ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕದ ಜನರು ಸಂಕಷ್ಟದಲ್ಲಿದ್ದಾಗ ಆಗಮಿಸದೆ ಇದೀಗ ಓಟಿಗಾಗಿ ಪದೇಪದೆ ಆಗಮಿಸುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿಯಲ್ಲಿ ಆಯೋಜಿಸಲಾಗಿದ್ದ ಯುವ ಕ್ರಾಂತಿ ಸಮಾವೇಶದಲ್ಲಿ ಸಿದ್ದರಾಮಯ್ಯ ಮಾತನಾಡಿದರು. ಯುವಕರಿಗೆ 18 ವರ್ಷಕ್ಕೆ ಓಟಿನ ಅಧಿಕಾರ ನೀಡಿದ ರಾಜೀವ್ ಗಾಂಧಿಯವರನ್ನು ನಾವೆಲ್ಲರೂ ನೆನೆಯಬೇಕು. ಯುವಕರು ಏಳಿಗೆಯಾದರೆ ಮಾತ್ರ ದೇಶದ ಏಳಿಗೆ ಎಂದು ಅವರು ನಂಬಿದ್ದರು ಎಂದರು.
ಒಂಭತ್ತು ವರ್ಷದಲ್ಲಿ ನರೇಂದ್ರ ಮೋದಿ ಸರ್ಕಾರ ಕರ್ನಾಟಕಕ್ಕೆ ಏನೂ ಮಾಡಲಿಲ್ಲ. ಕರ್ನಾಟಕದಲ್ಲಿ ಪ್ರವಾಹ ಬಂದಾಗ, ಆಕ್ಸಿಜನ್ ಇಲ್ಲದೆ ಸಾವಿರಾರು ಜನರು ಸತ್ತರು. ಆಗೆಲ್ಲ ನರೇಂದ್ರ ಮೋದಿ ರಾಜ್ಯಕ್ಕೆ ಬರಲಿಲ್ಲ. ಆದರೆ ಈಗ ಅಧಿಕಾರಕ್ಕೋಸ್ಕರ, ಓಟಿಗೋಸ್ಕರ ಪದೇಪದೆ ಕರ್ನಾಟಕಕ್ಕೆ ಬರುತ್ತಿದ್ದಾರೆ. ಏಕೆಂದರೆ ಕರ್ನಾಟಕ ಬಿಜೆಪಿ ಸರ್ಕಾರದ ಎಲ್ಲರೂ ಭ್ರಷ್ಟರಾಗಿದ್ದಾರೆ, ಜನರ ಮುಂದೆ ಹೋಗಲು ಅವರಿಗೆ ಮುಖ ಇಲ್ಲ. ಹಾಗಾಗಿ ಪದೇಪದೆ ಮೋದಿ ಬರುತ್ತಿದ್ದಾರೆ.
ಪಾಕಿಸ್ತಾನ, ಚೀನಾ, ಅಮೆರಿಕ ಎನ್ನುತ್ತ ಹಿಂದುತ್ವದ ಆಧಾರದಲ್ಲಿ ಓಟು ತೆಗೆದುಕೊಂಡು ಹೋದಿರಿ. ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ನೀಡುವುದಾಗಿ ಮೋದಿ ಹೇಳಿದ್ದರು. ಅದಕ್ಕೆ ಬದಲಿಗೆ ಇದ್ದಂತಹ ಉದ್ಯೋಗಗಳೂ ಕಿತ್ತುಹೋದವು. ಸುಮಾರು ಅರವತ್ತು ಲಕ್ಷ ಸಣ್ಣ ಕೈಗಾರಿಕೆಗಳು ಮುಚ್ಚಿ ಹೋದವು. ಎರಡೂವರೆ ಕೋಟಿ ಉದ್ಯೋಗಗಳು ನಷ್ಟವಾದವು.
ಬಿಜೆಪಿಯವರು ಪ್ರತಿಭಾ ಪಲಾಯನದ ಬಗ್ಗೆ ಮಾತನಾಡುತ್ತಿದ್ದರು. 2022ರವರೆಗೆ 12 ಲಕ್ಷ ಯುವಕರು ನಮ್ಮ ದೇಶ ಬಿಟ್ಟು ಬೇರೆ ದೇಶಗಳಿಗೆ ಹೋಗಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಇಷ್ಟು ಯುವಕರು ಪ್ರತಿಭಾ ಪಲಾಯನ ಮಾಡಿದ್ದಾರೆ. ಮೋದಿ ಕರ್ನಾಟಕಕ್ಕೆ ಬಂದಾಗ ದಲಿತ, ಅಲ್ಪಸಂಖ್ಯಾತರು, ಉದ್ಯೋಗದ ಕುರಿತು ಮಾತನಾಡುವುದಿಲ್ಲ. ಭಾವನಾತ್ಮಕ ವಿಚಾರಗಳನ್ನು ಪ್ರಸ್ತಾಪಿಸಿ ಹಣದ ಶಕ್ತಿಯಿಂದ ಅಧಿಕಾರ ಹಿಡಿಯಬೇಕು ಎಂದು ಪ್ರಯತ್ನ ಮಾಡುತ್ತಿದ್ದೀರಿ. ಕರ್ನಾಟಕದಲ್ಲಿ 40% ಕಮಿಷನ್ ಸರ್ಕಾರ ಎನ್ನುವುದು ಜನಜನಿತವಾಗಿದೆ.
ಎಲ್ಲ ರೀತಿಯ ನೇಮಕಾತಿಯಲ್ಲಿ ಲಂಚ ನಡೆಯುತ್ತಿದೆ. ಲಂಚ ಇಲ್ಲದೆ ಯಾವುದೇ ಉದ್ಯೋಗ ಪಡೆಯಲು ಆಗುತ್ತಿಲ್ಲ. ನಾವು ಅಧಿಕಾರದಲ್ಲಿದ್ದಾಗ ಸರ್ಕಾರಿ ಕ್ಷೇತ್ರದಲ್ಲಿ 1.62 ಲಕ್ಷ ಉದ್ಯೋಗಗಳನ್ನು ಯುವಕರಿಗೆ ನೀಡಿದ್ದೆವು. ಖಾಸಗಿ ಕ್ಷೇತ್ರದಲ್ಲಿ 12 ಲಕ್ಷ ಉದ್ಯೋಗ ನೀಡಿದ್ದೆವು. ಉದ್ಯೋಗ ಕಡಿತ ಮಾಡಿದ ಇಂತಹ ಸರ್ಕಾರಕ್ಕೆ ಮತ್ತೆ ಅಧಿಕಾರ ನೀಡಬೇಕೆ ಎಂದು ಯುವಕರು ಯೋಚಿಸಬೇಕು. ಕರ್ನಾಟಕದಲ್ಲಿ ಉದ್ಯೋಗ ಸೃಷ್ಟಿ ಆಗಬೇಕೆಂದರೆ ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಸಾಧ್ಯ ಎಂದರು.
ಇದನ್ನೂ ಓದಿ: Congress Guarantee: ಯುವಕರಿಗೆ ಕಾಂಗ್ರೆಸ್‌ನ 4 ನೇ ಗ್ಯಾರಂಟಿ: ಪದವೀಧರರಿಗೆ ʼಯುವ ನಿಧಿʼ; ಮಾಸಿಕ 3 ಸಾವಿರ ರೂ.