ಉಳ್ಳಾಲ (ಮಂಗಳೂರು): ಎರಡು ವರ್ಷದ ಹಿಂದೆ ಭಾರಿ ಸದ್ದು ಮಾಡಿದ್ದ, ರೂಪದರ್ಶಿ ಪ್ರೇಕ್ಷಾ ಆತ್ಮಹತ್ಯೆ (Model preksha suicide) ಪ್ರಕರಣದಲ್ಲಿ ಆರೋಪಿಯಾಗಿ ಗುರುತಿಸಲ್ಪಟ್ಟಿದ್ದ ಯುವಕ ತಾನೂ ಸಾವಿಗೆ ಶರಣಾಗಿದ್ದಾನೆ (suicide case) ಕುತ್ತಾರುವಿನ ಮುಂಡೋಳಿ ನಿವಾಸಿ ಯತಿರಾಜ್ ಗಟ್ಟಿ(20) ಆತ್ಮ ಹತ್ಯೆಗೈದ ಯುವಕ.
ಎರಡು ವರುಷಗಳ ಹಿಂದೆ ಕುಂಪಲದ ಆಶ್ರಯ ಕಾಲನಿಯ ಮನೆಯಲ್ಲಿ ರೂಪದರ್ಶಿ ಪ್ರೇಕ್ಷಾ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಆಕೆಯ ಸಾವಿಗೆ ಪ್ರಚೋದನೆ ನೀಡಿದ ಆರೋಪವನ್ನು ಎದುರಿಸುತ್ತಿದ್ದ ಸುಮಾರು 20 ಹುಡುಗರಲ್ಲಿ ಪ್ರಮುಖನಾಗಿದ್ದವನು ಯತಿರಾಜ್ ಗಟ್ಟಿ.
ಯತಿರಾಜ್ ತನ್ನ ಮನೆಯ ಹಿಂದಿನ ಚಿಕ್ಕಮ್ಮನ ಮನೆಯ ಎದುರಿನ ಸಿಟ್ ಔಟ್‌ನ ಕಬ್ಬಿಣದ ಹುಕ್ಸ್ ಒಂದಕ್ಕೆ ನೇಣು ಬಿಗಿದು ಆತ್ಮ ಹತ್ಯೆಗೈದಿದ್ದಾನೆ. ಬುಧವಾರ ರಾತ್ರಿ 11ರ ವೇಳೆ ಮನೆಗೆ ಬಂದಿದ್ದ ಯತಿರಾಜ್ ಚಿಕ್ಕಮ್ಮ ಮನೆಯಲ್ಲಿರದ ವೇಳೆ ನೇಣು ಬಿಗಿದುಕೊಂಡಿದ್ದಾನೆ.
ಗುರುವಾರ ಬೆಳಗ್ಗೆ ಯತಿರಾಜ್‌ನ ಮಾವ ಹುಡುಕಾಡಿದಾಗ ಆತ್ಮಹತ್ಯೆಗೈದಿರುವುದು ಬೆಳಕಿಗೆ ಬಂದಿದೆ. ಕೂಡಲೇ ಮನೆಮಂದಿ ನೇಣು ಕುಣಿಕೆಯನ್ನು ಕತ್ತರಿಸಿದರೂ ಅದಾಗಲೇ ಯತಿರಾಜ್ ಮೃತಪಟ್ಟಿದ್ದ. ಸ್ಥಳಕ್ಕೆ ಬಂದ ಉಳ್ಳಾಲ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಎರಡು ವರ್ಷದ ಹಿಂದೆ ಪ್ರೇಕ್ಷಾ ಎಂಬ ಯುವತಿ ಆತ್ಮಹತ್ಯೆ ಮಾಡಿಕೊಂಡಾಗ ಆ ಪರಿಸರದ ಯುವಕರ ಮೇಲೆ ಸಂಶಯ ಹುಟ್ಟಿಕೊಂಡಿತ್ತು. ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಮಾಡೆಲಿಂಗ್‌ನಲ್ಲಿ ಹೆಸರು ಮಾಡಿದ್ದ ಆಕೆಯ ಸಾವಿಗೆ ಯವಕರ ತಂಡವೊಂದು ಕಾರಣ ಎಂದು ಆಪಾದಿಸಲಾಗಿತ್ತು. ಗಾಂಜಾ ಸೇರಿದಂತೆ ಡ್ರಗ್ಸ್ ಸೇವನೆ ಮಾಡುವ ಗ್ಯಾಂಗ್‌ನ ಸುಮಾರು 20ರಷ್ಟು ಯುವಕರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.
ಇದೀಗ ಯತಿರಾಜ್ ಗಟ್ಟಿ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಏನು ಕಾರಣ ಎನ್ನುವುದು ಸ್ಪಷ್ಟವಾಗಿಲ್ಲ.
ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಪತಿ ಸಾವು
ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಸಮೀಪದ ವಡ್ಡರಪಾಳ್ಯದಲ್ಲಿ ಪತಿ-ಪತ್ನಿಯ ನಡುವಿನ ಗಲಾಟೆ ದುರಂತ ಅಂತ್ಯ ಕಂಡಿದೆ. ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಪತಿ ಸಾವಿಗೀಡಾಗಿದ್ದು, ಇದೇ ವೇಳೆ ಪತ್ನಿಗೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ.
ಮಂಡ್ಯ ಮೂಲದ ಸಂತೋಷ್ ಮೃತ ವ್ಯಕ್ತಿ. ಪತ್ನಿ ಭಾನು ಗಾಯಾಳು. ಆಗಾಗ ಪತಿ-ಪತ್ನಿ ನಡುವೆ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದ್ದು, ಗುರುವಾರ ಇಬ್ಬರ ನಡುವೆ ಗಲಾಟೆ ತಾರಕಕ್ಕೇರಿದೆ. ಈ ಹಿಂದೆಯೇ ಪೆಟ್ರೋಲ್ ಖರೀದಿಸಿ ತಂದಿದ್ದ ಪತಿ ಸಂತೋಷ್, ತಾನು ಪೆಟ್ರೋಲ್ ಸುರಿದುಕೊಂಡು ಪತ್ನಿಗೂ ಸುರಿದು ಬೆಂಕಿ ಹಚ್ಚಿಕೊಂಡಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಂತೋಷ್ ಮೃತಪಟ್ಟಿದ್ದು, ಮಹಿಳೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ.
ಇದನ್ನೂ ಓದಿ : Road accident Case: ಅಪಘಾತ ಪ್ರಕರಣದಲ್ಲಿ ಕೋರ್ಟ್ ತೀರ್ಪೇ ಫೈನಲ್, ನ್ಯಾಯಮಂಡಳಿಯದ್ದಲ್ಲ