ಹುಬ್ಬಳ್ಳಿ: ಯೋಧನಾಗುವ ಆಸೆ ಹೊತ್ತು ಸಿದ್ಧತೆಗಳನ್ನು ನಡೆಸುತ್ತಿದ್ದ ಯುವಕನೊಬ್ಬ ನೀರುಪಾಲಾಗಿದ್ದಾನೆ. ತಾಲೂಕಿನ ಕಲಘಟಗಿ ಪಟ್ಟಣದ ಬೆಂಡಿಗೇರಿ ನಿವಾಸಿಯಾದ್ದ ಪವನ ನಾರಾಯಣಕರ (೧೯) ಎಂಬಾತನೇ ಮೃತ ಯುವಕ.
ಕಲಘಟಕಿಯ ಮಡಕಿಹೊನ್ನಳ್ಳಿ ಕೆರೆಯಲ್ಲಿ ಘಟನೆ ನಡೆದಿದೆ. ಕೆಲವು ತಿಂಗಳ ಹಿಂದೆ ಮಿಲಿಟರಿ ಪರೀಕ್ಷೆಗೆ ಹಾಜರಾಗಿ ಬಂದಿದ್ದ ಯುವಕ ಪವನ ನಾರಾಯಣಕರ ಬುಧವಾರ ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ತೆರಳಿದ್ದ. ಈ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಕುಟುಂಬದಲ್ಲಿ ಭರವಸೆ ಮೂಡಿಸಿದ್ದ, ಎಲ್ಲರ ಜತೆಗೂ ಉತ್ತಮ ಬಾಂಧವ್ಯ, ಗೆಳೆತನ ಹೊಂದಿದ್ದ ಪವನ್‌ನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಕುಟುಂಬಿಕರ ಆಕ್ರಂದನ ಮುಗಿಲುಮುಟ್ಟಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಆತನ ಶವವನ್ನು ಕೆರೆಯಿಂದ ಮೇಲೆತ್ತಿದ್ದಾರೆ. ಕಲಘಟಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸರಕು ಲಾರಿ ಬಡಿದು ಕಾರಿನ ಮೇಲೆ ಬಿದ್ದ ಲೈಟ್ ಕಂಬ; ಪ್ರಾಣಾಪಾಯದಿಂದ ಪಾರು
ಕಾರವಾರ: ಭಾರೀ ಗಾತ್ರದ ಸರಕು ಹೊತ್ತು ಸಾಗುತ್ತಿದ್ದ ಲಾರಿಯೊಂದು ತಿರುವು ತೆಗೆದುಕೊಳ್ಳುತ್ತಿದ್ದ ವೇಳೆ ಲೈಟ್ ಕಂಬ ತಾಗಿ ಕಾರಿನ ಮೇಲೆ ಬಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.
ನಗರದ ರಾಷ್ಟ್ರೀಯ ಹೆದ್ದಾರಿ 66ಕ್ಕೆ ನಿರ್ಮಿಸಲಾದ ಫ್ಲೈಓವರ್ ಮೇಲಿಂದ ಆಗಮಿಸುತ್ತಿದ್ದ ಲಾರಿ ಟನಲ್ ಬಳಿ ಬೈತಖೋಲದತ್ತ ತೆರಳಲು ಬಲಕ್ಕೆ ತಿರುವು ತೆಗೆದುಕೊಂಡಿದೆ. ಈ ವೇಳೆ ಫ್ಲೈಓವರ್ ಮೇಲಿದ್ದ ಲೈಟಿನ ಕಂಬಕ್ಕೆ ಲಾರಿಯ ಮೇಲಿದ್ದ ಸರಕು ಬಡಿದಿದ್ದು, ಪರಿಣಾಮ ಹೆದ್ದಾರಿಯ ಸರ್ವಿಸ್ ರಸ್ತೆ ಮೇಲೆ ಟನಲ್‌ನತ್ತ ಆಗಮಿಸುತ್ತಿದ್ದ ಕಾರಿನ ಮೇಲೆ ಲೈಟ್ ಕಂಬ ಮುರಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಕಾರಿನ ಚಾವಣಿ ಜಖಂ ಆಗಿದೆ. ಸ್ಥಳಕ್ಕೆ ಕಾರವಾರ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಲಾರಿ ಚಾಲಕನ ಅಜಾಕರೂಕತೆಯಿಂದಲೇ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : Women drowned : ಬಟ್ಟೆ ತೊಳೆಯಲು ಹೋದ ಅತ್ತೆ, ಸೊಸೆ ಕೆರೆ ಕಟ್ಟೆಯಲ್ಲಿ ನೀರಿನಲ್ಲಿ ಮುಳುಗಿ ದಾರುಣ ಸಾವು