ಮಂಡ್ಯ: ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ಟೀಂ ಇಂಡಿಯಾ ರೀತಿ ಕೆಲಸ ಮಾಡುತ್ತಿದೆ. ಈ ತಂಡದಲ್ಲಿ ಕರ್ನಾಟಕದ ಎಷ್ಟು ಸದಸ್ಯರು ಇರಬೇಕು ಎನ್ನುವುದನ್ನು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದ ಜನರು ನಿರ್ಧಾರ ಮಾಡಬೇಕಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕರೆ ನೀಡಿದ್ದಾರೆ.
ಮಂಡ್ಯದಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಯೋಗಿ ಆದಿತ್ಯನಾಥ ಮಾತನಾಡಿದರು. ಕಾಂಗ್ರೆಸ್ ಸಮಯದಲ್ಲಿ ಕೆಲಸಗಳು ಹೇಗೆ ಆಗುತ್ತಿದ್ದವು? ಪಂಚವಾರ್ಷಿಕ ಯೋಜನೆಗಳಿದ್ದವು. ಒಂದು ಯೋಜನೆಯಲ್ಲಿ ಯೋಜನೆ ಘೋಷಣೆ ಆಗುತ್ತಿದ್ದು, ಮತ್ತೊಂದು ಯೋಜನೆಯಲ್ಲಿ ಶಿಲಾನ್ಯಾಸ ಆಗುತ್ತಿತ್ತು, ಮೂರನೇ ಪಂಚವಾರ್ಷಿಕ ಯೋಜನೆಯಲ್ಲಿ ಕೆಲಸ ಆರಂಭ ಆಗುತ್ತಿತ್ತು, ನಾಲ್ಕನೇ ಪಂಚವಾರ್ಷಿಕ ಯೋಜನೆಯ ವೇಳೆಗೆ ಯೋಜನೆ ಸತ್ತು ಹೋಗುತ್ತಿತ್ತು. ಇದು ಕಾಂಗ್ರೆಸ್ ಆಡಳಿತದ ಶೈಲಿ.
ಆದರೆ ಇಂದು ರೈಲ್ವೆ, ಐಟಿ ಸೇರಿ ಯಾವುದೇ ಕ್ಷೇತ್ರದಲ್ಲಿ ಕಾರ್ಯದ ಶಿಲಾನ್ಯಾಸ ಆದ ದಿನವೇ ಉದ್ಘಾಟನೆಯ ದಿನಾಂಕವೂ ನಿಗದಿಯಾಗುತ್ತದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ಮಾಡಿದ ಯೋಜನೆಯನ್ನು ಅವರೇ ಉದ್ಘಾಟನೆ ಮಾಡುತ್ತಿದ್ದಾರೆ.
ಹಿಂದಿನ ಸರ್ಕಾರಗಳು ರೈತರಿಗೆ ಏನೂ ಮಾಡಿರಲಿಲ್ಲ. ಇಲ್ಲಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ರೈತರಿಗೆ ಸನ್ಮಾನ ಸಿಗುತ್ತಿರಲಿಲ್ಲ. ಪ್ರಧಾನಿ ಮೊದಲ ಬಾರಿಗೆ ಕಿಸಾನ್ ಸಮ್ಮಾನ್ ನಿಧಿ ನೀಡಿದ್ದಾರೆ. ಕೃಷಿ ಸಿಂಚಾಯಿ ಯೋಜನೆ, ಫಸಲ್ ಬಿಮಾ ಯೋಜನೆ, ಎಂಎಸ್‌ಪಿ ಹೆಚ್ಚಿಸಿದ್ದಾರೆ, ಕೃಷಿ ಬಜೆಟ್ ಹೆಚ್ಚಳ ಮಾಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಜನರು ನಮಗೆ ಏಕೆ ಗೌರವ ನೀಡುತ್ತಾರೆ? ಏಕೆಂದರೆ ಅಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರವಿದೆ. ಉತ್ತರ ಪ್ರದೇಶದಲ್ಲಿ ಸುರಕ್ಷತೆ, ಸಮೃದ್ಧಿಯ ಗ್ಯಾರಂಟಿ ಇದೆ. ಅಲ್ಲಿ ಯಾವುದೇ ದಂಗೆ ಇಲ್ಲದೆ ಜನರು ನೆಮ್ಮದಿಯಿಂದ ಇದ್ದಾರೆ. ಕರ್ನಾಟಕದಲ್ಲೂ ಪಿಎಫ್‌ಐ ರೀತಿಯ ಸಂಘಟನೆಗಳನ್ನು ಬ್ಯಾನ್ ಮಾಡಿ ಅವರ ಬೆನ್ನು ಮುರಿಯಲಾಗಿದೆ. ಆದರೆ ಕಾಂಗ್ರೆಸ್ ಪಿಎಫ್‌ಐ ತುಷ್ಟೀಕರಣ ಮಾಡುವ ಕೆಲಸಕ್ಕೆ ಮುಂದಾಗುತ್ತದೆ.
ಧರ್ಮದ ಆಧಾರದಲ್ಲಿ ಮೀಸಲಾತಿ ನೀಡುವುದು ಭಾರತೀಯ ಸಂವಿಧಾನಕ್ಕೆ ವಿರುದ್ಧ. ಎಸ್‌ಸಿಎಸ್‌ಟಿ, ಅಂಗವಿಕಲ ಸೇರಿ ಅನೇಕರ ಮೀಸಲಾತಿ ಹೆಚ್ಚಿಸಿದ್ದೇವೆ. ಆದರೆ ಧರ್ಮದ ಆಧಾರದಲ್ಲಿ ಒಮ್ಮೆ ದೇಶ ವಿಭಜನೆ ಆಗಿದೆ. ಮತ್ತೆ ಮೀಸಲಾತಿ ಹೆಸರಿನಲ್ಲಿ ದೇಶವನ್ನು ವಿಭಜಿಸಲು ನಾವು ಬಿಡುವುದಿಲ್ಲ.
ಕರ್ನಾಟಕದ ನಿರ್ಧಾರವು ಶ್ರೀರಾಮ ಮತ್ತು ಹನುಮಂತನ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ. ಇಂದು ಟೀಂ ಇಂಡಿಯಾ ರೀತಿ ದೇಶ ಕೆಲಸ ಮಾಡುತ್ತಿದೆ. ಇದರ ಕ್ಯಾಪ್ಟನ್ ಆಗಿ ನರೇಂದ್ರ ಮೋದಿ ಇದ್ದಾರೆ. ತನ್ನ ಎಷ್ಟು ಆಟಗಾರರು ಈ ಟೀಂನಲ್ಲಿ ಇರಬೇಕು ಎನ್ನುವುದನ್ನು ಕರ್ನಾಟಕದ ಮತದಾರರು ನಿರ್ಧಾರ ಮಡಬೇಕು. ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಬೇಕೆ, ಕಾಂಗ್ರೆಸ್‌ನ ವಿಫಲ ಇಂಜಿನ್ ಬೇಕೆ ನಿರ್ಧಾರ ಮಾಡಿ.