ಮೈಸೂರು: ಮೈಸೂರಿನ ಐತಿಹಾಸಿಕ, ಭವ್ಯ ಅರಮನೆಯ ಮುಂಭಾಗದಲ್ಲಿ ನಡೆದ ಎಂಟನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಯೋಗಕ್ಕೆ ಸಂಬಂಧಿಸಿ ಹೇಳಿದ ೧೦ ಪ್ರಮುಖ ಅಂಶಗಳು ಇಲ್ಲಿವೆ. ಯೋಗ ಇಡೀ ಜಗತ್ತಿಗೆ ನೀಡಿದ ಮಹಾನ್ ಕೊಡುಗೆ, ಜಗತ್ತಿನ ಶಾಂತಿ, ನೆಮ್ಮದಿಯ ಸೂತ್ರ ಬಂಧ ಇಲ್ಲಿದೆ, ಆರೋಗ್ಯದ ಮಂತ್ರ ಇಲ್ಲಿದೆ, ದಿವ್ಯಸಂಭ್ರಮದ ತಂತ್ರಗಳು ಇದರಲ್ಲಿ ಮಿಳಿತಗೊಂಡಿದೆ ಎಂದರು ಪ್ರಧಾನಿ ಮೋದಿ.
೧. ಜಗದಗಲ ಯೋಗದ ಬೆಳಕು
ಮೈಸೂರಿನಂಥ ಭಾರತ ಅಧ್ಯಾತ್ಮ ಕೇಂದ್ರಗಳು ಯೋಗದ ಬೆಳಕನ್ನು ಶತಮಾನಗಳಿಂದ ಪೋಷಿಸಿವೆ. ಆ ಯೋಗದ ಬೆಳಕೇ ಈಗ ವಿಶ್ವದ ಆರೋಗ್ಯಕ್ಕೆ ಬೆಳಕಾಗಿವೆ. ಅದರ ಫಲವಾಗಿಯೋ ಯೋಗ ರೋಗರಹಿತ ಜೀವನವನ್ನು ನೀಡುತ್ತಿದೆ.
೨. ಬದಲಾದ ಯೋಗ ಚಿತ್ರ
ಕೆಲವು ವರ್ಷದ ಹಿಂದೆ ಯೋಗಾಭ್ಯಾಸ ಮಾಡುವ ಚಿತ್ರಗಳನ್ನು ನಾವು ಕೆಲವು ವರ್ಷದ ಹಿಂದೆ ಕೆಲವು ಮನೆಗಳಲ್ಲಿ, ಆಧ್ಯಾತ್ಮಿಕ ಕೇಂದ್ರಗಳಲ್ಲಿ ಮಾತ್ರ ನೋಡಬಹುದಾಗಿತ್ತು. ಆದರೆ, ಈಗ ಈ ಚಿತ್ರಗಳು ವಿಶ್ವದ ಮೂಲೆ ಮೂಲೆಗಳಿಂದ ಬರುತ್ತಿವೆ. ಈ ಚಿತ್ರಗಳು ಆಧ್ಯಾತ್ಮಿಕ ಬೋಧನೆ ವಿಸ್ತಾರಗೊಳ್ಳುತ್ತಿರುವ ಚಿತ್ರಗಳು, ಈ ಚಿತ್ರಗಳು ಸಹಜ, ನೈಸರ್ಗಿಕ ಬದುಕಿನ ಚಿತ್ರಗಳು.
೩. ಜೀವನೋತ್ಸಾಹದ ಪ್ರತೀಕ
ಕಳೆದ ಎರಡು ವರ್ಷಗಳಿಂದ ಕೊರೊನಾ ಮಹಾಮಾರಿಯಿಂದ ಕಳೆದು ಹೋಗಿರುವ ಉತ್ಸಾಹಕ್ಕೆ ಯೋಗ ಮರುಜೀವ ನೀಡಿದೆ. ಜಗತ್ತಿನೆಲ್ಲೆಡೆ ಆಚರಿಸಲಾಗುತ್ತಿರುವ ಯೋಗ ದಿನಾಚರಣೆ ಮರಳಿದ ಜೀವನೋತ್ಸಾಹದ ಸ್ಮರಣೀಯ ಚಿತ್ರ. ಕೊರೊನಾ ಕಾಲದಲ್ಲಿ ಯೋಗದ ಮೂಲಕವೇ ಸಮಸ್ಯೆಯನ್ನು ಸಾಕಷ್ಟು ಮಂದಿ ತಗ್ಗಿಸಿಕೊಂಡಿದ್ದಾರೆ.
೪. ಯೋಗ ವ್ಯಕ್ತಿಗಾಗಿ ಅಲ್ಲ, ಮಾನವ ಕುಲಕ್ಕಾಗಿ
ಯೋಗ ಇವತ್ತು ಜಗತ್ತಿನ ಹಬ್ಬವಾಗಿದೆ. ಅದು ಕೇವಲ ಒಬ್ಬ ವ್ಯಕ್ತಿಗಾಗಿ ಅಲ್ಲ. ಇಡೀ ಮನುಕುಲಕ್ಕಾಗಿ. ಹಾಗಾಗಿಯೇ ಈ ಬಾರಿಯ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಧ್ಯೇಯವಾಕ್ಯ ಯೋಗ ಫಾರ್ ಹ್ಯುಮಾನಿಟಿ (ಮನುಕುಲಕ್ಕಾಗಿ ಯೋಗ).
೫. ಶಾಂತಿಂ ಯೋಗೇನ್ ಮಿಂದತಿ
ಯೋಗದ ಬಗ್ಗೆ ನಮ್ಮ ಋಷಿಗಳು, ಮಹರ್ಷಿಗಳು, ಆಚಾರ್ಯರು ಒಂದು ಮಾತು ಹೇಳಿದ್ದಾರೆ: ಶಾಂತಿಂ ಯೋಗೇನ್ ಮಿಂದತಿ. ಅಂದರೆ, ಯೋಗವು ನಮಗೆ ಶಾಂತಿಯನ್ನು ತರುತ್ತದೆ. ಯೋಗದಿಂದ ಸಿಗುವ ಶಾಂತಿ ಕೇವಲ ವೈಯಕ್ತಿಕವಲ್ಲ, ಯೋಗ ನಮ್ಮ ಸಮಾಜಕ್ಕೆ ಶಾಂತಿಯನ್ನು ತರುತ್ತದೆ, ಯೋಗ ನಮ್ಮ ದೇಶಕ್ಕೆ ಮತ್ತು ಇಡೀ ಪ್ರಪಂಚಕ್ಕೆ ಶಾಂತಿಯನ್ನು ತರುತ್ತದೆ. ಅಷ್ಟೇ ಅಲ್ಲ ಯೋಗ ಇಡೀ ವಿಶ್ವಕ್ಕೆ ಶಾಂತಿಯನ್ನು ತರುತ್ತದೆ.
೬. ಈ ಬ್ರಹ್ಮಾಂಡದ ಆದಿಯಿರುವುದೇ ನಮ್ಮೊಳಗೆ
ನಾವೊಂದು ವಿಚಾರವನ್ನು ಹೇಳಿದರೆ ಕೆಲವರಿಗೆ ಅತಿಶಯೋಕ್ತಿ ಅನಿಸಬಹುದು. ಆದರೆ, ಇದು ಸಾಬೀತಾದ ಸತ್ಯ. ಆ ವಿಚಾರ ಏನೆಂದರೆ: ಯತ್ ಪಿಂಡೇ ತಥ್ ಬ್ರಹ್ಮಾಂಡೇ. ಅಂದರೆ, ಇಡೀ ಬ್ರಹ್ಮಾಂಡ ಆರಂಭವಾಗುವುದು ನಮ್ಮ ದೇಹ ಮತ್ತು ಆತ್ಮದಿಂದ. ಬ್ರಹ್ಮಾಂಡದ ಹುಟ್ಟೇ ನಮ್ಮಿಂದ. ಯೋಗ ನಮಗೆ ಎಲ್ಲ ವಿಚಾರಗಳಲ್ಲೂ ಪ್ರಜ್ಞೆಯನ್ನು ಮೂಡಿಸುತ್ತದೆ. ಇದರಿಂದ ಜಾಗೃತಿಯ ಭಾವ ಜಾಗೃತವಾಗುತ್ತದೆ. ಇದು ಆತ್ಮಜಾಗೃತಿಯಿಂದ, ಜಗತ್ತಿನ ಅರಿವಿನ ವರೆಗೆ ವಿಸ್ತಾರವಾಗುತ್ತದೆ. ಅಂದರೆ, ನಮ್ಮ ಬಗ್ಗೆ ನಮಗೆ ಅರಿವಾದಾಗ, ಜಗತ್ತಿನ ಬಗ್ಗೆ ತಿಳಿವು ಮೂಡಿದಾಗ ನಮ್ಮೊಳಗೆ ಮತ್ತು ಜಗತ್ತಿನೊಳಗೆ ಬದಲಾಗಬೇಕಾದ ಸಂಗತಿ ಯಾವುದು ಎನ್ನುವುದು ನಮಗೆ ಹೊಳೆಯುತ್ತದೆ.
೭. ಜಗತ್ತಿನ ಸರ್ವೋಚ್ಚ ಪ್ರಾಬ್ಲಂ ಸಾಲ್ವರ್ ಯೋಗ
ಯೋಗದ ಮೂಲಕ ನಾವು ಪಡೆಯುವ ಅರಿವು ನಮ್ಮ ವೈಯಕ್ತಿಕ ಸಮಸ್ಯೆಗಳಿಂದ ಹಿಡಿದು ಜಾಗತಿಕ ತಾಪಮಾನದ ಸಂಕಟದ ವರೆಗೆ ಮತ್ತು ನಮ್ಮೊಳಗಿನ ಆಂತರಿಕ ಸಂಘರ್ಷಕ್ಕೆ ಪರಿಹಾರ ನೀಡಬಲ್ಲುದು. ಯೋಗ ನಮ್ಮನ್ನು ಪ್ರಜ್ಞಾವಂತರನ್ನಾಗಿಯೂ, ಸ್ಪರ್ಧಾತ್ಮಕವಾಗಿಯೂ ಮಾಡುತ್ತದೆ. ಮತ್ತು ಈ ಸವಾಲುಗಳನ್ನು ಎದುರಿಸುವ ಶಕ್ತಿವಂತರನ್ನಾಗಿ ಮಾಡುತ್ತದೆ. ಒಂದೇ ರೀತಿಯ ಪ್ರಜ್ಞೆ ಮತ್ತು ಅರಿವು ಹೊಂದಿರುವ ಕೋಟ್ಯಂತರ ಜನರು ಸೇರಿದಾಗ ನಿಜವಾದ ಜಾಗತಿಕ ಶಾಂತಿ ಮೂಡುತ್ತದೆ. ಯೋಗ ಜಗತ್ತಿನ ಪ್ರಾಬ್ಲಂ ಸಾಲ್ವರ್ (ಸಮಸ್ಯೆ ಪರಿಹಾರಕ) ಆಗಿ ಎದ್ದುನಿಲ್ಲುತ್ತದೆ.
೮. ಜಗವ ಜೋಡಿಸುವ ಗಾರ್ಡಿಯನ್ ರಿಂಗ್ ಆಫ್ ಯೋಗ
ಇವತ್ತು ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಯೋಗ ದಿನಾಚರಣೆಯನ್ನು ಗಾರ್ಡಿಯನ್ ರಿಂಗ್ ಆಫ್ ಯೋಗದ ಹೊಸ ಪರಿಕಲ್ಪನೆಯೊಂದಿಗೆ ನಡೆಸಲಾಗುತ್ತಿದೆ. ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ಹೊತ್ತಲ್ಲಿ ಸೂರ್ಯೋದಯ ಆಗುತ್ತದೆ. ಸೂರ್ಯನ ಪ್ರಥಮ ಕಿರಣವನ್ನು ಸೋಕಿಸಿಕೊಳ್ಳುತ್ತಾ ಒಂದೊಂದು ದೇಶವೂ ಯೋಗ ದಿನಾಚರಣೆಯನ್ನು ಆಚರಿಸುತ್ತದೆ. ಒಂದಾದ ಮೇಲೊಂದರಂತೆ ದೇಶಗಳು ಸೂರ್ಯ ಕಿರಣಗಳಿಗೆ ತೆರೆದುಕೊಳ್ಳುತ್ತಾ, ಯೋಗವನ್ನು ಆವಾಹಿಸಿಕೊಳ್ಳುತ್ತಾ ಸಾಗುತ್ತವೆ. ಈ ಮೂಲಕ ಇಡೀ ಭೂಮಿಯ ಸುತ್ತ ಒಂದು ಛಾಯಾ ಯೋಗ ಉಂಗುರ ಸೃಷ್ಟಿಯಾಗುತ್ತದೆ. ಇದೇ ಗಾರ್ಡಿಯನ್ ರಿಂಗ್ ಆಫ್ ಯೋಗ.
೯. ಜೀವನದ ಭಾಗವಷ್ಟೇ ಅಲ್ಲ, ಜೀವನ ಪದ್ಧತಿ
ಯೋಗ ಇವತ್ತು ನಮ್ಮ ಬದುಕಿನ ಒಂದು ಭಾಗ ಮಾತ್ರವಲ್ಲ, ಅದು ನಿಮ್ಮ ಜೀವನ ಪದ್ಧತಿಯೇ ಆಗುತ್ತಿದೆ. ನಮ್ಮ ದಿನ ಯೋಗದಿಂದ ಆರಂಭವಾದರೆ ಅದಕ್ಕಿಂತ ಅದ್ಭುತವಾದ ಆರಂಭ ಇನ್ನೇನಿದೆ. ಯೋಗ ಈಗ ಒಂದು ಜಾಗಕ್ಕೆ ಒಂದು ಹೊತ್ತಿಗೆ ಸೀಮಿತವಾಗಿಲ್ಲ. ಕೆಲವರು ಈಗ ಕಚೇರಿಯಲ್ಲೂ ಯೋಗ ಮಾಡುತ್ತಾರೆ, ಮತ್ತೆ ಕೆಲಸ ಮಾಡುತ್ತಾರೆ. ನಾವು ಎಷ್ಟೇ ಒತ್ತಡದಲ್ಲಿರಲಿ, ಎಷ್ಟೇ ಕಿರಿಕಿರಿ ಎದುರಿಸುತ್ತಿರಲಿ. ಒಂದೆರಡು ನಿಮಿಷಗಳಷ್ಟು ಮಾಡುವ ಧ್ಯಾನ ಅದ್ಭುತವಾದ ರಿಲ್ಯಾಕ್ಸ್‌ನ್ನು ಕೊಡುತ್ತದೆ. ನಮ್ಮ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ಯೋಗವನ್ನು ನಾವು ಒಂದು ಹೆಚ್ಚುವರಿ ಕೆಲಸ ಎಂದು ಭಾವಿಸಬಾರದು.
೧೦. ಯೋಗ ಎಂದರೆ ಸೆಲೆಬ್ರೇಷನ್
ಯೋಗವನ್ನು ನಾವು ಅರಿಯಬೇಕು, ಯೋಗವನ್ನು ನಾವು ಪಾಲಿಸಬೇಕು, ಯೋಗವನ್ನು ನಾವು ಪಡೆಯಬೇಕು, ಯೋಗವನ್ನು ನಾವು ನಮ್ಮದಾಗಿಸಿಕೊಳ್ಳಬೇಕು, ಯೋಗವನ್ನು ನಾವು ಪೋಷಿಸಬೇಕು (ಯೋಗ್ ಕೋ ಹಮ್ ಜಾನ್‌ನಾ ಹೈ, ಜೀನಾ ಹೈ, ಪಾನಾ ಹೈ, ಅಪ್‌ನಾನಾ ಹೈ ಔರ್ ಪನ್ ಪನಾ ಭಿ ಹೈ). ಅದು ಕೇವಲ ಆರೋಗ್ಯಕ್ಕಾಗಿ ಮಾಡುವುದೂ ಅಲ್ಲ. ಅದು ಶಾಂತಿ, ಸುಖ ಮತ್ತು ನೆಮ್ಮದಿಯ ಸೆಲಬ್ರೇಷನ್. ಪರಂಪರೆಯಿಂದ ಬಂದಿರುವ ಯೋಗ ನಮ್ಮ ನಿತ್ಯ ಜೀವನದೊಂದಿಗೆ ಮಿಳಿತವಾಗಿದೆ. ಇದೊಂದು ಅನಂತ ಯಾತ್ರೆ, ಈ ಯಾತ್ರೆ ಅನವರತವಾಗಿರಲಿ.