ಧಾರವಾಡ: ಮಗಳನ್ನು ಪ್ರೀತಿಸುತ್ತಿದ್ದ ಯುವಕನಿಗೆ ಚಾಕು ಇರಿದಿರುವ ಘಟನೆ (Stabbing Case) ನಗರದ ಸೈದಾಪುರ ಬಡಾವಣೆಯ ಅಂಬಾ ಭವಾನಿ ದೇವಸ್ಥಾನ ಬಳಿ ನಡೆದಿದ್ದು, ಯುವಕನ ಸ್ಥಿತಿ ಗಂಭೀರವಾಗಿದೆ.
ಸೈದಾಪುರ ಗೌಡರ ಓಣಿ ನಿವಾಸಿ ಶಶಾಂಕ್ ಮೂಗನ್ನವರ ಗಾಯಾಳು. ಸುತಗಟ್ಟಿ ಓಣಿ ನಿವಾಸಿ ಹುಲಗಪ್ಪ ಬಡಿಗೇರ ಚಾಕು ಇರಿದ ಆರೋಪಿ. ಹುಲಗಪ್ಪನ ಮಗಳನ್ನು ಶಶಾಂಕ್ ಪ್ರೀತಿಸುತ್ತಿದ್ದ. ಹೀಗಾಗಿ ಇವರಿಬ್ಬರ ಪ್ರೀತಿಗೆ ಒಪ್ಪದ ಯುವತಿಯ ತಂದೆ, ಯುವಕನ ಮೇಲೆ ಹಲ್ಲೆ ನಡೆಸಿ ಚಾಕು ಇರಿದಿದ್ದಾನೆ. ಇದರಿಂದ ಯುವಕನಿಗೆ ಹೊಟ್ಟೆ ಭಾಗದಲ್ಲಿ ಗಂಭೀರ ಗಾಯವಾಗಿದೆ. ಯುವಕನನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಇದನ್ನೂ ಓದಿ | Nisha narasapa: ಬಗೆದಷ್ಟು ಬೆಳಕಿಗೆ ಬರ್ತಿದೆ ನಿಶಾ ನರಸಪ್ಪ ಮಾಡಿರುವ ಮಹಾ ಮೋಸ!
ಉಯ್ಯಾಲೆ ಆಡುತ್ತಿದ್ದಾಗ ಕುತ್ತಿಗೆಗೆ ಸೀರೆ ಬಿಗಿದು ಬಾಲಕ ಸಾವು
ಮಂಗಳೂರು: ಮನೆಯಲ್ಲಿ ಬಾಲಕನೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ದಿಡುಪೆಯಲ್ಲಿ ನಡೆದಿದೆ. ಉಯ್ಯಾಲೆ ಆಡುತ್ತಿದ್ದಾಗ ಕುತ್ತಿಗೆಗೆ ಹಗ್ಗ ಬಿಗಿದು ಬಾಲಕ ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಶ್ರೀಷಾ(14) ಬಾಲಕ ಮೃತ. 8ನೇ ತರಗತಿ ಓದುತ್ತಿದ್ದ ಬಾಲಕ, ರಜೆ ಹಿನ್ನಲೆಯಲ್ಲಿ ಮನೆಯಲ್ಲಿ ಉಯ್ಯಾಲೆ ಆಟ ಆಡುತ್ತಿದ್ದ. ಸೀರೆಯಲ್ಲಿ ಮಾಡಿದ ಉಯ್ಯಾಲೆಯಲ್ಲಿ ತೂಗುತ್ತಿದ್ದಾಗ ಬಾಲಕ ನೆಲಕ್ಕೆ ಬಿದ್ದಿದ್ದಾನೆ. ಮನೆಯವರು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಬಾಲಕ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಗೆ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಗಿದೆ.
ಇದನ್ನೂ ಓದಿ | Physical Abuse: ಬೆಂಗಳೂರಿನಲ್ಲಿ ಯುವತಿ ಮೇಲೆ ಪ್ರಿಯಕರ ಸೇರಿ ಐವರಿಂದ ಗ್ಯಾಂಗ್ ರೇಪ್
ಹಾವು ಕಚ್ಚಿ ಮಹಿಳೆ ಸಾವು
ವಿಜಯನಗರ: ಮೆಕ್ಕೆಜೋಳದ ತೆನೆ ಕೊಯ್ಯುವ ವೇಳೆ ಹಾವು ಕಚ್ಚಿ ಮಹಿಳೆ ಮೃತಪಟ್ಟಿರುವುದು ಹಡಗಲಿ ತಾಲೂಕಿನ ಹಿರೇಬನ್ನಿಮಟ್ಟಿ ಗ್ರಾಮದಲ್ಲಿ ನಡೆದಿದೆ. ವೀಣಾ ಲಿಂಗನಗೌಡ್ರು(26) ಮೃತ ಮಹಿಳೆ. ಹಾವು ಕಚ್ಚಿದ ಕೂಡಲೇ ಹೊಳಲು ಸರ್ಕಾರಿ ಆಸ್ಪತ್ರೆಗೆ ಮಹಿಳೆಯನ್ನು ಸಾಗಿಸಲಾಗಿದೆ. ವೈದ್ಯರಿಲ್ಲದೇ ಕಾರಣ ಸೂಕ್ತ ಚಿಕಿತ್ಸೆ ಸಿಕ್ಕಿಲ್ಲ. ನಂತರ ಹೊಳಲು ಗ್ರಾಮದಿಂದ ಹಾವೇರಿ ಜಿಲ್ಲೆಯ ಗುತ್ತಲ ಗ್ರಾಮದ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಆದರೆ, ಮಾರ್ಗ ಮಧ್ಯೆ ತೆರಳುವಾಗ ಮಹಿಳೆ ಮೃತಪಟ್ಟಿದ್ದಾಳೆ. ಹಿರೇಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
.