ಬೆಂಗಳೂರು: ಬಿಜೆಪಿಯ ರಾಷ್ಟ್ರೀಯ ಸಂಸದೀಯ ಮಂಡಳಿ ಹಾಗೂ ಕೇಂದ್ರ ಚುನಾವಣಾ ಸಮಿತಿಯ ಸದಸ್ಯರಾಗಿ ನೇಮಕಗೊಂಡ ನಂತರ ಇದೇ ಮೊದಲ ಬಾರಿಗೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಶುಕ್ರವಾರದಂದು (ಆ.26) ದೆಹಲಿಗೆ ಭೇಟಿ ನೀಡಲಿದ್ದಾರೆ.
ಪಕ್ಷದ ನಾಯಕರನ್ನು ಭೇಟಿಯಾಗುವ ಉದ್ದೇಶದಿಂದಲೇ ಅವರು ಈ ಪ್ರಯಾಣ ಬೆಳೆಸುತ್ತಿದ್ದು, ಪಕ್ಷದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಶುಕ್ರವಾರ ಬೆಳಗ್ಗೆ 9.15ಕ್ಕೆ ಅವರು ನಗರದಿಂದ ಹೊರಡಲಿದ್ದಾರೆ. ಕರ್ನಾಟಕ ಭವನದಲ್ಲಿ ಉಳಿದುಕೊಳ್ಳಲಿದ್ದು, ಪಕ್ಷದ ಹಿರಿಯ ನಾಯಕರನ್ನು ಹಾಗೂ ಕೇಂದ್ರ ಸಚಿವರನ್ನು ಅವರು ಭೇಟಿಯಾಗುವ ಸಾಧ್ಯತೆಗಳಿವೆ.
ಮುಂದಿನ ವಿಧಾನಸಭಾ ಚುನಾವಣೆಗೆ ಪಕ್ಷದ ಸಂಘಟನೆಯ ಜವಾಬ್ದಾರಿ ಹೊತ್ತಿರುವ ಬಿ ಎಸ್ ಯಡಿಯೂರಪ್ಪ, ಪಕ್ಷದಲ್ಲಿ ಮತ್ತು ಸರ್ಕಾರದಲ್ಲಿ ಆಗಬೇಕಾಗಿರುವ ಬದಲಾವಣೆಗಳ ಕುರಿತು ಪಕ್ಷದ ವರಿಷ್ಠರೊಂದಿಗೆ ಚರ್ಚಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಪಕ್ಷದ ನಾಯಕರ ಆಹ್ವಾನದ ಮೇರೇಗೆ ಅವರು ದೆಹಲಿಗೆ ತೆರಳುತ್ತಿದ್ದಾರೆ ಎನ್ನಲಾಗಿದೆ.
ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಅಧಿಕಾರಾವಧಿ ಮುಗಿಯುತ್ತಿದ್ದು, ನೂತನ ಅಧ್ಯಕ್ಷರ ನೇಮಕ ನಡೆಯಬೇಕಾಗಿದೆ. ಈ ಕುರಿತು ಯಡಿಯೂರಪ್ಪರೊಂದಿಗೆ ಪಕ್ಷದ ವರಿಷ್ಠರು ಚರ್ಚಿಸುವ ಸಾಧ್ಯತೆಗಳಿವೆ. ಸಂಪುಟ ಪುನರ್ ರಚನೆ, ಪಕ್ಷ ಸಂಘಟನೆ, ರಾಜ್ಯದಲ್ಲಿ ಕಾಂಗ್ರೆಸ್ ತಂತ್ರಗಳಿಗೆ ಪ್ರತಿ ತಂತ್ರ ಹೂಡುವ ಕುರಿತೂ ಯಡಿಯೂರಪ್ಪ ಪಕ್ಷದ ನಾಯಕರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ ಎಂದು ನಿರೀಕ್ಷಿಸಲಾಗುತ್ತಿದೆ.
ಅವರು ಶುಕ್ರವಾರ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಆದರೆ ಎಂದು ಹಿಂದಿರುಗಲಿದ್ದಾರೆ ಎಂಬುದು ನಿಗದಿಯಾಗಿಲ್ಲ. ಹೀಗಾಗಿ ಅವರು ಅಗತ್ಯವಿರುವಷ್ಟು ದಿನ ಅಲ್ಲಿಯೇ ಇದ್ದು, ಪಕ್ಷದ ಕೆಲಸಗಳನ್ನು ಮುಗಿಸಿಕೊಂಡೇ ಹಿಂದಿರುಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇದನ್ನೂ ಓದಿ| ಕೇಂದ್ರ ಬಿಜೆಪಿಗೆ ಬಿ.ಎಸ್. ಯಡಿಯೂರಪ್ಪ ನೇಮಕ ಆದೇಶ: ಯಾರ‍್ಯಾರಿಗೆ ಏನೇನು ಸಂದೇಶ?