ಬೆಳಗಾವಿ: ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಯುವಕರ ಎರಡು ಗುಂಪುಗಳ ಮಧ್ಯೆ ಆರಂಭವಾದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯಗೊಂಡಿದೆ. ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಮುಗಳಿಹಾಳ ಗ್ರಾಮದಲ್ಲಿ ಘಟನೆ ನಡೆದಿದ್ದು, ಅದೇ ಗ್ರಾಮದ ಅರ್ಜುನಗೌಡ ಪಾಟೀಲ (20) ಕೊಲೆಯಾಗಿದ್ದಾನೆ. ಈಗ ಪದವಿ ಓದುತ್ತಿರುವ ವಿದ್ಯಾರ್ಥಿಯಾಗಿದ್ದಾನೆ. ಕೊಲೆಗಾರರು ಕೂಡಾ ಕಾಲೇಜು ವಿದ್ಯಾರ್ಥಿಗಳೇ ಆಗಿದ್ದು, ಅವರನ್ನು ಬಂಧಿಸಲಾಗಿದೆ.
ಮುಗಳಿಹಾಳ ಗ್ರಾಮದಲ್ಲಿ ೧೧ ದಿನಗಳ ಗಣೇಶೋತ್ಸವ ಮುಗಿಸಿ ಶನಿವಾರ ಸಂಜೆ ವಿಸರ್ಜನಾ ಮೆರವಣಿಗೆ ಆರಂಭಗೊಂಡಿದೆ. ಎಲ್ಲವೂ ಸಾಂಗವಾಗಿ ಮುಗಿಯಿತು ಎನ್ನುವಷ್ಟರಲ್ಲಿ ವಿಸರ್ಜನೆಯ ಹೊತ್ತಿನಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ಆರಂಭಗೊಂಡಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಅರ್ಜುನ ಗೌಡ ಪಾಟೀಲ್‌ಗೆ ಚೂರಿಯಿಂದ ಇರಿಯಲಾಗಿದೆ. ಹಂತಕರು ನೇರವಾಗಿ ಎದೆಗೇ ಚೂರಿಯಿಂದ ಇರಿದಿದ್ದಾರೆ.
ಚಾಕು ಇರಿತಕ್ಕೆ ಒಳಗಾದ ಅರ್ಜುನ ಗೌಡ ಪಾಟೀಲ ಅಲ್ಲೇ ಕುಸಿದು ಬಿದ್ದಿದ್ದಾನೆ. ಅಷ್ಟು ಹೊತ್ತಿಗೆ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಅರ್ಜುನ ಗೌಡ ಪಾಟೀಲ್ ಶವವನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಎರಡೇ ಗಂಟೆಯಲ್ಲಿ ಆರೋಪಿಗಳ ಸೆರೆ
ಘಟನೆ ನಡೆದ ಕೂಡಲೇ ಸ್ಥಳಕ್ಕೆ ಧಾವಿಸಿದ ಯರಗಟ್ಟಿ ಪೊಲೀಸರು ಸ್ಥಳೀಯರಿಂದ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಿದರು. ಕೇವಲ ಎರಡು ಗಂಟೆಯಲ್ಲಿ ಒಬ್ಬ ಬಾಲಾಪರಾಧಿ ಸೇರಿದಂತೆ ನಾಲ್ವರನ್ನು ಬಂಧಿಸಿದರು. ಉದಯ ಭಂಡ್ರೊಲ್ಲಿ (21), ಸುಭಾಷ ಸೋಲಣ್ಣವರ (21) ವಿಠ್ಠಲ ಮೀಶಿ (20) ಬಂಧಿತರು. ಇವರೆಲ್ಲರೂ ಕಾಲೇಜು ವಿದ್ಯಾರ್ಥಿಗಳು.
ವೈಷಮ್ಯವೇ ಘಟನೆಗೆ ಕಾರಣ ಎಂಬ ಮಾಹಿತಿ
ಯುವಕರ ವೈಯಕ್ತಿಕ ದ್ವೇಷವೇ ಕೊಲೆಗೆ ಕಾರಣ ಎಂದು ಪೊಲೀಸರ ಪ್ರಾಥಮಿಕ ವಿಚಾರಣೆ ವೇಳೆ ತಿಳಿದುಬಂದಿದೆ. ಗಣಪತಿ ವಿಸರ್ಜನೆ ವೇಳೆ ಪರಸ್ಪರ ಎದುರಾಗಿ ಮಾತಿಗೆ ಮಾತು ಬೆಳೆದು ಹಲ್ಲೆ ಮಾಡಲಾಗಿದೆ. ಮೆರವಣಿಗೆಗೆ ಬರುವಾಗ ಚಾಕು ತಂದಿರುವುದು ನೋಡಿದರೆ ಕೊಲೆ ಮಾಡುವ ಉದ್ದೇಶವೇ ಇತ್ತು ಎನ್ನುವುದು ಸ್ಪಷ್ಟವಾಗುತ್ತದೆ.
ಒಂದು ಮಾಹಿತಿ ಪ್ರಕಾರ, ಇದು ಹುಡುಗಿಯ ವಿಚಾರಕ್ಕೆ ಸಂಬಂಧಿಸಿ ನಡೆದ ದ್ವೇಷದ ಕೃತ್ಯ ಎಂದು ಹೇಳಲಾಗಿದೆ. ಆದರೆ, ಸ್ಪಷ್ಟತೆ ಇಲ್ಲ. ಕಾಲೇಜು ವಿದ್ಯಾರ್ಥಿಯಾಗಿರುವ ಹಿನ್ನೆಲೆಯಲ್ಲಿ ಈ ಸಾಧ್ಯತೆ ಕಡೆಗೆ ಹೆಚ್ಚು ಬೊಟ್ಟು ಮಾಡಲಾಗುತ್ತಿದೆ. ಇದು ಸ್ಥಳೀಯರೇ ಮಾಡಿರುವ ಕೃತ್ಯ ಎನ್ನಲಾಗುತ್ತಿದ್ದು, ಸ್ಥಳೀಯರ ಮಾಹಿತಿ ಪಡೆದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ | ಹೊಸಪೇಟೆ | ಬೃಹತ್ ಗಣಪತಿ ಮೂರ್ತಿ ಸಹಿತ ಕ್ರೇನ್ ಪಲ್ಟಿ: ಅಡಿಗೆ ಸಿಲುಕಿ ಒಬ್ಬ ಮೃತ್ಯು, ಇನ್ನೊಬ್ಬ ಗಂಭೀರ