬಿಜೆಪಿ ಸದಸ್ಯರು ವಿವಿಧ ವಿಧೇಯಕಗಳ ಪ್ರತಿಗಳನ್ನು ಚೂರುಚೂರು ಮಾಡಿ ಸ್ಪೀಕರ್ ಸ್ಥಾನದಲ್ಲಿ ಕುಳಿತಿದ್ದ ಡೆಪ್ಯುಟಿ ಸ್ಪೀಕರ್ ಮುಖದ ಮೇಲೆ ಎಸೆದಿದ್ದರು. ನಂತರ ಸದನವನ್ನು ಮುಂದೂಡಲಾಯಿತು.
ಇದನ್ನೂ ಓದಿ: Terrorists in Bengaluru : ಕಿರಾತಕ ಉಗ್ರರಿಗೆ ನೆಲೆ ಒದಗಿಸಿದ ಹಿಂದು ಮನೆ ಮಾಲಕಿ ಹೇಳುವುದೇನು?
ಸರ್ವಾಧಿಕಾರಿ ಸರ್ಕಾರ ಎಂದು ಬಿಜೆಪಿ ಸದಸ್ಯರ ಘೋಷಣೆ
ಮತ್ತೆ ಸದನ ಸೇರಿದಾಗಲೂ ಗದ್ದಲ ಮುಂದುವರಿಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ನಿಮ್ಮ ಗೊಡ್ಡು ಬೆದರಿಕೆಗೆಲ್ಲ ಬಗ್ಗುವುದಿಲ್ಲ ಎಂದರು. ಇದೇ ವೇಳೆ ಒಂಭತ್ತು ಶಾಸಕರ ಹೆಸರನ್ನು ಸ್ಪೀಕರ್ ಖಾದರ್ ಹೆಸರಿಸಿದರು. ನಂತರ ಇವರನ್ನು ಅಮಾನತು ಮಾಡುವ ಪ್ರಸ್ತಾವವನ್ನು ಕಾನೂನು ಸಚಿವ ಎಚ್.ಕೆ. ಪಾಟೀಲ್ ಮಂಡಿಸಿದರು. ಇದನ್ನು ಧ್ವನಿಮತದ ಮೂಲಕ ಮಂಡಿಸಿದರು. ಈ ಪ್ರಸ್ತಾವನೆಯನ್ನು ಅತ್ಯಂತ ಬೇಸರದಿಂದ ಮಂಡಿಸುತ್ತಿದ್ದೇನೆ ಎಂದು ಧ್ವನಿಮತಕ್ಕೆ ಹಾಕಿದರು. ಒಪ್ಪಿಗೆ ದೊರೆತ ನಂತರ, ಹೆಸರಿಸಿದ 9 ಸದಸ್ಯರು ಸದನದಿಂದ ಹೊರಗೆ ಹೋಗಬೇಕು ಎಂದು ತಿಳಿಸಿ ಸದನವನ್ನು ಹತ್ತು ನಿಮಿಷ ಮುಂದೂಡಲಾಯಿತು. ಇದು ಸರ್ವಾಧಿಕಾರಿ ಸರ್ಕಾರ ಎಂದು ಬಿಜೆಪಿ ಸದಸ್ಯರು ಘೋಷಣೆ ಕೂಗಿದರು.
ಅಮಾನತಾದರೂ ಹೊರಬರಲು ಒಪ್ಪದ ಶಾಸಕರು!
ಅಮಾನತು ಆದೇಶಕ್ಕೆ ಒಳಗಾದರೂ ವಿಧಾನಸಭೆ ಬಿಟ್ಟು ಬಿಜೆಪಿ ಶಾಸಕರು ಹೊರಬರಲು ಒಪ್ಪಲಿಲ್ಲ. ಈ ವೇಳೆ ಮಾರ್ಷಲ್‌ಗಳು ಹೊರಗಡೆ ಹೋಗುವಂತೆ ಅಮಾನತುಗೊಂಡ ಶಾಸಕರ ಬಳಿ ಮನವಿ ಮಾಡಿದರೂ ಕೇಳದೇ ಹೋಗುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದರು. ಈ ವೇಳೆ ಅಮಾನತು ಆದೇಶ ಹಿಂಪಡೆಯುವಂತೆ ಬಿಜೆಪಿ ಶಾಸಕರು ಒತ್ತಾಯ ಮಾಡಿದ್ದಾರೆ.
ಅಲ್ಲದೆ, ಈ ಸಂಬಂಧ ಸಿಎಂ ಸಿದ್ದರಾಮಯ್ಯ ಜತೆ ಸದನದಲ್ಲಿ ಮಾತುಕತೆ ನಡೆಸಲಾಯಿತು. ಆದರೆ, ಈ ಬಗ್ಗೆ ನಾವು ಏನೂ ಮಾಡಲು ಆಗುವುದಿಲ್ಲ. ಇದು ಸ್ಪೀಕರ್ ಆದೇಶವಾಗಿದೆ ಎಂದು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಹೇಳಿದರು.
ಇದನ್ನೂ ಓದಿ:Assembly Session : 5 ವಿಧೇಯಕ ಪಾಸ್; ಬಿಲ್ ಹರಿದು ಸ್ಪೀಕರ್ ಮುಖಕ್ಕೆಸೆದ ಬಿಜೆಪಿ-ಜೆಡಿಎಸ್!
ಸದನದಿಂದ ಎಳೆದು ಹೊರ ಹಾಕಿದ ಮಾರ್ಷಲ್‌ಗಳು
ಹೀಗೆ ಒಪ್ಪದೇ ಇರುವ ಶಾಸಕರನ್ನು ಮಾರ್ಷಲ್‌ಗಳು ಸದನದಿಂದ ಹೊರಗೆ ಎಳೆದು ಹಾಕಿದ್ದಾರೆ. ಮೊದಲಿಗೆ ಆರಗ ಜ್ಞಾನೇಂದ್ರ ಹೊರಬಂದಿದ್ದಾರೆ. ಆದರೆ, ಹೊರಗೆ ಬರುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತ ಉಳಿದ 9 ಶಾಸಕರನ್ನು ಮಾರ್ಷಲ್‌ಗಳು ಹಿಡಿದು ಹೊರಗೆ ಹಾಕಿದ್ದಾರೆ.