ಮೈಸೂರು: ಎಂಟನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಪಾರಂಪರಿಕ ನಗರಿ, ಸಾಂಸ್ಕೃತಿಕ ನಗರಿ, ರಾಜ ನಗರಿ ಮೈಸೂರಿನಲ್ಲಿ ನಡೆಸಲು ಅವಕಾಶ ಮಾಡಿಕೊಟ್ಟ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಯೋಗ ದಿನಾಚರಣೆಯ ಸಂದರ್ಭದಲ್ಲಿ ನಗರದ ಜನರ ಜತೆ ಆತ್ಮೀಯವಾಗಿ ಬೆರೆತು ಭಾವ ಪುಳಕ ಉಂಟು ಮಾಡಿದರು. ಯೋಗ ಎಲ್ಲರನ್ನೂ ಜೋಡಿಸುತ್ತದೆ ಎಂದು ವೇದಿಕೆಯ ಮೇಲೆ ಹೇಳಿದ ಅವರು ಬಳಿಕ ಅದೇ ರೀತಿ ನಡೆದುಕೊಂಡರು.
ಯೋಗಾಭ್ಯಾಸಿಗಳ ನಡುವೆಯೇ ಹೋಗಿ ಯಾವುದೇ ಹಮ್ಮು ಬಿಮ್ಮಿಲ್ಲದೆ ಯೋಗ ಮಾಡಿದ ಮೋದಿ ಅವರು ಯೋಗಾಭ್ಯಾಸ ಮುಗಿಸಿ ಮರಳಿ ಬರುವ ಹಾದಿಯಲ್ಲಿ ಜನರೊಂದಿಗೆ ಪ್ರೀತಿಯಿಂದ ಬೆರೆತರು. ಎಲ್ಲರ ಕಡೆಗೆ ಕೈ ಬೀಸುತ್ತಾ, ಅವರಿಗೆ ನಮಸ್ಕರಿಸುತ್ತಾ, ಕೆಲವರ ಕೈಕುಲುಕುತ್ತಾ ಅವರು ವೇದಿಕೆಯ ಕಡೆಗೆ ಮರಳಿ ಸಾಗಿ ಬಂದರು.
ಯೋಗ ಮಾಡಿ ನಿರಾಳವಾಗಿದ್ದ ಅವರ ಮುಖದಲ್ಲಿ ಮಂದಹಾಸ ಮಿನುಗುತ್ತಿತ್ತು. ಅಷ್ಟೊಂದು ಜನ ಸುತ್ತುವರಿದರೂ ಯಾವ ಅವಸರವನ್ನೂ ಮಾಡದೆ ಎಲ್ಲರ ಮುಖಾವಲೋಕನ ಮಾಡುವಂತೆ ನಿಧಾನವಾಗಿ ಹೆಜ್ಜೆ ಹಾಕುತ್ತಾ ಸಾಗಿಬಂದರು ಮೋದಿ.
ಇದು ಮೈಸೂರಿನ ಜನತೆಗೆ ತುಂಬ ಖುಷಿ ನೀಡಿದ ಕ್ಷಣವಾಗಿತ್ತು. ಮೈಸೂರಿನ ರ‍್ಯಾಡಿಸನ್ ಹೋಟೆಲ್‌ನಲ್ಲಿ ತಂಗಿದ್ದ ಮೋದಿ ಅವರು ಅಲ್ಲಿಂದ ಬೆಳಗ್ಗೆ ೬.೩೦ರ ಹೊತ್ತಿಗೆ ಅರಮನೆ ಎದುರಿಗೆ ಬಂದಿದ್ದರು. ಯೋಗ ದಿನಾಚರಣೆ ಮುಗಿಸಿದ ಬಳಿಕ ಅವರು ಮೃಗಾಲಯ ವೀಕ್ಷಣೆಗೆ ತೆರಳಿದರು.
ಇದನ್ನೂ ಓದಿ| Yoga Day 2022 | ಮೈಸೂರು ಯೋಗದ ದಿನದ ಮೊದಲ ಚಿತ್ರಗಳು