ಬೆಂಗಳೂರು: ಕಾಂಗ್ರೆಸ್‌ನವರು ಟ್ವಿಟರ್‌ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಡ್ಡಿ ಸುಡುವ ಫೋಟೊ ಹಾಕಿಕೊಂಡು ಭಾರತ್ ಜೋಡೊ ಯಾತ್ರೆ ಮಾಡುತ್ತಿದ್ದಾರೆ. ಈ ಮೂಲಕ ಅವರು ಭಾರತ ಜೋಡೊ ಹೆಸರಲ್ಲಿ ಭಾರತೀಯತೆಯನ್ನೇ ಸುಡುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.
ʻʻಆರ್ ಎಸ್ ಎಸ್ ಭಾರತೀಯತೆಯನ್ನು ಮೈಗೂಡಿಸಿಕೊಂಡಿರುವ ಸಂಘಟನೆ. ಯುದ್ಧಗಳ ಸಂದರ್ಭದಲ್ಲಿ ಆರ್ ಎಸ್ ಎಸ್ ಪಾಲ್ಗೊಂಡಿದೆʼʼ ಎಂದು ಹೇಳಿದ ಸಿ.ಟಿ. ರವಿ ಅವರು, ʻʻಕಾಂಗ್ರೆಸ್ ಮನೋಭಾವನೆ ಎಲ್ಲರಿಗೂ ಗೊತ್ತು. ಅದು ಉಗ್ರ ಒಸಾಮಾಜಿ ಎಂದು ಉಲ್ಲೇಖಿಸುತ್ತೆ. ತುಕುಡೇ ತುಕುಡೇ ಗ್ಯಾಂಗ್‌ನವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತದೆ. ಉಗ್ರ ಅಪ್ಜಲ್ ಗುರು ಬಗ್ಗೆ ಮರುಕ ವ್ಯಕ್ತಪಡಿಸುತ್ತದೆʼʼ ಎಂದರು.
ʻʻಕಾಂಗ್ರೆಸ್ ಭಾರತೀಯತೆಯನ್ನು ಜೋಡಿಸುವ ಕೆಲಸ ಮಾಡುತ್ತಿಲ್ಲ. ಬದಲಾಗಿ ಅವರು ಭಾರತೀಯತೆಯನ್ನು ಸುಡುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ನಾಯಕರು ಆರೆಸ್ಸೆಸ್ ಚಡ್ಡಿ ಸುಡಬಹುದು. ಆದರೆ ಆರೆಸ್ಸೆಸ್ ವಿಚಾರಧಾರೆಯನ್ನು ಸುಡಲು ಸಾಧ್ಯವಿಲ್ಲʼʼ ಎಂದು ಸಿ.ಟಿ. ರವಿ ಹೇಳಿದರು.
ʻʻಆರೆಸ್ಸೆಸ್‌ನ್ನು ಕ್ರಷ್ ಮಾಡುತ್ತೇವೆ ಅಂದವರೇ ಗಣರಾಜ್ಯೋತ್ಸವ ಪಥಸಂಚಲನಕ್ಕೆ ಸಂಘಟನೆಯನ್ನು ಆಹ್ವಾನಿಸಿದ್ದಾರೆ. ಇಷ್ಟೇ ಅಲ್ಲ ಕಾಂಗ್ರೆಸ್‌ನವರೇ ಚಡ್ಡಿ ಹಾಕಿಕೊಂಡು ಶಾಖೆಗೆ ಬರುವ ದಿನ ದೂರವಿಲ್ಲʼʼ ಎಂದಿದ್ದಾರೆ ಸಿ.ಟಿ. ರವಿ.
ಹಿಂದಿ ಹೇರಿಕೆ ಪ್ರಶ್ನೆ ಇಲ್ಲ ಎಂದ ಸಿ.ಟಿ. ರವಿ
ಸೆಪ್ಟೆಂಬರ್ ೧೪ರಂದು ನಡೆಯಲಿರುವ ಹಿಂದಿ ದಿವಸ್ ಆಚರಣೆಗೆ ಎದುರಾಗಿರುವ ವಿರೋಧಕ್ಕೆ ಪ್ರತಿಕ್ರಿಯಿಸಿದ ಸಿ.ಟಿ. ರವಿ ಅವರು, ʻʻಹಿಂದಿ ದಿವಸ್ ನಾವು ಪ್ರಾರಂಭ ಮಾಡಿದ್ದಲ್ಲ. ಕಾಂಗ್ರೆಸ್ ಕಾಲದಿಂದಲೂ ಇದೆ. ನಾವು ಹಿಂದಿ ಹೇರುವ ಪ್ರಶ್ನೆಯೇ ಇಲ್ಲ. ದೇಶದ ಎಲ್ಲಾ ಭಾಷೆಗಳು ಸಹ ಭಾರತದ ಆತ್ಮ. ಮಾತೃಭಾಷೆಯಲ್ಲೇ ವ್ಯವಹರಿಸಿ, ಮಾತನಾಡಲು ಹೆಮ್ಮೆ ಪಡಿʼʼ ಎಂದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಹಿಂದಿ ದಿವಸ್‌ಗೆ ವಿರೋಧ ವ್ಯಕ್ತಪಡಿಸಿದ್ದರ ಬಗ್ಗೆ ಗಮನ ಸೆಳೆದಾಗ, ʻʻಯಾವ ಪಕ್ಷದ ಬೆಂಬಲದಲ್ಲಿ ದೇವೆಗೌಡರು ಪ್ರಧಾನಿಯಾಗಿದ್ದರೋ ಆ ಪಕ್ಷದವರೇ ಹಿಂದಿ ಏರಿಕೆ ಮಾಡಿರೋದುʼʼ ಎಂದು ಕೌಂಟರ್ ನೀಡಿದರು.
ಪರಸ್ಪರ ಭಾಷಾ ಉತ್ಸವ ಆಗಲಿ
ʻʻಏಕ್ ಭಾರತ್ ಶ್ರೇಷ್ಠ್ ಭಾರತ್ ಅಂತ ನಮ್ಮ ಪಕ್ಷ ಹೊಸ ಯೋಜನೆ ಜಾರಿ ಮಾಡಿದೆ. ಮಹಾರಾಷ್ಟ್ರದಲ್ಲಿ ಕನ್ನಡ ಉತ್ಸವ ಆಗಬೇಕು. ಕರ್ನಾಟಕದಲ್ಲಿ ಮರಾಠಿ ಉತ್ಸವ ಆಗಬೇಕು. ಬೇರೆ ಬೇರೆ ರಾಜ್ಯಗಳ ಉತ್ಸವಗಳನ್ನು ಬೇರೆ ಬೇರೆ ರಾಜ್ಯಗಳಲ್ಲಿ ಮಾಡಬೇಕು. ಇದು ಭಾಷೆ ಬಾಂಧವ್ಯದ ಸಂಕೇತ ಅಂತಾ ನಾನು ಭಾವಿಸುತ್ತೇನೆ.ಬೇರೆ ಬೇರೆ ರಾಜ್ಯಗಳು ಹಾಗೂ ಭಾಷೆಗಳ ಉತ್ಸವ ನಡೆದಾಗ ಸಾಂಸ್ಕೃತಿಕ ಸಂಬಂಧ ಬೆಳೆಯುತ್ತದೆ. ಆದರೆ ಕೆಲವರು ಅದನ್ನು ಬೆಂಕಿ ಹಚ್ಚೋಕೆ ಬಳಸುತ್ತಾರೆ.ʼʼ ಎಂದರು ಸಿ.ಟಿ. ರವಿ.
ʻʻಕನ್ನಡ ಮಾತೆ ಭಾರತ ಜನನಿಯ ತನುಜಾತೆ ಅಂತ ಕುವೆಂಪು ಹೇಳಿದ್ದಾರೆ. ಅದನ್ನು ಅರ್ಥ ಮಾಡಿಕೊಂಡು ಮಾತನಾಡಬೇಕು. ಹಿಂದಿಗೆ ಸಿಗುವ ಸನ್ಮಾನ ಕನ್ನಡಕ್ಕೂ ಸಿಗಬೇಕುʼʼ ಎಂದರು.
ಇದನ್ನೂ ಓದಿ | ಕಚ್ಚೆ ಹರುಕ ವಿವಾದ: ಸಿ.ಟಿ ರವಿಗೆ ಹರಕು ಕಚ್ಚೆ ರವಾನೆ ಮಾಡುವ ಎಚ್ಚರಿಕೆ ನೀಡಿದ ಕಾಂಗ್ರೆಸ್ ನಾಯಕ ಸಚಿನ್ ಮೀಗಾ