ಬೆಂಗಳೂರು: ಡಾ. ಆರ್.ಬಾಲಸುಬ್ರಹ್ಮಣ್ಯ ಸಮಿತಿಯು ಇಂದು ಕರಡು ಯುವ ನೀತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲಿಸಿತು.
ಈ ಸಂದರ್ಭ ಮುಖ್ಯಮಂತ್ರಿಯವರು ಮಾತನಾಡಿ, ದೇಶದ ಶೇ. 46ರಷ್ಟು ಜನಸಂಖ್ಯೆ ಯುವಕರಾಗಿದ್ದು, ಇವರನ್ನು ದೇಶ ಕಟ್ಟುವ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕಾಗಿದೆ. ಆರ್ಥಿಕ ಅಭಿವೃದ್ಧಿಯ ಮೂಲಕ ಯುವ ಸಬಲೀಕರಣವಾಗಬೇಕಾಗಿದೆ. ಜೊತೆಗೆ ಉತ್ತಮ ವ್ಯಕ್ತಿತ್ವ ನಿರ್ಮಾಣವೂ ಆಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಆಯವ್ಯಯದಲ್ಲಿ ಯುವ ಬಜೆಟ್ ಅನ್ನು ರೂಪಿಸಲಾಗುವುದು ಎಂದು ತಿಳಿಸಿದರು. ಯುವ ನೀತಿಯ ಕರಡನ್ನು ಕೂಡಲೇ ಸಚಿವ ಸಂಪುಟದ ಮುಂದಿರಿಸಿ ಅನುಮೋದನೆ ಪಡೆದುಕೊಂಡು ನೀತಿಯನ್ನು ಜಾರಿಗೊಳಿಸಲಾಗುವುದು ಎಂದರು.
ಈ ಕರಡು ಯುವ ನೀತಿಯ ಮುಖ್ಯಾಂಶಗಳನ್ನು ಉಲ್ಲೇಖಿಸಿದ ಡಾ. ಬಾಲಸುಬ್ರಹ್ಮಣ್ಯ ಅವರು ಯುವ ನೀತಿಯು ಯುವ ಕೇಂದ್ರಿತವಾಗಿದ್ದು, ನೀತಿಯ ಅನುಷ್ಠಾನಕ್ಕೆ ಕಾರ್ಯತಂತ್ರ, ಮೇಲ್ವಿಚಾರಣೆ ಹಾಗೂ ಮೌಲ್ಯಮಾಪನದ ಅಂಶಗಳನ್ನೂ ಒಳಗೊಂಡಿದೆ. ಸುಸ್ಥಿರ ಅಭಿವೃದ್ಧಿ ಗುರಿಯೊಂದಿಗೂ ಸಂಯೋಜನೆ ಮಾಡಲಾಗಿದೆ ಎಂದು ವಿವರಿಸಿದರು.
ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ
ಆಯವ್ಯಯದಲ್ಲಿ ಯುವಕರು ಸ್ವ ಉದ್ಯೋಗ ಕೈಗೊಳ್ಳಲು ರೂಪಿಸಿರುವ ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆಯಡಿ ಯುವಕರ ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯ ಒದಗಿಸಲು ಆಂಕರ್ ಬ್ಯಾಂಕ್ ಆಗಿ ನೇಮಕಗೊಂಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಜೊತೆಗೆ ಈ ಸಂದರ್ಭದಲ್ಲಿ ಒಪ್ಪಂದಕ್ಕೆ ಸಹಿ ಮಾಡಲಾಯಿತು.
ಇದನ್ನೂ ಓದಿ: ಈ ಬಾರಿ ಸಾಂಪ್ರದಾಯಿಕ, ಅದ್ಧೂರಿ ದಸರಾ; ಸಿಎಂ ಬಸವರಾಜ ಬೊಮ್ಮಾಯಿ
ರಾಜ್ಯದ ಪ್ರತಿ ಗ್ರಾಮದಲ್ಲಿ ಯುವ ಸ್ವಸಹಾಯ ಸಂಘಗಳನ್ನು ರಚಿಸಿ, ಸ್ವ ಉದ್ಯೋಗ ಕೈಗೊಳ್ಳಲು ತರಬೇತಿ, ಬೀಜಧನ ಹಾಗೂ ಮಾರುಕಟ್ಟೆ ಅವಕಾಶ ಕಲ್ಪಿಸುವ ಮೂಲಕ ಯುವಕರ ಆರ್ಥಿಕ ಸಬಲೀಕರಣ ಸಾಧಿಸುವ ಗುರಿಯೊಂದಿಗೆ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ.
ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣ ಗೌಡ, ಸಚಿವರಾದ ವಿ.ಸೋಮಣ್ಣ, ಡಾ. ಅಶ್ವಥ್ ನಾರಾಯಣ, ಶಿವರಾಮ ಹೆಬ್ಬಾರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಮುಖ್ಯಮಂತ್ರಿಯವರ ಕಾರ್ಯದರ್ಶಿ ಎಂ.ಎಸ್. ಶ್ರೀಕರ್ ಹಾಗೂ ಜಯರಾಮ್ ರಾಯಪುರ ಮತ್ತಿತರರಿದ್ದರು.
ಇದನ್ನೂ ಓದಿ: ಕರ್ನಾಟಕದ ಆರ್ಥಿಕತೆಯನ್ನು 1 ಲಕ್ಷ ಕೋಟಿ ಡಾಲರ್‌ಗೆ ಹೆಚ್ಚಿಸುವ ಗುರಿ: ಸಿಎಂ ಬೊಮ್ಮಾಯಿ