ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯ ಕಣ ದಿನೇದಿನೆ ರಂಗೇರುತ್ತಿದೆ. ಭಾನುವಾರ ರಾಹುಲ್ ಗಾಂಧಿ ಅವರು ಕರ್ನಾಟಕದಲ್ಲಿ ಅಬ್ಬರದ ಪ್ರಚಾರ ಕೈಗೊಂಡಿದ್ದಾರೆ. ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಕೂಡ ಕರ್ನಾಟಕದಲ್ಲಿ ಬೀಡು ಬಿಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 28ರ ನಂತರ ರಾಜ್ಯಕ್ಕೆ ಆಗಮಿಸಲಿದ್ದಾರೆ. ಮೋದಿ ಅವರಿಗೂ ಎರಡು ದಿನ ಮೊದಲು, ಅಂದರೆ, ಏಪ್ರಿಲ್ 26ರಂದು ರಾಜ್ಯಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು (Yogi Adityanath) ಆಗಮಿಸಲಿದ್ದಾರೆ. ಆ ಮೂಲಕ ಚುನಾವಣೆಯ ಕಣವನ್ನು ಇನ್ನಷ್ಟು ರಂಗೇರಿಸಲಿದ್ದಾರೆ.
ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಯೋಗಿ ಆದಿತ್ಯನಾಥ್ (yogi adityanath) ಅವರು ಅಬ್ಬರದ ಪ್ರಚಾರ ಕೈಗೊಳ್ಳಲಿದ್ದಾರೆ. ಕರಾವಳಿ ಭಾಗದಲ್ಲಿ ಪ್ರಚಾರ ನಡೆಸಲಿದ್ದು, ಇದಕ್ಕಾಗಿ ಬಿಜೆಪಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಯೋಗಿ ಆದಿತ್ಯನಾಥ್ ಜತೆ ಡಿಸಿಎಂಗಳಾದ ಕೇಶವ ಪ್ರಸಾದ್ ಮೌರ್ಯ, ಬೃಜೇಶ್ ಪಾಠಕ್ ಮತ್ತು ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಚೌಧರಿ ಭೂಪೇಂದ್ರ ಸಿಂಗ್ ಕೂಡ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ. ಏಪ್ರಿಲ್ 28ರ ನಂತರ ನರೇಂದ್ರ ಮೋದಿ ಅವರು ಸತತವಾಗಿ ರ‍್ಯಾಲಿಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಮೈಸೂರಿನಲ್ಲಿ ಸೋಮವಾರ ಅಮಿತ್ ಶಾ ಪ್ರಚಾರ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬೆಂಗಳೂರಿಗೆ ಆಗಮಿಸಿದ್ದು, ಸೋಮವಾರ ಮೈಸೂರಿನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿರುವ ಅಮಿತ್ ಶಾ, ಸೋಮವಾರ ಬೆಳಗ್ಗೆ ಮೊದಲು ಮೈಸೂರಿನಲ್ಲಿ ಮತಯಾಚನೆ ಮಾಡಲಿದ್ದಾರೆ. ಇನ್ನು ಜೆ.ಪಿ.ನಡ್ಡಾ ಅವರು ಕೂಡ ಸೋಮವಾರ ಮಧ್ಯಾಹ್ನ ಚಿಕ್ಕಬಳ್ಳಾಪುರಕ್ಕೆ ತೆರಳಲಿದ್ದು, ಶಿಡ್ಲಘಟ್ಟದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಲಿದ್ದಾರೆ. ನಂತರ ಹೊಸಕೋಟೆಯಲ್ಲಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಪರ ಮತಯಾಚಿಸಲಿದ್ದಾರೆ.
ಇದನ್ನೂ ಓದಿ: ಉತ್ತರ ಕರ್ನಾಟಕದಲ್ಲಿ ಶೆಟ್ಟರ್ ಪ್ರಚಾರ; ನಾಯಕರಿಲ್ಲ ಎಂಬುದನ್ನು ಕಾಂಗ್ರೆಸ್ ಒಪ್ಪಿದ ಹಾಗೆ ಎಂದು ಅಣ್ಣಾಮಲೈ ಟೀಕೆ