Site icon Vistara News

Haveri News: ಮೊಬೈಲ್ ಕದ್ದು ಓಡುತ್ತಿದ್ದವನ ಬೆನ್ನತ್ತಿ ಹಿಡಿದ ಯುವತಿ; ಕಳ್ಳನಿಗೆ ಬಿತ್ತು ಧರ್ಮದೇಟು

Mobile thief

ಹಾವೇರಿ: ಕರ್ನಾಟಕ ಬಂದ್ ಹಿನ್ನೆಲೆ ಊರಿಗೆ ತೆರುಳಲು ಬಸ್‌ಗಾಗಿ ಕಾಯುತ್ತಿದ್ದ ಯುವತಿಯ ಮೊಬೈಲ್ ಕದ್ದು ಓಡುತ್ತಿದ್ದ ಕಳ್ಳನನ್ನು ಹಿಡಿದು ಥಳಿಸಿರುವ ಘಟನೆ ನಗರದಲ್ಲಿ (Haveri News) ನಡೆದಿದೆ. ಮೊಬೈಲ್ ಕದ್ದು ಓಡುತ್ತಿದ್ದವನನ್ನು ಯುವತಿ ಬೆನ್ನತ್ತಿ ಹಿಡಿದಿದ್ದು, ಈ ವೇಳೆ ಸಾರ್ವಜನಿಕರು ಧಾವಿಸಿ ಕಳ್ಳನಿಗೆ ಧರ್ಮದೇಟು ನೀಡಿದ್ದಾರೆ.

ನಗರದ ಬಸ್ ನಿಲ್ದಾಣದಲ್ಲಿ ಗುರುವಾರ ರಾತ್ರಿ ಘಟನೆ ನಡೆದಿದೆ. ರಾಜು ಎಂಬಾತ ಮೊಬೈಲ್‌ ಕಳವು ಆರೋಪಿಯಾಗಿದ್ದಾನೆ. ಬಂದ್‌ ಹಿನ್ನೆಲೆ ಊರಿಗೆ ತೆರಳಲು ಯುವತಿ ಬಸ್‌ಗಾಗಿ ಕಾಯುತ್ತಿದ್ದಳು. ಈ ವೇಳೆ ಕಳ್ಳನೊಬ್ಬ ಆಕೆಯ ಮೊಬೈಲ್ ಕದ್ದು ಓಡುತ್ತಿದ್ದ. ಹೀಗಾಗಿ ಕಳ್ಳನನ್ನು ಬೆನ್ನತ್ತಿ ಯುವತಿ ಹಿಡಿದುಕೊಂಡಿದ್ದಾಳೆ. ಅಲ್ಲಿದ್ದ ಸಾರಿಗೆ ನೌಕರರು ಹಾಗೂ ಪ್ರಯಾಣಿಕರು ಯುವತಿಯ ನೆರವಿಗೆ ಧಾವಿಸಿ, ಕಳ್ಳನನ್ನು ಹಿಡಿದು ಥಳಿಸಿದ್ದಾರೆ. ನಂತರ ಖದೀಮನ ಕತ್ತುಪಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ.

ಮೊಬೈಲ್ ಕದ್ದು ಓಡುತ್ತಿದ್ದ ಕಳ್ಳನನ್ನು ಹಿಡಿದ ಯುವತಿಯ ಧೈರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಗರ ಪೋಲಿಸರು ಕಳ್ಳನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | Tumkur Blast : ಆಕಸ್ಮಿಕ ಸ್ಫೋಟ; ಮನೆ ಗೋಡೆ ಕುಸಿದು 6 ಮಂದಿ ಗಂಭೀರ

ಸರ್ಕಾರಿ ಆಸ್ಪತ್ರೆಯ ತಜ್ಞ ವೈದ್ಯೆ ನಿಗೂಢ ಸಾವು; ಪಕ್ಕದಲ್ಲೇ ಸಿರಿಂಜ್‌ ಪತ್ತೆ!

Kollegala doctor death

ಚಾಮರಾಜನಗರ: ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯ (Kollegala Government Hospital) ಅರಿವಳಿಕೆ ತಜ್ಞರಾಗಿರುವ (Anesthesia expert) ಜನಪ್ರಿಯ ವೈದ್ಯೆ ಡಾ. ಸಿಂಧುಜಾ- Dr Sindhuja (28) ನಿಗೂಢ ರೀತಿಯಲ್ಲಿ ಮೃತಪಟ್ಟಿದ್ದಾರೆ. ಅವರ ಸಾವಿನ ಬಗ್ಗೆ ಹಲವು ಅನುಮಾನಗಳು ಮೂಡಿವೆ.

ಚೆನ್ನೈ ಮೂಲದವರಾಗಿರುವ ಸಿಂಧುಜಾ ಅವರು ಕಳೆದ ಕೆಲವು ವರ್ಷಗಳಿಂದ ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೆಲವು ವರ್ಷದ ಹಿಂದಷ್ಟೇ ತನ್ನ ವೈದ್ಯಕೀಯ ವಿದ್ಯಾಭ್ಯಾಸವನ್ನು ಮುಗಿಸಿ ಸರ್ಕಾರಿ ಉದ್ಯೋಗ ಪಡೆದಿರುವ ಅವರು ಕೊಳ್ಳೆಗಾಲ ಪಟ್ಟಣದಲ್ಲಿ ಮನೆಯೊಂದರಲ್ಲಿ ಬಾಡಿಗೆಗೆ ಇದ್ದರು.

ಜನರೊಂದಿಗೆ ಉತ್ತಮ ರೀತಿಯಲ್ಲಿ ಬೆರೆಯುತ್ತಿದ್ದ ಅವರು ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುತ್ತಿದ್ದರು. ಶುಕ್ರವಾರ ಕರ್ನಾಟಕ ಬಂದ್‌ ಆಗಿದ್ದರೂ ಆಸ್ಪತ್ರೆಗೆ ಬರಬೇಕಾಗಿತ್ತು. ಆಸ್ಪತ್ರೆ ಸೇವೆಗಳಿಗೆ ರಜೆ ಇರಲಿಲ್ಲ. ಆದರೆ, ಸಮಯ ಕಳೆದರೂ ಬಾರದೆ ಇದ್ದಾಗ ಆಸ್ಪತ್ರೆ ಸಿಬ್ಬಂದಿ ಫೋನ್‌ ಮಾಡಿದ್ದಾರೆ.

ಆದರೆ, ಫೋನ್‌ ಎತ್ತದೆ ಇದ್ದಾಗ ಆಸ್ಪತ್ರೆಯ ಸಿಬ್ಬಂದಿ ಮನೆಗೆ ಹೋಗಿ ನೋಡಿದ್ದಾರೆ. ಮನೆಯ ಕಿಟಕಿ ಮೂಲಕ ಗಮನಿಸಿದಾಗ ಆಕೆ ನೆಲದಲ್ಲಿ ಮಲಗಿರುವುದು ಕಂಡುಬಂತು. ಕೂಡಲೇ ಪೊಲೀಸರಿಗೆ ತಿಳಿಸಿ ಒಳಗೆ ಪ್ರವೇಶಿಸಿ ನೋಡಿದಾಗ ಅವರು ಮೃತಪಟ್ಟಿರುವುದು ಕಂಡುಬಂತು.

ಇದನ್ನೂ ಓದಿ | Physical Abuse : ಬಲೆಗೆ ಬಿದ್ದ ವಿವಾಹಿತೆಯ ನಗ್ನ ಫೋಟೊ ಕ್ಲಿಕ್ಕಿಸಿದ; ಹಣಕ್ಕಾಗಿ ಪೀಡಿಸಿದ

ನೆಲಕ್ಕೆ ಮುಖ ಮಾಡಿ ಬಿದ್ದುಕೊಂಡಂತಿರುವ ಸಿಂಧುಜ ಅವರ ಸಾವಿಗೆ ಏನು ಕಾರಣ ಎಂಬ ಬಗ್ಗೆ ಸದ್ಯಕ್ಕೆ ತಿಳಿದುಬಂದಿಲ್ಲ. ಅವರ ದೇಹದ ಪಕ್ಕದಲ್ಲಿ ಒಂದು ಸಿರಿಂಜ್‌ ಕಂಡುಬಂದಿದೆ.

ಸಿಂಧುಜ ಅವರು ಸ್ವಲ್ಪ ಸ್ಥೂಲ ಕಾಯ ಹೊಂದಿದ್ದಾರೆ. ಹೀಗಾಗಿ ಹೃದಯಾಘಾತದ ಸಮಸ್ಯೆ ಏನಾದರೂ ಕಾಡಿರಬಹುದಾ ಎಂಬ ಸಂಶಯವಿದೆ. ಆಕೆ ಮಲಗಿಕೊಂಡಿರುವ ಸ್ಥಿತಿ ನೋಡಿದರೆ ತುಂಬಾ ಯಾತನೆಯಿಂದ ಎದೆ ಹಿಡಿದುಕೊಂಡು ಬಿದ್ದಂತೆ ಕಾಣುತ್ತಿದೆ. ನೋವನ್ನು ತಡೆಯಲಾಗದೆ ಎದೆ ಹಿಡಿದುಕೊಂಡು ಕವುಚಿ ಮಲಗಿದಂತೆ ಅವರ ದೇಹ ಸ್ಥಿತಿ ಕಂಡುಬಂದಿದೆ.

ಆದರೆ, ಪಕ್ಕದಲ್ಲಿ ಸಿರಂಜ್‌ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅವರು ನೋವನ್ನು ತಡೆದುಕೊಳ್ಳಲು ಸಾಧ್ಯವಾಗದೆ ನೋವಿನ ಇಂಜೆಕ್ಷನ್‌ ಏನಾದರೂ ತೆಗೆದುಕೊಂಡಿರಬಹುದಾ ಎನ್ನುವ ಸಂಶಯವೂ ಅದರಲ್ಲೊಂದು.

ಅದರ ಜತೆಗೆ ಸಿರಂಜ್‌ ಮೂಲಕ ಯಾವ ಔಷಧ ತೆಗೆದುಕೊಂಡರು. ಔಷಧ ಬಿಟ್ಟು ಬೇರೇನಾದರೂ ತೆಗೆದುಕೊಂಡರಾ? ವಿಷ ಚುಚ್ಚಿಕೊಂಡರಾ? ಡ್ರಗ್ಸ್‌ ಸೇವನೆಯ ಸಮಸ್ಯೆ ಇದೆಯಾ ಎಂಬೆಲ್ಲ ಸಂಶಯಗಳು ಕಾಡಿವೆ. ಕೊಳ್ಳೇಗಾಲ ಪೊಲೀಸರು ಸಿರಂಜ್‌ ಸೇರಿದಂತೆ ಎಲ್ಲಾ ವಸ್ತುಗಳನ್ನು ತೆಗೆದುಕೊಂಡು ತಪಾಸಣೆಗೆ ಕಳುಹಿಸಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ: Animal Love : ಗಾಯದಿಂದ ನಡೆಯಲಾಗದೆ ಕಣ್ಣೀರು ಹಾಕುತ್ತಿದ್ದ ಆನೆಗೆ ಚಪ್ಪಲಿ ಹೊಲಿದ ಡಾಕ್ಟರ್‌; ಯಾರೀ ದೇವತಾ ಮನುಷ್ಯ?

ಸಿಂಧುಜ ಅವರು ಅವಿವಾಹಿತೆ ಎಂದು ತಿಳಿದುಬಂದಿದ್ದು, ಹೆತ್ತವರು ಬಂದು ಹೋಗುತ್ತಿದ್ದರು ಎನ್ನಲಾಗಿದೆ. ಇದೀಗ ಅವರ ಹೆತ್ತವರಿಗೆ ಮಾಹಿತಿ ನೀಡಲಾಗಿದೆ. ಅವರು ಆಗಮಿಸಿದ ಬಳಿಕ ಶವವನ್ನು ಬಿಟ್ಟುಕೊಡುವ ಸಾಧ್ಯತೆ ಇದೆ.

ಅಂತೂ ಜನಾನುರಾಗಿಯಾಗಿದ್ದ, ಸಹಾಯ ಮಾಡುತ್ತಿದ್ದ, ಯಾವುದೇ ಕೆಟ್ಟ ಅಭ್ಯಾಸಗಳು ಮೇಲ್ನೋಟಕ್ಕೆ ಇಲ್ಲದಿದ್ದ ಡಾಕ್ಟರ್‌ಗೆ ಒಮ್ಮಿಂದೊಮ್ಮೆಗೆ ಏನಾಯಿತು ಎಂದು ಕೊಳ್ಳೇಗಾಲದ ಜನರು ಮಾತನಾಡುತ್ತಿದ್ದಾರೆ. ಇದು ಹೃದಯಾಘಾತ ಎನ್ನುವುದು ಹೆಚ್ಚಿನವರ ಅಭಿಮತ. ಪೊಲೀಸರು ಮತ್ತು ವೈದ್ಯರು ಮುಂದಿನ ವಿಚಾರಗಳನ್ನು ಗಮನಿಸಿ ತನಿಖೆ ನಡೆಸಬೇಕಾಗಿದೆ.

Exit mobile version