Site icon Vistara News

Fire Danger | ಗಣೇಶ ಮೂರ್ತಿ ಮೆರವಣಿಗೆ ವೇಳೆ ಬಾಯಿಯಿಂದ ಬೆಂಕಿ ಉಗುಳಲು ಹೋಗಿ ಯುವಕನ ಅವಾಂತರ

turuvekere benki

ತುಮಕೂರು: ಬೆಂಕಿಯೊಂದಿಗೆ ಸರಸ ಆಡಬೇಡಿ ಎಂದು ಆಗಾಗ ಹೇಳಲಾಗುತ್ತದೆ. ಆದರೆ, ಸಾಹಸದ ಹೆಸರಿನಲ್ಲಿ ಯುವಕರು ದುಸ್ಸಾಹಸಕ್ಕೆ ಇಳಿಯುವುದು ಮುಂದುವರಿಯುತ್ತಲೇ ಇದೆ.

ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ದಂಡಿನಶಿವರದಲ್ಲಿ ಗಣಪತಿ ವಿಸರ್ಜನೆ ವೇಳೆ ಬಾಯಿಯಿಂದ ಬೆಂಕಿ ಉಗುಳಲು ಹೋಗಿ ಯುವಕನೊಬ್ಬ ಗಂಭೀರ ಗಾಯಗೊಂಡಿದ್ದಾನೆ.

ಮೆರವಣಿಗೆ ವೇಳೆ ಹೀಗೆ ಬೆಂಕಿಯಾಟ ಆಡುವುದು ಸಾಮಾನ್ಯ. ಆದರೆ, ಅದಕ್ಕೆ ಸಾಕಷ್ಟು ಪೂರ್ವ ಸಿದ್ಧತೆ, ತಾಲೀಮು ಬೇಕಾಗುತ್ತದೆ. ಈ ಯುವಕ ಬೆಂಕಿಯ ಪಂಜಿಗೆ ಪೆಟ್ರೋಲ್‌ ಉಗುಳುವ ವೇಳೆ ಅವಾಂತರ ಮಾಡಿಕೊಂಡಿದ್ದಾನೆ. ಬಾಯಿಯಿಂದ ಪೆಟ್ರೋಲ್‌ ಉಗುಳಿದಾಗ ಅದು ಬೆಂಕಿಗೆ ತಗುಲಿ ಮತ್ತೆ ಮುಖಕ್ಕೆ ಬಂದು ಬಡಿದಿದೆ. ಯುವಕನ ಮುಖ ಮತ್ತು ಎದೆಗೆ ಬೆಂಕಿ ತಗುಲಿದೆ.

ಬೆಂಕಿ ಹೊತ್ತಿಕೊಳುತಿದ್ದಂತೆ ಸ್ಥಳೀಯರು ಧಾವಿಸಿದರು. ಯುವಕ ಕೂಡಾ ಕೂಡಲೇ ಪಂಜು ಎಸೆದಿದ್ದಾನೆ. ಅದೃಷ್ಟವಶಾತ್‌ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಗ್ರಾಮದ ಗಣಪತಿ ವಿಸರ್ಜನೆ ಮೆರವಣಿಗೆಗೆ ಕೀಲು ಕುದುರೆ, ಡೊಳ್ಳು ಕುಣಿತದ ತಂಡವನ್ನು ಕರೆಸಲಾಗಿತ್ತು. ಯುವಕ ಕೀಲು ಕುದುರೆ ತಂಡದೊಂದಿಗೆ ಬಂದಿದ್ದ. ದಂಡಿನಶಿವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Exit mobile version