ಹಾವೇರಿ: ಭೀಕರ ಮಳೆ ಈ ಆ ಮನೆಯನ್ನು ನಲುಗಿಸಿತ್ತು. ಯಾವ ಕ್ಷಣ ಬೇಕಾದರೂ ಉರುಳೇ ಹೋಗಬಹುದು ಎನ್ನುವ ಸಣ್ಣ ಮುನ್ಸೂಚನೆಯೊಂದು ಅವರಿಗೆ ಸಿಕ್ಕಿತ್ತು. ಅದಕ್ಕಾಗಿಯೇ ವಯಸ್ಸಾದ ಅಪ್ಪ-ಅಮ್ಮನನ್ನು ಇನ್ನೊಂದು ಮನೆಗೆ ಬಿಟ್ಟು ಬಂದಿದ್ದರು. ಇನ್ನೂ ಏನೋ ಮನೆಯಲ್ಲಿ ಉಳಿದಿದೆ ಎಂದುಕೊಂಡು ಮನೆಗೆ ಪ್ರವೇಶ ಮಾಡಿದ್ದರಷ್ಟೆ. ಒಮ್ಮಿಂದೊಮ್ಮೆಗೇ ಮನೆ ಕುಸಿದೇ ಹೋಯ್ತು. ಒಳಗೆ ಹೋಗಿದ್ದ ಅವರ ಮೇಲೆಯೇ ಚಾವಣಿ ಉರುಳಿಬಿದ್ದು ಅವರು ಅಲ್ಲೇ ಹೆಣವಾದರು.
ಇದು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಶಿಶುವಿನಹಾಳ ಗ್ರಾಮದಲ್ಲಿ ನಡೆದ ಘಟನೆ. ಬಸವನಗೌಡ ಶಿವನಗೌಡ ತಿಪ್ಪಣ್ಣನವರ (35) ಮೃತ ದುರ್ದೈವಿ. ಅವರು ತಮ್ಮ ಹೆತ್ತವರನ್ನು ಬೇರೆ ಕಡೆಗೆ ಬಿಟ್ಟು ಬಂದಾಗ ಚಾವಣಿಯೇ ಉರುಳಿ ಬಿದ್ದು ಅವರಡಿಯಲ್ಲಿ ಸಿಲುಕಿ ತಿಪ್ಪಣ್ಣನವರ ಮೃತಪಟ್ಟರು. ಮನೆಯನ್ನು ನೋಡಿಕೊಳ್ಳುತ್ತಿದ್ದ ಮಗನ ಸಾವಿಗೆ ಇಡೀ ಕುಟುಂಬ ಕಣ್ಣೀರಿಡುತ್ತಿದ್ದ ದೃಶ್ಯ ಕರುಳು ಕಿವುಚುವಂತಿತ್ತು. ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾವೇರಿ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಮಳೆ ಸುರಿಯುತ್ತಿದ್ದು, ಸೋಮವಾರವೂ ಒಂದು ಮನೆ ಕುಸಿದಿತ್ತು. ಹಾನಗಲ್ ತಾಲೂಕಿನ ಶ್ಯಾಡಗುಪ್ಪಿ ಗ್ರಾಮದಲ್ಲಿ ಮೈಲಾರಪ್ಪ ಮನೋಚಾರಿ ಅವರ ಮನೆ ಕುಸಿದಿದೆ. ಅದರೆ, ಕೂಡಲೇ ಮನೆಯೊಳಗಿದ್ದವರು ಹೊರಗೆ ಓಡಿ ಬಂದ ಪರಿಣಾಮ ಯಾರಿಗೂ ಜೀವಾಪಾಯ ಆಗಿಲ್ಲ.
ಧಾರವಾಡದಲ್ಲಿ ಶಾಲೆಗಳಿಗೆ ರಜೆ
ಧಾರವಾಡ ಜಿಲ್ಲೆಯ ಎರಡು ತಾಲೂಕು ಕೇಂದ್ರಗಳ ಶಾಲಾ ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಿಸಲಾಗಿದೆ. ನವಲಗುಂದ ಹಾಗೂ ಅಣ್ಣಿಗೇರಿ ತಾಲೂಕಿನಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಬೆಣ್ಣೆಹಳ್ಳದ ಹರಿವು ಹೆಚ್ಚಾದ ಹಿನ್ನೆಲೆ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಹಳ್ಳ ದಾಟುವ ಹುಚ್ಚು ಸಾಹಸ ಮಾಡದಂತೆ ಡಿಸಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ | ಬೆಂಗಳೂರು ಮಹಾಮಳೆಗೆ ಯುವತಿ ಬಲಿ | ಬೆಸ್ಕಾಂ, ಬಿಬಿಎಂಪಿ ನಿರ್ಲಕ್ಷ್ಯದಿಂದ ಹೋಯ್ತು ಜೀವ