Site icon Vistara News

Yuva Nidhi Scheme: ಇಂದು ಕಾಂಗ್ರೆಸ್‌ನ ಐದನೇ ಗ್ಯಾರಂಟಿ ʼಯುವನಿಧಿʼಗೆ ಚಾಲನೆ

yuvanidhi

ಬೆಂಗಳೂರು: ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಐದನೇ ಗ್ಯಾರಂಟಿ ʼಯುವನಿಧಿʼಗೆ (Yuva Nidhi Scheme) ಬೆಂಗಳೂರಿನಲ್ಲಿ ಚಾಲನೆ ನೀಡಲಾಗುತ್ತಿದೆ. ವಿಧಾನ ಸೌಧದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಚಾಲನೆ ನೀಡಲಿದ್ದಾರೆ.

ಕೌಶಲ್ಯಾಭವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ಕಾರ್ಯಕ್ರಮ ಆಯೋಜನೆಯಾಗಿದೆ. ಯುವನಿಧಿ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಎಸ್.ಹೊರಟ್ಟಿ, ವಿಧಾನಸಭೆ ಸ್ಪೀಕರ್‌ ಯು.ಟಿ.ಖಾದರ್, ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar), ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಶರಣ ಪ್ರಕಾಶ ಪಾಟೀಲ, ಶಾಸಕ ರಿಜ್ವಾನ್ ಅರ್ಷದ್ ಭಾಗಿಯಾಗಲಿದ್ದಾರೆ.

ಕೇಂದ್ರ ಸಚಿವರಿಗೂ ಆಹ್ವಾನ ನೀಡಲಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಎಂ.ಚಂದ್ರಶೇಖರ್ ಅವರನ್ನೂ ಆಹ್ವಾನಿಸಲಾಗಿದೆ.

ರಾಜ್ಯ ಕಾಂಗ್ರೆಸ್‌ ಸರ್ಕಾರದ (Congress Guarantee) ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿಗಳಲ್ಲಿ ಕೊನೆಯ ಗ್ಯಾರಂಟಿಯಾದ ಯುವ ನಿಧಿಗೆ (Yuva Nidhi Scheme) ಡಿ. 26ರಿಂದ ನೋಂದಣಿಗೆ ಚಾಲನೆ ನೀಡಲಾಗುತ್ತಿದ್ದು, ಜ. 12ರಂದು ಖಾತೆಗೆ ನೇರವಾಗಿ ಜಮೆಯಾಗಲಿದೆ ಎಂದು ಕೌಶಲ್ಯಾಭಿವೃದ್ಧಿ, ಜೀವನೋಪಯೋಗಿ ಸಚಿವ‌ ಡಾ. ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

ಯುವ ನಿಧಿ ಯೋಜನೆಗಾಗಿ ಈ ವರ್ಷ 1250 ಕೋಟಿ ಮೀಸಲಿಟ್ಟಿದ್ದೇವೆ. ಮುಂದಿನ ವರ್ಷ 2500 ಕೋಟಿ ಕೇಳಿದ್ದೇವೆ ಎಂದು ಸಚಿವ‌ ಡಾ. ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

ಪದವಿ ಮುಗಿಸಿ ಆರು ತಿಂಗಳ ಒಳಗೆ ಕೆಲಸ ಸಿಗದಿದ್ದರೆ ಅಂಥವರು ಅರ್ಜಿ ಸಲ್ಲಿಸಬಹುದು. ಡಿಗ್ರಿ ಪಾಸ್ ಆದವರಿಗೆ 3000 ರೂಪಾಯಿ, ಡಿಪ್ಲೊಮಾ ಪಾಸ್ ಆದವರಿಗೆ 1500 ರೂಪಾಯಿಯನ್ನು ಕೊಡಲಾಗುವುದು. ಎರಡು ವರ್ಷಗಳ ಕಾಲ ಅವರಿಗೆ ಈ ನಿಧಿ ಸಿಗಲಿದೆ. ಜನವರಿ 12ಕ್ಕೆ ಯುವನಿಧಿ ಹಣ ಡಿಬಿಟಿ ಮೂಲಕ ಫಲಾನುಭವಿಗಳ ಖಾತೆಗೆ ಜಮೆ ಆಗಲಿದೆ.

ಜನವರಿ 12ರಂದು ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆ ಆಗಲಿದ್ದು, ಅಂದು ಶಿವಮೊಗ್ಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಿದ್ದೇವೆ. ಕೆಲಸ ಸಿಗದಿರುವ ಬಗ್ಗೆ ಫಲಾನುಭವಿ ಸ್ವಯಂ ಧೃಢೀಕರಣ ಮಾಡಿಕೊಳ್ಳಬೇಕು. ಈ ನಡುವೆ ಕೆಲಸ ಸಿಕ್ಕರೆ ಅವರಿಗೆ ನಿಧಿ ಹಣ ಸಿಗುವುದಿಲ್ಲ ಎಂದು ಸಚಿವರು ತಿಳಿಸಿದರು.

ಇದನ್ನೂ ಓದಿ: Yuva Nidhi Scheme: ಡಿ. 26ರಿಂದ ಯುವನಿಧಿ ನೋಂದಣಿ ಶುರು; ಜ. 12ರಂದು ಖಾತೆಗೆ ಹಣ ಜಮೆ

Exit mobile version