ಹಾಸನ: ಕೋಟ್ಯಂತರ ರೂಪಾಯಿ ಹಣ ಚೆಲ್ಲಾಡಿ ದಶಕಗಳ ಕಾಲದಿಂದ ನಿರ್ಮಿಸುತ್ತಿರುವ ಎತ್ತಿನಹೊಳೆ ಯೋಜನೆಯ (Yettinahole project) ಪೊಳ್ಳು ಕಾಮಗಾರಿ ಅರ್ಧದಲ್ಲೇ ಬಯಲಾಗಿದೆ. ಪ್ರಾಯೋಗಿಕವಾಗಿ 6 ಕಿಮೀ ದೂರ ನೀರು ಹರಿಸುವ ವೇಳೆಗೇ ಹಲವಾರು ಅನಾಹುತಗಳು ನಡೆದಿದ್ದು, ಅಧಿಕಾರಿಗಳು, ಸ್ಥಳೀಯರು ಇದರಿಂದ ಬೆಚ್ಚಿಬೀಳುವಂತಾಗಿದೆ.
ಎತ್ತಿನಹೊಳೆ ಯೋಜನೆಯ (Yettinahole project) ಅಂಗವಾಗಿ ಕಟ್ಟಲಾಗಿರುವ ಸಕಲೇಶಪುರ (Sakleshpur) ತಾಲ್ಲೂಕಿನ ಕಾಡುಮನೆ ಚೆಕ್ ಡ್ಯಾಂನಿಂದ ದೊಡ್ಡನಾಗರ ಶೇಖರಣಾ ಘಟಕಕ್ಕೆ ಅಧಿಕಾರಿಗಳು ನಿನ್ನೆ ಪ್ರಾಯೋಗಿಕವಾಗಿ ನೀರು ಹರಿಸಿದ್ದಾರೆ. ಇದವರೆಗೆ ಪೈಪ್‌ಲೈನ್ ಪೂರ್ಣಗೊಂಡಿರುವ 6 ಕಿ.ಮೀಗಳಷ್ಟು ದೂರದವರೆಗೆ ಪ್ರಾಯೋಗಿಕವಾಗಿ ನೀರು ಹರಿಸಿದ್ದಾರೆ.
ಹೀಗೆ ಪ್ರಾಯೋಗಿಕವಾಗಿ ನೀರು ಹರಿಸಿದ ವೇಳೆ ಭಾರಿ ಪ್ರಮಾಣದ ನೀರು (Water leakage) ಸೋರಿಕೆಯಾಗಿದೆ. ಅರ್ಧಕ್ಕೂ ಹೆಚ್ಚು ನೀರು ಪೈಪ್‌ಲೈನ್‌ನಿಂದ ಆಚೆ ಬಂದಿದೆ. ಹಲವೆಡೆ ರಸ್ತೆ ಕುಸಿತವುಂಟಾಗಿದೆ. ಹಾಸನ ಜಿಲ್ಲೆಯ ದೇಖಲ, ಕುಂಬರಡಿ, ಮಲ್ಲಾಗದ್ದೆ ಗ್ರಾಮಗಳಲ್ಲಿ ರಸ್ತೆಗಳು ಕುಸಿದಿವೆ. ಈ ಎಲ್ಲ ಕಡೆ ರಸ್ತೆ ಹಾನಿಯಿಂದ ಜನರ ಓಡಾಟಕ್ಕೆ ತೊಂದರೆಯಾಯಿತು. ದೇಖಲ ಗ್ರಾಮದಲ್ಲಿ ಕುಸಿತವಾಗಿದ್ದ ರಸ್ತೆಯಲ್ಲಿ ಜೀಪ್ ಒಂದು ಸಿಲುಕಿಕೊಂಡಿತು.
ಕಾಮಗಾರಿ ಪೂರ್ಣವಾಗಿದ್ದ ಕಾಡಮನೆ ಡ್ಯಾಂ- ದೊಡ್ಡನಾಗರ ಶೇಖರಣಾ ಘಟಕದ ನಡುವೆ ಭೂಮಿಯೊಳಗೆ ಜೋಡಣೆ ಮಾಡಿದ್ದ 6 ಪೈಪ್‌ಗಳಲ್ಲಿ ರಭಸವಾಗಿ ನೀರು ಹರಿಯುತ್ತಿದ್ದುದರಿಂದ ಭೂಮಿ ಗಡಗಡ ನಡುಗಿದ ಅನುಭವ ಸ್ಥಳೀಯರಿಗೆ ಆಗಿದೆ. ಇದರಿಂದ ಭೂಕಂಪ ಇರಬಹುದು ಎಂದು ಮಲ್ಲಾಗದ್ದೆ ಗ್ರಾಮದ ಜನರು ಭಯಗೊಂಡು ಮನೆಯಿಂದಾಚೆ ಓಡಿ ಬಂದರು.
ಸದ್ಯ ಈ ʼಪ್ರಾಯೋಗಿಕ ಅನಾಹುತʼದ ಪರಿಣಾಮ ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳು ನೀರು ಹರಿಸುವಿಕೆ ನಿಲ್ಲಿಸಿದ್ದಾರೆ. ಆರು ಕಿಲೋಮೀಟರ್ ಕಾಮಗಾರಿಗೇ ಇಷ್ಟು ಅನಾಹುತ ಆದರೆ, ಇನ್ನು ಕೋಲಾರವರೆಗೂ ತಲುಪಬೇಕಿರುವ ನೂರಾರು ಕಿಲೋಮೀಟರ್ ಕಾಮಗಾರಿ ಹೇಗಿರಬಹುದು, ಏನೇನು ಅನಾಹುತ ಉಂಟುಮಾಡಬಹುದು ಎಂದು ಸ್ಥಳೀಯರು ಪ್ರಶ್ನಿಸುವಂತಾಗಿದೆ.
ಹರಿಸಿದ ನೀರಿನಲ್ಲಿ ಬಹುಪಾಲು ಸೋರಿಕೆಯಾಗಿದೆ. ಈ ಯೋಜನೆ ಪ್ರಾಯೋಗಿಕವಲ್ಲ, ಇದರಿಂದ ನೀರು ತಲುಪಬೇಕಾದಲ್ಲಿಗೆ ತಲುಪುವುದಿಲ್ಲ ಎಂದು ಯೋಜನೆಯ ಟೀಕಾಕಾರರು ಹೇಳುತ್ತಲೇ ಬಂದಿದ್ದಾರೆ. ಅದಕ್ಕೆ ರುಜುವಾತು ಸಿಕ್ಕಂತಾಗಿದೆ. ಈ ಕಾಮಗಾರಿ ಪಶ್ಚಿಮ ಘಟ್ಟದ ಕಾಡಿಗೆ (western ghats) ಪ್ರಾಕೃತಿಕವಾಗಿಯೂ ಅಪಾರ ಹಾನಿ ಎಸಗಿದೆ.
ವಾರ್ಷಿಕ 24.01 ಟಿಎಂಸಿ ನೀರನ್ನು ಸಕಲೇಶಪುರದಿಂದ ರಾಜ್ಯದ ಪೂರ್ವಭಾಗಕ್ಕೆ ತಿರುಗಿಸುವ ಎತ್ತಿನಹೊಳೆ ಯೋಜನೆಗೆ ರೂ 12912.36 ಕೋಟಿ ವೆಚ್ಚವಾಗಲಿದೆ ಎಂಬ ಅಂದಾಜು. ನಿಗದಿತ ಅವಧಿಯಲ್ಲಿ ಪೂರ್ಣಗೊಂಡಿಲ್ಲವಾದ್ದರಿಂದ ವೆಚ್ಚ ದುಪ್ಪಟ್ಟಾಗಲಿದೆ.
ನಡು ಅರಣ್ಯದಲ್ಲಿರುವ ಹೊಂಗಡ ಹಳ್ಳ, ಎತ್ತಿನ ಹೊಳೆ, ಕಾಡುಮನೆ ಹೊಳೆ, ಕೇರಿಹೊಳೆಗಳಿಗೆ ಒಟ್ಟು ಎಂಟು ಜಾಗಗಳಲ್ಲಿ ಒಡ್ಡುಗಳನ್ನು ನಿರ್ಮಿಸಲಾಗಿದ್ದು, ಅಲ್ಲಿಂದ ಸಕಲೇಶಪುರ ತಾಲ್ಲೂಕಿನ ಹರವನಹಳ್ಳಿಯ ತೊಟ್ಟಿಗೆ ನೀರನ್ನು ಎತ್ತಿ ತಂದು ಶೇಖರಿಸಿ, ಅಲ್ಲಿಂದ ಸುಮಾರು 274 ಕಿ.ಮೀ. ಉದ್ದದ ಗುರುತ್ವ ಕಾಲುವೆಯ ಮೂಲಕ ಬೆಂಗಳೂರು ಗ್ರಾಮಾಂತರ, ಕೋಲಾರ ಕಡೆಗಳಿಗೆ ನೀರು ಹರಿಸುವ ಉದ್ದೇಶ.
ಇದನ್ನೂ ಓದಿ: Yettinahole project : ಎತ್ತಿನಹೊಳೆ ಯೋಜನೆ ಅಧಿಕಾರಿಗಳ ದರ್ಪ; ತಡೆಯಾಜ್ಞೆ ಇದ್ದರೂ ಖಾಸಗಿ ಜಮೀನು ವಶಕ್ಕೆ ಬಲವಂತದ ಯತ್ನ