ಬೆಂಗಳೂರು: ಒಂಬತ್ತನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ (Yoga Day 2023) ಹಿನ್ನೆಲೆಯಲ್ಲಿ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಯೋಗ ಪ್ರದರ್ಶನ ಹಾಗೂ ವೇದಿಕೆ ಕಾರ್ಯಕ್ರಮ ನಡೆಯಿತು. ಸಾವಿರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿ ಯೋಗದ ಹಲವು ಭಂಗಿಗಳನ್ನು ಪ್ರದರ್ಶಿಸಿದರು.
ಒಂಬತ್ತನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಉದ್ಘಾಟಿಸಿದರು. ಸಸಿಗೆ ನೀರು ಎರೆಯುವ ಮೂಲಕ ಉದ್ಘಾಟನೆ ಮಾಡಿದರು. ಬಳಿಕ ವಿವಿಧ ಭಂಗಿಗಳ ಯೋಗ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಸ್ವತಃ ಹಲವು ಯೋಗ ಭಂಗಿಗಳನ್ನು ನೆರವೇರಿಸಿದ ರಾಜ್ಯಪಾಲರನ್ನು ಸ್ಪೀಕರ್ ಯು.ಟಿ ಖಾದರ್ ಅವರು ʼʼನೀವೇ ರಾಜ್ಯದ ಯೋಗ ರಾಯಭಾರಿ ಆಗಬಹುದುʼʼ ಎಂದು ಶ್ಲಾಘಿಸಿದರು.
ಕನ್ನಡದಲ್ಲಿ ಮಾತು ಶುರು ಮಾಡಿದ ರಾಜ್ಯಪಾಲರು, ಯೋಗ ಜನರನ್ನು ಒಂದುಗೂಡಿಸುವ ಕೆಲಸ ಮಾಡುತ್ತಿದೆ ಎಂದರು. ನಮ್ಮ ಸಂಸ್ಕೃತಿಯಲ್ಲಿ ಯೋಗ ಪ್ರಾಚೀನ ಕಾಲದಲ್ಲೇ ಇತ್ತು. ಯೋಗ ಮನಸ್ಸು ಹಾಗೂ ಶರೀರವನ್ನು ಸಮತೋಲನದಲ್ಲಿ ಇಡಲು ಅನುಕೂಲಕಾರಿ. ನಾನು ಖುದ್ದು ಯೋಗ ಪ್ರಾಣಾಯಾಮ ಮಾಡಿ ಅದರ ಅನುಕೂಲ ಪಡೆದುಕೊಂಡಿದ್ದೇನೆ ಎಂದರು.
ಯೋಗ ದಿನಾಚರಣೆಯ ಬಗ್ಗೆ ಪ್ರತಿಯೊಂದು ಗ್ರಾಮದಲ್ಲೂ ಜಾಗೃತಿ ಮೂಡಿಸಬೇಕು. ಯೋಗ ಈ ದೇಶದ ಋಷಿಮುನಿಗಳು ವಿಶ್ವಕ್ಕೆ ಕೊಟ್ಟ ಕೊಡುಗೆ. ಇದನ್ನು ಉಳಿಸಿಕೊಂಡು ಹೋಗಬೇಕು. ಮಾನಸಿಕ ಒತ್ತಡ ನಮಗೆಲ್ಲಾ ದೊಡ್ಡ ಸಮಸ್ಯೆಯಾಗಿದ್ದು, ಇದನ್ನು ದೂರ ಮಾಡಬೇಕಾದರೆ ಯೋಗಾಭ್ಯಾಸ ಅಗತ್ಯ. ದ್ವೇಷಮುಕ್ತ ಸಮಾಜ ಮಾಡಲು ಕೂಡ ಇದು ಬೇಕಿದೆ. ಯೋಗದ ಪಾಠ ಕಲಿಸುವುದು, ಯೋಗದ ಸಿಲಬಸ್ ಮಾಡಿ ಸರ್ಟಿಫಿಕೇಟ್ ಕೊಡುವುದು ಅಗತ್ಯವಾಗಿದೆ ಎಂದು ಸ್ಪೀಕರ್ ಯು.ಟಿ ಖಾದರ್ ನುಡಿದರು.
ಯೋಗ ನಮ್ಮ ದೇಶದ ಸಂಸ್ಕೃತಿ ಮತ್ತು ಪೂರ್ವಜರ ಕೊಡುಗೆ. ಇದು ನಮ್ಮ ಹಿರಿಯರು ನಮಗಾಗಿ ಬಿಟ್ಟುಕೊಟ್ಟು ಹೊಗಿದ್ದಾರೆ. ಯೋಗದಿಂದ ಸಾಕಷ್ಟು ಬದಲಾವಣೆ ಆಗುತ್ತದೆ. ಉತ್ಸಾಹ, ಚುರುಕುತನಕ್ಕೆ ಯೋಗ ಸಹಕಾರಿ. 30 ವರ್ಷಗಳ ಹಿಂದೆ ಕಾಲರಾ, ಮಲೇರಿಯಾದಂತಹ ಕಾಯಿಲೆಗಳು ಬರುತ್ತಿದ್ದವು. ಈಗ ಹೃದಯಾಘಾತ, ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ. ಯೋಗಾಭ್ಯಾಸದಿಂದ ಅದರಿಂದ ನಿವಾರಣೆ ಸಾಧ್ಯ. ಯೋಗಾಭ್ಯಾಸಕ್ಕೆ ಸರ್ಕಾರ ಸಹಕಾರ ಕೊಡುತ್ತದೆ. ಶಾಲೆಗಳಲ್ಲೂ ಯೋಗ ಆಚರಣೆ ಮಾಡಲು ಸರ್ಕಾರ ಸಹಕಾರ ಕೊಡುತ್ತದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಸಾವಿರಾರು ವರ್ಷಗಳಿಂದ ಯೋಗ ನಮ್ಮ ಸಂಸ್ಕೃತಿಯ ಒಂದು ಭಾಗವಾಗಿದೆ. ರಾಜಕಾರಣಿಗಳು, ಸರ್ಕಾರದಿಂದ ಯೋಗಕ್ಕೆ ಪಾಪ್ಯುಲಾರಿಟಿ ಬಂದಿಲ್ಲ. ಸಾವಿರಾರು ವರ್ಷಗಳ ಇತಿಹಾಸವನ್ನು ಯೋಗ ಹೊಂದಿದೆ ಎಂದು ಶಿವಾಜಿನಗರ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್ ಹೇಳಿದರು.
ಇದಕ್ಕೂ ಮುನ್ನ ವೇದಿಕೆ ಮೇಲೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಸಚಿವ ದಿನೇಶ್ ಗುಂಡೂರಾವ್, ವಿಧಾನಸಭಾಧ್ಯಕ್ಷ ಯುಟಿ ಖಾದರ್, ಶ್ವಾಸಗುರು ವಚನನಾಂದ ಸ್ವಾಮೀಜಿ, ಶಾಸಕರಾದ ರಿಜ್ವಾನ್ ಅರ್ಷದ್, ಶರವಣ, ಖ್ಯಾತ ಕ್ರೀಡಾಪಟುಗಳಾದ ವೆಂಕಟೇಶ್ ಪ್ರಸಾದ್, ಅಂಜು ಬಾಬಿ ಜಾರ್ಜ್, ನಟಿ ಭಾವನಾ ಭಾಗವಹಿಸಿ ಹಲವು ಯೋಗಾಸನಗಳ ಅಭ್ಯಾಸ ಮಾಡಿದರು. ಕರ್ನಾಟಕ ಸರ್ಕಾರ, ಆಯುಷ್ ಇಲಾಖೆ ವತಿಯಿಂದ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಇದನ್ನೂ ಓದಿ: Yoga Day 2023: ಯೋಗ ಇಂದು ವಿಶ್ವದ ಚೈತನ್ಯ: ಯೋಗ ದಿನಕ್ಕೆ ನರೇಂದ್ರ ಮೋದಿ ಸಂದೇಶ