Site icon Vistara News

Yoga Day 2022 | ಯೋಗ ದಿನ ಯಶಸ್ವಿಗೊಳಿಸಿ ದೆಹಲಿಗೆ ತೆರಳಿದ ಮೋದಿ

Modi left mysuru for delhi

ಮೈಸೂರು: ಕೋವಿಡ್‌ನ ಎರಡು ವರ್ಷದ ಕರಿನೆರಳಿನ ನಂತರ ಮೊದಲ ಬಾರಿಗೆ ಬಹಿರಂಗವಾಗಿ ನಡೆದ ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ ಅತ್ಯಂತ ಸಂತಸಚಿತ್ತರಾಗಿ ನವದೆಹಲಿಗೆ ಹಿಂದಿರುಗಿದರು.

ಮಂಗಳವಾರ ಬೆಳಗ್ಗೆ ೬.೩೦ಕ್ಕೆ ಮೈಸೂರು ಅರಮನೆ ಆವರಣದಲ್ಲಿ ಯೋಗ ದಿನದಲ್ಲಿ ಭಾಗವಹಿಸಿದ ಮೋದಿ, ಆನಂತರ ಮೈಸೂರು ವಂಶಸ್ತರ ಆಹ್ವಾನದ ಮೇರೆಗೆ ಉಪಾಹಾರ ಸೇವಿಸಿದರು. ಸುಮಾರು ೧೦.೦೦ ಸುಮಾರಿಗೆ ಉಪಾಹಾರ ಮುಗಿಸಿ ಮಂಡಕಳ್ಳಿ ವಿಮಾನ ನಿಲ್ದಾಣದತ್ತ ತೆರಳಿದರು. ಅಲ್ಲಿಂದ ವಿಶೇಷ ವಿಮಾನದ ಮೂಲಕ ನವದೆಹಲಿಗೆ ಪ್ರಯಾಣ ಬೆಳೆಸಿದರು.

ಇದನ್ನೂ ಓದಿ | ಮೈಸೂರು ಅರಮನೆ ಅಂಗಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ 10 ಯೋಗ ಸತ್ಯಗಳು

೫ನೇ ಅಂತಾರಾಷ್ಟ್ರೀಯ ಯೋಗ ದಿನದವರೆಗೆ ನಿರಂತರ ನಡೆದಿದ್ದ ಯೋಗ ದಿನಕ್ಕೆ ೨೦೨೦ ಹಾಗೂ ೨೦೨೧ರಲ್ಲಿ ಬ್ರೇಕ್‌ ಬಿದ್ದಿತ್ತು. ಇದೀಗ ೮ನೇ ಅಂತಾರಾಷ್ಟ್ರೀಯ ಯೋಗ ದಿನ್ಕಕಾಗಿ ಮೈಸೂರನ್ನು ಆಯ್ಕೆ ಮಾಡಲಾಗಿತ್ತು. ಸ್ವಾತಂತ್ರ್ಯದ ೭೫ನೇ ವರ್ಷದ ನಿಮಿತ್ತ ೭೫ ಸಾಂಸ್ಕೃತಿಕ ಕೇಂದ್ರಗಳಲ್ಲಿ ಆಚರಿಸಿದ ಯೋಗ ದಿನಕ್ಕೆ ಮೈಸೂರು ಕಲಶಪ್ರಾಯವಾಯಿತು. ಮೈಸೂರು ರಾಜವಂಶಸ್ತರ ಮನೆಯಲ್ಲಿ ಉಪಾಹಾರ ಸೇವಿಸಿದ ನಂತರ ಮೈಸೂರು ವಿಮಾನ ನಿಲ್ದಾಣದಿಂದ ನೇರವಾಗಿ ನವದೆಹಲಿಗೆ ಪ್ರಯಾಣ ಬೆಳೆಸಿದರು.

ಎರಡು ದಿನಗಳ ಕರ್ನಾಟಕ ಪ್ರವಾಸದ ಮೊದಲ ದಿನ ಬಹುತೇಕ ಬೆಂಗಳೂರಿನಲ್ಲಿ ಕಳೆದ ಮೋದಿ ಸೋಮವಾರ ಸಂಜೆ ಮೈಸೂರಿಗೆ ತೆರಳಿದರು. ಮಹಾರಾಜ ಕಾಲೇಜು ಮೈದಾನದಲ್ಲಿ ಕೇಂದ್ರ ಸರ್ಕಾರದ ಫಲಾನುಭವಿಗಳ ಸಮಾವೇಶದಲ್ಲಿ ಭಾಗವಹಿಸಿದರು.

ಮಂಗಳವಾರ ಬೆಳಗ್ಗೆ ಯೋಗ ದಿನದಲ್ಲಿ ಭಾಗವಹಿಸಿದ ಮೋದಿ, ಯೋಗದ ಮಹತ್ವ ಸಾರಿದರು. ಯೋಗವು ಮನಸ್ಸು, ಬುದ್ಧಿ ಹಾಗೂ ದೇಹವನ್ನು ಒಂದುಗೂಡಿಸಿದ ರೀತಿಯಲ್ಲೆ ವಿಶ್ವವನ್ನೇ ಒಗ್ಗೂಡಿಸುತ್ತದೆ ಎಂದು ತಿಳಿಸಿದರು. ನಂತರ ಸುಮಾರು ೧೫ ಸಾವಿರ ಜನರ ಜತೆಗೆ ಯೋಗಾಸನ ಮಾಡಿದರು. ವೇದಿಕೆ ಮೇಲಿನಿಂದ ಆಗಮಿಸುವ ಸೂಚನೆಗಳನ್ನು ಚಾಚೂತಪ್ಪದೆ ಪಾಲಿಸಿದ ಶಿಸ್ತಿನ ವಿದ್ಯಾರ್ಥಿಯಾಗಿ ಭಾಗವಹಿಸಿದರು.

ಯೋಗ ಕಾರ್ಯಕ್ರಮದ ನಂತರ ಯೋಗದ ಅಭ್ಯಾಸಕ್ಕೆ ವಿಶೇಷವಾಗಿ ವಿನ್ಯಾಸ ಮಾಡಲಾಗಿರುವ ಪ್ರದರ್ಶನವನ್ನು ವೀಕ್ಷಿಸಿದರು. ತಂತ್ರಜ್ಞಾನವನ್ನು ಬಳಸಿ ಯೋಗವನ್ನು ಅಭ್ಯಾಸ ಮಾಡುವ ಬಗೆ ಹಾಗೂ ಆರೋಗ್ಯ ಕಾಳಜಿ ವಹಿಸುವ ಕುರಿತು ಮಾಹಿತಿ ಪಡೆದರು.

ರಾಜವಂಶಸ್ತೆ ಪ್ರಮೋದಾದೇವಿ ಒಡೆಯರ್‌ ಅವರ ಆಹ್ವಾನದ ಮೇರೆಗೆ ಉಪಾಹಾರ ಸ್ವೀಕರಿಸಿದರು. ವಿಶೇಷವಾಗಿ ಮೈಸೂರು ಪಾಕ್‌ ಹಾಗೂ ಅರಮನೆಯ ಸಾಂಪ್ರದಾಯಿಕ ಅಡುಗೆ ಸೇವಿಸಿ ಕೆಲಕಾಲ ರಾಜವಂಶಸ್ಥರ ಜತೆಗೆ ಮಾತುಕತೆ ನಡೆಸಿದರು.

ಎರಡು ದಿನಗಳಲ್ಲಿ ಕರ್ನಾಟಕದ ಪ್ರವಾಸದಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ, ಶಂಕುಸ್ಥಾಪನೆ, ಫಲಾನುಭವಿಗಳೊಂದಿಗೆ ಸಂವಾದ, ಯೋಗ ದಿನಾಚರಣೆಯಂತಹ ಸರಣಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಎರಡೂ ದಿನ ಕರ್ನಾಟಕದ ಜನಮಾನಸವನ್ನು ಆವರಿಸಿ, ಯಾವುದೇ ನಕಾರಾತ್ಮಕತೆ ಇಲ್ಲದೆ, ಕಹಿ ಅನುಭವವಿಲ್ಲದೆ ಯಶಸ್ವಿಯಾಗಿ ಪ್ರವಾಸ ಪೂರ್ಣಗೊಳಿಸಿ ನವದೆಹಲಿಗೆ ಪ್ರಯಾಣಿಸಿದರು.

ಇದನ್ನೂ ಓದಿ | Modi In Karnataka | ಮೋದಿ ಗುದ್ದಿದ್ದು ರಾಮದಾಸ್‌ಗೊ? ಅಥವಾ ಪ್ರತಾಪ್‌ ಸಿಂಹಗೊ?

Exit mobile version