ಬೆಂಗಳೂರು: ಶೋಭಾ ಕರಂದ್ಲಾಜೆ (Shobha Karandlaje) ಅವರೇ ನೀವು ಕರ್ನಾಟಕ ರಾಜಕಾರಣದಲ್ಲಿ ಸೀತಾ ಮಾತೆ ಪಾತ್ರವನ್ನು ಮಾಡಿ. ಶೂರ್ಪನಖಿ ಪಾತ್ರ ಮಾಡಬೇಡಿ. ರಾಜ್ಯದ ಜನರಿಗೆ ಏನು ಅನುಕೂಲ ಆಗುತ್ತದೆಯೋ ಆ ಕೆಲಸವನ್ನು ನೀವು ಮಾಡಿ. ಪ್ರಧಾನಿ ನರೇಂದ್ರ ಮೋದಿ ರೋಡ್ ಶೋದಿಂದ ನಿಮಗೆ ಯಾವುದೇ ತೊಂದರೆ ಆಗದೇ ಇರಬಹುದು. ಆದರೆ, ಇದರಿಂದ ಬೀದಿ ವ್ಯಾಪಾರಸ್ಥರಿಗೆ ಸಮಸ್ಯೆ ಆಗಲಿದೆ. ಚಿಕ್ಕಪುಟ್ಟ ಸಹಿತ ಅಂಗಡಿ ಇಟ್ಟುಕೊಂಡವರಿಗೆ ಸಮಸ್ಯೆಯಾಗುತ್ತದೆ ಎಂದು ಕಾಂಗ್ರೆಸ್ ವಕ್ತಾರ ರಮೇಶ್ ಬಾಬು (Ramesh Babu) ಕಿಡಿಕಾರಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Election 2023) ಇನ್ನು ನಾಲ್ಕೇ ದಿನ ಬಾಕಿ ಇದ್ದು, ನಾಯಕರ ನಡುವಿನ ವಾಕ್ಸಮರಗಳು ತಾರಕಕ್ಕೇರಿವೆ.
ನರೇಂದ್ರ ಮೋದಿ ರೋಡ್ ಶೋ ದಾರಿಯಲ್ಲಿ ಕಾಂಗ್ರೆಸ್‌ನವರು ಆಂಬ್ಯುಲೆನ್ಸ್ ತಂದು ಸೀನ್ ಕ್ರಿಯೇಟ್ ಮಾಡಲು ಹೊರಟಿದ್ದಾರೆ ಎಂಬ ಶೋಭಾ ಕರಂದ್ಲಾಜೆ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ವಕ್ತಾರ ರಮೇಶ್ ಬಾಬು, ಕಳೆದ ಬಾರಿ ನರೇಂದ್ರ ಮೋದಿ ರೋಡ್ ಶೋ ಆದ ಕಡೆಗಳಲ್ಲಿ ಆಂಬ್ಯುಲೆನ್ಸ್ ಸಮಸ್ಯೆ ಆಗಿದ್ದು ಮಾಧ್ಯಮಗಳಲ್ಲಿ ವರದಿಯಾಗಿದೆ. ಜನರಿಗೆ ಸಮಸ್ಯೆ ಆಗಬಾರದು ಎಂದು ಗುರುವಾರ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ಆದರೆ, ಇದನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ತುಂಬ ಚೆನ್ನಾಗಿ ತಿರುಚುತ್ತಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಇದನ್ನೂ ಓದಿ: Karnataka Election : ಬಿಜೆಪಿಯವರು ಕರೆದಿಲ್ಲ, ಕರೆದಿದ್ದರೆ ಅವರ ಪ್ರಚಾರಕ್ಕೂ ಹೋಗ್ತಿದ್ದೆ ಎಂದ ಶಿವಣ್ಣ
ಅವರ ಈ ಕೌಶಲ್ಯವನ್ನು ನೋಡಿಯೇ ಬಿಜೆಪಿಯಲ್ಲಿ ಚುನಾವಣಾ ಉಸ್ತುವಾರಿಯನ್ನಾಗಿ ಮಾಡಿದ್ದಾರೆ. ರೋಡ್ ಶೋ ವೇಳೆ ಅಂಗಡಿಗಳನ್ನು ಮುಚ್ಚುವುದರಿಂದ ಜನರಿಗೆ ಸಮಸ್ಯೆ ಆಗಲಿದೆ. ಈ ರೋಡ್ ಶೋದಿಂದ ಜನ ಸಾಮಾನ್ಯರಿಗೆ ತೊಂದರೆಯಾಗುತ್ತದೆ ಎಂಬ ಬಗ್ಗೆ ಶೋಭಾ ಕರಂದ್ಲಾಜೆ ಅವರು ಒಬ್ಬ ಕ್ಯಾಬಿನೆಟ್ ಸಚಿವರಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಸಲಹೆ ಕೊಡಲಿ ಎಂದು ಹೇಳಿದ ರಮೇಶ್ ಬಾಬು, ಪ್ರಧಾನ ಮಂತ್ರಿ ಅವರಿಗೆ ಇರುವ ಶಿಷ್ಟಾಚಾರವು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ಭ್ರಷ್ಟಾಚಾರದ ಬಗ್ಗೆ ಉತ್ತರ ಕೊಡುತ್ತಿಲ್ಲ; ರಮೇಶ್ ಬಾಬು
ಉತ್ತರ ಕೊಡಬೇಕಾದ ಸರ್ಕಾರ ಉತ್ತರ ನೀಡಿಲ್ಲ. ಭ್ರಷ್ಟಾಚಾರದ ಬಗ್ಗೆ ಉತ್ತರ ನೀಡಿಲ್ಲ. ಆದರೆ, ಬಿಜೆಪಿಯವರು ವಿಷಯಾಂತರ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಹುದ್ದೆಯು 2500 ಕೋಟಿ ರೂಪಾಯಿಗೆ ಹರಾಜು ಆಗಿದೆ. ಇದನ್ನು ಬಿಜೆಪಿ ಶಾಸಕರೇ ಹೇಳಿದ್ದಾರೆ. ಮಂತ್ರಿ ಪದವಿಯನ್ನು ಸಹ ಹರಾಜಿಗೆ ಇಟ್ಟಿದ್ದಾರೆ. ನೇಮಕಾತಿಯಲ್ಲೂ ಹಗರಣ ನಡೆದಿದೆ. ಪ್ರತಿ ಹುದ್ದೆಗೂ ಹಣವನ್ನು ನಿಗದಿ ಮಾಡಿದ್ದಾರೆ. ಇದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಒಂದೇ ಒಂದು ಮಾತನ್ನೂ ಆಡುತ್ತಿಲ್ಲ ಎಂದು ರಮೇಶ್ ಬಾಬು ಆರೋಪಿಸಿದರು.
ಇದನ್ನೂ ಓದಿ: Modi in Karnataka : ಮೋದಿ ರೋಡ್ ಶೋ ನಡುವೆ ಕಾಂಗ್ರೆಸ್‌ನವರು ಆಂಬ್ಯುಲೆನ್ಸ್ ಬಿಟ್ಟು ಸೀನ್ ಕ್ರಿಯೇಟ್ ಮಾಡ್ತಾರಂತೆ!
ಬಿಡಿಎ ಆಯುಕ್ತ ಹುದ್ದೆ 15 ಕೋಟಿ ರೂಪಾಯಿಗೆ ಹರಾಜು ಆಗಿದೆ. ಕೆಪಿಎಸ್‌ಸಿ, ಡಿಸಿ, ಎಸ್‌ಪಿ ಹುದ್ದೆಗಳು ಐದು ಕೋಟಿ ರೂಪಾಯಿಗೆ ಹರಾಜು ಆಗುತ್ತಿವೆ. ಉಪಕುಲಪತಿ ಹುದ್ದೆಯನ್ನು ಕೂಡ ಹರಾಜಿಗೆ ಇಟ್ಟಿದ್ದಾರೆ. ಒಬ್ಬ ಉಪಕುಲಪತಿಗೆ ಹಣ ಕೊಟ್ಟವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಹಸೀಲ್ದಾರ ಹುದ್ದೆಗಳು ಕೂಡ 50 ಲಕ್ಷ ರೂಪಾಯಿವರೆಗೆ ಹರಾಜಿಗಿದೆ ಎಂದು ಬಿಜೆಪಿ ವಿರುದ್ಧ ರಮೇಶ್ ಬಾಬು ಗಂಭೀರ ಆರೋಪವನ್ನು ಮಾಡಿದರು.