Site icon Vistara News

YSV Datta : ರಾಜಕೀಯ ನಿವೃತ್ತಿ ಇಲ್ಲ, ಜೂನ್‌ 24ರಿಂದ ಪ್ರಾಯಶ್ಚಿತ್ತ ಯಾತ್ರೆ ಎಂದ ವೈಎಸ್‌ವಿ ದತ್ತ

YSV datta atonment yatra

YSV datta atonment yatra

ಚಿಕ್ಕಮಗಳೂರು : ನಾನು ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಆದರೆ, ರಾಜಕೀಯದಿಂದ ನಿವೃತ್ತಿ ಪಡೆಯುವುದಿಲ್ಲ- ಹೀಗೆಂದು ಹೇಳಿದ್ದಾರೆ ಕಡೂರು ಕ್ಷೇತ್ರದಲ್ಲಿ (Kadur constituency) ಸೋಲು ಕಂಡ ಜೆಡಿಎಸ್‌ ನಾಯಕ ವೈಎಸ್‌ವಿ ದತ್ತ (YSV Datta). ಇದೇ ವೇಳೆ ಅವರು ತಮ್ಮ ಸೋಲಿಗೆ ಕಾರಣವಾದ ತಪ್ಪುಗಳನ್ನು ಅರಿಯುವುದಕ್ಕಾಗಿ ಮತ್ತು ಅದಕ್ಕೆ ಪ್ರಾಯಶ್ಚಿತ್ತ ಮಾಡುವುದಕ್ಕಾಗಿ ಪ್ರಾಯಶ್ಚಿತ್ತ ಪಾದಯಾತ್ರೆಗೆ ಮುಂದಾಗಿದ್ದಾರೆ. ಅವರ 70ನೇ ಜನ್ಮ ದಿನವಾದ ಜೂನ್‌ 24ರಿಂದ ಈ ಯಾತ್ರೆ ನಡೆಯಲಿದೆ.

ಜೆಡಿಎಸ್‌ನ ನಿಷ್ಠಾವಂತ ನಾಯಕರಾಗಿದ್ದ, ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡ (HD Devegowda) ಅವರ ಮಾನಸಪುತ್ರನೆಂದೇ ಹೇಳಲಾದ ವೈಎಸ್‌ವಿ ದತ್ತ ಅವರು ಚುನಾವಣೆಗೆ ಮುನ್ನ ಜೆಡಿಎಸ್‌ ಬಿಟ್ಟು ಕಾಂಗ್ರೆಸ್‌ ಸೇರಿದ್ದರು. ಆದರೆ, ಕಾಂಗ್ರೆಸ್‌ ಪಕ್ಷ ಅವರಿಗೆ ಕಡೂರು ಕ್ಷೇತ್ರದ ಟಿಕೆಟ್‌ ನೀಡಿರಲಿಲ್ಲ. ಇದರಿಂದ ಬೇಸರಗೊಂಡ ಅವರು ಪಕ್ಷೇತರರಾಗಿ ಕಣಕ್ಕಿಳಿಯಲು ಮುಂದಾದಾಗ ಸ್ವತಃ ದೇವೇಗೌಡರೇ ಮುಂದೆ ನಿಂತು ಅವರಿಗೆ ಜೆಡಿಎಸ್‌ ಟಿಕೆಟ್‌ ನೀಡಿದರು. ತಾವೇ ಸ್ವತಃ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಆದರೆ, ಚುನಾವಣೆಯ ಫಲಿತಾಂಶ ಬಂದಾಗ ವೈಎಸ್‌ವಿ ದತ್ತ ಅವರಿಗೆ ಆಘಾತ ಕಾದಿತ್ತು. ಕಡೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಎ.ಎಸ್‌. ಆನಂದ್‌ ಅವರು 75,476 ಮತಗಳನ್ನು ಪಡೆದು ಗೆದ್ದರು. ಬಿಜೆಪಿಯ ಬೆಳ್ಳಿ ಪ್ರಕಾಶ್‌ ಅವರು 63,469 ಮತ ಪಡೆದು ಎರಡನೇ ಸ್ಥಾನ ಪಡೆದಿದ್ದಾರೆ. ವೈಎಸ್‌ವಿ ದತ್ತಾ ಅವರಿಗೆ ಸಿಕ್ಕಿದ್ದು ಕೇವಲ 26,837 ಮತಗಳು.

ಇದೀಗ ಅವರು ಅವರ 70ನೇ ಹುಟ್ಟುಹಬ್ಬವಾದ ಜೂನ್‌ 24ರಿಂದ ಕ್ಷೇತ್ರದಾದ್ಯಂತ ಪ್ರಾಯಶ್ಚಿತ್ತ ಯಾತ್ರೆ ಮಾಡಲು ಮುಂದಾಗಿದ್ದಾರೆ.

ʻʻನನ್ನ ಹಲವು ತಪ್ಪುಗಳಿಗೆ ಜನ ಶಿಕ್ಷೆ ನೀಡಿದ್ದಾರೆ. ಜೂನ್‌ 24 ನನ್ನ ಜನ್ಮದಿನ. ನನ್ನ ಜನ್ಮದಿನದಿಂದ ಆರಂಭಿಸಿ ನಿಮ್ಮ ನಿಮ್ಮ ಊರುಗಳಿಗೆ ಬಂದು ನನ್ನ ತಪ್ಪನ್ನು ನಿಮ್ಮ ಮುಂದೆ ನಿವೇದಿಸಿಕೊಂಡು, ನಿಮ್ಮ ಕ್ಷಮೆಯನ್ನು ಕೇಳುವ ಸಲುವಾಗಿ ನಾವೇ ಸ್ವತಃ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದ್ದೇನೆʼʼ ಎಂದು ವೈಎಸ್‌ವಿ ದತ್ತ ಅವರು ಅಭಿಮಾನಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಜೂನ್‌ ಮೊದಲನೇ ವಾರ ನನ್ನ ಪ್ರಾಯಶ್ಚಿತ್ತ ಪಾದಯಾತ್ರೆಯ ವಿವರವನ್ನು ತಿಳಿಸುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಯಾವ ದಿನ ಯಾವ ಗ್ರಾಮಕ್ಕೆ ಬರುತ್ತೇನೆ ಎಂದು ತಿಳಿಸುತ್ತೇನೆ. ಆವತ್ತು ಅದೇ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತೇನೆ ಎಂದಿದ್ದಾರೆ.

ʻʻನನ್ನ ತಪ್ಪಿನ ಅರಿವಾಗಿ ಪ್ರಾಯಶ್ಚಿತ ಮಾಡಿಕೊಳ್ಳಲು ನಿರ್ಧರಿಸಿದ್ದೇನೆ. ಇನ್ನು ಚುನಾವಣೆಗೆ ಸ್ಪರ್ಧಿಸುವುದಿಲ್ಲ, ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ತೇನೆ. ಪಾದಯಾತ್ರೆ ಆತ್ಮಾವಲೋಕನವಲ್ಲ, ಸೋಲಿಗೆ ಕಾರಣ ಹೇಳುತ್ತೇನೆʼʼ ಎಂದು ಹೇಳಿರುವ ದತ್ತ ಅವರು, ಕಡೂರು ಜನ ಪ್ರೀತಿಗೆ ನಾನು ಋಣಿ, ಈ ನೆಲದಲ್ಲೇ ಮಣ್ಣಾಗುತ್ತೇನೆ ಎಂದು ಭಾವುಕರಾಗಿ ಮಾತನಾಡಿದ್ದಾರೆ.

ಕಳೆದ 17 ವರ್ಷಗಳಿಂದಲೂ ನೀವು ತೋರಿರುವ ಪ್ರೀತಿ, ಬೆಂಬಲ, ಅಭಿಮಾನದ ಕಾರಣದಿಂದ ನಿಮ್ಮ ಋಣ ತೀರಿಸುವ ಹಾಗೂ ನನ್ನ ಕೊನೆಯ ಉಸಿರು ಇರುವವರೆಗೂ ನಾನು ನಿಮ್ಮೊಂದಿಗೆ ಇದ್ದು, ನಿಮ್ಮಲ್ಲಿಯೇ ಒಬ್ಬನಾಗಿ ಈ ನನ್ನ ನೆಲದಲ್ಲಿಯೇ ಮಣ್ಣಾಗಬೇಕು ಎಂಬ ದೃಢ ಸಂಕಲ್ಪ ಮಾಡಿದ್ದೇನೆ ಎಂದು ಹೇಳುವ ಮೂಲಕ ಭಾರಿ ಭಾವುಕರಾಗಿದ್ದಾರೆ.

ಇದನ್ನೂ ಓದಿ: Karnataka Election : ಕಾಂಗ್ರೆಸ್‌- ಜೆಡಿಎಸ್‌ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಪ್ರೇರಣೆ: ಡಾ. ಸುಧಾಕರ್‌ ಸ್ಫೋಟಕ ಹೇಳಿಕೆ

Exit mobile version