Site icon Vistara News

Yeshwantpur railway station | ಯಶವಂತಪುರ ರೈಲು ನಿಲ್ದಾಣ ನವೀಕರಣ ಶುರು, ಹೇಗಿರಲಿದೆ ಹೊಸ ಸ್ಟೇಷನ್?

Yeshwantpur railway station

ಬೆಂಗಳೂರು: ಕೇಂದ್ರ ಸರ್ಕಾರದ ರೈಲು ನಿಲ್ದಾಣಗಳ ಅಭಿವೃದ್ಧಿ ನೀತಿಯ ಭಾಗವಾಗಿ ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣ (Yeshwantpur railway station) ನವೀಕರಣದ ಮೊದಲ ಹಂತದ ಕೆಲಸ ಶುರುವಾಗಿದೆ. ಕಳೆದ ಜೂನ್ 20ರಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ರೈಲು ನಿಲ್ದಾಣ ಅಭಿವೃದ್ಧಿ ಯೋಜನೆಗೆ ಶಂಕು ಸ್ಥಾಪನೆ ನೆರವೇರಿಸಿದ್ದರು.

ಯಶವಂತಪುರ ರೈಲು ನಿಲ್ದಾಣ ನವೀಕರಣ ಕಾಮಗಾರಿಗೆ ಟೆಂಡರ್ ಕರೆಯಲಾಗಿತ್ತು. ಅಂತಿಮವಾಗಿ ಗಿರ್ಧಾರಿ ಲಾಲ್ ಕನ್ಸ್‌ಟ್ರಕ್ಷನ್ ಕಂಪನಿಗೆ ಟೆಂಡರ್ ನೀಡಲಾಗಿದೆ. ಒಟ್ಟು 380 ಕೋಟಿ ರೂಪಾಯಿ ವೆಚ್ಚದಲ್ಲಿ ರೈಲು ನಿಲ್ದಾಣ ಮರುಅಭಿವೃದ್ಧಿಯ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ಕ್ಷೇತ್ರ ಕಚೇರಿಯನ್ನು ತೆರೆಯಲಾಗಿದ್ದು, ಮೊದಲ ಹಂತದ ಕಾಮಗಾರಿ ಈಗಾಗಲೇ ಶುರುವಾಗಿದೆ. ಎಂಜನಿಯರಿಂಗ್, ಪ್ರೋಕ್ಯುರ್‌ಮೆಂಟ್ ಮತ್ತು ಕನ್ಸ್‌ಟ್ರಕ್ಷನ್ ಕಾಂಟ್ರಾಕ್ಟ್(ಇಪಿಸಿ) ಮೋಡ್ ಮೂಲಕ ಪ್ರಾಜೆಕ್ಟ್ ಕೈಗೆತ್ತಿಕೊಳ್ಳಲಾಗಿದೆ. ಟರ್ನ್‌ಕೀ ಎಂದೂ ಕರೆಯಲಾಗುವ ಈ ಮೋಡ್‌ನಲ್ಲಿ, ಕೆಲಸದ ಗುತ್ತಿಗೆ ಪಡೆದ ಸಂಸ್ಥೆಯೇ, ಪ್ರಾಜೆಕ್ಟ್‌ನ ವಿನ್ಯಾಸ, ಖರೀದಿ, ನಿರ್ಮಾಣ ಕೈಗೊಂಡು ಮತ್ತು ಹ್ಯಾಂಡೋವರ್ ಮಾಡಬೇಕಾಗುತ್ತದೆ.

ಆಕರ್ಷಣೆಯ ಸಿಟಿ ಸೆಂಟರ್ ಆಗಲಿದೆ ರೈಲು ನಿಲ್ದಾಣ!
ಮರುಅಭಿವೃದ್ಧಿಗೊಳ್ಳಲಿರುವ ಯಶವಂತಪುರ ರೈಲು ನಿಲ್ದಾಣವು ದಟ್ಟಣೆಯನ್ನು ತಪ್ಪಿಸಲು ಪ್ರಯಾಣಿಕರಿಗೆ ಪ್ರತ್ಯೇಕವಾದ ಆಗಮನ/ನಿರ್ಗಮನ ಗೇಟ್‌ಗಳೊಂದಿಗೆ 216 ಮೀ. ಅಗಲದ ಅಂಗಣವನ್ನು ಹೊಂದಲಿದೆ. ಪ್ಲಾಟ್‌ಫಾರ್ಮ್‌ನಲ್ಲಿ ಪ್ರಸ್ತಾಪಿಸಲಾದ ಮೇಲ್ಛಾವಣಿಯ ಪ್ಲಾಜಾವು ಚಿಲ್ಲರೆ ಅಂಗಡಿ ಸ್ಥಳಗಳು, ಫುಡ್ ಕೋರ್ಟ್, ಮನರಂಜನಾ ಕೇಂದ್ರಗಳು ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ನಿಲ್ದಾಣದ ಆವರಣದಲ್ಲಿ ಪ್ರಯಾಣಿಕರಿಗೆ ಸುಲಭವಾಗಿ ದಾರಿ ಹುಡುಕಲು ಸ್ಪಷ್ಟವಾಗಿ ವ್ಯಾಖ್ಯಾನಿಸಲಾದ ಎಲ್ಇಡಿ ಆಧಾರಿತ ಫಲಕಗಳನ್ನು ಒದಗಿಸಲಾಗುತ್ತದೆ.

ಈ ಹೊಸ ನಿಲ್ದಾಣವು ಅಂಗವಿಕಲಸ್ನೇಹಿಯಾಗಿರಲಿದೆ. ಅವರಿಗಾಗಿ, ರ್ಯಾಂಪ್ಸ್, ಲಿಫ್ಟ್ಸ್ ಮತ್ತು ವಿಶೇಷ ಟಾಯ್ಲೆಟ್ಸ್ ಇರಲಿವೆ. ಜತೆಗೇ, ಭಾರತೀಯ ರೈಲ್ವೆ ಇಂಧನ ಉಳಿತಾಯ ಧ್ಯೇಯವನ್ನು ಹೊಂದಿದ್ದು, ಅದಕ್ಕೆ ಅನುಗುಣವಾಗಿ ಗ್ರೀನ್ ಬಿಲ್ಡಿಂಗ್ ರೀತಿ ವಿನ್ಯಾಸ ಮಾಡಲಾಗಿದೆ. ಘನತ್ಯಾಜ್ಯ ವಿಲೇವಾರಿ, ಮಳೆ ನೀರು ಕೊಯ್ಲು ವ್ಯವಸ್ಥೆ ಇರಲಿದೆ.

ಮರು ಅಭಿವೃದ್ದಿಗೊಳ್ಳಲಿರುವ ಯಶವಂತಪುರ ರೈಲು ನಿಲ್ದಾಣವು ನಿತ್ಯ ಒಂದು ಲಕ್ಷ ಪ್ರಯಾಣಿಕರನ್ನು ನಿರ್ವಹಣೆ ಮಾಡುವ ಸಾಮರ್ಥ್ಯವನ್ನು ಪಡೆಯಲಿದೆ. ಈಗಿರುವ ನಿಲ್ದಾಣವು ಸುಮಾರು 60 ಸಾವಿರ ಪ್ರಯಾಣಿಕರನ್ನು ನಿರ್ವಹಣೆ ಮಾಡುತ್ತಿದೆ. 2025 ಜೂನ್ ಹೊತ್ತಿಗೆ ಕಾಮಗಾರಿ ಪೂರ್ತಿಯಾಗಲಿದೆ.

ಇದನ್ನೂ ಓದಿ | Modi In Karnataka | ಸರ್‌ಎಂವಿ ಟರ್ಮಿನಲ್‌ ಉದ್ಘಾಟನೆ, ಸಬ್‌ಅರ್ಬನ್‌ ಶಂಕು ಸ್ಥಾಪಿಸಿದ ಮೋದಿ

Exit mobile version