ಹಾಸನ: ಪಾರ್ಟಿ ಮುಗಿಸಿ ಕಾರಿನಲ್ಲಿ ಮಲಗಿದ ಯುವಕ ಅನುಮಾನಾಸ್ಪದ ಸಾವು (Suspicious death) ಕಂಡ ಘಟನೆ ಹಾಸನ ಜಿಲ್ಲೆ ಬೇಲೂರು ಪಟ್ಟಣದ ಕುವೆಂಪು ನಗರ ಬಡಾವಣೆಯಲ್ಲಿ ನಡೆದಿದೆ. ಈ ಹಿನ್ನೆಲೆಯಲ್ಲಿ ಗ್ರಾಮದ ಜನರು ರೊಚ್ಚಿಗೆದ್ದಿದ್ದಾರೆ. ಇದು ಆಕಸ್ಮಿಕ ಸಾವಲ್ಲ ಕೊಲೆ ಎಂದು ಆರೋಪಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.
ಚೇತನ್ (24) ಮೃತ ಯುವಕ. ಬೇಲೂರು ಪಟ್ಟಣದ ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಚೇತನ್ ಶನಿವಾರ ರಾತ್ರಿ ಮೊಬೈಲ್ ಅಂಗಡಿ ಎದುರು ಬೈಕ್ ನಿಲ್ಲಿಸಿ ಸ್ನೇಹಿತರಾದ ಗೌತಮ್, ದರ್ಶನ್, ಮಿಥುನ್ ಎಂಬುವವರ ಜತೆ ಪಾರ್ಟಿಗೆ ತೆರಳಿದ್ದ ಎನ್ನಲಾಗಿದೆ.
ರಾತ್ರಿ ಹನ್ನೆರಡು ಗಂಟೆಯವರೆಗೆ ಗೌತಮ್ ರೂಂನಲ್ಲಿ ಪಾರ್ಟಿ ಮಾಡಿದ ಸ್ನೇಹಿತರು ಬಳಿಕ ಅಲ್ಲಿಂದ ಮನೆಯತ್ತ ತೆರಳಿದ್ದಾರೆ. ದರ್ಶನ್, ಮಿಥುನ್, ಚೇತನ್ ಹೊರಟರು ಎಂದು ಭಾವಿಸಿ ಗೌತಮ್ ಮನೆಯಲ್ಲಿ ಮಲಗಿದ್ದಾಗಿ ಹೇಳಿಕೊಂಡಿದ್ದಾನೆ. ಆದರೆ, ಚೇತನ್ ಮನೆಗೆ ತೆರಳಲಾಗದೆ ಕಾರಿನಲ್ಲಿಯೇ ಮಲಗಿದ್ದ ಎನ್ನಲಾಗಿದೆ.
ಗೌತಮ್ ಬೆಳಗ್ಗೆ ಎದ್ದವನು ಮನೆ ಮುಂದೆ ನೋಡಿದರೆ ಕಾರು ಅಲ್ಲಿಯೇ ಇತ್ತು. ಹಾಗಾಗಿ ಕಾರಿನ ಡೋರ್ ತೆಗೆದು ನೋಡಿದಾಗ ಚೇತನ್ ಹಿಂಬದಿ ಸೀಟ್‌ನಲ್ಲಿ ರಕ್ತ ವಾಂತಿ ಮಾಡಿಕೊಂಡು ಮಲಗಿದ್ದ. ಅಷ್ಟರಲ್ಲಿ ಬೆಳಗ್ಗೆ 10 ಗಂಟೆ ಆಗಿತ್ತು. ಕೂಡಲೇ ದರ್ಶನ್, ಮಿಥುನ್‌ಗೆ ಗೌತಮ್ ಫೋನ್ ಮಾಡಿದ್ದಾನೆ.
ಸುದ್ದಿ ತಿಳಿಯುತ್ತಿದ್ದಂತೆ ಗಾಬರಿಗೊಂಡಿರುವ ದರ್ಶನ್, ಮಿಥುನ್ ಫೋನ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದಾರೆ. ಎಷ್ಟೇ ಎಬ್ಬಿಸಲು ಯತ್ನಿಸಿದರೂ ಆತ ಏಳಲಿಲ್ಲ. ಹಾಗಾಗಿ ಕೂಡಲೇ ತಾನೇ ಕಾರಿನಲ್ಲಿ ಶವ ತೆಗೆದುಕೊಂಡು ಪೊಲೀಸ್ ಠಾಣೆಗೆ ಬಂದಿದ್ದಾಗಿ ಗೌತಮ್ ಹೇಳಿಕೊಂಡಿದ್ದಾನೆ.
ಕೊಲೆ ಆರೋಪ
ಆದರೆ, ಈ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಚೇತನ್ ಪೋಷಕರು, ಇದು ಸಹಜ ಸಾವಲ್ಲ ಕೊಲೆ ಎಂದು ಆರೋಪ ಮಾಡಿದ್ದಾರೆ. ತಪ್ಪಿತಸ್ಥರ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ, ಸಂಬಂಧಿಕರು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳದಲ್ಲಿ ಬಿಗುವಿನ ವಾತಾವರಣ
ಬೇಲೂರು-ಮೂಡಿಗೆರೆ ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆ ತಡೆಯಿಂದ ವಾಹನ ಸವಾರರು ಪರದಾಡುವಂತಾಗಿದೆ. ಪೊಲೀಸ್ ಠಾಣೆ ಎದುರು ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರತಿಭಟನಾನಿರತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಇದನ್ನೂ ಓದಿ: ಶಿವ.. ಶಿವ… ನಿನ್ನನ್ನೇ ಅಗೆದು ಪಕ್ಕಕ್ಕಿಟ್ಟರಲ್ಲ; ನಿಧಿಗಾಗಿ ಶೋಧಿಸಿ ಕೊನೆಗೆ ನಿಂಬೆ ಹಣ್ಣು ಇಟ್ಟು ಹೋದರಲ್ಲ!
ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲು ಮಾಡಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.