Site icon Vistara News

Murder Case: ಖಾಸಗಿ ವಿಡಿಯೊ ವಿಚಾರಕ್ಕೆ ಸ್ನೇಹಿತನ ಕೊಲೆಗೈದು ರುಂಡದೊಂದಿಗೆ ಗ್ರಾಮಕ್ಕೆ ಬಂದ!

Akbar and Mahantesh

ಚಿಕ್ಕೋಡಿ(ಬೆಳಗಾವಿ): ಸ್ನೇಹಿತನ ಕೊಲೆ ಮಾಡಿ ರುಂಡದೊಂದಿಗೆ ಯುವಕನೊಬ್ಬ ಗ್ರಾಮಕ್ಕೆ ಬಂದ ಭಯಾನಕ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ಹೊರವಲಯದ ಬಡಬ್ಯಾಕೂಡ್‌ನಲ್ಲಿ ನಡೆದಿದೆ. ಖಾಸಗಿ ವಿಡಿಯೊ ವಿಚಾರಕ್ಕೆ ಇಲ್ಲಿನ ಬಸ್ತವಾಡ ಹೊರವಲಯ ಅರಣ್ಯ ಪ್ರದೇಶದಲ್ಲಿ ಯುವಕನನ್ನು ಕೊಲೆ (Murder Case) ಮಾಡಲಾಗಿದೆ.

ಅಕ್ಬರ್‌ ಜಮಾದಾರ್ (21) ಕೊಲೆಯಾದವ. ಬಡಬ್ಯಾಕೂಡ್ ನಿವಾಸಿ ಮಹಾಂತೇಶ ಪೂಜಾರ್ (23) ಕೊಲೆ ಆರೋಪಿ. ಕೊಲೆಯಾದ ಅಕ್ಬರ್, ಹಂತಕ ಮಹಾಂತೇಶ ಇಬ್ಬರೂ ಸ್ನೇಹಿತರಾಗಿದ್ದಾರೆ. ಆರೋಪಿ ಮಹಾಂತೇಶ್ ಯುವತಿಯೊಬ್ಬಳ ಜತೆಗಿನ ಖಾಸಗಿ ವಿಡಿಯೊವನ್ನು ತನ್ನದೇ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ. ಹಣಕಾಸಿನ ವೈಷಮ್ಯ ಇದ್ದ ಹಿನ್ನೆಲೆಯಲ್ಲಿ ಆ ಮೊಬೈಲ್ ಅನ್ನು ಅಕ್ಬರ್ ಕಸಿದುಕೊಂಡಿದ್ದ. ಆದರೆ, ರಹಸ್ಯ ವಿಡಿಯೊ ಎಲ್ಲಿ ಬಹಿರಂಗವಾಗುತ್ತದೋ ಎಂದು ಅಕ್ಬರ್‌ನನ್ನು ಮಹಾಂತೇಶ್ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ | Custodial death: ವಿಚಾರಣೆಗೆ ಕರೆತಂದ ಮನೆಕಳವು ಆರೋಪಿ ಪೊಲೀಸ್‌ ಠಾಣೆಯಲ್ಲಿ ಸಾವು

ಹಾರೂಗೇರಿ ಸರ್ಕಾರಿ ಆಸ್ಪತ್ರೆಗೆ ಅಕ್ಬರ್ ಮೃತದೇಹ ಸ್ಥಳಾಂತರ ಮಾಡಲಾಗಿದೆ. ಆಸ್ಪತ್ರೆ ಬಳಿ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಗ್ರಾಮಸ್ಥರ ಮಾಹಿತಿ ಮೇರೆಗೆ ಗುರುವಾರ ಮಧ್ಯರಾತ್ರಿ ಆರೋಪಿ ಮಹಾಂತೇಶನನ್ನು ಹಾರೂಗೇರಿ ಪೊಲೀಸರು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಮೊದಲು ಮೃತ ಅಕ್ಬರ್, ಹಂತಕ ಮಹಾಂತೇಶ ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದರು. ಎಮ್ಮೆ ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಇಬ್ಬರ ವಿರುದ್ಧವೂ ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ಎಸ್‌ಪಿ ಡಾ.ಸಂಜೀವ್ ಪಾಟೀಲ್ ಪ್ರತಿಕ್ರಿಯಿಸಿ, ಗುರುವಾರ ರಾತ್ರಿ ಬಸ್ತವಾಡ ಅರಣ್ಯಪ್ರದೇಶದಲ್ಲಿ ಯುವಕನ ಕೊಲೆಯಾಗಿರುವ ಬಗ್ಗೆ ಮಾಹಿತಿ ಬಂತು. ಕೊಲೆಯಾದ ಅಕ್ಬರ್ ಜಮಾದಾರ್ ತಾಯಿ ಖೈರೂನ್ ದೂರು ನೀಡಿದ್ದಾರೆ. ಕೊಲೆಯಾದ ಅಕ್ಬರ್ ಜಮಾದಾರ್, ಆರೋಪಿ ಮಹಾಂತೇಶ ಪೂಜಾರ್ ಇಬ್ಬರೂ ಸ್ನೇಹಿತರು. ಒಂದು ವರ್ಷದಿಂದ ಇಬ್ಬರ ಮಧ್ಯೆ ಹಣಕಾಸು ವ್ಯವಹಾರ ಇತ್ತು. ನೆನ್ನೆ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಮದ್ಯಪಾನ ಮಾಡಿಸಿ ಹರಿತವಾದ ಆಯುಧರಿಂದ ಇರಿದು ಕೊಲೆ ಮಾಡಿದ್ದಾನೆ. ಪ್ರಕರಣದ ತನಿಖೆಯ ಬಳಿಕ ಹೆಚ್ಚಿನ ಮಾಹಿತಿ ನೀಡುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ | Woman dead : ಬಟ್ಟೆ ತೊಳೆಯಲು ಹೋಗಿದ್ದ ಮಹಿಳೆ ನೀರಿಗೆ ಬಿದ್ದು ಸಾವು

ಕೊಲೆಯಾದ ಅಕ್ಬರ್ ರುಂಡದ ಜತೆ ಆರೋಪಿ ಊರಿನಲ್ಲಿ ತಿರುಗಾಡಿದ ಬಗ್ಗೆ ಖಚಿತ ಮಾಹಿತಿ ಇಲ್ಲ. ಆರೋಪಿ ಮಹಾಂತೇಶ ಮೊಬೈಲ್‌ನನ್ನು ಅಕ್ಬರ್ ಪಡೆದಿದ್ದ ಎಂಬ ಮಾಹಿತಿ ಇದೆ. ಆ ಮೊಬೈಲ್‌ನಲ್ಲಿ ಆರೋಪಿ ಮಹಾಂತೇಶ ತನ್ನ ಖಾಸಗಿ ಕ್ಷಣದ ವಿಡಿಯೊ ರೆಕಾರ್ಡ್ ಮಾಡಿದ್ದ‌ನಂತೆ. ಆ ಮೊಬೈಲ್ ಸಹ ಜಪ್ತಿ ಮಾಡಿದ್ದು ಎಫ್‌ಎಸ್‌ಎಲ್‌ಗೆ ಕಳುಹಿಸಿ ತಪಾಸಣೆ ನಡೆಸಲಾಗುವುದು. ಎಮ್ಮೆಗಳ ಕಳ್ಳತನ ಸಂಬಂಧ ಆರೋಪಿತ ವ್ಯಕ್ತಿ ಮೇಲೆ ಮೂರು ಪ್ರಕರಣ, ಮೃತ ವ್ಯಕ್ತಿಯ ಮೇಲೂ ಎರಡು ಪ್ರಕರಣಗಳಿವೆ ಎಂದು ಎಸ್‌ಪಿ ತಿಳಿಸಿದ್ದಾರೆ.

Exit mobile version