ಬೆಂಗಳೂರು: ಈಗ ದೇಶದಲ್ಲಿ ಒಂದೇ ಒಂದು ರೂಪಾಯಿಯನ್ನೂ ಕೊಡದೆ ಸರ್ಕಾರಿ ಉದ್ಯೋಗ ಪಡೆಯುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಉದ್ಯೋಗ ಪಡೆದವರು ಕೂಡಾ ಕೆಲಸಕ್ಕೆಂದು ಜನರು ಬಂದಾಗ ಅವರಿಗೆ ತೊಂದರೆ ಕೊಡಬಾರದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿಗಾರಿಕೆ ಸಚಿವ ಪ್ರಲ್ಹಾದ್ ಜೋಶಿ ಕಿವಿಮಾತು ಹೇಳಿದರು. ಅವರು ಶನಿವಾರ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಉದ್ಯೋಗ ಮೇಳದಲ್ಲಿ ೧೦೦೦ ಅಭ್ಯರ್ಥಿಗಳು ಸರ್ಕಾರಿ ಉದ್ಯೋಗದ ನೇಮಕಾತಿ ಪತ್ರ ವಿತರಿಸಿ ಮಾತನಾಡಿದರು.
ಕೇಂದ್ರ ಸರ್ಕಾರದ ನಾನಾ ಇಲಾಖೆಗಳಲ್ಲಿ ಖಾಲಿ ಇರುವ 10 ಲಕ್ಷ ಉದ್ಯೋಗಗಳನ್ನು ತುಂಬುವ ಸಲುವಾಗಿ ಕೇಂದ್ರ ಸರ್ಕಾರ ರೋಜ್‌ಗಾರ್ ಮೇಳವನ್ನು ಆಯೋಜಿಸಿದೆ.. ಈ ಪೈಕಿ ಈಗ 75 ಸಾವಿರ ಜನರಿಗೆ ನೇಮಕಾತಿ ಪತ್ರ ವಿತರಿಸುವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನಲ್ಲಿ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಬೆಂಗಳೂರು ಸೇರಿದಂತೆ ದೇಶದ ೫೦ ಕಡೆಗಳಿಂದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮಂತ್ರಿಗಳು ಮತ್ತು ನೇಮಕಗೊಂಡ ಅಭ್ಯರ್ಥಿಗಳು ಭಾಗವಹಿಸಿದ್ದರು. ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಸಾರಥ್ಯವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಹಿಸಿದ್ದರು. ಬೆಂಗಳೂರಿನಲ್ಲಿ ಸುಮಾರು ೧೦೦೦ ಜನರಿಗೆ ಉದ್ಯೋಗ ನೇಮಕಾತಿ ಪತ್ರ ನೀಡಲಾಯಿತು. ಈ ವೇಳೆ ಮಾತನಾಡಿದ ಪ್ರಲ್ಹಾದ್ ಜೋಶಿ, ರೋಜ್‌ಗಾರ್ ಮೇಳದ ಮೂಲಕ ಉದ್ಯೋಗ ಪಡೆದಿರುವ ನೀವು ಯಾರಿಗೂ ತೊಂದರೆ ಕೊಡುವುದಿಲ್ಲ ಎಂದು ಪ್ರಮಾಣ ಮಾಡಬೇಕು ಎಂದು ಮನವಿ ಮಾಡಿದರು.
ಬೆಂಗಳೂರಿನಲ್ಲಿ ರಾಷ್ಟ್ರೀಯ ನೇಮಕಾತಿ ಮಿಷನ್ ಅಂಗವಾಗಿ ನೇಮಕಾತಿ ಪತ್ರ ಹಸ್ತಾಂತರ ನಡೆಯಿತು. ಅಂಚೆ ಇಲಾಖೆಯಿಂದ ಉದ್ಯೋಗ ಮೇಳ ಆಯೋಜನೆ ನಡೆದಿತ್ತು. ಗೃಹ ಇಲಾಖೆ, ಕಂದಾಯ ಇಲಾಖೆ, ರಕ್ಷಣಾ ಇಲಾಖೆ, ಹಣಕಾಸು ಇಲಾಖೆ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರವನ್ನು ಪ್ರಲ್ಹಾದ್ ಜೋಶಿ ವಿತರಿಸಿದರು. ಕಾರ್ಯಕ್ರಮದಲ್ಲಿ ಸಂಸದರಾದ ಪಿ.ಸಿ ಮೋಹನ್, ತೇಜಸ್ವಿ ಸೂರ್ಯ ಉಪಸ್ಥಿತರಿದ್ದರು.
ಉದ್ಯೋಗ ಮೇಳದಲ್ಲಿ ದೊಡ್ಡ ಹೆಜ್ಜೆ
ಉದ್ಯೋಗ ಮೇಳದ ಮೂಲಕ ಭಾರತ ಬಹುದೊಡ್ಡ ಹೆಜ್ಜೆ ಇಟ್ಟಿದೆ. ಸ್ಟಾರ್ಟಪ್ ವಿಷಯದಲ್ಲೂ ನಮ್ಮ ದೇಶ ಬಹಳ ಮುಂದಿದೆ. ಅದರಲ್ಲೂ ಬೆಂಗಳೂರು ಐಟಿ ಹಬ್ ಆಗುತ್ತಿದೆ. ಇಂದು ಆರ್ಥಿಕತೆಯಲ್ಲಿ ನಾವು ಇಂಗ್ಲೆಂಡನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೆ ಏರಿದ್ದೇವೆ. ನಾವು ಎಲ್ಲಿ ಅವಕಾಶ ಸಿಗುತ್ತದೋ ಅಲ್ಲಿ ಮುನ್ನುಗುತ್ತೇವೆ ಎಂದು ಹೇಳಿದರು ಪ್ರಲ್ಹಾದ್ ಜೋಶಿ.
ಜೋಡೋ ಯಾತ್ರೆಯಿಂದ ಕಾಂಗ್ರೆಸ್‌ಗೆ ಭಯ!
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಿಂದ ಬಿಜೆಪಿ ಭಯವಾಗಿದೆ ಎಂಬ ಮಾತುಗಳಿಗೆ ಪ್ರತಿಕ್ರಿಯಿಸಿದ ಸಚಿವ ಪ್ರಲ್ಹಾದ್ ಜೋಶಿ, ʻʻನಾವು ವಿಚಲಿತರಾಗಿದ್ದರಿಂದ ಗೋವಾದಲ್ಲಿ ಕಾಂಗ್ರೆಸ್ ನಾಯಕರು ಪಕ್ಷ ಬಿಟ್ಟು ಹೋಗ್ತಿದ್ದಾರೆ. ಭಾರತ್ ಜೋಡೋ ಮುಕ್ತಾಯವಾಗುತ್ತಿದ್ದಂತೆಯೇ ರಾಜಸ್ಥಾನದಲ್ಲೂ ಪಕ್ಷ ಬಿಟ್ಟು ಹೋಗಲು ತಯಾರಾಗಿದ್ದಾರೆ. ಜೋಡೋ ಅಂತ ಹೆಸರು ಕೊಟ್ಟರೆ ಕಾಂಗ್ರೆಸ್ ತೋಡೋ ಯಾತ್ರೆ ನಡೆಯುತ್ತಿದೆʼʼ ಎಂದು ಗೇಲಿ ಮಾಡಿದರು.
ಇದನ್ನೂ ಓದಿ | Rojgar Mela | ಅಭಿವೃದ್ಧಿ ಭಾರತಕ್ಕೆ ಯುವಕರೇ ಬುನಾದಿ, ಅವರಿಗಾಗಿ ಉದ್ಯೋಗ ಸೃಷ್ಟಿ: ಪಿಎಂ ಮೋದಿ