Site icon Vistara News

ಶಿಕಾರಿಪುರದಲ್ಲಿ ಯುವಕನಿಗೆ ಚಾಕು ಇರಿತ; ವ್ಹೀಲಿಂಗ್‌ ಮಾಡಬೇಡಿ ಎಂದಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ

Sushil

ಶಿವಮೊಗ್ಗ: ಬೈಕ್ ವ್ಹೀಲಿಂಗ್ ಮಾಡಬೇಡಿ ಎಂದು ಬುದ್ಧಿವಾದ ಹೇಳಿದ್ದಕ್ಕೆ ಯುವಕನೊಬ್ಬನಿಗೆ ಅನ್ಯಕೋಮಿನ ಯುವಕರು ಚಾಕು ಇರಿದಿರುವ ಘಟನೆ (Stabbing Case) ಜಿಲ್ಲೆಯ ಶಿಕಾರಿಪುರ ಪಟ್ಟಣದಲ್ಲಿ ನಡೆದಿದೆ.

ಕುಮದ್ವತಿ ಕಾಲೇಜಿನ ಶಿಕ್ಷಕ ಸುಶೀಲ್ (23) ಹಲ್ಲೆಗೊಳಗಾದವರು. ಶಿಕಾರಿಪುರ ಪಟ್ಟಣದ ದೊಡ್ಡಪೇಟೆ ಮುಖ್ಯರಸ್ತೆಯ ವಿಠ್ಠಲ ದೇವಸ್ಥಾನದ ಬಳಿ ಅನ್ಯ ಕೋಮಿನ ಯುವಕ ಬೈಕ್ ವ್ಹೀಲಿಂಗ್ ಮಾಡುತ್ತಿದ್ದಾಗ, ವ್ಹೀಲಿಂಗ್‌ ಮಾಡಬೇಡಿ ಎಂದು ಬುದ್ಧಿವಾದ ಹೇಳಿದ್ದಕ್ಕೆ ಸುಶೀಲ್‌ಗೆ ಚಾಕು ಇರಿಯಲಾಗಿದೆ.

ಕಳೆದ ಕೆಲ ತಿಂಗಳಿನಿಂದ ಯುವಕರು ನಿರಂತರವಾಗಿ ಬೈಕ್ ವ್ಹೀಲಿಂಗ್ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದರು. ಮಂಗಳವಾರ ರಾತ್ರಿ ಮತ್ತೆ ವೀಲಿಂಗ್ ಮಾಡುತ್ತಿದ್ದಾಗ ಯುವಕನೊಬ್ಬನಿಗೆ ಸುಶೀಲ್ ಬುದ್ಧಿವಾದ ಹೇಳಿದ್ದಾನೆ. ಈ ಸಂದರ್ಭದಲ್ಲಿ ಆ ಯುವಕ, ಸುಶೀಲ್‌ಗೆ ಆವಾಜ್ ಹಾಕಿ ಅಲ್ಲಿಂದ ತೆರಳಿದ್ದಾನೆ.

ಇದನ್ನೂ ಓದಿ | Self Harming : ಹಾಸನದಲ್ಲಿ ನೇಣು ಬಿಗಿದುಕೊಂಡು ದ್ವಿತೀಯ ದರ್ಜೆ ಸಹಾಯಕ ಆತ್ಮಹತ್ಯೆ

ನಂತರ ತನ್ನ ಸ್ನೇಹಿತರೊಂದಿಗೆ ಸ್ಥಳಕ್ಕೆ ಆಗಮಿಸಿದ ಯುವಕ, ಸುಶೀಲ್‌ಗೆ ಚಾಕು ಇರಿದಿದ್ದಾನೆ. ಬಳಿಕ ಹೊಟ್ಟೆ ಹಾಗೂ ಎದೆ ಭಾಗಕ್ಕೆ ಚಾಕುವಿನಿಂದ ಚುಚ್ಚಿ ದುಷ್ಕರ್ಮಿಗಳ ತಂಡ ಪರಾರಿಯಾಗಿದೆ. ಗಾಯಾಳುವಿಗೆ ಶಿಕಾರಿಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಶಿಕಾರಿಪುರ ಡಿಎಸ್ಪಿ ಕೇಶವ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಸುಶೀಲ್ ಮೇಲೆ ನಡೆದ ಹಲ್ಲೆಗೆ ಹಿಂದು ಜಾಗರಣ ವೇದಿಕೆಯ ಮುಖಂಡ ದೇವರಾಜ್ ಅರಳಿಹಳ್ಳಿ ಖಂಡಿಸಿದ್ದು, ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ. ಆಸ್ಪತ್ರೆಗೆ ಶಿವಮೊಗ್ಗ ಡಿವೈಎಸ್ಪಿ ಸುರೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಆಸ್ಪತ್ರೆ ಮುಂದೆ ನೂರಾರು ಜನ ಜಮಾಯಿಸಿದ್ದರಿಂದ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.

ಅರೋಪಿಗಳ ಬಂಧನಕ್ಕೆ ಮೂರು ತಂಡ ರಚನೆ

ಎಸ್‌ಪಿ ಜಿ.ಕೆ. ಮಿಥುನ್ ಕುಮಾರ್ ಅವರು ಪ್ರತಿಕ್ರಿಯಿಸಿ, ದ್ವಿಚಕ್ರ ವಾಹನವನ್ನು ರ‍್ಯಾಷ್ ಆಗಿ ಓಡಿಸುತ್ತಿದ್ದನ್ನು ಪ್ರಶ್ನಿಸಿದ ಕಾರಣಕ್ಕೆ ಯುವಕನಿಗೆ ಚಾಕು ಇರಿಯಲಾಗಿದೆ. ಕುಮದ್ವತಿ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ಸುಶೀಲ್‌ಗೆ ನಾಲ್ವರು ನಾಲ್ವರು ದುಷ್ಕರ್ಮಿಗಳು ಚಾಕು ಇರಿದಿದ್ದಾರೆ.

ಇದನ್ನೂ ಓದಿ | Kyasanur Forest Disease: ಮಂಗನ ಕಾಯಿಲೆ ಲಕ್ಷಣಗಳೇನು? ಇದರಿಂದ ಪಾರಾಗುವುದು ಹೇಗೆ?

ಅಜಾಗೂರುಕತೆಯಿಂದ ವಾಹನ ಓಡಿಸುತ್ತಿದ್ದನ್ನು ಪ್ರಶ್ನಿಸಿದ್ದಕ್ಕೆ ಚಾಕು ಇರಿಯಲಾಗಿದೆ. ದುಷ್ಕರ್ಮಿಗಳ ಬಗ್ಗೆ ಮಾಹಿತಿ ಲಭಿಸಿದೆ, ಅವರನ್ನು ಗುರುತಿಸಲಾಗಿದೆ. ಅವರ ಬಂಧನಕ್ಕೆ ಮೂರು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.

Exit mobile version