ಬೆಂಗಳೂರು: “ಬರ ಅಂದರೆ ಎಲ್ಲರಿಗೂ ಇಷ್ಟ” ಎಂದು ಖ್ಯಾತ ಪತ್ರಕರ್ತ ಪಿ. ಸಾಯಿನಾಥ್ ಅವರು ಪುಸ್ತಕವೊಂದನ್ನು ಬರೆದಿದ್ದರು. ಅಂದರೆ ಬರ ಎಂಬುದು ಒಮ್ಮೆ ಬಂದರೆ ಅದರಿಂದ “ಭರ”ಪೂರ ಲಾಭ ಪಡೆಯುವವರು ಮತ್ತೊಂದು ವರ್ಗವಾಗಿದೆ. ಆದರೆ, ರೈತಾಪಿ ಜನರ ದುಸ್ಥಿತಿಯನ್ನು ಮಾತ್ರ ಯಾರೂ ಕೇಳದಂತಾಗಿದೆ” ಎಂಬುದನ್ನು ಎಳೆ ಎಳೆಯಾಗಿ ವಿವರಿಸಿದ್ದರು. ಈಗ ಅಂಥದ್ದೇ ಭರಪೂರ ಭ್ರಷ್ಟಾಚಾರದ ಬಗ್ಗೆ ವಿಸ್ತಾರ ನ್ಯೂಸ್ ಎಕ್ಸ್‌ಕ್ಲೂಸಿವ್ (Vistara News Exclusive) ವರದಿ ಮಾಡಿದೆ. ಎತ್ತಿನಹೊಳೆ ಎಂಬ ಬಿಳಿ ಆನೆ ಪ್ರಾಜೆಕ್ಟ್‌ನ ಮತ್ತೊಂದು ಮುಖವನ್ನು ವಿಸ್ತಾರವಾಗಿ ತೆರೆದಿಡಲಾಗಿದೆ. ಎತ್ತಿನಹೊಳೆ ಯೋಜನೆ (Yettinahole Project) ಹೆಸರಿನಲ್ಲಿ ಜನರ ಜತೆ ರಾಜಕಾರಣಿಗಳು, ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರಾ? ಜನರ ತೆರಿಗೆ ಹಣವನ್ನು ಪೋಲು ಮಾಡುತ್ತಿದ್ದಾರಾ? ಎಂಬ ಅನುಮಾನದ ಜತೆಗೆ ಇದರ ಹಿಂದೆ ಆಂಧ್ರಪ್ರದೇಶ ಮತ್ತು ಉತ್ತರ ಭಾರತೀಯ ಗುತ್ತಿಗೆದಾರರ ಮಾಫಿಯಾ (Contractor mafia) ಇದೆಯೇ ಎಂಬ ಶಂಕೆಯೂ ವ್ಯಕ್ತವಾಗಿದೆ. ಒಟ್ಟಿನಲ್ಲಿ ಇದು ಗುತ್ತಿಗೆದಾರರಿಗೆ ಗ್ಯಾರಂಟಿ ಯೋಜನೆಯಾಗಿದೆ. ಇನ್ನೊಂದು ಕರಾಳ ಸಂಗತಿಯೆಂದರೆ ಈ ಯೋಜನೆ ವೈಜ್ಞಾನಿಕವಾಗಿಲ್ಲ. ಅಂದುಕೊಂಡಷ್ಟು ನೀರನ್ನು ಪಡೆಯಲು ಬರುವುದಿಲ್ಲ ಎಂದು ಆಧಾರ ಸಹಿತ ಸರ್ಕಾರಕ್ಕೆ ಪತ್ರ ಬರೆದ ಉದ್ಯಮಿ, ಪರಿಸರ ಚಿಂತಕ ಎಚ್.ಎಸ್. ಶೆಟ್ಟಿ (Entrepreneur and Environmental Thinker HS Shetty) ಅವರಿಗೆ ಸಿಕ್ಕಿದ್ದು ಮಾತ್ರ ಲೀಗಲ್ ನೋಟಿಸ್, ಬೆದರಿಕೆಯ ಕರೆ!
ಜನರ ದಾಹವನ್ನು ದಾಳವಾಗಿಟ್ಟುಕೊಂಡು, “ನೀರು ಕೊಡುತ್ತೇವೆ ನೀರು” ಎಂದು ಹೇಳಿ ಯೋಜನೆ ಪ್ರಾರಂಭವಾಗಿ 10 ವರ್ಷವಾಗುತ್ತಾ ಬಂದರೂ ಯೋಜನೆ ಮಾಡದೇ ಬಾಯಿ ಮಾತಲ್ಲೇ ನೀರು ಕುಡಿಸಲಾಗುತ್ತಿದೆ. ಈ ಸಂಬಂಧ ವಿಸ್ತಾರ ನ್ಯೂಸ್ ಪಿನ್ ಟು ಪಿನ್ ರಿಯಾಲಿಟಿ ಚೆಕ್ ಮಾಡಿದೆ. ಯೋಜನೆಯಲ್ಲಿ ಏನಾಗುತ್ತಿದೆ ಎಂಬುದನ್ನೂ ವಿವರಿಸಲಾಗಿದೆ. ಇದು ವಿಸ್ತಾರ ನ್ಯೂಸ್ ಟೀಮ್‌ನ ಅತಿ ದೊಡ್ಡ ಎಕ್ಸ್‌ಕ್ಲೂಸಿವ್ ಗ್ರೌಂಡ್ ರಿಪೋರ್ಟ್ ಆಗಿದೆ.
ಈ ಏಳು ಜಿಲ್ಲೆಗಳಿಗೆ ಸಿಗಲಿದೆಯಾ ನೀರು?
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲವು ಭಾಗಗಳಿಗೆ ಎತ್ತಿನಹೊಳೆ ಯೋಜನೆಯಿಂದ ನೀರು ಪೂರೈಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಈ ಯೋಜನೆ ಮೂಲಕ ನೀರು ಕೊಡುತ್ತೇವೆ ಎಂದು ಕಳೆದ 10 ವರ್ಷಗಳಿಂದ ಸರ್ಕಾರಗಳು ಸತಾಯಿಸುತ್ತಾ ಬಂದಿವೆ.
2014ರಲ್ಲಿ ಚಾಲನೆ ನೀಡಿದ್ದ ಸಿದ್ದರಾಮಯ್ಯ
ನೀರಾವರಿ ತಜ್ಞ ದಿವಂಗತ ಡಾ. ಜಿ.ಎಸ್. ಪರಮಶಿವಯ್ಯ ಅವರ ವರದಿ ಆಧರಿಸಿ ಶುರು ಮಾಡಿದ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಗೆ ಆರಂಭದಿಂದಲೂ ಒಂದಲ್ಲ ಒಂದು ಅಪಸ್ವರ ಕೇಳಿಬರುತ್ತಿದೆ. 2014ರ ಮಾರ್ಚ್‌ನಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿ, ಇನ್ನು ಕೆಲವೇ ವರ್ಷಗಳಲ್ಲಿ ಪಶ್ಚಿಮಘಟ್ಟದಿಂದ ಕೋಲಾರಕ್ಕೆ ನೀರು ಹರಿಯುತ್ತದೆ ಎಂದು ಹೇಳಿದ್ದರು. ಇದಾಗಿ ಒಂದು ದಶಕ ಕಳೆದರೂ ಒಂದೇ ಒಂದು ಹನಿ ನೀರು ಸಹ ಫಲಾನುಭವಿಗಳಿಗೆ ಸಿಕ್ಕಿಲ್ಲ.
ಏನಿದು ಯೋಜನೆ?
ಪಶ್ಚಿಮಘಟ್ಟ ಶ್ರೇಣಿಯಿಂದ ಪಶ್ಚಿಮಾಭಿಮುಖವಾಗಿ ಹರಿಯುವ ನೀರು ಸಮುದ್ರ ಸೇರುವ ಬದಲಿಗೆ ಆ ನೀರನ್ನು ಪೂರ್ವದ ಜಿಲ್ಲೆಗಳತ್ತ ತಿರುಗಿಸಿ, ಕುಡಿಯುವ ನೀರು ಪೂರೈಕೆಗೆ ಬಳಸುವುದೇ ಎತ್ತಿನ ಹೊಳೆ ಯೋಜನೆಯ ಉದ್ದೇಶವಾಗಿದೆ. ಈ ಯೋಜನಾ ಪ್ರದೇಶದ 7 ಜಿಲ್ಲೆಗಳಿಗೆ ಕುಡಿಯುವ ನೀರಿನ ಅಗತ್ಯ ಮತ್ತು ಕೆರೆಗಳನ್ನು ತುಂಬಿಸುವುದಕ್ಕಾಗಿ 24.01 ಟಿಎಂಸಿ ಅಡಿಗಳಷ್ಟು ನೀರನ್ನು ಬಳಸಿಕೊಳ್ಳುವ ಪ್ರಸ್ತಾಪ ಇದರ ಹಿಂದೆ ಇದೆ.
ಆದರೆ, ಅಷ್ಟು ಪ್ರಮಾಣದ ನೀರಿನ ಲಭ್ಯತೆ ಇರುವುದಿಲ್ಲ ಎಂಬ ವಿರೋಧದ ಮಧ್ಯೆಯೇ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಏಳು ಜಿಲ್ಲೆಗಳ 29 ತಾಲೂಕಿನ 38 ಪಟ್ಟಣ ಪ್ರದೇಶ ಮತ್ತು 6,657 ಗ್ರಾಮಗಳ 75.59 ಲಕ್ಷ ಜನರಿಗೆ ಈ ಯೋಜನೆಯಿಂದ ಅನುಕೂಲವಾಗಲಿದೆ ಎಂದು ಅಂದಾಜಿಸಲಾಗಿದೆ.
ಯೋಜನಾ ಮೊತ್ತ ಡಬಲ್!
2012ರಲ್ಲಿ ಎತ್ತಿನಹೊಳೆ ಯೋಜನೆಗೆ 8,323.50 ಕೋಟಿ ರೂಪಾಯಿ ವೆಚ್ಚವನ್ನು ನಿಗದಿಪಡಿಸಿ ಅನುಮೋದನೆ ನೀಡಲಾಗಿತ್ತು. 2014ರಲ್ಲಿ ಯೋಜನೆಯ ಅಂದಾಜು ವೆಚ್ಚವನ್ನು ಪರಿಷ್ಕರಿಸಿ 12,912.36 ಕೋಟಿ ರೂಪಾಯಿಗೆ ಹೆಚ್ಚಳ ಮಾಡಲಾಯಿತು. ಜತೆಗೆ ಅದೇ ವರ್ಷ ಕಾಮಗಾರಿಗೆ ಚಾಲನೆಯನ್ನೂ ನೀಡಲಾಯಿತು. ಆದರೆ, ನಿಧಾನಗತಿಯ ಕಾಮಗಾರಿಯಿಂದ ಯೋಜನಾ ವೆಚ್ಚ ಬೆಳೆಯುತ್ತಲಿದೆ. ಇದಾದ ಬಳಿಕ 25,125 ಕೋಟಿ ರೂಪಾಯಿಗೆ ಎತ್ತಿನಹೊಳೆ ಯೋಜನೆಯ ಪರಿಷ್ಕೃತ ಅಂದಾಜನ್ನು ನಿಗದಿಪಡಿಸಿ ಅನುಮತಿಗಾಗಿ ವಿಶ್ವೇಶ್ವರಯ್ಯ ಜಲ ನಿಗಮವು ಸರ್ಕಾರಕ್ಕೆ ಪ್ರಸ್ತಾವನೆಯನ್ನೂ ಸಲ್ಲಿಸಿತ್ತು.
ಕುಡಿಯಲು ಸಿಗುವುದು ಕೇವಲ .85 ಟಿಎಂಸಿ ನೀರು!
ಎತ್ತಿನಹೊಳೆ ಯೋಜನೆಯ ಪ್ರದೇಶದಲ್ಲಿ 9.55 ಟಿಎಂಸಿ ನೀರು ಸಿಗುತ್ತದೆ. ಶೇ.45 ನಿತ್ಯಹರಿದ್ವರ್ಣ ಕಾಡು, ಎಲೆ ಉದುರುವ ಕಾಡುಗಳ ಸಹಿತ ಶೇ. 28ರಷ್ಟು ತೋಟಗಾರಿಕೆ ಪ್ರದೇಶಗಳಿವೆ. ಆದರೆ, ಅದರಲ್ಲಿ ವ್ಯವಸಾಯ, ತೋಟಗಾರಿಕೆಗೆ 5.8 ಟಿಎಂಸಿ ನೀರು ಬೇಕು. ಮೀನಿಗೆ 2.5ರಿಂದ 2.8 ಟಿಎಂಸಿ ನೀರು ಬೇಕು. ಜನರಿಗೆ ಕುಡಿಯುವ ಬಳಕೆಗೆ ಸಿಗುವುದು ಕೇವಲ .85 ಟಿಎಂಸಿ ನೀರು ಮಾತ್ರವೇ ಎಂದು ಪರಿಸರ ವಿಜ್ಞಾನಿ ಪ್ರೊ. ಟಿ.ವಿ. ರಾಮಚಂದ್ರ ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಅಲ್ಲದೆ, ಸಿಗುವ .85 ಟಿಎಂಸಿ ನೀರಿಗೆ ಆಗ 13 ಸಾವಿರ ಕೋಟಿ ರೂಪಾಯಿಯನ್ನು ಖರ್ಚು ಮಾಡುವುದು ಅವೈಜ್ಞಾನಿಕ ಎಂದು ಹೇಳಿದ್ದೆವು. ಆದರೆ, ಅದಕ್ಕೆ ಈಗ 25 ಸಾವಿರ ಕೋಟಿ ರೂಪಾಯಿಗೆ ಏರಿಕೆ ಆಗಿದೆ ಎಂದು ಪ್ರೊ. ಟಿ.ವಿ. ರಾಮಚಂದ್ರ ಹೇಳಿದ್ದಾರೆ.
ಕಾಡು ನಾಶವಾಗುತ್ತಿದೆ; ಪರಿಸರ ತಜ್ಞರ ಆತಂಕ
ಪಶ್ಚಿಮಘಟ್ಟವೆಂದರೆ ಹಾಸನ ಜಿಲ್ಲೆ ಸಕಲೇಶಪುರದ ದಟ್ಟಾರಣ್ಯದಲ್ಲಿ ಎತ್ತಿನಹೊಳೆ ಸೇರಿ ಏಳೆಂಟು ಹಳ್ಳಗಳ ನೀರನ್ನು ಕಿರು ಅಣೆಕಟ್ಟುಗಳ ಮೂಲಕ ಸಂಗ್ರಹಿಸುವುದು. ನಂತರ ಅದನ್ನು 940 ಅಡಿ ಎತ್ತರಕ್ಕೆ ಪಂಪ್ ಮಾಡಿ ಅಲ್ಲಿಂದ ಸುರಂಗ ಮಾರ್ಗದಲ್ಲಿ ಪೈಪ್‌ಗಳ ಮೂಲಕ 7 ಜಿಲ್ಲೆಗಳಿಗೆ ನೀರು ಹರಿಸುವುದಾಗಿದೆ. ಇನ್ನೊಂದೆಡೆ, ಪಶ್ಚಿಮಘಟ್ಟದಲ್ಲಿ ನಿತ್ಯಹರಿದ್ವರ್ಣ ಕಾಡುಗಳು ನಾಶವಾಗುತ್ತಿವೆ. ಜಾಗತಿಕ ತಾಪಮಾನ, ಅವೈಜ್ಞಾನಿಕ ಕಾಮಗಾರಿಗಳಿಂದ ಮಳೆಯ ಪ್ರಮಾಣವೂ ಕಡಿಮೆಯಾಗಿದೆ ಎಂಬುದು ತಜ್ಞರ ಕಳವಳವಾಗಿದೆ. ದಕ್ಷಿಣ ಕನ್ನಡದ ಜೀವನದಿ ನೇತ್ರಾವತಿಯ ಉಪನದಿಯಾದ ಎತ್ತಿನಹೊಳೆಗೆ ಪೆಟ್ಟು ಬಿದ್ದು ನೇತ್ರಾವತಿ ನದಿ ನೀರು ಕಡಿಮೆ ಆಯಿತು ಎಂದು ಹೋರಾಟ ನಡೆಸಿದ್ದಲ್ಲದೆ, ಬಂದ್ ಅನ್ನು ಸಹ ನಡೆಸಲಾಗಿತ್ತು.
24 ಟಿಎಂಸಿ ನೀರು ಸಿಗುವ ಗ್ಯಾರಂಟಿ ಕೊಡಲು ಸರ್ಕಾರಕ್ಕೆ ಸವಾಲು!
ಈ ಯೋಜನೆಯಿಂದ ನೇತ್ರಾವತಿ ಜೀವನದಿ ಮೂಲಕ್ಕೇ ಪೆಟ್ಟು ಬಿದ್ದಿದೆ. ಜತೆಗೆ ಅದರ ಜೀವವೈವಿಧ್ಯತೆಗೆ ಸಮಸ್ಯೆ ಆಗಿದೆ. ಈ ಯೋಜನೆಯಿಂದ ಬಯಲುಸೀಮೆಗೆ ನೀರು ಪೂರೈಸುವುದಿರಲಿ, ಪಶ್ಚಿಮಘಟ್ಟದಲ್ಲೂ ನೀರಿಗೆ ಬರ ಬರುವ ಕಾಲ ದೂರವಿಲ್ಲ. ಈ ಯೋಜನೆಯನ್ನು ಮಾಡಲು ಹೊರಟವರು 24 ಟಿಎಂಸಿ ನೀರು ಖಂಡಿತ ಸಿಗುತ್ತದೆ ಎಂಬ ಗ್ಯಾರಂಟಿಯನ್ನು ಕೊಟ್ಟರೆ ನಾವು ಸಹ ಜೈಕಾರ ಹಾಕುತ್ತೇವೆ ಎಂದು ಪಶ್ಚಿಮಘಟ್ಟ ಅಧ್ಯಯನ ತಜ್ಞರಾದ ದಿನೇಶ್ ಹೊಳ್ಳ ಸವಾಲು ಹಾಕಿದ್ದಾರೆ.
ಎತ್ತಿನಹೊಳೆ ಯೋಜನೆ ಹೆಸರಲ್ಲಿ ರೈತರನ್ನು ಬೆದರಿಸಿ ಭೂ ಸ್ವಾಧೀನಪಡಿಸಿಕೊಂಡಿರುವ ಆರೋಪ ಸಹ ಕೇಳಿಬಂದಿದೆ. ಈ ಬಗ್ಗೆ ಬಯಲುಸೀಮೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಮುಖಂಡ ಆರ್. ಆಂಜನೇಯರೆಡ್ಡಿ ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿ, ಭೂಸ್ವಾಧೀನ ಎಂಬುದೇ ಒಂದು ಗುಮ್ಮ. ರೈತರನ್ನು ಸಂಪರ್ಕಿಸಲ್ಲ. ಖಾಸಗಿಯವರು ಬಂದು ಧಮ್ಕಿ ಹಾಕುತ್ತಾರೆ. ಇನ್ನು ಯಾರನ್ನೋ ಕಳುಹಿಸಿ ಆರು ಕಾಸು, ಮೂರು ಕಾಸು ಕೊಡುತ್ತಾರೆ.
ಇದು ಸಂವಿಧಾನಬದ್ಧ ಅಲ್ಲ ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ.
ಯೋಜನೆಯ ಕರಾಳ ಮುಖ ಬಿಚ್ಚಿಟ್ಟರು ಪರಿಸರ ಚಿಂತಕ, ಉದ್ಯಮಿ ಡಾ.ಎಚ್.ಎಸ್. ಶೆಟ್ಟಿ
ಎತ್ತಿನಹೊಳೆ ಯೋಜನೆ ಆರಂಭದಲ್ಲಿಯೇ ಇದೊಂದು ಅವೈಜ್ಞಾನಿಕ. ಸರ್ಕಾರದ ಪ್ರಾಜೆಕ್ಟ್ ಅಲ್ಲ, ಇದು ಕಾಂಟ್ರ್ಯಾಕ್ಟರ್ಸ್ ಪ್ರಾಜೆಕ್ಟ್ ಎಂದು ಧ್ವನಿ ಎತ್ತಿರುವುದು ಪರಿಸರ ಚಿಂತಕ, ಉದ್ಯಮಿ ಡಾ. ಎಚ್.ಎಸ್. ಶೆಟ್ಟಿ ಅವರು. ಆದರೆ, ಅವರ ಈ ಮಾತಿಗೆ ಪ್ರತಿಕ್ರಿಯೆಯಾಗಿ ಬಂದಿದ್ದು ಲೀಗಲ್ ನೋಟಿಸ್ ಮತ್ತು ಬೆದರಿಕೆ!
ಎತ್ತಿನಹೊಳೆ ಬಗ್ಗೆ ಡಾ. ಎಚ್.ಎಸ್. ಶೆಟ್ಟಿ ಹೇಳುವುದೇನು?
“ನನ್ನ ಪ್ರಕಾರ ಆ ಹೊಳೆಯಲ್ಲಿ 24 ಟಿಎಂಸಿ ನೀರು ಇಲ್ಲ. 7 ಅಣೆಕಟ್ಟು ಪೈಕಿ ಒಂದು ಅಣೆಕಟ್ಟೆ ಕಡೆ ನಮ್ಮದು ಜಲ ವಿದ್ಯುತ್ ಘಟಕ ಇದೆ. 15 ವರ್ಷದಿಂದ ನಮ್ಮ ಯೂನಿಟ್ ಇದೆ. ಒಂದು ಕಾಲದಲ್ಲಿ ಆ ಹೊಳೆಯಲ್ಲಿ ಬೇಕಾದಷ್ಟು ನೀರಿತ್ತು. ಅರಣ್ಯ ನಾಶ, ಜಾಗತಿಕ ತಾಪಮಾನ ಕಾರಣದಿಂದ ಈಗ ಮಳೆ ನೀರು ಕಡಿಮೆ ಆಗಿದೆ. ಖಂಡಿತ 10 ಟಿಎಂಸಿಗಿಂತ ಹೆಚ್ಚು ನೀರು ಸಿಗುವುದೇ ಇಲ್ಲʼʼ ಎನ್ನುತ್ತಾರೆ ಡಾ. ಎಚ್ ಎಸ್ ಶೆಟ್ಟಿ.
ಇದು ಸರ್ಕಾರದ ಪ್ರಾಜೆಕ್ಟ್ ಅಲ್ಲ. ಇದೊಂದು ಕಾಂಟ್ರ್ಯಾಕ್ಟರ್ಸ್ ಪ್ರಾಜೆಕ್ಟ್. ಈ ಪ್ರಾಜೆಕ್ಟ್ ಮಾಡುತ್ತಿರುವವರು ಸಹ ಕಾಂಟ್ರ್ಯಾಕ್ಟರ್ಸ್. ಇದನ್ನು ಪ್ರಶ್ನೆ ಮಾಡಿದಾಗ ನಿಮ್ಮ ಜೀವಕ್ಕೆ ಅಪಾಯ ಆಗಬಹುದು ಎಂಬುದಾಗಿ ನನ್ನ ಮಿತ್ರರು, ಹಿತೈಷಿಗಳು ಸಲಹೆ ಕೊಟ್ಟಿದ್ದರು. ಈ ಯೋಜನೆ ತಡೆಯಲು ಹೋಗಿದ್ದಕ್ಕೆ ಕೆಲವು ಆರ್‌ಟಿಐ ಕಾರ್ಯಕರ್ತರು, ಪರಿಸರವಾದಿಗಳನ್ನೇ ಮಟ್ಟ ಹಾಕಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದರು. ಇಲ್ಲಿ ಅತಿ ದೊಡ್ಡ ಮಾಫಿಯಾ ಮತ್ತು ಲಾಬಿಗಳು ನಡೆಯುತ್ತಿವೆ. ಅದೃಷ್ಟವೆಂದರೆ ನನಗೆ ಆ ರೀತಿ ಆಗಿಲ್ಲ. ಬರಿ ಬೆದರಿಕೆ ಹಾಕಿದ್ದಾರೆ ಅಷ್ಟೇ. ಆ್ಯಕ್ಸಿಡೆಂಟ್ ಆಗಿ ಸಾಯಬಹುದು. ಹಾವು ಕಚ್ಚಿ ಸಾಯಬಹುದು ಆ ಭಗವಂತ ಹಣೆಯಲ್ಲಿ ಬರೆದಿದ್ದು ಆಗುತ್ತದೆ ಅಷ್ಟೇ ಎಂದು ಎಚ್ ಎಸ್ ಶೆಟ್ಟಿ ಅವರು ವಿವರಿಸಿದರು.
ವಿಶ್ವೇಶ್ವರಯ್ಯ ಹೆಸರಿಗೆ ಮಸಿ ಬಳಿಯಲಾಗುತ್ತಿದೆ
ಕಾಂಟ್ರ್ಯಾಕ್ಟರ್ಸ್ ಕಳ್ಳಾಟಕ್ಕೆ, ಹಣ ಲೂಟಿಗೆ ಸಾಥ್ ನೀಡುತ್ತಿರುವುದು ಬೇರೆ ಯಾರೂ ಅಲ್ಲ. ನಮ್ಮ ಘನ ಸರ್ಕಾರದ ವಿಶ್ವೇಶ್ವರಯ್ಯ ಜಲ ನಿಗಮ. ಎತ್ತಿನಹೊಳೆ ಯೋಜನೆ ಅಧ್ವಾನದ ಮೂಲಕ ಎಂಜಿನಿಯರಿಂಗ್ ದಂತಕಥೆ ವಿಶ್ವೇಶ್ವರಯ್ಯ ಅವರ ಹೆಸರಿಗೆ ನಮ್ಮ ನಿಗಮವೇ ಮಸಿ ಬಳಿಯುತ್ತಿದೆ. ವಿಶ್ವೇಶ್ವರಯ್ಯ ಜಲನಿಗಮ ಕಂಪನಿ ಎಂದು ಹೆಸರಿಟ್ಟುಕೊಳ್ಳಲಾಗಿದೆ. ವಿಶ್ವೇಶ್ವರಯ್ಯ ಅಂದರೆ ಎಂಜಿನಿಯರಿಂಗ್ ಬಗ್ಗೆ ಅದ್ಭುತ ದೃಷ್ಟಿಕೋನವನ್ನು ಹೊಂದಿದವರು. ದೇಶ ಮಾತ್ರವಲ್ಲದೇ ಜಗತ್ತಿನಲ್ಲೂ ಅವರ ಹೆಸರಲ್ಲಿ ವಿದ್ಯಾರ್ಥಿಗಳು ಪ್ರಮಾಣ ಸ್ವೀಕರಿಸುತ್ತಾರೆ. ಆದರೆ, ವಿಶ್ವೇಶ್ವರಯ್ಯ ಹೆಸರಲ್ಲಿ ಮಾಡಿದ ಕಂಪನಿ ಅವರಿಗೇ ಮರ್ಯಾದೆ ಕೊಡುತ್ತಿಲ್ಲದಿರುವುದು ವಿಪರ್ಯಾಸ. ಇಲ್ಲಿ ಮರ್ಡರ್ ಆಫ್ ಎಂಜಿನಿಯರಿಂಗ್ ನಡೆಯುತ್ತಲಿದೆ ಎಂದು ಎಸ್ ಎಸ್ ಶೆಟ್ಟಿ ಅವರು ಹೇಳಿದರು.
ಪೈಪ್‌ಲೈನ್ ನಿರ್ವಹಣೆಯೇ ಸರಿ ಇಲ್ಲ
ಪೈಪ್‌ಲೈನ್ ಕನ್ಸ್‌ಟ್ರಕ್ಷನ್‌ನಲ್ಲಿ ನನಗೆ ಸ್ವಲ್ಪ ಅನುಭವ ಇದೆ. ಪೈಪ್ ಮೇಲೆ ಒತ್ತಡ ಬರಬಾರದು. ದೊಡ್ಡ ದೊಡ್ಡ ಪೈಪ್ ಮೂಲಕ ಕೆಳಗಿನಿಂದ ಮೇಲಕ್ಕೆ ನೀರು ಪಂಪ್ ಮಾಡಬೇಕೆಂದರೆ ಆ ಪೈಪ್‌ಗಳು ಸದೃಢವಾಗಿರಬೇಕು. ವಿದ್ಯುತ್ ಬಳಕೆ ಪ್ರಮಾಣವೂ ಸಾಕಷ್ಟು ಬೇಕು. ಆದರೆ, ಇಲ್ಲಿ ಪೈಪ್‌ಲೈನ್ ವ್ಯವಸ್ಥೆ ಹಾಳಾಗಿದೆ. ಪೈಪ್‌ಗಳನ್ನು ಬಿಸಾಡಿ ಐದಾರು ವರ್ಷಗಳಾಗಿವೆ. ಅವುಗಳು ತುಕ್ಕು ಹಿಡಿದಿವೆ. ಪೈಪ್‌ನ ಮೇಲ್ಮೈಯಲ್ಲಿ ವೆಲ್ಡಿಂಗ್ ಮಾಡಲಾಗಿದ್ದು, ಒಳಗಡೆ ವೆಲ್ಡಿಂಗ್ ಮಾಡಲಾಗಿಲ್ಲ. ಇಲ್ಲ. ಹಾಗಾಗಿ ತುಕ್ಕುಹಿಡಿದು ಪೈಪ್‌ಗಳೇ ಡೆಡ್ ಆಗಿವೆ. ಮೆಟಲ್ ಪೈಪ್‌ಗೆ 25 ವರ್ಷವಷ್ಟೇ ಜೀವಿತಾವಧಿ ಇರುತ್ತದೆ. ಕಾಂಕ್ರೀಟ್ ಪೈಪ್ 50 ವರ್ಷಗಳವರೆಗೆ ಬಾಳಿಕೆ ಬರುತ್ತದೆ. ಪೈಪ್‌ಲೈನ್ ಲೈಫ್ ಸ್ಪ್ಯಾನ್ ಮುಗಿದುಹೋಗಿದೆ. ಮಳೆಯಲ್ಲಿ ಪೈಪ್‌ಗಳು ನೆನೆದಿವೆ. ಮಳೆ ಬಿದ್ದು, ಮಣ್ಣಲ್ಲಿ ಬಿದ್ದ ಕಾರಣ ಸಮಸ್ಯೆಯಾಗಿದೆ. ಪೈಪ್ ಲೈನ್ ಹಾಕುವಾಗ ಬೆಂಡ್ಸ್ ಇರಬಾರದು. ಪೈಪ್‌ಗಳನ್ನು ಅಪ್ ಆ್ಯಂಡ್ ಡೌನ್ ಹಾಕಿರುವುದರಿಂದ ಆ ಪ್ರೆಶರ್ ತಡೆಯುವ ಶಕ್ತಿ ಆ ಪೈಪ್‌ಗಳಿಗೆ ಇಲ್ಲ. ಇನ್ನೂ ಪ್ರೆಶರ್ ಕ್ಯಾಲ್ಕುಲೇಷನ್ ಅನ್ನು ಮಾಡಲಾಗಿಲ್ಲ. ಆ ಪಂಪ್‌ಗೆ ನೀರೆತ್ತುವ ಸಾಮರ್ಥ್ಯ ಇದ್ದರೂ ಆ ಪೈಪ್ ಲೈನ್‌ಗೆ ಸಾಮರ್ಥ್ಯ ಇಲ್ಲ. ಹಸಿ ಮಣ್ಣಿನ ಮೇಲೆ ಪೈಪ್ ಜೋಡಿಸುತ್ತಿದ್ದಾರೆ. ಒಮ್ಮೆ ನೀರನ್ನು ಹರಿಸಲು ಪ್ರಾರಂಭಿಸಿದರೆ ಆ ಒತ್ತಡಕ್ಕೆ ಪೈಪ್ ಕುಸಿಯುತ್ತದೆ. ನೀರು ಪಂಪ್ ಶುರು ಮಾಡಿದ್ರೆ ವೈಬ್ರೇಷನ್ ಆಗಿ ಪೈಪ್ ಒಡೆಯುತ್ತದೆ. ಇದು ವರ್ಕ್ ಆದರೂ ಶೇಕಡಾ 10ರಿಂದ 20ರಷ್ಟು ವ್ಯರ್ಥವಾಗುತ್ತದೆ ಎಂದು ಶೆಟ್ಟಿ ಅವರು ವಿವರಿಸಿದರು.
ಮೀನುಗಳ ನಾಶಕ್ಕೆ ಕಾರಣರಾದರು
ಇದೊಂದು ಪರಿಸರ ದುರಂತವಾಗಿದೆ. 1ರಿಂದ 2 ಮಿಲಿಯನ್ ಮಣ್ಣು ತೆಗೆದು ಹೊಳೆಗೆ ಹಾಕಿದ್ದಾರೆ. ಆ ಮಣ್ಣು ಹೊಳೆಯಿಂದ ಸಮುದ್ರ ಸೇರಿದೆ. ದಕ್ಷಿಣ ಕನ್ನಡದಲ್ಲಿ ನೋಡಿದರೆ ಅಲ್ಲಿ ನೀರಿನ ಅಭಾವ ಇದೆ. ಬಾವಿಯಲ್ಲಿ ನೀರಿಲ್ಲ. ಕೆರೆಯಲ್ಲಿ ನೀರು ಬರುತ್ತಿಲ್ಲ. ಗದ್ದೆಯಲ್ಲಿ ಸಮಸ್ಯೆಯಾಗಿ ಬೆಳೆ ಬರುತ್ತಿಲ್ಲ. ಸಮುದ್ರದಲ್ಲಿ ಮೀನುಗಳು ಮೊಟ್ಟೆ ಇಡಲು ಆಗಿಲ್ಲ. ಸಮುದ್ರಕ್ಕೆ ಮಣ್ಣು ಸೇರಿ ದೊಡ್ಡ ದುರಂತವೇ ಆಗಿದೆ ಎಂದು ಶೆಟ್ಟರು ಅಭಿಪ್ರಾಯಪಟ್ಟರು.
ಡೇಟಾ ಕೊಟ್ಟಿದ್ದಕ್ಕೆ ಲೀಗಲ್ ನೋಟಿಸ್ ಕೊಟ್ಟರು
ಇಲ್ಲಿ ನೀರಿಲ್ಲ ಅಂತಾ ಇಲ್ಲಿ ನೀರಿರೋದು ಇಷ್ಟೇ ಅಂತ ಡೇಟಾ ಕೊಟ್ಟೆ. ನನಗೆ ಲೀಗಲ್ ನೋಟಿಸ್ ಕೊಟ್ಟರು. 2016ರಲ್ಲೂ. 2014ರಿಂದ ಡಾಟಾ ಕೊಟ್ಟೆ, ನನಗೆ ನೋಟಿಸ್ ಕೊಟ್ಟು ನೀವು ನನ್ನ ಪ್ರಾಜೆಕ್ಟ್‌ಗೆ ವಿರೋಧಿಸುತ್ತಿದ್ದೀರಾ, ಇದು ಪಬ್ಲಿಕ್ ಪ್ರಾಜೆಕ್ಟ್ ಅಂತ ಹೇಳಿದರು. ನಿಮ್ಮನ್ನು ಪ್ರಾಸಿಕ್ಯೂಟ್ ಮಾಡುತ್ತೇನೆ ಅಂದರು. ಆಗ ನಾನು ಸ್ಟಾಪ್ ಮಾಡಿದೆ. ಒಬ್ಬ ಹಿತಾಸಕ್ತಿಯುಳ್ಳ ಮನುಷ್ಯನಾಗಿ, ಇದು ನನ್ನ ದೇಶ – ನನ್ನ ರಾಜ್ಯ ಎಂಬ ಕಾರಣಕ್ಕೆ ನಾನು ಡೇಟಾ ಕೊಟ್ಟು ಆತಂಕ ತೋಡಿಕೊಂಡೆ. ಎಂಜಿನಿಯರಿಂಗ್ ಪ್ರಾಜೆಕ್ಟ್ ಮಾಡಿರುವ ಅನುಭವ ಇರುವುದರಿಂದ ಏನಾಗುತ್ತಿದೆ ಎಂಬುದನ್ನು ನೋಡಿ ಇದರ ಬಗ್ಗೆ ಆತಂಕ ವ್ಯಕ್ತಪಡಿಸಿ ಪತ್ರ ಬರೆದು ತಿಳಿಸಿದ್ದೆ. ಆದರೆ, ಅವರು ನನಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಬಳಿಕ ನನಗೆ ತುಂಬಾ ಕಿರಿಕಿರಿ, ಶೋಷಣೆ ಪ್ರಾರಂಭವಾಯಿತು. ಕರೆ ಮಾಡಿ ಬೆದರಿಸಿದರು. ಆದರೂ ನಾನು ತಲೆಕೆಡಿಸಿಕೊಂಡಿಲ್ಲ. ದುಬೈನಿಂದ ರಾತ್ರಿ ಸಮಯದಲ್ಲಿಯೂ ಫೋನ್ ಬರುತ್ತಲಿತ್ತು. ಬುದ್ಧಿ ಕಲಿಸುತ್ತೇವೆ ನಿನಗೆ ಎಂದು ಬೆದರಿಸಿದ್ದಾರೆ. ಇದರಲ್ಲಿ ನಿನಗೇನು ಅಂತಲೂ ಹೆದರಿಸಿದ್ದಾರೆ. ಇವೆಲ್ಲ ನೋಡಿದ್ದೇನೆ. ಆದರೆ, ಇದೊಂದು ಮಾಫಿಯಾ. ಹಗರಣ ಇದೆಯೋ ಇಲ್ಲವೋ ಎಂಬುದನ್ನು ಸಿಎಜಿ ಸೇರಿ ತನಿಖಾ ಸಂಸ್ಥೆಗಳು ಗಮನಿಸಲಿ. ಇದೊಂದು ರಾಷ್ಟ್ರೀಯ ವಿಪತ್ತಾಗಿದೆ. ಇದು ಹಂಡ್ರೆಡ್ ಪರ್ಸೆಂಟ್ ವರ್ಕ್ ಆಗಲ್ಲ” ಎಂದು ಡಾ. ಎಚ್.ಎಸ್. ಶೆಟ್ಟಿ ಅವರು ಎತ್ತಿನಹೊಳೆ ಯೋಜನೆಯ ಇಡೀ ವೃತ್ತಾಂತವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ: Vistara Explainer: ಏನಿದು ಕೃಷ್ಣ ಜನ್ಮಭೂಮಿ-ಈದ್ಗಾ ಮಸೀದಿ ವಿವಾದ? ಮುಂದೇನು?
ಪೈಪ್‌ಲೈನ್ ಪ್ಲ್ಯಾನ್ ಮಾಡಿದ್ದು ಏಕೆ?
ಎತ್ತಿನಹೊಳೆ ಯೋಜನೆಯ ಹಿಂದೆ ಒಂದೊಂದೇ ಕಥೆಗಳು ಬಿಚ್ಚಿಕೊಳ್ಳುತ್ತವೆ. ಮೊದಲಿಗೆ ತೆರೆದ ಕಾಲುವೆ ಮೂಲಕ ನೀರು ಹಾಯಿಸುವ ಬಗ್ಗೆ ಮಾತುಕತೆಯಾಗಿತ್ತು ಎನ್ನಲಾಗಿದೆ. ಇದಕ್ಕೆ ಪ್ರತಿ ಕಿಲೋ ಮೀಟರ್‌ಗೆ 3 ಕೋಟಿ ರೂಪಾಯಿ ಎಂದು ಯೋಜನಾ ವೆಚ್ಚವನ್ನು ನಿಗದಿ ಮಾಡಲಾಗಿತ್ತು. ಆದರೆ, ತೆರೆದ ಕಾಲುವೆಯನ್ನು ಮಾಡಿದರೆ ನೀರು ಆವಿ ಆಗುವುದಲ್ಲದೆ, ರೈತರು ನೀರನ್ನು ಕದಿಯಬಹುದು ಎಂದು ಹೇಳುವ ಮೂಲಕ ಕಾಂಟ್ರ್ಯಾಕ್ಟರ್ ಮಾಫಿಯಾದವರು ಪೈಪ್ ಲೈನ್ ಪ್ಲ್ಯಾನ್ ಅನ್ನು ತಂದಿದ್ದಾರೆ ಎಂದು ಹೇಳಲಾಗಿದೆ. ಈ ಮೂಲಕ ಪೈಪುಗಳು, ಪೈಪ್‌ಲೈನ್ ಮೂಲಕ ಸಾವಿರಾರು ಕೋಟಿ ರೂಪಾಯಿಗೆ ಸ್ಕೆಚ್ ಹಾಕಿದ್ದಾರೆ. ಎತ್ತಿನಹೊಳೆಯಿಂದ ಕೋಲಾರಕ್ಕೆ 270 ಕಿಲೋ ಮೀಟರ್ ಮಾರ್ಗವನ್ನು ಗುರುತಿಸಲಾಗಿದೆ. ಪೈಪ್‌ಲೈನ್‌ಗೆ ಒಂದು ಕಿಲೋ ಮೀಟರ್‌ಗೆ ಸುಮಾರು 10 ಕೋಟಿ ರೂಪಾಯಿ ವೆಚ್ಚವಾಗುತ್ತದೆ. ಅಂದರೆ, ಎಷ್ಟು ಸಾವಿರ ಕೋಟಿ ಬೇಕು? ಇದು ಕಾರ್ಯಸಾಧುವೇ ಎಂಬ ಪ್ರಶ್ನೆ ಎದುರಾಗಿದೆ.