Yettinahole Project: ಅಕ್ರಮದ ಹೊಳೆಯಾದ ಎತ್ತಿನಹೊಳೆ ಪ್ರಾಜೆಕ್ಟ್; ಭ್ರಷ್ಟಾಚಾರದ ಹಿಂದಿದೆಯಾ ಮಾಫಿಯಾ? - Vistara News

ಕರ್ನಾಟಕ

Yettinahole Project: ಅಕ್ರಮದ ಹೊಳೆಯಾದ ಎತ್ತಿನಹೊಳೆ ಪ್ರಾಜೆಕ್ಟ್; ಭ್ರಷ್ಟಾಚಾರದ ಹಿಂದಿದೆಯಾ ಮಾಫಿಯಾ?

Yettinahole Project : ಬಯಲುಸೀಮೆ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಸೇರೆ ಕೆಲ ಜಿಲ್ಲೆಗಳಲ್ಲಿ ಫ್ಲೋರೈಡ್ ಅಂಶ ಇರೋ ನೀರು ಕುಡಿದು ಜನರ ಆರೋಗ್ಯ ಹದಗೆಡುತ್ತಿದೆ. ಇನ್ನೊಂದೆಡೆ ಮಳೆ ಬಾರದೇ ಬರದಿಂದ ಕಂಗೆಟ್ಟಿರೋ ರೈತಾಪಿ ಜನ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಕುಡಿಯುವ ನೀರು, ಕೃಷಿ ನೀರಿಗಾಗಿ ಆಸೆಗಣ್ಣನಿಂದ ನೋಡುತ್ತಿರುವ ಶ್ರೀಸಾಮಾನ್ಯನಿಗೆ ಸರ್ಕಾರ ಆಮಿಷ ಒಡ್ಡುತ್ತಿದೆಯೇ ಹೊರತು ಎತ್ತಿನಹೊಳೆ ಯೋಜನೆಯಿಂದ ನೀರು ಸಿಗೋದೇ ಅನುಮಾನ ಎಂದು ಪರಿಸರವಾದಿಗಳ ಸಹಿತ ನಾಗರಿಕರು ಆರೋಪ ಮಾಡಿದ್ದಾರೆ. ಇದು ಭ್ರಷ್ಟಾಚಾರಕ್ಕೆ ನಾಂದಿ ಹಾಡಿದೆ. ಇದರ ಹಿಂದೆ ಗುತ್ತಿಗೆದಾರರ ಮಾಫಿಯಾ ಇದೆ ಎಂಬ ಅನುಮಾನಗಳು ಮೂಡಿವೆ.

VISTARANEWS.COM


on

Yettinahole project
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
Vistara Exclusive

ಬೆಂಗಳೂರು: “ಬರ ಅಂದರೆ ಎಲ್ಲರಿಗೂ ಇಷ್ಟ” ಎಂದು ಖ್ಯಾತ ಪತ್ರಕರ್ತ ಪಿ. ಸಾಯಿನಾಥ್ ಅವರು ಪುಸ್ತಕವೊಂದನ್ನು ಬರೆದಿದ್ದರು. ಅಂದರೆ ಬರ ಎಂಬುದು ಒಮ್ಮೆ ಬಂದರೆ ಅದರಿಂದ “ಭರ”ಪೂರ ಲಾಭ ಪಡೆಯುವವರು ಮತ್ತೊಂದು ವರ್ಗವಾಗಿದೆ. ಆದರೆ, ರೈತಾಪಿ ಜನರ ದುಸ್ಥಿತಿಯನ್ನು ಮಾತ್ರ ಯಾರೂ ಕೇಳದಂತಾಗಿದೆ” ಎಂಬುದನ್ನು ಎಳೆ ಎಳೆಯಾಗಿ ವಿವರಿಸಿದ್ದರು. ಈಗ ಅಂಥದ್ದೇ ಭರಪೂರ ಭ್ರಷ್ಟಾಚಾರದ ಬಗ್ಗೆ ವಿಸ್ತಾರ ನ್ಯೂಸ್‌ ಎಕ್ಸ್‌ಕ್ಲೂಸಿವ್‌ (Vistara News Exclusive) ವರದಿ ಮಾಡಿದೆ. ಎತ್ತಿನಹೊಳೆ ಎಂಬ ಬಿಳಿ ಆನೆ ಪ್ರಾಜೆಕ್ಟ್‌ನ ಮತ್ತೊಂದು ಮುಖವನ್ನು ವಿಸ್ತಾರವಾಗಿ ತೆರೆದಿಡಲಾಗಿದೆ. ಎತ್ತಿನಹೊಳೆ ಯೋಜನೆ (Yettinahole Project) ಹೆಸರಿನಲ್ಲಿ ಜನರ ಜತೆ ರಾಜಕಾರಣಿಗಳು, ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರಾ? ಜನರ ತೆರಿಗೆ ಹಣವನ್ನು ಪೋಲು ಮಾಡುತ್ತಿದ್ದಾರಾ? ಎಂಬ ಅನುಮಾನದ ಜತೆಗೆ ಇದರ ಹಿಂದೆ ಆಂಧ್ರಪ್ರದೇಶ ಮತ್ತು ಉತ್ತರ ಭಾರತೀಯ ಗುತ್ತಿಗೆದಾರರ ಮಾಫಿಯಾ (Contractor mafia) ಇದೆಯೇ ಎಂಬ ಶಂಕೆಯೂ ವ್ಯಕ್ತವಾಗಿದೆ. ಒಟ್ಟಿನಲ್ಲಿ ಇದು ಗುತ್ತಿಗೆದಾರರಿಗೆ ಗ್ಯಾರಂಟಿ ಯೋಜನೆಯಾಗಿದೆ. ಇನ್ನೊಂದು ಕರಾಳ ಸಂಗತಿಯೆಂದರೆ ಈ ಯೋಜನೆ ವೈಜ್ಞಾನಿಕವಾಗಿಲ್ಲ. ಅಂದುಕೊಂಡಷ್ಟು ನೀರನ್ನು ಪಡೆಯಲು ಬರುವುದಿಲ್ಲ ಎಂದು ಆಧಾರ ಸಹಿತ ಸರ್ಕಾರಕ್ಕೆ ಪತ್ರ ಬರೆದ ಉದ್ಯಮಿ, ಪರಿಸರ ಚಿಂತಕ ಎಚ್.ಎಸ್.‌ ಶೆಟ್ಟಿ (Entrepreneur and Environmental Thinker HS Shetty) ಅವರಿಗೆ ಸಿಕ್ಕಿದ್ದು ಮಾತ್ರ ಲೀಗಲ್‌ ನೋಟಿಸ್‌, ಬೆದರಿಕೆಯ ಕರೆ!

ಜನರ ದಾಹವನ್ನು ದಾಳವಾಗಿಟ್ಟುಕೊಂಡು, “ನೀರು ಕೊಡುತ್ತೇವೆ ನೀರು” ಎಂದು ಹೇಳಿ ಯೋಜನೆ ಪ್ರಾರಂಭವಾಗಿ 10 ವರ್ಷವಾಗುತ್ತಾ ಬಂದರೂ ಯೋಜನೆ ಮಾಡದೇ ಬಾಯಿ ಮಾತಲ್ಲೇ ನೀರು ಕುಡಿಸಲಾಗುತ್ತಿದೆ. ಈ ಸಂಬಂಧ ವಿಸ್ತಾರ ನ್ಯೂಸ್‌ ಪಿನ್‌ ಟು ಪಿನ್‌ ರಿಯಾಲಿಟಿ ಚೆಕ್‌ ಮಾಡಿದೆ. ಯೋಜನೆಯಲ್ಲಿ ಏನಾಗುತ್ತಿದೆ ಎಂಬುದನ್ನೂ ವಿವರಿಸಲಾಗಿದೆ. ಇದು ವಿಸ್ತಾರ ನ್ಯೂಸ್‌ ಟೀಮ್‌ನ ಅತಿ ದೊಡ್ಡ ಎಕ್ಸ್‌ಕ್ಲೂಸಿವ್‌ ಗ್ರೌಂಡ್‌ ರಿಪೋರ್ಟ್‌ ಆಗಿದೆ.

ಈ ಏಳು ಜಿಲ್ಲೆಗಳಿಗೆ ಸಿಗಲಿದೆಯಾ ನೀರು?

ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲವು ಭಾಗಗಳಿಗೆ ಎತ್ತಿನಹೊಳೆ ಯೋಜನೆಯಿಂದ ನೀರು ಪೂರೈಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಈ ಯೋಜನೆ ಮೂಲಕ ನೀರು ಕೊಡುತ್ತೇವೆ ಎಂದು ಕಳೆದ 10 ವರ್ಷಗಳಿಂದ ಸರ್ಕಾರಗಳು ಸತಾಯಿಸುತ್ತಾ ಬಂದಿವೆ.

2014ರಲ್ಲಿ ಚಾಲನೆ ನೀಡಿದ್ದ ಸಿದ್ದರಾಮಯ್ಯ

ನೀರಾವರಿ ತಜ್ಞ ದಿವಂಗತ ಡಾ. ಜಿ.ಎಸ್. ಪರಮಶಿವಯ್ಯ ಅವರ ವರದಿ ಆಧರಿಸಿ ಶುರು ಮಾಡಿದ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಗೆ ಆರಂಭದಿಂದಲೂ ಒಂದಲ್ಲ ಒಂದು ಅಪಸ್ವರ ಕೇಳಿಬರುತ್ತಿದೆ. 2014ರ ಮಾರ್ಚ್‌ನಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿ, ಇನ್ನು ಕೆಲವೇ ವರ್ಷಗಳಲ್ಲಿ ಪಶ್ಚಿಮಘಟ್ಟದಿಂದ ಕೋಲಾರಕ್ಕೆ ನೀರು ಹರಿಯುತ್ತದೆ ಎಂದು ಹೇಳಿದ್ದರು. ಇದಾಗಿ ಒಂದು ದಶಕ ಕಳೆದರೂ ಒಂದೇ ಒಂದು ಹನಿ ನೀರು ಸಹ ಫಲಾನುಭವಿಗಳಿಗೆ ಸಿಕ್ಕಿಲ್ಲ.

ಏನಿದು ಯೋಜನೆ?

ಪಶ್ಚಿಮಘಟ್ಟ ಶ್ರೇಣಿಯಿಂದ ಪಶ್ಚಿಮಾಭಿಮುಖವಾಗಿ ಹರಿಯುವ ನೀರು ಸಮುದ್ರ ಸೇರುವ ಬದಲಿಗೆ ಆ ನೀರನ್ನು ಪೂರ್ವದ ಜಿಲ್ಲೆಗಳತ್ತ ತಿರುಗಿಸಿ, ಕುಡಿಯುವ ನೀರು ಪೂರೈಕೆಗೆ ಬಳಸುವುದೇ ಎತ್ತಿನ ಹೊಳೆ ಯೋಜನೆಯ ಉದ್ದೇಶವಾಗಿದೆ. ಈ ಯೋಜನಾ ಪ್ರದೇಶದ 7 ಜಿಲ್ಲೆಗಳಿಗೆ ಕುಡಿಯುವ ನೀರಿನ ಅಗತ್ಯ ಮತ್ತು ಕೆರೆಗಳನ್ನು ತುಂಬಿಸುವುದಕ್ಕಾಗಿ 24.01 ಟಿಎಂಸಿ ಅಡಿಗಳಷ್ಟು ನೀರನ್ನು ಬಳಸಿಕೊಳ್ಳುವ ಪ್ರಸ್ತಾಪ ಇದರ ಹಿಂದೆ ಇದೆ.

ಆದರೆ, ಅಷ್ಟು ಪ್ರಮಾಣದ ನೀರಿನ ಲಭ್ಯತೆ ಇರುವುದಿಲ್ಲ ಎಂಬ ವಿರೋಧದ ಮಧ್ಯೆಯೇ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಏಳು ಜಿಲ್ಲೆಗಳ 29 ತಾಲೂಕಿನ 38 ಪಟ್ಟಣ ಪ್ರದೇಶ ಮತ್ತು 6,657 ಗ್ರಾಮಗಳ 75.59 ಲಕ್ಷ ಜನರಿಗೆ ಈ ಯೋಜನೆಯಿಂದ ಅನುಕೂಲವಾಗಲಿದೆ ಎಂದು ಅಂದಾಜಿಸಲಾಗಿದೆ.

ಯೋಜನಾ ಮೊತ್ತ ಡಬಲ್!

2012ರಲ್ಲಿ ಎತ್ತಿನಹೊಳೆ ಯೋಜನೆಗೆ 8,323.50 ಕೋಟಿ ರೂಪಾಯಿ ವೆಚ್ಚವನ್ನು ನಿಗದಿಪಡಿಸಿ ಅನುಮೋದನೆ ನೀಡಲಾಗಿತ್ತು. 2014ರಲ್ಲಿ ಯೋಜನೆಯ ಅಂದಾಜು ವೆಚ್ಚವನ್ನು ಪರಿಷ್ಕರಿಸಿ 12,912.36 ಕೋಟಿ ರೂಪಾಯಿಗೆ ಹೆಚ್ಚಳ ಮಾಡಲಾಯಿತು. ಜತೆಗೆ ಅದೇ ವರ್ಷ ಕಾಮಗಾರಿಗೆ ಚಾಲನೆಯನ್ನೂ ನೀಡಲಾಯಿತು. ಆದರೆ, ನಿಧಾನಗತಿಯ ಕಾಮಗಾರಿಯಿಂದ ಯೋಜನಾ ವೆಚ್ಚ ಬೆಳೆಯುತ್ತಲಿದೆ. ಇದಾದ ಬಳಿಕ 25,125 ಕೋಟಿ ರೂಪಾಯಿಗೆ ಎತ್ತಿನಹೊಳೆ ಯೋಜನೆಯ ಪರಿಷ್ಕೃತ ಅಂದಾಜನ್ನು ನಿಗದಿಪಡಿಸಿ ಅನುಮತಿಗಾಗಿ ವಿಶ್ವೇಶ್ವರಯ್ಯ ಜಲ ನಿಗಮವು ಸರ್ಕಾರಕ್ಕೆ ಪ್ರಸ್ತಾವನೆಯನ್ನೂ ಸಲ್ಲಿಸಿತ್ತು.

ಕುಡಿಯಲು ಸಿಗುವುದು ಕೇವಲ .85 ಟಿಎಂಸಿ ನೀರು!

ಎತ್ತಿನಹೊಳೆ ಯೋಜನೆಯ ಪ್ರದೇಶದಲ್ಲಿ 9.55 ಟಿಎಂಸಿ ನೀರು ಸಿಗುತ್ತದೆ. ಶೇ.45 ನಿತ್ಯಹರಿದ್ವರ್ಣ ಕಾಡು, ಎಲೆ ಉದುರುವ ಕಾಡುಗಳ ಸಹಿತ ಶೇ. 28ರಷ್ಟು ತೋಟಗಾರಿಕೆ ಪ್ರದೇಶಗಳಿವೆ. ಆದರೆ, ಅದರಲ್ಲಿ ವ್ಯವಸಾಯ, ತೋಟಗಾರಿಕೆಗೆ 5.8 ಟಿಎಂಸಿ ನೀರು ಬೇಕು. ಮೀನಿಗೆ 2.5ರಿಂದ 2.8 ಟಿಎಂಸಿ ನೀರು ಬೇಕು. ಜನರಿಗೆ ಕುಡಿಯುವ ಬಳಕೆಗೆ ಸಿಗುವುದು ಕೇವಲ .85 ಟಿಎಂಸಿ ನೀರು ಮಾತ್ರವೇ ಎಂದು ಪರಿಸರ ವಿಜ್ಞಾನಿ ಪ್ರೊ. ಟಿ.ವಿ. ರಾಮಚಂದ್ರ ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಅಲ್ಲದೆ, ಸಿಗುವ .85 ಟಿಎಂಸಿ ನೀರಿಗೆ ಆಗ 13 ಸಾವಿರ ಕೋಟಿ ರೂಪಾಯಿಯನ್ನು ಖರ್ಚು ಮಾಡುವುದು ಅವೈಜ್ಞಾನಿಕ ಎಂದು ಹೇಳಿದ್ದೆವು. ಆದರೆ, ಅದಕ್ಕೆ ಈಗ 25 ಸಾವಿರ ಕೋಟಿ ರೂಪಾಯಿಗೆ ಏರಿಕೆ ಆಗಿದೆ ಎಂದು ಪ್ರೊ. ಟಿ.ವಿ. ರಾಮಚಂದ್ರ ಹೇಳಿದ್ದಾರೆ.

ಕಾಡು ನಾಶವಾಗುತ್ತಿದೆ; ಪರಿಸರ ತಜ್ಞರ ಆತಂಕ

ಪಶ್ಚಿಮಘಟ್ಟವೆಂದರೆ ಹಾಸನ ಜಿಲ್ಲೆ ಸಕಲೇಶಪುರದ ದಟ್ಟಾರಣ್ಯದಲ್ಲಿ ಎತ್ತಿನಹೊಳೆ ಸೇರಿ ಏಳೆಂಟು ಹಳ್ಳಗಳ ನೀರನ್ನು ಕಿರು ಅಣೆಕಟ್ಟುಗಳ ಮೂಲಕ ಸಂಗ್ರಹಿಸುವುದು. ನಂತರ ಅದನ್ನು 940 ಅಡಿ ಎತ್ತರಕ್ಕೆ ಪಂಪ್‌ ಮಾಡಿ ಅಲ್ಲಿಂದ ಸುರಂಗ ಮಾರ್ಗದಲ್ಲಿ ಪೈಪ್‌ಗಳ ಮೂಲಕ 7 ಜಿಲ್ಲೆಗಳಿಗೆ ನೀರು ಹರಿಸುವುದಾಗಿದೆ. ಇನ್ನೊಂದೆಡೆ, ಪಶ್ಚಿಮಘಟ್ಟದಲ್ಲಿ ನಿತ್ಯಹರಿದ್ವರ್ಣ ಕಾಡುಗಳು ನಾಶವಾಗುತ್ತಿವೆ. ಜಾಗತಿಕ ತಾಪಮಾನ, ಅವೈಜ್ಞಾನಿಕ ಕಾಮಗಾರಿಗಳಿಂದ ಮಳೆಯ ಪ್ರಮಾಣವೂ ಕಡಿಮೆಯಾಗಿದೆ ಎಂಬುದು ತಜ್ಞರ ಕಳವಳವಾಗಿದೆ. ದಕ್ಷಿಣ ಕನ್ನಡದ ಜೀವನದಿ ನೇತ್ರಾವತಿಯ ಉಪನದಿಯಾದ ಎತ್ತಿನಹೊಳೆಗೆ ಪೆಟ್ಟು ಬಿದ್ದು ನೇತ್ರಾವತಿ ನದಿ ನೀರು ಕಡಿಮೆ ಆಯಿತು ಎಂದು ಹೋರಾಟ ನಡೆಸಿದ್ದಲ್ಲದೆ, ಬಂದ್‌ ಅನ್ನು ಸಹ ನಡೆಸಲಾಗಿತ್ತು.

24 ಟಿಎಂಸಿ ನೀರು ಸಿಗುವ ಗ್ಯಾರಂಟಿ ಕೊಡಲು ಸರ್ಕಾರಕ್ಕೆ ಸವಾಲು!

ಈ ಯೋಜನೆಯಿಂದ ನೇತ್ರಾವತಿ ಜೀವನದಿ ಮೂಲಕ್ಕೇ ಪೆಟ್ಟು ಬಿದ್ದಿದೆ. ಜತೆಗೆ ಅದರ ಜೀವವೈವಿಧ್ಯತೆಗೆ ಸಮಸ್ಯೆ ಆಗಿದೆ. ಈ ಯೋಜನೆಯಿಂದ ಬಯಲುಸೀಮೆಗೆ ನೀರು ಪೂರೈಸುವುದಿರಲಿ, ಪಶ್ಚಿಮಘಟ್ಟದಲ್ಲೂ ನೀರಿಗೆ ಬರ ಬರುವ ಕಾಲ ದೂರವಿಲ್ಲ. ಈ ಯೋಜನೆಯನ್ನು ಮಾಡಲು ಹೊರಟವರು 24 ಟಿಎಂಸಿ ನೀರು ಖಂಡಿತ ಸಿಗುತ್ತದೆ ಎಂಬ ಗ್ಯಾರಂಟಿಯನ್ನು ಕೊಟ್ಟರೆ ನಾವು ಸಹ ಜೈಕಾರ ಹಾಕುತ್ತೇವೆ ಎಂದು ಪಶ್ಚಿಮಘಟ್ಟ ಅಧ್ಯಯನ ತಜ್ಞರಾದ ದಿನೇಶ್​​ ಹೊಳ್ಳ ಸವಾಲು ಹಾಕಿದ್ದಾರೆ.

ಎತ್ತಿನಹೊಳೆ ಯೋಜನೆ ಹೆಸರಲ್ಲಿ ರೈತರನ್ನು ಬೆದರಿಸಿ ಭೂ ಸ್ವಾಧೀನಪಡಿಸಿಕೊಂಡಿರುವ ಆರೋಪ ಸಹ ಕೇಳಿಬಂದಿದೆ. ಈ ಬಗ್ಗೆ ಬಯಲುಸೀಮೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಮುಖಂಡ ಆರ್. ಆಂಜನೇಯರೆಡ್ಡಿ ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿ, ಭೂಸ್ವಾಧೀನ ಎಂಬುದೇ ಒಂದು ಗುಮ್ಮ. ರೈತರನ್ನು ಸಂಪರ್ಕಿಸಲ್ಲ. ಖಾಸಗಿಯವರು ಬಂದು ಧಮ್ಕಿ ಹಾಕುತ್ತಾರೆ. ಇನ್ನು ಯಾರನ್ನೋ ಕಳುಹಿಸಿ ಆರು ಕಾಸು, ಮೂರು ಕಾಸು ಕೊಡುತ್ತಾರೆ.
ಇದು ಸಂವಿಧಾನಬದ್ಧ ಅಲ್ಲ ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ.

ಯೋಜನೆಯ ಕರಾಳ ಮುಖ ಬಿಚ್ಚಿಟ್ಟರು ಪರಿಸರ ಚಿಂತಕ, ಉದ್ಯಮಿ ಡಾ.ಎಚ್.ಎಸ್. ಶೆಟ್ಟಿ

ಎತ್ತಿನಹೊಳೆ ಯೋಜನೆ ಆರಂಭದಲ್ಲಿಯೇ ಇದೊಂದು ಅವೈಜ್ಞಾನಿಕ. ಸರ್ಕಾರದ ಪ್ರಾಜೆಕ್ಟ್ ಅಲ್ಲ, ಇದು ಕಾಂಟ್ರ್ಯಾಕ್ಟರ್ಸ್‌ ಪ್ರಾಜೆಕ್ಟ್ ಎಂದು ಧ್ವನಿ ಎತ್ತಿರುವುದು ಪರಿಸರ ಚಿಂತಕ, ಉದ್ಯಮಿ ಡಾ. ಎಚ್.ಎಸ್. ಶೆಟ್ಟಿ ಅವರು. ಆದರೆ, ಅವರ ಈ ಮಾತಿಗೆ ಪ್ರತಿಕ್ರಿಯೆಯಾಗಿ ಬಂದಿದ್ದು ಲೀಗಲ್‌ ನೋಟಿಸ್‌ ಮತ್ತು ಬೆದರಿಕೆ!

ಎತ್ತಿನಹೊಳೆ ಬಗ್ಗೆ ಡಾ. ಎಚ್.ಎಸ್. ಶೆಟ್ಟಿ ಹೇಳುವುದೇನು?

“ನನ್ನ ಪ್ರಕಾರ ಆ ಹೊಳೆಯಲ್ಲಿ 24 ಟಿಎಂಸಿ ನೀರು ಇಲ್ಲ. 7 ಅಣೆಕಟ್ಟು ಪೈಕಿ ಒಂದು ಅಣೆಕಟ್ಟೆ ಕಡೆ ನಮ್ಮದು ಜಲ ವಿದ್ಯುತ್‌ ಘಟಕ ಇದೆ. 15 ವರ್ಷದಿಂದ ನಮ್ಮ ಯೂನಿಟ್ ಇದೆ. ಒಂದು ಕಾಲದಲ್ಲಿ ಆ ಹೊಳೆಯಲ್ಲಿ ಬೇಕಾದಷ್ಟು ನೀರಿತ್ತು. ಅರಣ್ಯ ನಾಶ, ಜಾಗತಿಕ ತಾಪಮಾನ ಕಾರಣದಿಂದ ಈಗ ಮಳೆ ನೀರು ಕಡಿಮೆ ಆಗಿದೆ. ಖಂಡಿತ 10 ಟಿಎಂಸಿಗಿಂತ ಹೆಚ್ಚು ನೀರು ಸಿಗುವುದೇ ಇಲ್ಲʼʼ ಎನ್ನುತ್ತಾರೆ ಡಾ. ಎಚ್‌ ಎಸ್‌ ಶೆಟ್ಟಿ.

ಇದು ಸರ್ಕಾರದ ಪ್ರಾಜೆಕ್ಟ್ ಅಲ್ಲ. ಇದೊಂದು ಕಾಂಟ್ರ್ಯಾಕ್ಟರ್ಸ್‌ ಪ್ರಾಜೆಕ್ಟ್. ಈ ಪ್ರಾಜೆಕ್ಟ್ ಮಾಡುತ್ತಿರುವವರು ಸಹ ಕಾಂಟ್ರ್ಯಾಕ್ಟರ್ಸ್. ಇದನ್ನು ಪ್ರಶ್ನೆ ಮಾಡಿದಾಗ ನಿಮ್ಮ ಜೀವಕ್ಕೆ ಅಪಾಯ ಆಗಬಹುದು ಎಂಬುದಾಗಿ ನನ್ನ ಮಿತ್ರರು, ಹಿತೈಷಿಗಳು ಸಲಹೆ ಕೊಟ್ಟಿದ್ದರು. ಈ ಯೋಜನೆ ತಡೆಯಲು ಹೋಗಿದ್ದಕ್ಕೆ ಕೆಲವು ಆರ್‌ಟಿಐ ಕಾರ್ಯಕರ್ತರು, ಪರಿಸರವಾದಿಗಳನ್ನೇ ಮಟ್ಟ ಹಾಕಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದರು. ಇಲ್ಲಿ ಅತಿ ದೊಡ್ಡ ಮಾಫಿಯಾ ಮತ್ತು ಲಾಬಿಗಳು ನಡೆಯುತ್ತಿವೆ. ಅದೃಷ್ಟವೆಂದರೆ ನನಗೆ ಆ ರೀತಿ ಆಗಿಲ್ಲ. ಬರಿ ಬೆದರಿಕೆ ಹಾಕಿದ್ದಾರೆ ಅಷ್ಟೇ. ಆ್ಯಕ್ಸಿಡೆಂಟ್‌ ಆಗಿ ಸಾಯಬಹುದು. ಹಾವು ಕಚ್ಚಿ ಸಾಯಬಹುದು ಆ ಭಗವಂತ ಹಣೆಯಲ್ಲಿ ಬರೆದಿದ್ದು ಆಗುತ್ತದೆ ಅಷ್ಟೇ ಎಂದು ಎಚ್‌ ಎಸ್‌ ಶೆಟ್ಟಿ ಅವರು ವಿವರಿಸಿದರು.

ವಿಶ್ವೇಶ್ವರಯ್ಯ ಹೆಸರಿಗೆ ಮಸಿ ಬಳಿಯಲಾಗುತ್ತಿದೆ

ಕಾಂಟ್ರ್ಯಾಕ್ಟರ್ಸ್ ಕಳ್ಳಾಟಕ್ಕೆ, ಹಣ ಲೂಟಿಗೆ ಸಾಥ್‌ ನೀಡುತ್ತಿರುವುದು ಬೇರೆ ಯಾರೂ ಅಲ್ಲ. ನಮ್ಮ ಘನ ಸರ್ಕಾರದ ವಿಶ್ವೇಶ್ವರಯ್ಯ ಜಲ ನಿಗಮ. ಎತ್ತಿನಹೊಳೆ ಯೋಜನೆ ಅಧ್ವಾನದ ಮೂಲಕ ಎಂಜಿನಿಯರಿಂಗ್ ದಂತಕಥೆ ವಿಶ್ವೇಶ್ವರಯ್ಯ ಅವರ ಹೆಸರಿಗೆ ನಮ್ಮ ನಿಗಮವೇ ಮಸಿ ಬಳಿಯುತ್ತಿದೆ. ವಿಶ್ವೇಶ್ವರಯ್ಯ ಜಲನಿಗಮ ಕಂಪನಿ ಎಂದು ಹೆಸರಿಟ್ಟುಕೊಳ್ಳಲಾಗಿದೆ. ವಿಶ್ವೇಶ್ವರಯ್ಯ ಅಂದರೆ ಎಂಜಿನಿಯರಿಂಗ್‌ ಬಗ್ಗೆ ಅದ್ಭುತ ದೃಷ್ಟಿಕೋನವನ್ನು ಹೊಂದಿದವರು. ದೇಶ ಮಾತ್ರವಲ್ಲದೇ ಜಗತ್ತಿನಲ್ಲೂ ಅವರ ಹೆಸರಲ್ಲಿ ವಿದ್ಯಾರ್ಥಿಗಳು ಪ್ರಮಾಣ ಸ್ವೀಕರಿಸುತ್ತಾರೆ. ಆದರೆ, ವಿಶ್ವೇಶ್ವರಯ್ಯ ಹೆಸರಲ್ಲಿ ಮಾಡಿದ ಕಂಪನಿ ಅವರಿಗೇ ಮರ್ಯಾದೆ ಕೊಡುತ್ತಿಲ್ಲದಿರುವುದು ವಿಪರ್ಯಾಸ. ಇಲ್ಲಿ ಮರ್ಡರ್ ಆಫ್‌ ಎಂಜಿನಿಯರಿಂಗ್‌ ನಡೆಯುತ್ತಲಿದೆ ಎಂದು ಎಸ್‌ ಎಸ್‌ ಶೆಟ್ಟಿ ಅವರು ಹೇಳಿದರು.

ಪೈಪ್‌ಲೈನ್‌ ನಿರ್ವಹಣೆಯೇ ಸರಿ ಇಲ್ಲ

ಪೈಪ್‌ಲೈನ್‌ ಕನ್ಸ್‌ಟ್ರಕ್ಷನ್‌ನಲ್ಲಿ ನನಗೆ ಸ್ವಲ್ಪ ಅನುಭವ ಇದೆ. ಪೈಪ್‌ ಮೇಲೆ ಒತ್ತಡ ಬರಬಾರದು. ದೊಡ್ಡ ದೊಡ್ಡ ಪೈಪ್‌ ಮೂಲಕ ಕೆಳಗಿನಿಂದ ಮೇಲಕ್ಕೆ ನೀರು ಪಂಪ್‌ ಮಾಡಬೇಕೆಂದರೆ ಆ ಪೈಪ್‌ಗಳು ಸದೃಢವಾಗಿರಬೇಕು. ವಿದ್ಯುತ್ ಬಳಕೆ ಪ್ರಮಾಣವೂ ಸಾಕಷ್ಟು ಬೇಕು. ಆದರೆ, ಇಲ್ಲಿ ಪೈಪ್‌ಲೈನ್‌ ವ್ಯವಸ್ಥೆ ಹಾಳಾಗಿದೆ. ಪೈಪ್‌ಗಳನ್ನು ಬಿಸಾಡಿ ಐದಾರು ವರ್ಷಗಳಾಗಿವೆ. ಅವುಗಳು ತುಕ್ಕು ಹಿಡಿದಿವೆ. ಪೈಪ್‌ನ ಮೇಲ್ಮೈಯಲ್ಲಿ ವೆಲ್ಡಿಂಗ್ ಮಾಡಲಾಗಿದ್ದು, ಒಳಗಡೆ ವೆಲ್ಡಿಂಗ್ ಮಾಡಲಾಗಿಲ್ಲ. ಇಲ್ಲ. ಹಾಗಾಗಿ ತುಕ್ಕುಹಿಡಿದು ಪೈಪ್‌ಗಳೇ ಡೆಡ್ ಆಗಿವೆ. ಮೆಟಲ್‌ ಪೈಪ್‌ಗೆ 25 ವರ್ಷವಷ್ಟೇ ಜೀವಿತಾವಧಿ ಇರುತ್ತದೆ. ಕಾಂಕ್ರೀಟ್ ಪೈಪ್‌ 50 ವರ್ಷಗಳವರೆಗೆ ಬಾಳಿಕೆ ಬರುತ್ತದೆ. ಪೈಪ್‌ಲೈನ್‌ ಲೈಫ್‌ ಸ್ಪ್ಯಾನ್ ಮುಗಿದುಹೋಗಿದೆ. ಮಳೆಯಲ್ಲಿ ಪೈಪ್‌ಗಳು ನೆನೆದಿವೆ. ಮಳೆ ಬಿದ್ದು, ಮಣ್ಣಲ್ಲಿ ಬಿದ್ದ ಕಾರಣ ಸಮಸ್ಯೆಯಾಗಿದೆ. ಪೈಪ್‌ ಲೈನ್‌ ಹಾಕುವಾಗ ಬೆಂಡ್ಸ್‌ ಇರಬಾರದು. ಪೈಪ್‌ಗಳನ್ನು ಅಪ್‌ ಆ್ಯಂಡ್ ಡೌನ್‌ ಹಾಕಿರುವುದರಿಂದ ಆ ಪ್ರೆಶರ್ ತಡೆಯುವ ಶಕ್ತಿ ಆ ಪೈಪ್‌ಗಳಿಗೆ ಇಲ್ಲ. ಇನ್ನೂ ಪ್ರೆಶರ್‌ ಕ್ಯಾಲ್ಕುಲೇಷನ್‌ ಅನ್ನು ಮಾಡಲಾಗಿಲ್ಲ. ಆ ಪಂಪ್‌ಗೆ ನೀರೆತ್ತುವ ಸಾಮರ್ಥ್ಯ ಇದ್ದರೂ ಆ ಪೈಪ್‌ ಲೈನ್‌ಗೆ ಸಾಮರ್ಥ್ಯ ಇಲ್ಲ. ಹಸಿ ಮಣ್ಣಿನ ಮೇಲೆ ಪೈಪ್‌ ಜೋಡಿಸುತ್ತಿದ್ದಾರೆ. ಒಮ್ಮೆ ನೀರನ್ನು ಹರಿಸಲು ಪ್ರಾರಂಭಿಸಿದರೆ ಆ ಒತ್ತಡಕ್ಕೆ ಪೈಪ್‌ ಕುಸಿಯುತ್ತದೆ. ನೀರು ಪಂಪ್ ಶುರು ಮಾಡಿದ್ರೆ ವೈಬ್ರೇಷನ್‌ ಆಗಿ ಪೈಪ್‌ ಒಡೆಯುತ್ತದೆ. ಇದು ವರ್ಕ್‌ ಆದರೂ ಶೇಕಡಾ 10ರಿಂದ 20ರಷ್ಟು ವ್ಯರ್ಥವಾಗುತ್ತದೆ ಎಂದು ಶೆಟ್ಟಿ ಅವರು ವಿವರಿಸಿದರು.

ಮೀನುಗಳ ನಾಶಕ್ಕೆ ಕಾರಣರಾದರು

ಇದೊಂದು ಪರಿಸರ ದುರಂತವಾಗಿದೆ. 1ರಿಂದ 2 ಮಿಲಿಯನ್‌ ಮಣ್ಣು ತೆಗೆದು ಹೊಳೆಗೆ ಹಾಕಿದ್ದಾರೆ. ಆ ಮಣ್ಣು ಹೊಳೆಯಿಂದ ಸಮುದ್ರ ಸೇರಿದೆ. ದಕ್ಷಿಣ ಕನ್ನಡದಲ್ಲಿ ನೋಡಿದರೆ ಅಲ್ಲಿ ನೀರಿನ ಅಭಾವ ಇದೆ. ಬಾವಿಯಲ್ಲಿ ನೀರಿಲ್ಲ. ಕೆರೆಯಲ್ಲಿ ನೀರು ಬರುತ್ತಿಲ್ಲ. ಗದ್ದೆಯಲ್ಲಿ ಸಮಸ್ಯೆಯಾಗಿ ಬೆಳೆ ಬರುತ್ತಿಲ್ಲ. ಸಮುದ್ರದಲ್ಲಿ ಮೀನುಗಳು ಮೊಟ್ಟೆ ಇಡಲು ಆಗಿಲ್ಲ. ಸಮುದ್ರಕ್ಕೆ ಮಣ್ಣು ಸೇರಿ ದೊಡ್ಡ ದುರಂತವೇ ಆಗಿದೆ ಎಂದು ಶೆಟ್ಟರು ಅಭಿಪ್ರಾಯಪಟ್ಟರು.

ಡೇಟಾ ಕೊಟ್ಟಿದ್ದಕ್ಕೆ ಲೀಗಲ್‌ ನೋಟಿಸ್‌ ಕೊಟ್ಟರು

ಇಲ್ಲಿ ನೀರಿಲ್ಲ ಅಂತಾ ಇಲ್ಲಿ ನೀರಿರೋದು ಇಷ್ಟೇ ಅಂತ ಡೇಟಾ ಕೊಟ್ಟೆ. ನನಗೆ ಲೀಗಲ್ ನೋಟಿಸ್ ಕೊಟ್ಟರು. 2016ರಲ್ಲೂ. 2014ರಿಂದ ಡಾಟಾ ಕೊಟ್ಟೆ, ನನಗೆ ನೋಟಿಸ್ ಕೊಟ್ಟು ನೀವು ನನ್ನ ಪ್ರಾಜೆಕ್ಟ್‌ಗೆ ವಿರೋಧಿಸುತ್ತಿದ್ದೀರಾ, ಇದು ಪಬ್ಲಿಕ್‌ ಪ್ರಾಜೆಕ್ಟ್ ಅಂತ ಹೇಳಿದರು. ನಿಮ್ಮನ್ನು ಪ್ರಾಸಿಕ್ಯೂಟ್ ಮಾಡುತ್ತೇನೆ ಅಂದರು. ಆಗ ನಾನು ಸ್ಟಾಪ್‌ ಮಾಡಿದೆ. ಒಬ್ಬ ಹಿತಾಸಕ್ತಿಯುಳ್ಳ ಮನುಷ್ಯನಾಗಿ, ಇದು ನನ್ನ ದೇಶ – ನನ್ನ ರಾಜ್ಯ ಎಂಬ ಕಾರಣಕ್ಕೆ ನಾನು ಡೇಟಾ ಕೊಟ್ಟು ಆತಂಕ ತೋಡಿಕೊಂಡೆ. ಎಂಜಿನಿಯರಿಂಗ್ ಪ್ರಾಜೆಕ್ಟ್ ಮಾಡಿರುವ ಅನುಭವ ಇರುವುದರಿಂದ ಏನಾಗುತ್ತಿದೆ ಎಂಬುದನ್ನು ನೋಡಿ ಇದರ ಬಗ್ಗೆ ಆತಂಕ ವ್ಯಕ್ತಪಡಿಸಿ ಪತ್ರ ಬರೆದು ತಿಳಿಸಿದ್ದೆ. ಆದರೆ, ಅವರು ನನಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಬಳಿಕ ನನಗೆ ತುಂಬಾ ಕಿರಿಕಿರಿ, ಶೋಷಣೆ ಪ್ರಾರಂಭವಾಯಿತು. ಕರೆ ಮಾಡಿ ಬೆದರಿಸಿದರು. ಆದರೂ ನಾನು ತಲೆಕೆಡಿಸಿಕೊಂಡಿಲ್ಲ. ದುಬೈನಿಂದ ರಾತ್ರಿ ಸಮಯದಲ್ಲಿಯೂ ಫೋನ್‌ ಬರುತ್ತಲಿತ್ತು. ಬುದ್ಧಿ ಕಲಿಸುತ್ತೇವೆ ನಿನಗೆ ಎಂದು ಬೆದರಿಸಿದ್ದಾರೆ. ಇದರಲ್ಲಿ ನಿನಗೇನು ಅಂತಲೂ ಹೆದರಿಸಿದ್ದಾರೆ. ಇವೆಲ್ಲ ನೋಡಿದ್ದೇನೆ. ಆದರೆ, ಇದೊಂದು ಮಾಫಿಯಾ. ಹಗರಣ ಇದೆಯೋ ಇಲ್ಲವೋ ಎಂಬುದನ್ನು ಸಿಎಜಿ ಸೇರಿ ತನಿಖಾ ಸಂಸ್ಥೆಗಳು ಗಮನಿಸಲಿ. ಇದೊಂದು ರಾಷ್ಟ್ರೀಯ ವಿಪತ್ತಾಗಿದೆ. ಇದು ಹಂಡ್ರೆಡ್ ಪರ್ಸೆಂಟ್‌ ವರ್ಕ್‌ ಆಗಲ್ಲ” ಎಂದು ಡಾ. ಎಚ್.ಎಸ್.‌ ಶೆಟ್ಟಿ ಅವರು ಎತ್ತಿನಹೊಳೆ ಯೋಜನೆಯ ಇಡೀ ವೃತ್ತಾಂತವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: Vistara Explainer: ಏನಿದು ಕೃಷ್ಣ ಜನ್ಮಭೂಮಿ-ಈದ್ಗಾ ಮಸೀದಿ ವಿವಾದ? ಮುಂದೇನು?

ಪೈಪ್‌ಲೈನ್‌ ಪ್ಲ್ಯಾನ್‌ ಮಾಡಿದ್ದು ಏಕೆ?

ಎತ್ತಿನಹೊಳೆ ಯೋಜನೆಯ ಹಿಂದೆ ಒಂದೊಂದೇ ಕಥೆಗಳು ಬಿಚ್ಚಿಕೊಳ್ಳುತ್ತವೆ. ಮೊದಲಿಗೆ ತೆರೆದ ಕಾಲುವೆ ಮೂಲಕ ನೀರು ಹಾಯಿಸುವ ಬಗ್ಗೆ ಮಾತುಕತೆಯಾಗಿತ್ತು ಎನ್ನಲಾಗಿದೆ. ಇದಕ್ಕೆ ಪ್ರತಿ ಕಿಲೋ ಮೀಟರ್‌ಗೆ 3 ಕೋಟಿ ರೂಪಾಯಿ ಎಂದು ಯೋಜನಾ ವೆಚ್ಚವನ್ನು ನಿಗದಿ ಮಾಡಲಾಗಿತ್ತು. ಆದರೆ, ತೆರೆದ ಕಾಲುವೆಯನ್ನು ಮಾಡಿದರೆ ನೀರು ಆವಿ ಆಗುವುದಲ್ಲದೆ, ರೈತರು ನೀರನ್ನು ಕದಿಯಬಹುದು ಎಂದು ಹೇಳುವ ಮೂಲಕ ಕಾಂಟ್ರ್ಯಾಕ್ಟರ್‌ ಮಾಫಿಯಾದವರು ಪೈಪ್‌ ಲೈನ್‌ ಪ್ಲ್ಯಾನ್‌ ಅನ್ನು ತಂದಿದ್ದಾರೆ ಎಂದು ಹೇಳಲಾಗಿದೆ. ಈ ಮೂಲಕ ಪೈಪುಗಳು, ಪೈಪ್‌ಲೈನ್‌ ಮೂಲಕ ಸಾವಿರಾರು ಕೋಟಿ ರೂಪಾಯಿಗೆ ಸ್ಕೆಚ್‌ ಹಾಕಿದ್ದಾರೆ. ಎತ್ತಿನಹೊಳೆಯಿಂದ ಕೋಲಾರಕ್ಕೆ 270 ಕಿಲೋ ಮೀಟರ್ ಮಾರ್ಗವನ್ನು ಗುರುತಿಸಲಾಗಿದೆ. ಪೈಪ್‌ಲೈನ್‌ಗೆ ಒಂದು ಕಿಲೋ ಮೀಟರ್‌ಗೆ ಸುಮಾರು 10 ಕೋಟಿ ರೂಪಾಯಿ ವೆಚ್ಚವಾಗುತ್ತದೆ. ಅಂದರೆ, ಎಷ್ಟು ಸಾವಿರ ಕೋಟಿ ಬೇಕು? ಇದು ಕಾರ್ಯಸಾಧುವೇ ಎಂಬ ಪ್ರಶ್ನೆ ಎದುರಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Anjali Murder Case: ಅಂಜಲಿ ಕೊಂದವನ ಎನ್‌ಕೌಂಟರ್ ಮಾಡಿ: ಸಹೋದರಿ ಪೂಜಾ ಆಗ್ರಹ

Anjali Murder Case: ನಮ್ಮ ಅಕ್ಕ ಯಾವ ರೀತಿ ಪ್ರಾಣ ಬಿಟ್ಟಳೋ ಅದೇ ರೀತಿ ಆರೋಪಿ ಸಾಯಬೇಕು. ಪೊಲೀಸರು ಆದಷ್ಟು ಬೇಗ ತನಿಖೆ ಪೂರ್ಣಗೊಳಿಸಿ, ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಅಂಜಲಿ ಸಹೋದರಿ ಪೂಜಾ ಒತ್ತಾಯಿಸಿದ್ದಾರೆ.

VISTARANEWS.COM


on

Anjali Murder Case
Koo

ಧಾರವಾಡ: ಅಂಜಲಿ ಹತ್ಯೆ ಪ್ರಕರಣದ (Anjali Murder Case) ಆರೋಪಿ ಗಿರೀಶ್‌ನನ್ನು ಎನ್‌ಕೌಂಟರ್ ಮಾಡಬೇಕು. ಯಾವುದೇ ಕಾರಣಕ್ಕೂ ಆರೋಪಿಗೆ ಚಿಕಿತ್ಸೆ ಕೊಡಬಾರದು, ಅವನನ್ನು ಆದಷ್ಟು ಬೇಗ ಎನ್ ಕೌಂಟರ್ ಮಾಡಬೇಕು. ನಮ್ಮ ಅಕ್ಕ ಹೇಗೆ ರಕ್ತ ಸುರಿದು ಪ್ರಾಣ ಬಿಟ್ಟಳೋ ಅದೇ ರೀತಿ ಅವನು ಸಾಯಬೇಕು ಎಂದು ಅಂಜಲಿ ಸಹೋದರಿ ಪೂಜಾ ಆಗ್ರಹಿಸಿದ್ದಾರೆ.

ವಿಸ್ತಾರ ನ್ಯೂಸ್‌ ಜತೆ ಶುಕ್ರವಾರ ಮಾತನಾಡಿರುವ ಅಂಜಲಿ ಸಹೋದರಿ ಪೂಜಾ, ನಮ್ಮ ಅಕ್ಕನಿಗೂ ಅವನಿಗೂ ಯಾವುದೇ ಸಂಬಂಧ ಇಲ್ಲ. ಏನೇನೋ ಹೇಳಿ ದಿಕ್ಕು ತಪ್ಪಿಸುತ್ತಿದ್ದಾರೆ. ಪೊಲೀಸರು ಹೇಗೆ ಬೇಕೋ ಹಾಗೆ ಮಾಡುವ ವಿಚಾರದಲ್ಲಿದ್ದಾರೆ. ಇದನ್ನು ಆದಷ್ಟು ಬೇಗ ತನಿಖೆ ಮಾಡಬೇಕು. ಬೆಳಗ್ಗೆ ಮಾತನಾಡಲು ಬಂದವನು ಚಾಕು ಹಾಕಿದ. ನಾವು ನಮ್ಮ ಅಕ್ಕನ ಜತೆ ಮಾತನಾಡಲು ಸಹ ಆಗಲಿಲ್ಲ. ಕೊನೆ ಗಳಿಗೆಯಲ್ಲಿ ಪೊಲೀಸರು ಬಂದು ಡಾಕ್ಟರ್ ಸಹ ಕರೆಯಲಿಲ್ಲ. ಕೇವಲ ಪೋಟೋ ತೆಗೆದುಕೊಂಡು ಹೋದರು. ಅವನಿಗೆ ಅದೇ ರೀತಿ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು.

ನಮ್ಮ ಅಕ್ಕನ ಜತೆಗೆ ಏನೇನೋ ಸಂಬಂಧ ಕಲ್ಪಿಸುತ್ತಿದ್ದಾರೆ. ಹಾಗಾದರೆ ನೆನ್ನೆಯೂ ಸಹ ಅವನು ಯಾರದೋ ಜೊತೆ ಜಗಳ ಮಾಡಿದ್ದ. ಅವರಿಗೂ ಸಂಬಂಧ ಇದೆಯಾ ಎಂದು ಸಹೋದರಿ ಪ್ರಶ್ನೆ ಮಾಡಿದ್ದಾರೆ.

ಹಲ್ಲೇ ಮಾಡಿ ಓಡಿ ಹೋದ

ದಾವಣಗೆರೆ: ಮಹಿಳೆಗೆ ಅಂಜಲಿ ಹಂತಕನಿಂದ ಚಾಕು ಇರಿತ ಪ್ರಕರಣದ ಬಗ್ಗೆ ಗಾಯಾಳು ಮಹಿಳೆಯ ಪತಿ ಪ್ರತಿಕ್ರಿಯಿಸಿದ್ದಾರೆ. ನಾವು ಟ್ರೈನ್‌ನಲ್ಲಿ ಇರುವಾಗ ಅರೋಪಿ ಗಿರೀಶ್ ಹಿಂದೆ ಹಿಂದೆಯೇ ಬರುತ್ತಿದ್ದ. ರೆಸ್ಟ್ ರೂಂನ ಡೋರ್ ಓಪನ್ ಮಾಡಿ ಒಳ ನುಗ್ಗಲು ಯತ್ನಿಸಿದ. ಹೊಟ್ಟೆಗೆ ಚಾಕು ಚುಚ್ಚಲು ಮುಂದಾದಾಗ ನಾನು ಕೈ ಅಡ್ಡ ಹಿಡಿದೆ. ಕೈಗೆ ಗಾಯವಾಗುತ್ತಿದ್ದಂತೆ ಕೂಗಿಕೊಂಡೆ, ಆತ ಓಡಿಹೋದ ಎಂದು ಗದಗ ಮೂಲದ ಲಕ್ಷ್ಮೀ ಪತಿ ಮಹಾಂತೇಶ್ ತಿಳಿಸಿದ್ದಾರೆ. ಸದ್ಯ ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದಾರೆ.

5 ಸಾವಿರ ಅಡ್ವಾನ್ಸ್ ತೆಗೆದುಕೊಂಡು ಹೋದವನು ಮತ್ತೆ ಬಂದಿಲ್ಲ

ಅಂಜಲಿ ಹತ್ಯೆ ಕೊಲೆ ಪ್ರಕರಣದ ಆರೋಪಿ ಗಿರೀಶ್ ಕಳೆದ ನಾಲ್ಕು ತಿಂಗಳಿನಿಂದ ಮೈಸೂರಿನ ಮಹಾರಾಜ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಎಂಬುವುದು ತಿಳಿದುಬಂದಿದೆ. ಈ ಬಗ್ಗೆ ಮಹಾರಾಜ ಹೋಟೆಲ್ ಮಾಲೀಕ ಗೋವರ್ಧನ್ ಪ್ರತಿಕ್ರಿಯಿಸಿ, ವಿನಾಯಕ ನರ್ಸಿಂಗ್ ಕೇರ್ ಏಜೆನ್ಸಿ ಮೂಲಕ ನಮ್ಮ ತಂದೆ ನೋಡಿಕೊಳ್ಳಲು ಆರೋಪಿ ಗಿರೀಶ್‌ ಬಂದಿದ್ದ. ರೂಂ ಬಾಯ್, ಸಪ್ಲೈಯರ್ ಆಗಿ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Bhatkal News: ಭಟ್ಕಳದ ಕಡವಿನಕಟ್ಟೆ ಹೊಳೆಯಲ್ಲಿ ಮುಳುಗಿ ಇಬ್ಬರ ಸಾವು

ಗಿರೀಶ್ ಸರಿಯಾಗಿ ಕೆಲಸಕ್ಕೆ ಬರುತ್ತಿರಲಿಲ್ಲ. ಒಮ್ಮೆ 10 ದಿನ, 5‌ ದಿನ ಹೀಗೆ ರಜಾ ತೆಗೆದುಕೊಳ್ಳುತ್ತಿದ್ದ. ಏಜೆನ್ಸಿ ಮೂಲಕ ಬಂದ ಕಾರಣ ಹೆಚ್ಚು ರಜಾ ತೆಗೆದುಕೊಂಡರೂ ನಾನು ಅವನ ಬಗ್ಗೆ ಕೇಳುತ್ತಿರಲಿಲ್ಲ. ಮಂಗಳವಾರ ಸಂಜೆ 5 ಸಾವಿರ ರೂ. ಹಣ ಅಡ್ವಾನ್ಸ್ ತೆಗೆದುಕೊಂಡು ಹೋದವನು ಮತ್ತೆ ವಾಪಸ್ ಬಂದಿಲ್ಲ ಎಂದು ಹೇಳಿದ್ದಾರೆ.

ಮರುದಿನ ಪೊಲೀಸರು ನನಗೆ ಕರೆ ಮಾಡಿದಾಗಲೇ ಗಿರೀಶ್‌ ಕೊಲೆ ಮಾಡಿದ್ದಾನೆ ಎಂಬುದು ತಿಳಿಯಿತು. ನಮ್ಮ ಹೋಟೆಲ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿ, ಮೊಬೈಲ್‌ನಲ್ಲಿ ಹೆಚ್ಚು ಮಾತನಾಡುತ್ತಿದ್ದ ಎಂದು ಅವನ ಬಗ್ಗೆ ಹೇಳಿದ್ದರು. ಜತೆಗೆ ಕಂಪನಿಯ ಫೋನ್‌ನಿಂದ ಹೆಚ್ಚು ದಿನ ಮಾತನಾಡಿದ್ದಾನೆ. ಘಟನೆ ನಡೆಯುವ ಹಿಂದಿನ ದಿನ ಜೋರಾಗಿ ಕೂಗಾಡಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದನಂತೆ. ನಮ್ಮ ಹೋಟೆಲ್‌ಗೆ ಏಳು ಪೊಲೀಸರು ಬಂದಿದ್ದರು. ನೆನ್ನೆ ರಾತ್ರಿಯವರೆಗೂ ಪೊಲೀಸರಿ ನಮ್ಮ ಹೋಟೆಲ್‌ನಲ್ಲಿ ಇದ್ದರು. ಆತ ದಾವಣಗೆರೆಯಲ್ಲಿ ಸಿಕ್ಕ ಬಳಿಕ ಮಧ್ಯರಾತ್ರಿ ಪೊಲೀಸರು ಇಲ್ಲಿಂದ ತೆರಳಿದರು ಎಂದು ತಿಳಿಸಿದ್ದಾರೆ.

Continue Reading

ಬೆಂಗಳೂರು

Murder Case: ಯಲಹಂಕದಲ್ಲಿ ವ್ಯಕ್ತಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರ ಕೊಲೆ

Murder Case: ಬೆಂಗಳೂರು ಹೊರವಲಯದ ಯಲಹಂಕ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯ ಡೇರಿ ಸರ್ಕಲ್ ಬಳಿ ಘಟನೆ ನಡೆದಿದೆ.

VISTARANEWS.COM


on

Murder Case
Koo

ಬೆಂಗಳೂರು: ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಯಲಹಂಕ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯ ಡೇರಿ ಸರ್ಕಲ್ ಬಳಿ ನಡೆದಿದೆ. ಸುಮಾರು 35-40 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯನ್ನು ಕೊಲೆ (Murder Case) ಮಾಡಲಾಗಿದೆ.

ಶುಕ್ರವಾರ ರಾತ್ರಿ‌ 8.30ರ ಸುಮಾರಿಗೆ ಕೊಲೆ ಮಾಡಿದ್ದು, ಯಾರೋ ಅಪರಿಚಿತ ವ್ಯಕ್ತಿಗಳು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಎಸ್ಕೇಪ್ ಆಗಿದ್ದಾರೆ. ಸ್ಥಳಕ್ಕೆ ಯಲಹಂಕ ಉಪನಗರ‌ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ‌ ಮೃತದೇಹವನ್ನು ಯಲಹಂಕ ‌ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕೃತ್ಯದ ಬಗ್ಗೆ ಯಲಹಂಕ ಉಪನಗರ ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಗೋಡೆ ಕುಸಿದು ಐವರು ಮಹಿಳೆಯರಿಗೆ ಗಾಯ

ಕೊಪ್ಪಳ: ಬಯಲು‌ ಬಹಿರ್ದೆಸೆಗೆ ತೆರಳಿದ್ದಾಗ ಗೋಡೆ ಕುಸಿದು ಐವರು ಮಹಿಳೆಯರು ಗಾಯಗೊಂಡಿರುವ ಘಟನೆ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ತಾವರಗೇರಿ ಪಟ್ಟಣದಲ್ಲಿ ನಡೆದಿದೆ. ನೆನ್ನೆ ಭಾರಿ ಮಳೆ ಹಿನ್ನೆಲೆಯಲ್ಲಿ ಗೋಡೆಗಳು ನೆನೆದಿದ್ದವು. ಸಂಜೆ ಬಹಿರ್ಸೆಸೆಗೆ ಹೋದಾಗ ಗೋಡೆ ಕುಸಿದಿದೆ. ಈ ವೇಳೆ ಗೋಡೆ ಅವಶೇಷಗಳಡಿ ಸಿಲುಕಿದ್ದ ಮಹಿಳೆಯರ ರಕ್ಷಣೆ ಮಾಡಲಾಗಿದೆ. ಪಟ್ಟಣ ಪಂಚಾಯತ್, ಅಗ್ನಿ ಶಾಮಕ ದಳದಿಂದ ಕಾರ್ಯಾಚರಣೆ ನಡೆಸಿ ಮಹಿಳೆಯನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ | Rain News: ಮುಧೋಳದಲ್ಲಿ ಸಿಡಿಲಿಗೆ ಬಾಲಕಿ ಬಲಿ; ಚನ್ನರಾಯಪಟ್ಟಣ, ಗುಂಡ್ಲುಪೇಟೆ ಸೇರಿ ವಿವಿಧೆಡೆ ವರುಣಾರ್ಭಟ

ಹಾಸ್ಟೆಲ್‌ನಲ್ಲಿ ನೇಣಿಗೆ ಶರಣಾದ ಎಂಜಿನಿಯರಿಂಗ್‌ ವಿದ್ಯಾರ್ಥಿನಿ; ಕಾಲೇಜು ಕಿರುಕುಳಕ್ಕೆ ಬೇಸತ್ತಳೇ?

Student Death

ಆನೇಕಲ್: ಎಂಜಿನಿಯರಿಂಗ್‌ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ (Student Death) ಮೃತಪಟ್ಟಿದ್ದಾಳೆ. ಕಾಲೇಜು ಹಾಸ್ಟೆಲ್‌ನಲ್ಲಿ ನೇಣಿಗೆ ಶರಣಾದ ಸ್ಥಿತಿಯಲ್ಲಿ (Self Harming) ಶವ ಪತ್ತೆಯಾಗಿದೆ. ಬೆಂಗಳೂರು ಕಾಲೇಜ್ ಆಫ್ ಎಂಜಿನಿಯರಿಂಗ್‌ ಮತ್ತು ಟೆಕ್ನಾಲಜಿ ಕಾಲೇಜಿನ ವಿದ್ಯಾರ್ಥಿನಿ ಹರ್ಷಿತ (18) ಮೃತ ದುರ್ದೈವಿ.

ಬೆಂಗಳೂರು ಹೊರವಲಯದ ಚಂದಾಪುರ ಸಮೀಪದ ಹೀಲಲಿಗೆಯಲ್ಲಿ ಘಟನೆ ನಡೆದಿದೆ. ಅರಸೀಕೆರೆ ಮೂಲದ ಕರಡಿಹಳ್ಳಿ ಗ್ರಾಮದ ವಿದ್ಯಾರ್ಥಿನಿ ಹರ್ಷಿತ ಕಾಲೇಜು ಹಾಸ್ಟೆಲ್‌ನಲ್ಲಿ ಇದ್ದಳು. ನಿನ್ನೆ ಗುರುವಾರ ರಾತ್ರಿ ಹಾಸ್ಟೆಲ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿ ಪತ್ತೆಯಾಗಿದ್ದಾಳೆ.

ಕಾಲೇಜಿನವರ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಆಡಳಿತ ಮಂಡಳಿ ಸಾಕಷ್ಟು ದಿನಗಳಿಂದ ಕಿರುಕುಳ ನೀಡುತ್ತಿದ್ದರೆಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ವಿದ್ಯಾರ್ಥಿನಿ ಸಾವು ಖಂಡಿಸಿ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳು ಪ್ರತಿಭಟಿಸಿದ್ದರು. ಸ್ಥಳಕ್ಕೆ ಸೂರ್ಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ: Murder case : ಕಳ್ಳನೆಂದು ಹಿಡಿಯಲು ಹೋದ ಸೆಕ್ಯೂರಿಟಿ ಗಾರ್ಡ್‌ಗಳು; ನೂಕಾಟದಲ್ಲಿ ಬಿದ್ದ ಯುವಕ, ಕರೆಂಟ್‌ ಶಾಕ್‌ನಿಂದ ಸಾವು

ರಕ್ಷಿಸಲು ಹೋದ ವಿದ್ಯಾರ್ಥಿನಿಗೆ ಎಚ್‌ಓಡಿ ಬೈಗುಳ

ಇನ್ನೂ ಪಕ್ಕದ ರೂಮಿನ ವಿದ್ಯಾರ್ಥಿನಿ ಪ್ರಗತಿ ಎಂಬಾಕೆ ಬಾಗಿಲು ತೆರೆದು ನೋಡಿದಾಗ ಹರ್ಷಿತಾ ನೇಣಿಗೆ ಶರಣಾಗಿದ್ದು ಕಂಡಿದೆ. ಕೊಠಡಿಯ ಬಾಗಿಲು ತೆರೆದು ರಕ್ಷಣೆ ಮಾಡಲು ಪ್ರಗತಿ ಮುಂದಾಗಿದ್ದಕ್ಕೆ, ಎಚ್‌ಓಡಿ ಭಾರತಿ ಎಂಬುವವರು ಕೊಠಡಿ ಬಾಗಿಲನ್ನು ತೆರೆದಿದ್ದು ಯಾಕೆ ಎಂದು ಪ್ರಶ್ನೆ ಮಾಡಿ ಬೈದಿದ್ದಾರೆ. ರಕ್ಷಣೆ ಮಾಡಲು ಮುಂದಾಗಿದ್ದೆ ತಪ್ಪಾ ಎಂದು ವಿದ್ಯಾರ್ಥಿಗಳು ಶುಕ್ರವಾರ ಪ್ರತಿಭಟಿಸಿದ್ದಾರೆ. ಹರ್ಷಿತಾ ಮೃತಪಟ್ಟಾಗ ರಕ್ಷಣೆಗೆ ಹಾಸ್ಟೆಲ್‌ನಲ್ಲಿ ಯಾರು ಇರಲಿಲ್ಲ. ವಾರ್ಡನ್, ಆಯಾ ಯಾರು ಹಾಸ್ಟೆಲ್‌ನಲ್ಲಿ ಇರಲಿಲ್ಲ. ಹಾಸ್ಟೆಲ್ ಆಡಳಿತ ವ್ಯವಸ್ಥೆ ಸರಿಯಿಲ್ಲ ಎಂದು ವಿದ್ಯಾರ್ಥಿಗಳು ಪ್ರತಿಭಟಿಸಿದರು.

Continue Reading

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಗ್ರೇಸ್‌ ಮಾರ್ಕ್ಸ್‌ ಅಲ್ಲ, ಗುಣಮಟ್ಟದ ಶಿಕ್ಷಣವೇ ಫಲಿತಾಂಶಕ್ಕೆ ದಾರಿ

ಕೃಪಾಂಕಗಳನ್ನು ನೀಡಿ ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಿಸಬಹುದು ಎಂದು ಇಲಾಖೆ ಭಾವಿಸಿದರೆ, ಅದು ಸಾಧ್ಯವಾಗದ ಮಾತು. ಕೃಪಾಂಕ ಪಡೆದು ಪಿಯುಸಿಗೋ ಇತರ ಕೋರ್ಸ್‌ಗಳಿಗೋ ಹೋದ ವಿದ್ಯಾರ್ಥಿ ಅಲ್ಲಿ ಕಂಗಾಲಾಗುತ್ತಾನೆ. ಇದು ವಿದ್ಯಾರ್ಥಿಗಳ ಭವಿಷ್ಯಕ್ಕೇ ತೊಂದರೆ. ಇಲ್ಲಿ ಕೃಪಾಂಕ ಪಡೆದವರು ಅಲ್ಲೂ ಅದನ್ನೇ ನಿರೀಕ್ಷಿಸಿದರೆ ಆಶ್ಚರ್ಯವಿಲ್ಲ. ಆದರೆ ಅಲ್ಲಿ ಹಾಗೆ ನಡೆಯುವುದಿಲ್ಲ. ಜೀವನದಲ್ಲಿಯೂ ಯಾರೂ ಗ್ರೇಸ್‌ ಮಾರ್ಕ್ಸ್‌ ಕೊಡುವುದಿಲ್ಲ. ಪ್ರತಿಭೆಯಿಂದಲೇ ಮೇಲೆ ಬರಬೇಕಾಗುತ್ತದೆ.

VISTARANEWS.COM


on

Siddaramaiah
Koo

ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿರುವ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ, ಈ ಬಾರಿಯ ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 20 ಗ್ರೇಸ್‌ ಮಾರ್ಕ್ಸ್‌ (SSLC Grace Marks) ಕೊಟ್ಟಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾರನ್ನು ಕೇಳಿ ಹೆಚ್ಚುವರಿ ಅಂಕವನ್ನು ಕೊಟ್ಟಿರಿ? ಹೀಗೆ ಅಂಕ ಕೊಡುವ ಅಗತ್ಯತೆ ಏನಿತ್ತು? ಶಿಕ್ಷಣ ಗುಣಮಟ್ಟ ಕುಸಿದಿದ್ದು ಏಕೆ? ಎಂದು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಶಿಕ್ಷಣದ ಗುಣಮಟ್ಟ ಕುಸಿದಿದ್ದೇಕೆ? ಗ್ರೇಸ್ ಮಾರ್ಕ್ಸ್ ಹೆಚ್ಚಳಕ್ಕೆ ಸಂಬಂಧಪಟ್ಟಂತೆ ಶಿಕ್ಷಣ ತಜ್ಞರು ಸೇರಿ ಹಲವರಿಂದ ವಿರೋಧಗಳು ಕೇಳಿ ಬರುತ್ತಿವೆ. ಗ್ರೇಸ್ ಮಾರ್ಕ್ಸ್ ಕೊಡುವುದು ಅವೈಜ್ಞಾನಿಕ ಎಂಬ ಬಗ್ಗೆ ಅಭಿಪ್ರಾಯಗಳು ಬರುತ್ತಿವೆ. ಹಾಗಾಗಿ ಮುಂದಿನ ಶೈಕ್ಷಣಿಕ ವರ್ಷದಿಂದ ಗ್ರೇಸ್‌ ಮಾರ್ಕ್ಸ್ ಕೊಡುವ ಬಗ್ಗೆ ಮರುಪರಿಶೀಲನೆ ಮಾಡಿ ಎಂದು ಶಿಕ್ಷಣ ಸಚಿವರಿಗೆ ಹಾಗೂ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಶಿಕ್ಷಣ ಸಚಿವರು ಹೇಳುವ ಪ್ರಕಾರ, ಎಸ್‌ಎಸ್‌ಎಲ್‌ಸಿಯಲ್ಲಿ ಈ ಹಿಂದೆಯೂ ಶೇಕಡಾ 5ರಷ್ಟು ಕೃಪಾಂಕಗಳು ಇತ್ತು. ಕೋವಿಡ್ ವೇಳೆ ಅದನ್ನು ಶೇಕಡಾ 10ಕ್ಕೆ ಏರಿಕೆ ಮಾಡಲಾಗಿತ್ತು. ಈ ಬಾರಿ ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಳಕ್ಕಾಗಿ ಶೇಕಡಾ 20ರಷ್ಟು ಗ್ರೇಸ್‌ ಮಾರ್ಕ್ಸ್‌ ಕೊಡಲಾಗಿದೆ. ಮುಂದಿನ ವರ್ಷದಿಂದ ಇದು ಮುಂದುವರಿಯುವುದಿಲ್ಲ. ಮಕ್ಕಳ ಹಿತದೃಷ್ಟಿಯಿಂದ ಈ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ.

ಕೃಪಾಂಕಗಳನ್ನು ಯಾಕೆ ಕೊಡಬೇಕಾಯಿತು ಎಂದು ನೋಡೋಣ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಫಲಿತಾಂಶ ಕುಸಿತ (SSLC Result 2024) ಕಂಡಿದೆ. 2022-23ರಲ್ಲಿ 83.89% ಇತ್ತು. ಈ ಬಾರಿ ಗಾಬರಿಗೊಳಿಸುವ ಪ್ರಮಾಣದಲ್ಲಿ, ಅಂದರೆ ಶೇ.30ರಷ್ಟು ಫಲಿತಾಂಶ ಕುಸಿದಿದೆ. ಅಂದರೆ ನಿಜವಾಗಿ ಬಂದಿರುವುದು ಶೇ. 53 ಫಲಿತಾಂಶ ಮಾತ್ರ. ಇದರಿಂದ ಗಾಬರಿಯಾದ ಶಿಕ್ಷಣ ಇಲಾಖೆ, ಮುಖಂಭಂಗ ತಪ್ಪಿಸಿಕೊಳ್ಳುವುದಕ್ಕಾಗಿ ಬರೋಬ್ಬರಿ 20 ಪರ್ಸೆಂಟ್ ಗ್ರೇಸ್ ಮಾರ್ಕ್ಸ್‌ ಅನ್ನು ಕೊಟ್ಟಿದೆ. ಈ ವರೆಗೆ ಇದ್ದ ಪಾಸಿಂಗ್‌ ಮಾರ್ಕ್ಸ್‌ ಶೇಕಡಾ 35 ಅನ್ನು ಶೇಕಡಾ 25ಕ್ಕೆ ಇಳಿಸಿದೆ. ಅಂದರೆ 35 ಅಂಕಗಳ ಬದಲಿಗೆ 25 ಅಂಕವನ್ನು ಪಡೆದ ವಿದ್ಯಾರ್ಥಿಯೂ ಪಾಸ್‌ ಎಂದು ಮಾಡಲಾಗಿದೆ. ಅಲ್ಲದೆ, ಕೃಪಾಂಕದ ಪ್ರಮಾಣವನ್ನು ಶೇ. 10ರಿಂದ ಶೇ. 20ಕ್ಕೆ ಹೆಚ್ಚಿಸಲಾಗಿದೆ. ಈ ಎರಡೂ ಕ್ರಮದಿಂದಾಗಿ ಒಟ್ಟಾರೆ 1 ಲಕ್ಷದ 70 ಸಾವಿರ ವಿದ್ಯಾರ್ಥಿಗಳು ಪಾಸ್‌ ಆಗಿದ್ದಾರೆ. ಇಲ್ಲವಾದರೆ ಇಷ್ಟು ಮಕ್ಕಳು ನಪಾಸಾಗುತ್ತಿದ್ದರು. ಇಷ್ಟು ಕೃಪಾಂಕ ನೀಡಿದರೂ ದೊರೆತ ಫಲಿತಾಂಶ ಮಾತ್ರ 73.40% ಅಷ್ಟೇ. ಅಂದರೆ ಕಳೆದ ಸಲಕ್ಕಿಂತ ಶೇಕಡಾ 10.49ರಷ್ಟು ಕಡಿಮೆ. ಫಲಿತಾಂಶ ಹೆಚ್ಚಿಸಲು ಶಿಕ್ಷಣ ಇಲಾಖೆ ಸರ್ಕಸ್ ಮಾಡಿದರೂ ಕಡಿಮೆ ಫಲಿತಾಂಶ ದಾಖಲಾಗಿದೆ.

ಇದೇಕೆ ಹೀಗಾಯಿತು? ಇದು ವೆಬ್‌ ಕಾಸ್ಟಿಂಗ್‌ನಿಂದ ಎಂದು ಶಿಕ್ಷಣ ಇಲಾಖೆಯೇ ಒಪ್ಪಿಕೊಂಡಿದೆ. ಪ್ರಪ್ರಥಮ ಬಾರಿಗೆ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿಗಳ ಮೂಲಕ ವೆಬ್ ಕಾಸ್ಟಿಂಗ್ ಮಾಡುವ ಹೊಸ ಪದ್ಧತಿಯನ್ನು ಪರಿಚಯಿಸಲಾಗಿದೆ. ಪರೀಕ್ಷಾ ಕೊಠಡಿಗಳ ದೃಶ್ಯಾವಳಿಗಳನ್ನು ಮೇಲ್ವಿಚಾರಣೆ ಮಾಡಲು ಎಲ್ಲ ಜಿಲ್ಲೆಗಳಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿತ್ತು. ಹೀಗಾಗಿ ಮೇಲ್ವಿಚಾರಣೆ ಬಿಗಿಯಾಗಿದೆ. ಅಂದರೆ ನಕಲು ಮಾಡಲು ಸಾಧ್ಯವಾಗಲಿಲ್ಲ ಎಂದು ನೇರವಾಗಿ ಹೇಳಬಹುದು. ಅಂದರೆ ಪರೋಕ್ಷವಾಗಿ, ನಕಲು ಮಾಡುವುದಕ್ಕೆ ಅವಕಾಶ ಇದ್ದುದರಿಂದಲೇ ಮೊದಲು ಇಷ್ಟೊಂದು ಫಲಿತಾಂಶ ಬರುತ್ತಿತ್ತು ಎಂದು ಒಪ್ಪಿಕೊಂಡಂತಾಯಿತಲ್ಲವೆ? ಈ ಸಲದ ಫಲಿತಾಂಶ ಕಡಿಮೆ ಎನ್ನುವುದಕ್ಕಿಂತಲೂ, ನಕಲು ಮಾಡಿಯೇ ನಾವು ಹೆಚ್ಚಿನ ಫಲಿತಾಂಶ ಪಡೆಯುತ್ತಿದ್ದೆವು ಎನ್ನುವ ಕಟುವಾಸ್ತವ ನಮ್ಮನ್ನು ಹೆಚ್ಚು ಕುಟುಕಬೇಕು.

ಸರಿ, ಈಗ ಪರೀಕ್ಷಾ ಪದ್ಧತಿ ಬಿಗಿಯಾದಂತಾಯಿತು. ಆದರೆ ಕೃಪಾಂಕಗಳನ್ನು ನೀಡಿ ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಿಸಬಹುದು ಎಂದು ಇಲಾಖೆ ಭಾವಿಸಿದರೆ, ಅದು ಸಾಧ್ಯವಾಗದ ಮಾತು. ಕೃಪಾಂಕ ಪಡೆದು ಪಿಯುಸಿಗೋ ಇತರ ಕೋರ್ಸ್‌ಗಳಿಗೋ ಹೋದ ವಿದ್ಯಾರ್ಥಿ ಅಲ್ಲಿ ಕಂಗಾಲಾಗುತ್ತಾನೆ. ಇದು ವಿದ್ಯಾರ್ಥಿಗಳ ಭವಿಷ್ಯಕ್ಕೇ ತೊಂದರೆ. ಇಲ್ಲಿ ಕೃಪಾಂಕ ಪಡೆದವರು ಅಲ್ಲೂ ಅದನ್ನೇ ನಿರೀಕ್ಷಿಸಿದರೆ ಆಶ್ಚರ್ಯವಿಲ್ಲ. ಆದರೆ ಅಲ್ಲಿ ಹಾಗೆ ನಡೆಯುವುದಿಲ್ಲ. ಜೀವನದಲ್ಲಿಯೂ ಯಾರೂ ಗ್ರೇಸ್‌ ಮಾರ್ಕ್ಸ್‌ ಕೊಡುವುದಿಲ್ಲ. ಪ್ರತಿಭೆಯಿಂದಲೇ ಮೇಲೆ ಬರಬೇಕಾಗುತ್ತದೆ. ಕೃಪಾಂಕಗಳ ಬದಲು ಸರ್ಕಾರ ಗುಣಮಟ್ಟದ ಬೋಧನೆ, ಅರ್ಹ ಶಿಕ್ಷಕರ ನೇಮಕ, ಸರ್ಕಾರಿ ಶಾಲೆಗಳಲ್ಲಿ ಉತ್ತಮ ಇಂಗ್ಲಿಷ್‌ ಕಲಿಕೆ, ಸ್ಪರ್ಧಾತ್ಮಕ ಶಿಕ್ಷಣದ ಪರಿಚಯ, ಗಟ್ಟಿಮುಟ್ಟಾದ ಶಾಲೆ ಕಟ್ಟಡ ತರಗತಿಗಳು, ಪ್ರಯೋಗಾಲಯ ಹಾಗೂ ಲ್ಯಾಬ್‌ಗಳು, ಅನ್ಯ ಕೆಲಸಗಳಿಂದ ಶಿಕ್ಷಕರಿಗೆ ಮುಕ್ತಿ- ಇವುಗಳನ್ನೆಲ್ಲ ಕಲ್ಪಿಸಬೇಕು. ಆಗ ಉತ್ತಮ ಫಲಿತಾಂಶ ಕೊಡಿ ಎಂದು ಕಟ್ಟುನಿಟ್ಟು ಮಾಡುವುದರಲ್ಲಿ ಅರ್ಥವಿದೆ. ಶಿಕ್ಷಕರಿಂದ ಎಲ್ಲ ಸಾಧ್ಯತೆಗಳನ್ನೂ ಕಿತ್ತುಕೊಂಡು ಒಳ್ಳೆಯ ಫಲಿತಾಂಶ ನೀಡಿ ಎಂದರೆ ಹೇಗೆ ಸಾಧ್ಯ?

ಇದನ್ನೂ ಓದಿ: SSLC Grace Marks: ಯಾರನ್ನು ಕೇಳಿ ಶೇ. 20 ಗ್ರೇಸ್‌ ಮಾರ್ಕ್ಸ್‌ ಕೊಟ್ಟಿರಿ? ಶಿಕ್ಷಣ ಇಲಾಖೆ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ!

Continue Reading

ಸಿನಿಮಾ

ನಟಿ ಪವಿತ್ರ ಜಯರಾಮ್‌ ಸಾವಿನ ಬೆನ್ನಲ್ಲೇ ಪ್ರಿಯತಮ ಚಂದ್ರಕಾಂತ್ ಆತ್ಮಹತ್ಯೆ; ಖಿನ್ನತೆಗೆ ನಟ ಬಲಿ?

ಕನ್ನಡದ ʻರೋಬೊ ಫ್ಯಾಮಿಲಿʼ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟಿದ್ದ ಪವಿತ್ರ ಮೂಲತಃ ಮಂಡ್ಯ ತಾಲೂಕಿನ ಹನಕೆರೆಯವರು. ನಟಿ ರೋಬೊ ಫ್ಯಾಮಿಲಿ, ಜೋಕಾಲಿ, ನೀಲಿ, ರಾಧಾರಮಣ ಧಾರವಾಹಿಯಲ್ಲಿ ನಟಿಸಿ ಮನೆಮಾತಾಗಿದ್ದರು. ಚಂದ್ರಕಾಂತ್‌ ಕೂಡ ನಟರಾಗಿದ್ದರು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು, ಮದುವೆಯಾಗಲು ನಿಶ್ಚಯಿಸಿದ್ದರು. ಆದರೆ, ಒಂದೇ ವಾರದಲ್ಲಿ ಇಬ್ಬರೂ ದುರಂತ ಸಾವು ಕಂಡಿದ್ದಾರೆ.

VISTARANEWS.COM


on

Pavithra Jayaram
Koo

ಹೈದರಾಬಾದ್:‌ ತೆಲುಗಿನ ‘ತ್ರಿನಯನಿ’ ಧಾರಾವಾಹಿಯಲ್ಲಿ (Trinayani Serial) ಜನಪ್ರಿಯರಾಗಿದ್ದ ಕನ್ನಡತಿ ಪವಿತ್ರ ಜಯರಾಮ್ (Pavithra Jayaram)‌ ಅವರು ಅಪಘಾತದಲ್ಲಿ ಮೃತಪಟ್ಟ ಬೆನ್ನಲ್ಲೇ ಅವರ ಪ್ರಿಯತಮ, ನಟ ಚಂದ್ರಕಾಂತ್‌ (Chandrakanth) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಂಧ್ರಪ್ರದೇಶದಲ್ಲಿ (Andhra Pradesh) ಚಂದ್ರಕಾಂತ್‌ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಪವಿತ್ರ ಜಯರಾಮ್‌ ಅವರ ನಿಧನದ ಬಳಿಕ ಖಿನ್ನತೆಗೊಳಗಾಗಿದ್ದ ಅವರು ನೇಣಿಗೆ ಶರಣಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆಂಧ್ರಪ್ರದೇಶದ ರಂಗಾರೆಡ್ಡಿ ಜಿಲ್ಲೆ ನರಸಿಂಗ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ಅಲ್ಕಾಪುರ ಕಾಲೊನಿಯಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷಯ ತಿಳಿದ ಪೊಲೀಸರು ಕೂಡಲೇ ಸ್ಥಳಕ್ಕೆ ತೆರಳಿದ್ದು, ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ. ಪವಿತ್ರಾ ಜಯರಾಮ್‌ ಅವರು ಕಾರು ಅಪಘಾತದಲ್ಲಿ ಮೇ 12ರಂದು ಮೃತಪಟ್ಟಿದ್ದರು. ಅದೇ ಕಾರಿನಲ್ಲಿ ಚಂದ್ರಕಾಂತ್‌ ಅವರು ಕೂಡ ತೆರಳುತ್ತಿದ್ದಾರೆ. ಘಟನೆಯ ಬಳಿಕ ನೊಂದಿದ್ದ ಅವರು ಕೆಲ ದಿನಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ನಟಿಯ ಅಗಲಿಕೆಯ ನೋವು ತಾಳದೆ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ.

ಆಂಧ್ರಪ್ರದೇಶದ ಕರ್ನೂಲು ಬಳಿ ಮೇ 12ರಂದು ಬೆಳಗ್ಗೆ ಅಪಘಾತ ಸಂಭವಿಸಿತ್ತು. ಮೂಲತಃ ಕನ್ನಡಿಗರಾದ ಪವಿತ್ರ ತೆಲುಗಿನ ತ್ರಿನಯನಿ ಧಾರವಾಹಿಯಲ್ಲಿ ಜನಪ್ರಿಯರಾಗಿದ್ದರು. ಕನ್ನಡದ ʻರೋಬೊ ಫ್ಯಾಮಿಲಿʼ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟಿದ್ದ ಪವಿತ್ರ ಮೂಲತಃ ಮಂಡ್ಯ ತಾಲೂಕಿನ ಹನಕೆರೆಯವರು. ನಟಿ ರೋಬೊ ಫ್ಯಾಮಿಲಿ, ಜೋಕಾಲಿ, ನೀಲಿ, ರಾಧಾರಮಣ ಧಾರವಾಹಿಯಲ್ಲಿ ನಟಿಸಿ ಮನೆಮಾತಾಗಿದ್ದರು. ಚಂದ್ರಕಾಂತ್‌ ಕೂಡ ನಟರಾಗಿದ್ದರು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು, ಮದುವೆಯಾಗಲು ನಿಶ್ಚಯಿಸಿದ್ದರು. ಆದರೆ, ಒಂದೇ ವಾರದಲ್ಲಿ ಇಬ್ಬರೂ ದುರಂತ ಸಾವು ಕಂಡಿದ್ದಾರೆ.

ನಟಿ ಕರ್ನಾಟಕದಲ್ಲಿ ಹುಟ್ಟಿದ್ದರೂ ಕೂಡ ಹೆಚ್ಚು ಫೇಮಸ್‌ ಆದದ್ದು ತೆಲುಗಿನ ‘ತ್ರಿನಯನಿ’ ಧಾರಾವಾಹಿಯಿಂದ . ಈ ಬಗ್ಗೆ ನಟಿ ಈ ಹಿಂದೆ ಮಾಧ್ಯಮವೊಂದರಲ್ಲಿ ಹೇಳಿಕೊಂಡಿದ್ದರು. ʻʻನಾನು ಹುಟ್ಟಿ ಬೆಳೆದದ್ದು ಕರ್ನಾಟಕದಲ್ಲಿ. ಆದರೆ ಕನ್ನಡಕ್ಕಿಂತ ನನಗೆ ಹೆಚ್ಚು ಹೆಸರು ಕೊಟ್ಟಿದ್ದು ತೆಲುಗು. ‘ತ್ರಿನಯನಿ’ ಧಾರಾವಾಹಿ ಮುಂಚೆ ಅನೇಕ ಕನ್ನಡ ಧಾರಾವಾಹಿಯಲ್ಲಿ ನಟಿಸಿದ್ದರು ಅಷ್ಟಾಗಿ ಫಾಲೋವರ್ಸ್‌ ಇರಲಿಲ್ಲ. ಆದರೆ ‘ತ್ರಿನಯನಿ’ ಧಾರಾವಾಹಿ ಕನ್ನಡದಲ್ಲಿಯೂ ಡಬ್‌ ಆಗುತ್ತಿತ್ತು. ಹೀಗಾಗಿ ಕನ್ನಡದಲ್ಲಿಯೂ ತುಂಬಾ ಫ್ಯಾನ್ ಪೇಜ್‌ಗಳು ಶುರುವಾದವುʼʼಎಂದಿದ್ದರು.

ಇದನ್ನೂ ಓದಿ: Pavithra Jayaram: ಪವಿತ್ರ ಜಯರಾಂಗೆ ಅಂತಿಮ ವಿದಾಯ; ಭಯದಲ್ಲೇ ಪ್ರಾಣ ಬಿಟ್ರಾ ನಟಿ?

Continue Reading
Advertisement
ipl 2024
ಪ್ರಮುಖ ಸುದ್ದಿ2 hours ago

IPL 2024 : ಲಕ್ನೊ ವಿರುದ್ಧವೂ ಸೋತ ಮುಂಬೈ; ಹತ್ತನೇ ಸ್ಥಾನ ಕಾಯಂ

Anjali Murder Case
ಕರ್ನಾಟಕ2 hours ago

Anjali Murder Case: ಅಂಜಲಿ ಕೊಂದವನ ಎನ್‌ಕೌಂಟರ್ ಮಾಡಿ: ಸಹೋದರಿ ಪೂಜಾ ಆಗ್ರಹ

Kanhaiya Kumar
ದೇಶ3 hours ago

Kanhaiya Kumar: ಪ್ರಚಾರದ ವೇಳೆ ಕಾಂಗ್ರೆಸ್‌ ಅಭ್ಯರ್ಥಿ ಕನ್ಹಯ್ಯ ಕುಮಾರ್‌ ಮೇಲೆ ಹಲ್ಲೆ; ವಿಡಿಯೊ ಇಲ್ಲಿದೆ

Murder Case
ಬೆಂಗಳೂರು3 hours ago

Murder Case: ಯಲಹಂಕದಲ್ಲಿ ವ್ಯಕ್ತಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರ ಕೊಲೆ

Siddaramaiah
ಸಂಪಾದಕೀಯ3 hours ago

ವಿಸ್ತಾರ ಸಂಪಾದಕೀಯ: ಗ್ರೇಸ್‌ ಮಾರ್ಕ್ಸ್‌ ಅಲ್ಲ, ಗುಣಮಟ್ಟದ ಶಿಕ್ಷಣವೇ ಫಲಿತಾಂಶಕ್ಕೆ ದಾರಿ

Pavithra Jayaram
ಸಿನಿಮಾ3 hours ago

ನಟಿ ಪವಿತ್ರ ಜಯರಾಮ್‌ ಸಾವಿನ ಬೆನ್ನಲ್ಲೇ ಪ್ರಿಯತಮ ಚಂದ್ರಕಾಂತ್ ಆತ್ಮಹತ್ಯೆ; ಖಿನ್ನತೆಗೆ ನಟ ಬಲಿ?

Rohit Sharma
ಕ್ರೀಡೆ3 hours ago

Rohit Sharma : ಆಡಿಯೊ ಬಂದ್ ಮಾಡಪ್ಪ; ಕ್ಯಾಮೆರಾಮನ್​ಗೆ ಕೈಮುಗಿದು ಬೇಡಿಕೊಂಡ ರೋಹಿತ್​ ಶರ್ಮಾ

Road Accident
ಪ್ರಮುಖ ಸುದ್ದಿ4 hours ago

Road Accident: ಕೊಪ್ಪಳ ಬಳಿ ಟ್ರ್ಯಾಕ್ಟರ್‌ಗೆ ಬಸ್ ಡಿಕ್ಕಿಯಾಗಿ ಮೂವರ ದುರ್ಮರಣ; 20ಕ್ಕೂ ಹೆಚ್ಚು ಮಂದಿಗೆ ಗಾಯ

Virat Kohli
ಕ್ರೀಡೆ4 hours ago

Virat kohli : ಪಾಕಿಸ್ತಾನಕ್ಕೆ ಬರುವೆ ಎಂದು ಅಲ್ಲಿನ ಪರ್ವತಾರೋಹಿಗೆ ಭರವಸೆ ಕೊಟ್ಟಿದ್ದ ವಿರಾಟ್​ ಕೊಹ್ಲಿ! ಇಲ್ಲಿದೆ ವಿಡಿಯೊ

Narendra modi
ದೇಶ4 hours ago

Narendra Modi: ಕಾಂಗ್ರೆಸ್‌ ಗೆದ್ದರೆ ಬುಲ್ಡೋಜರ್‌ನಿಂದ ರಾಮಮಂದಿರ ನೆಲಸಮ ಎಂದ ಮೋದಿ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case JDS calls CD Shivakumar pen drive gang
ರಾಜಕೀಯ6 hours ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ20 hours ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ22 hours ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ2 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು2 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ3 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ3 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ3 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20243 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌