Site icon Vistara News

B S Yediyurappa : ಯಡಿಯೂರಪ್ಪ ಅವರಿಗೆ 80: ಆದರೆ ಈಗಲೂ ಅವರು ಬಿಜೆಪಿಗೆ ಆಧಾರ

Yeddyurappa is 80: But still he is the backbone of BJP

#image_title

ಮಾರುತಿ ಪಾವಗಡ, ಬೆಂಗಳೂರು

ಹಿಂದೆ ಅವಿಭಕ್ತ ಕುಟುಂಬಗಳಿರುತ್ತಿದ್ದವು. ಅದಕ್ಕೊಬ್ಬ ಯಜಮಾನ ಇರುತ್ತಿದ್ದ. ಆತನ ಆಣತಿಯಂತೆ ಆ ದೊಡ್ಡ ಕುಟುಂಬದ ಆಗುಹೋಗುಗಳು ನಡೆಯುತ್ತಿದ್ದವು. ಆ ಯಜಮಾನನಿಗೆ ವಯಸ್ಸಾದ ಮೇಲೆ ಮನೆಯ ಯಜಮಾನಿಕೆಯನ್ನು ಮತ್ತೊಬ್ಬರಿಗೆ ವಹಿಸಿ ತೆರೆಮರೆಗೆ ಸರಿಯುತ್ತಿದ್ದರು. ಅದೇ ರೀತಿ ಯಡಿಯೂರಪ್ಪ (B S Yediyurappa) ಅವರು ರಾಜ್ಯ ಬಿಜೆಪಿಯ ಪಾಲಿಗಿದ್ದರು. 80ರ ವಯಸ್ಸಿನಲ್ಲಿ ಅವರು ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿದ್ದಾರೆ. ಆದರೆ, ರಾಜ್ಯ ಬಿಜೆಪಿಗೆ ಇಂದಿಗೂ ಅವರೇ ಆಧಾರ ಎನ್ನುವುದು ಮಾತ್ರ ಸ್ಪಷ್ಟ.

ಮಂಡ್ಯದಲ್ಲಿ ಹುಟ್ಟಿ ವಿದ್ಯಾಭ್ಯಾಸ ಮುಗಿಸಿ ಉದ್ಯೋಗ ಗಿಟ್ಟಿಸಿಕೊಂಡ ಯಡಿಯೂರಪ್ಪ ಏಕಾಏಕಿ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸಿದರು. ಅಲ್ಲೊಂದು ರೈಸ್ ಮಿಲ್ ನಲ್ಲಿ ಅಕೌಂಟೆಂಟ್ ಆಗಿ ಕೆಲಸಕ್ಕೆ ಸೇರಿ ಹೊಸ ಜೀವನ ಆರಂಭಿಸಿದರು. ಒಂದು ವೇಳೆ ಅದೇ ಸರ್ಕಾರಿ ಕೆಲಸದಲ್ಲಿ ಸಂತೃಪ್ತಿ ಹೊಂದಿದ್ದರೆ, ಇಂದಿಗೆ 20 ವರ್ಷಗಳ ಹಿಂದೆಯೇ ಕೆಲಸದಿಂದ ನಿವೃತ್ತಿ ಹೊಂದಿ ಸರ್ಕಾರದಿಂದ ಬರುವ ಪೆನ್ಸನ್ ದುಡ್ಡಿನಲ್ಲಿ ಬದುಕು ನಡೆಸುತ್ತ ಎಲ್ಲರಂತೆ ನಮ್ಮ ಜತೆ ಇರುತ್ತಿದ್ದರು. ಆದರೆ ಅಂದು ಶಿವಮೊಗ್ಗ ಕಡೆ ಬೆಳೆಸಿದ ಪಯಣ ಇಂದು ಅವರು ರಾಜ್ಯದಲ್ಲಿ ಬಿಜೆಪಿಯನ್ನ ಮತ್ತೆ ಮತ್ತೆ ಅಧಿಕಾರಕ್ಕೆ ತಂದ ಬಲಿಷ್ಠ ನಾಯಕರಾಗಿ ಹೊರಹೊಮ್ಮಲು ಕಾರಣವಾಯಿತು. ರಾಜ್ಯದಲ್ಲಿ ಬಿಜೆಪಿ ಎರಡು ಸ್ಥಾನದಿಂದ 110 ಸ್ಥಾನ ಗಳಿಸುವಲ್ಲಿ ಯಡಿಯೂರಪ್ಪ ಅವರ ಪಾತ್ರ ನಿರ್ಣಾಯಕ.

ಯಡಿಯೂರಪ್ಪ ಅವರು ಈಗ ಯಜಮಾನಿಕೆ ತೊರೆಯುವ ಮಾತನಾಡಿದ್ದಾರೆ. ವಿಧಾನಸಭೆ ಕಲಾಪದ ಕೊನೆಯ ದಿನ ಅವರು, ಇದು ನನ್ನ ಕೊನೆಯ ಅಧಿವೇಶನ. ಆದರೆ ಮನೆಯಲ್ಲಿ ಸುಮ್ಮನೆ ಕೂರಲ್ಲ. ರಾಜ್ಯ ಸುತ್ತಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುತ್ತೇನೆಂದು ವಾಗ್ದಾನ ಮಾಡಿದ್ದಾರೆ. ಯಡಿಯೂರಪ್ಪ ಓಡಾಡುವಷ್ಟು ಗಟ್ಟಿಮುಟ್ಟಾಗಿದ್ದಾರೆ. ರಾಜ್ಯ ಬಿಜೆಪಿಗೆ ಇಂದಿಗೂ ಯಡಿಯೂರಪ್ಪ ಅವರ ಸಾರಥ್ಯದ ಅಗತ್ಯವಿದೆ. ಬಿಜೆಪಿ ಎಂಬ ಕುಟುಂಬದ ರಥ ಎಳೆಯಲು ಯಡಿಯೂರಪ್ಪ 80 ದಾಟಿದರೂ ಸಜ್ಜಾಗಿದ್ದಾರೆ.

ವಿಸ್ತಾರ ನ್ಯೂಸ್ ಗೆ ಶಿಕಾರಿಪುರದ ಜನ ಹೇಳಿದ್ದೇನು?

ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸದಿರಲು ಯಡಿಯೂರಪ್ಪ ನಿರ್ಧರಿಸಿದ್ದಾರೆ. 1983ರಿಂದ ನಲವತ್ತು ವರ್ಷಗಳ ಕಾಲ ಯಡಿಯೂರಪ್ಪ ಅವರನ್ನು ವಿಧಾನಸಭೆಗೆ ಕಳಿಸಿದ ಶಿಕಾರಿಪುರ ಜನರಿಗೆ ಮಾತ್ರ ಈ ನಿರ್ಧಾರದಿಂದ ಬಹಳ ಬೇಸರವಿದೆ.
ಬಿಜೆಪಿಗೆ ಇಂದಿಗೂ ಯಡಿಯೂರಪ್ಪ ಅವರ ಅನಿವಾರ್ಯತೆ ಇದೆ. ಯಡಿಯೂರಪ್ಪ ಅವರನ್ನು ಮನೆಯಲ್ಲಿ ಕೂರಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ತಾಕತ್ತು ರಾಜ್ಯ ಮತ್ತು ಕೇಂದ್ರ ಬಿಜೆಪಿ ನಾಯಕರಿಗೆ ಇಲ್ಲ. ಮುಖ್ಯಮಂತ್ರಿಯಾಗಿ ಚುರುಕಾಗಿ ಕೆಲಸ ಮಾಡುತ್ತಿದ್ದ ನಮ್ಮ ನಾಯಕನನ್ನು ಎರಡೇ ವರ್ಷಕ್ಕೆ ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದು ಸರಿಯಲ್ಲ ಎಂದು ಶಿಕಾರಿಪುರದ ಜನ ವಿಸ್ತಾರ ನ್ಯೂಸ್ ಜತೆ ತಮ್ಮ ಮನದಾಳದ ಮಾತನ್ನು ಹಂಚಿಕೊಂಡರು.

ಮುಂದಿನ ಚುನಾವಣೆಯಲ್ಲಿ ಯಡಿಯೂರಪ್ಪ ಅವರು ಯಾರಿಗೆ ಹೇಳ್ತಾರೋ ಅವರಿಗೆ ಓಟ್ ಹಾಕ್ತೇವೆ. ಅವರ ಮಗ ನಿಂತರೂ ಮತ ಹಾಕ್ತೇವೆ.ಅಥವಾ ಇನ್ಯಾರನ್ನೇ ಆಗಲಿ ಯಡಿಯೂರಪ್ಪ ಅವರು ಸೂಚಿಸುತ್ತಾರೋ ಅವರನ್ನು ಬೆಂಬಲಿಸುತ್ತೇವೆ. ಒಂದಂತೂ ಸತ್ಯ. ವಯಸ್ಸು ಎಂಭತ್ತಾದರೂ ಈಗಲೂ ಯಡಿಯೂರಪ್ಪ ಅವರೇ ಬಿಜೆಪಿಯ ಪ್ರಭಾವಿ ನಾಯಕ ಎಂದು ಶಿಕಾರಿಪುರದ ಜನ ಹೇಳಿದರು.

ಯಡಿಯೂರಪ್ಪ ಇನ್ನಷ್ಟು ವರ್ಷ ಸಕ್ರಿಯವಾಗಿರಬಹುದಿತ್ತು…

ಯಡಿಯೂರಪ್ಪ ಅವರು ರಾಜ್ಯ ಬಿಜೆಪಿಯಲ್ಲಿ ಮತ್ತಷ್ಟು ವರ್ಷ ಸಕ್ರಿಯವಾಗಿ ಇರಬಹುದಿತ್ತು. ಆದರೆ ವಯಸ್ಸಿನ ನೆಪದಲ್ಲಿ ಅವರನ್ನು ಇಷ್ಟು ಬೇಗ ನಿವೃತ್ತಿ ಆಗುವಂತೆ ಮಾಡಿದ್ದು ಸರಿಯಲ್ಲ. ಅಂದು 80ರ ದಶಕದಲ್ಲಿ ಪಕ್ಷ ಕಟ್ಟುವಾಗ ಇಲ್ಲದಿದ್ದ ನಿಯಮಗಳು ಈಗೇಕೆ?ವಾಜಪೇಯಿ, ಆಡ್ವಾಣಿ ಅವರು 80+ ವಯಸ್ಸಾದರೂ ಸಕ್ರಿಯ ರಾಜಕೀಯದಲ್ಲಿ ಇರಲಿಲ್ಲವೆ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.

ಇದನ್ನೂ ಓದಿ : B.S. Yediyurappa Birthday: ಮತ್ತಷ್ಟು ಸಫಲ, ಅರ್ಥಪೂರ್ಣ ಜೀವನ ನಿಮ್ಮದಾಗಲಿ: ಬಿ.ಎಸ್‌. ಯಡಿಯೂರಪ್ಪಗೆ ಬಿ.ಎಲ್‌. ಸಂತೋಷ್‌ ಶುಭಾಶಯ

ಯಡಿಯೂರಪ್ಪ ಅವರ ಜನುಮ ದಿನದ ದಿನವೇ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಅವರು ಚಾಲನೆ ನೀಡಿದ್ದಾರೆ. ಇದು ಯಡಿಯೂರಪ್ಪ ಮತ್ತು ಅವರ ಅಭಿಮಾನಿಗಳಿಗೆ ಅವಿಸ್ಮರಣೀಯವಾಗಿದೆ. ಇದು ಬಿಜೆಪಿ ಪಕ್ಷದಿಂದ ಯಡಿಯೂರಪ್ಪ ಅವರಿಗೆ ನೀಡಲಾಗಿರುವ ಬಹುದೊಡ್ಡ ಕೊಡುಗೆಯಾಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಕಾಂಗ್ರೆಸ್ ಮತ್ತು ಜೆ ಡಿ ಎಸ್ ನ ಪ್ರತಿರೋಧ ಭೇದಿಸಿ ಯಡಿಯೂರಪ್ಪ ಅವರು ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಸಫಲರಾಗುತ್ತಾರಾ ಎನ್ನುವುದು ಈಗ ಕುತೂಹಲದ ಪ್ರಶ್ನೆಯಾಗಿದೆ.

Exit mobile version