ಮೈಸೂರು/ಮಂಗಳೂರು: ರಾಜ್ಯದ ಪ್ರತ್ಯೇಕ ಕಡೆಗಳಲ್ಲಿ ಆತ್ಮಹತ್ಯೆ ಕೇಸ್‌ಗಳು ದಾಖಲಾಗಿವೆ. ಮಂಗಳೂರು ಹೊರವಲಯದ ಕುಂಪಲ ಚಿತ್ರಾಂಜಲಿ ನಗರದಲ್ಲಿ ಡೆತ್‌ನೋಟ್ ಬರೆದಿಟ್ಟು ಯುವತಿ ನೇಣಿಗೆ ಕೊರಳೊಡ್ಡಿದ್ದಾಳೆ. ಕುಂಪಲ ಚಿತ್ರಾಂಜಲಿ ನಗರದ ನಿವಾಸಿ ಅಶ್ವಿನಿ ಬಂಗೇರ (25) ಮೃತ ದುರ್ದೈವಿ.
ಇತ್ತೀಚೆಗಷ್ಟೇ ಹೊಸ ಮನೆ ಖರೀದಿಸಿ ಗೃಹ ಪ್ರವೇಶ ಮಾಡಿದ್ದ ಅಶ್ವಿನಿ, ಅದೇ ಮನೆಯ ಕೋಣೆಯೊಳಗೆ ನೇಣು ಬಿಗಿದುಕೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅಶ್ವಿನಿ ಬರೆದಿರುವ 24 ಪುಟಗಳ ಡೆತ್‌ನೋಟ್ ದೊರೆತಿದೆ.
ಡೆತ್‌ನೋಟ್‌ನಲ್ಲಿ ಮನೆ ಖರೀದಿಸಿ ಮೋಸ ಹೋಗಿದ್ದು, ಬ್ಯಾಂಕ್ ಅಧಿಕಾರಿಗಳು ಬಂದು ಪೀಡಿಸುತ್ತಿರುವ ಬಗ್ಗೆ ಅಶ್ವಿನಿ ಉಲ್ಲೇಖಿಸಿದ್ದಾರೆ. ವಿದೇಶದಲ್ಲಿ ಉದ್ಯೋಗ ಮಾಡುತ್ತಿದ್ದ ಅಶ್ವಿನಿ ಒಂದೂವರೆ ತಿಂಗಳ ಹಿಂದಷ್ಟೇ ಊರಿಗೆ ಬಂದಿದ್ದಳು. ಕುಂಪಲದಲ್ಲಿ ಸಂಗೀತ ಎಂಬವರಿಂದ ಅಶ್ವಿನಿ ಮನೆಯೊಂದನ್ನು ಖರೀದಿಸಿದ್ದರು. ಕಳೆದ ಜೂ.3 ರಂದು ಗೃಹ ಪ್ರವೇಶ ಮಾಡಿ ತಾಯಿ ದೇವಕಿ, ದೊಡ್ಡಮ್ಮನ ಇಬ್ಬರು ಗಂಡು ಮಕ್ಕಳೊಂದಿಗೆ ನೆಲೆಸಿದ್ದರು. ಸದ್ಯ ಮೃತದೇಹವನ್ನು ಉಳ್ಳಾಲ ಪೊಲೀಸರು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಸ್ಟೆಲ್‌ನಲ್ಲಿ ಸೈನ್ಸ್ ಸ್ಟೂಡೆಂಟ್ ಸೂಸೈಡ್
ಮೈಸೂರಿನ ಶ್ರೀರಾಂಪುರದ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ನೇಣಿಗೆ ಶರಣಾಗಿದ್ದಾಳೆ. ತಮಿಳುನಾಡಿನ ನೀಲಗಿರಿ ಮೂಲದ ಜಿಷ್ಣ ಮೃತ ದುರ್ದೈವಿ. ಕಾಲೇಜು ಹಾಸ್ಟೆಲ್‌ನ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾಳೆ.
ಕಂಪ್ಯೂಟರ್ ಸೈನ್ಸ್ ವ್ಯಾಸಂಗ ಮಾಡುತ್ತಿದ್ದ ಜಿಷ್ಣ, ಸೆಮಿಸ್ಟರ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಮೈಸೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ: Contaminated Water: ಕೊಪ್ಪಳದಲ್ಲಿ ವಾಂತಿ, ಭೇದಿಗೆ ಬಾಲಕಿ ಬಲಿ: ಸಾವಿನ ಸಂಖ್ಯೆ ಮೂರಕ್ಕೇರಿಕೆ, ಹೆಚ್ಚಿದ ಆತಂಕ
ಹಾಸ್ಟೆಲ್‌ನಲ್ಲಿ ಶಾಲಾ ವಿದ್ಯಾರ್ಥಿನಿ ಅನುಮಾನಸ್ಪಾದ ಸಾವು
ಶಿವಮೊಗ್ಗದ ಸಾಗರ ಪಟ್ಟಣದಲ್ಲಿರುವ ವಿದ್ಯಾರ್ಥಿನಿ ಅನುಮಾನಸ್ಪಾದವಾಗಿ ಮೃತಪಟ್ಟಿದ್ದಾಳೆ. ಸಾಗರದ ವನಶ್ರೀ ಖಾಸಗಿ ಶಾಲೆಯ ವಿದ್ಯಾರ್ಥಿನಿ ತೇಜಸ್ವಿನಿ (13) ಮೃತ ದುರ್ದೈವಿ. ಸಾಗರದ ಸರಕಾರಿ ಆಸ್ಪತ್ರೆಯಲ್ಲಿ ವಿದ್ಯಾರ್ಥಿನಿ ಪರೀಕ್ಷಿಸಿದ ವೈದ್ಯರು ಮೃತಪಟ್ಟ ಬಗ್ಗೆ ದೃಢೀಕರಿಸಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸುವ ಸಾಧ್ಯತೆ ಇದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ