Site icon Vistara News

Drowned in pond | ಹಳ್ಳ ದಾಟುವಾಗ ಕೊಚ್ಚಿ ಹೋದ ಯುವಕ: ಸೇತುವೆ ನಿರ್ಮಿಸದ ಆಡಳಿತ ವಿರುದ್ಧ ಆಕ್ರೋಶ, ರಸ್ತೆ ತಡೆ

ಹಳ್ಳದಲ್ಲಿ ಕೊಚ್ಚಿ ಹೋದ ಯುವಕ, ಪ್ರತಿಭಟನೆ

ಗದಗ: ಜಿಲ್ಲೆಯ ಮುಂಡರಗಿ ತಾ.ನಾಗರಹಳ್ಳಿ ಗ್ರಾಮದ ಹಿರೇಹಳ್ಳದಲ್ಲಿ ಎರಡು ದಿನದ ಹಿಂದೆ ಹಳ್ಳ ದಾಟುವಾಗ ಕೊಚ್ಚಿ ಹೋದ ಯುವಕನೊಬ್ಬ ಶವವಾಗಿ ಪತ್ತೆಯಾಗಿದ್ದಾರೆ (Drowned in pond) ಇದರಿಂದ ಸಿಟ್ಟಿಗೆದ್ದ ಸಾರ್ವಜನಿಕರು ರಸ್ತೆ ತಡೆ ತಡೆಸಿ ಪ್ರತಿಭಟನೆ ಆರಂಭಿಸಿದ್ದಾರೆ.

ಕೊಚ್ಚಿ ಹೋದ ಯುವಕ

ದತ್ತುರಾವ ದೇಸಾಯಿ (38) ಎಂಬವರು ಎರಡು ದಿನದ ಹಿಂದೆ ನಾಪತ್ತೆಯಾಗಿದ್ದರು. ಬೈಕ್‌ ಮೂಲಕ ಹಳ್ಳ ದಾಟುವ ವೇಳೆ ಅವರು ಕೊಚ್ಚಿ ಹೋಗಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿತ್ತು. ಸೋಮವಾರ ಅವರ ಶವ ಹಳ್ಳದಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಅನುಮಾನ ನಿಜವಾಗಿದೆ.

ಬೆಣ್ಣೆಹಳ್ಳಿ ಹಾಗೂ ನಾಗರಹಳ್ಳಿ ಗ್ರಾಮಗಳ ಮಧ್ಯೆ ಇರುವ ಹಿರೇಹಳ್ಳಕ್ಕೆ ಸೇತುವೆ ನಿರ್ಮಿಸಿಕೊಡಿ ಎಂದು ಹಲವಾರು ಬಾರಿ ಮನವಿ ಮಾಡಿದ್ದರೂ ಆಡಳಿತ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಹೀಗಾಗಿ ಎರಡೂ ಗ್ರಾಮಗಳ ನಡುವಿನ ಸಂಪರ್ಕಕ್ಕಿರುವ ನೀರು ಹರಿಯುವ ಕಿಂಡಿ ಅಣೆಕಟ್ಟಿನ ದಂಡೆಯೇ ಆಸರೆಯಾಗಿತ್ತು. ಇದರ ಮೇಲೆ ಸದಾ ಕಾಲ ನೀರು ಹರಿಯುತ್ತದೆ. ಜತೆಗೆ ನೀರಿನ ಹರಿವಿನಿಂದ ಜಾರುವಿಕೆಯೂ ಇರುತ್ತದೆ. ಹೀಗಾಗಿ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡೇ ಸಾಗಬೇಕಾಗುತ್ತದೆ. ಕೆಲವೊಮ್ಮೆ ನೀರು ಜಾಸ್ತಿ ಇದ್ದು ಸಂಚಾರಕ್ಕೆ ಅವಕಾಶವೇ ಇರುವುದಿಲ್ಲ.

ಎರಡು ಗ್ರಾಮಗಳ ನಡುವಿನ ಸಂಪರ್ಕಕ್ಕೆ ರಸ್ತೆ ನಿರ್ಮಿಸಿಕೊಡಬೇಕೆಂಬ ಜನರ ಬೇಡಿಕೆಯನ್ನು ಆಡಳಿತ ನಿರ್ಲಕ್ಷ್ಯ ಮಾಡಿದ್ದು, ಜನರು ಈಗ ರೊಚ್ಚಿಗೇಳುವಂತೆ ಮಾಡಿದೆ. ಆಕ್ರೋಶಗೊಂಡ ಗ್ರಾಮಸ್ಥರು ಹೆದ್ದಾರಿ ತಡೆದು‌ ಪ್ರತಿಭಟನೆ ಆರಂಭಿಸಿದ್ದಾರೆ.

ಅರಭಾವಿ-ಚಳ್ಳಕೆರೆ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಯುತ್ತಿದೆ. ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸಂಚಾರಕ್ಕೆ ತಡೆ ಮಾಡದಂತೆ ಮನವಿ ಮಾಡುತ್ತಿದ್ದಾರೆ.

ಇದನ್ನೂ ಓದಿ | Youths drowned | ಅಮಾವಾಸ್ಯೆ ಹಿನ್ನೆಲೆಯಲ್ಲಿ ಕಾರು ತೊಳೆಯಲು ಹೋದ ಇಬ್ಬರು ಯುವಕರು ನೀರುಪಾಲು

Exit mobile version