ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ (Congress Government) ಸಂಪೂರ್ಣ ಬಹುಮತಗಳೊಂದಿಗೆ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದೆ. ಇದಕ್ಕೆ ಮುಖ್ಯ ಕಾರಣ ಗ್ಯಾರಂಟಿ (Congress Guarantee Scheme) ಯೋಜನೆಗಳಾಗಿವೆ. ಘೋಷಣೆ ಮಾಡಿರುವ 5 ಗ್ಯಾರಂಟಿ ಯೋಜನೆಗಳಲ್ಲಿ ಈಗಾಗಲೇ ನಾಲ್ಕನ್ನು ಅನುಷ್ಠಾನಕ್ಕೆ ತರಲಾಗಿದೆ. ಐದನೇ ಯೋಜನೆಯಾದ “ಯುವ ನಿಧಿ”ಗೆ (Yuva Nidhi Scheme) ಈಗ ಮುಹೂರ್ತ ನಿಗದಿಯಾಗಿದೆ. ಮುಂದಿನ 2024ರ ಜನವರಿಯಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಆದರೆ, ದಿನಾಂಕ ನಿಗದಿ ಮಾತ್ರ ಬಾಕಿ ಇದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಸಹ ಈಚೆಗೆ ಹೇಳಿದ್ದರು. ಆದರೆ, ಇದಕ್ಕೆ ಯಾರಿಗೆ ಅರ್ಹತೆ ಇದೆ? ಯಾವ ಅರ್ಹತೆ ಉಳ್ಳವರಿಗೆ ಎಷ್ಟು ಹಣ ಸಿಗುತ್ತದೆ? ಯಾವೆಲ್ಲ ದಾಖಲೆಗಳು ಬೇಕು ಎಂಬ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.
ನಮ್ಮ ಸರ್ಕಾರವು ನುಡಿದಂತೆ ನಡೆಯುತ್ತಿದೆ. ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಿದ 143 ಕಾರ್ಯಕ್ರಮಗಳಲ್ಲಿ 83 ಯೋಜನೆಗಳು ಜಾರಿಯಾಗಿವೆ. ಪ್ರಮುಖವಾಗಿ 4 ಗ್ಯಾರಂಟಿ ಯೋಜನೆಗಳಾದ ಗೃಹ ಜ್ಯೋತಿ, ಅನ್ನ ಭಾಗ್ಯ, ಶಕ್ತಿ, ಗೃಹಲಕ್ಷ್ಮಿ ಯೋಜನೆಗಳು ಜನರನ್ನು ತಲುಪಿವೆ. ಈಗ ಐದನೇ ಗ್ಯಾರಂಟಿಯಾಗಿರುವ ಯುವನಿಧಿ ಜನವರಿಯಲ್ಲಿ ಜಾರಿಗೆ ಬರಲಿದೆ ಎಂದು ಸಿಎಂ ಸಿದ್ದರಾಮಯ್ಯ ಈಚೆಗೆ ಹೇಳಿದ್ದರು.
ಏನಿದು ಯುವನಿಧಿ ಯೋಜನೆ?
ಕರ್ನಾಟಕದ ನಿರುದ್ಯೋಗಿ ಯುವಕರ ಕಲ್ಯಾಣಕ್ಕಾಗಿ ಯುವ ನಿಧಿ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಈ ಯೋಜನೆಯಲ್ಲಿ ನಿರುದ್ಯೋಗಿ ಯುವಕರಿಗೆ ಮಾಸಿಕ ನಿರುದ್ಯೋಗ ಭತ್ಯೆಯನ್ನು ನೀಡಲಾಗುತ್ತದೆ. ಅಂದರೆ, ಇದು ಅವರಿಗೆ ಈ ಮೂಲಕ ಉದ್ಯೋಗವನ್ನು ಹುಡುಕಲು ನೆರವಾಗುವ ಉದ್ದೇಶವನ್ನು ಯುವ ನಿಧಿ ಯೋಜನೆ ಹೊಂದಿದೆ. ಈ ಸಮಯದಲ್ಲಿ ಸಾಕಷ್ಟು ಖರ್ಚುಗಳು ಇರುತ್ತವೆ. ಈ ನೆರವು ನೀಡುವುದರಿಂದ ನಿರುದ್ಯೋಗಿಗಳ ಕೆಲವೊಂದು ಖರ್ಚುಗಳು ನೀಗುತ್ತವೆ ಎಂಬ ಉದ್ದೇಶದಿಂದ ಜಾರಿಗೆ ತರುತ್ತಿರುವುದಾಗಿ ಕಾಂಗ್ರೆಸ್ ಹೇಳಿಕೊಂಡಿದೆ.
ಯುವ ನಿಧಿಯಿಂದ ಯಾರಿಗೆ ಎಷ್ಟು ಹಣ ಸಿಗುತ್ತದೆ?
- ನಿರುದ್ಯೋಗಿ ಪದವೀಧರ ಯುವಜನತೆಗೆ ಪ್ರತಿ ತಿಂಗಳು 3,000 ರೂಪಾಯಿ ಮಾಸಿಕ ನಿರುದ್ಯೋಗ ಭತ್ಯೆ
- ನಿರುದ್ಯೋಗಿ ಡಿಪ್ಲೊಮಾ ಹೊಂದಿರುವ ಯುವಕರಿಗೆ ಪ್ರತಿ ತಿಂಗಳು 1,500 ರೂಪಾಯಿ ಮಾಸಿಕ ನಿರುದ್ಯೋಗ ಭತ್ಯೆ
ಯಾರಿಗೆ ಸಿಗಲ್ಲ ಯುವ ನಿಧಿ?
- 2022-2023ನೇ ಸಾಲಿಗಿಂತ ಮುಂಚಿತವಾಗಿ ತೇರ್ಗಡೆಯಾಗಿ ಉದ್ಯೋಗ ಹುಡುಕುತ್ತಿರುವವರಿಗೆ
- ಪದವಿ ಅಥವಾ ಡಿಪ್ಲೊಮಾ ಉತ್ತೀರ್ಣರಾದ ನಂತರ ಉನ್ನತ ಶಿಕ್ಷಣಕ್ಕೆ ಸೇರ್ಪಡೆಯಾಗುವವರಿಗೆ
- ಅಪ್ರೆಂಟಿಸ್ ವೇತನದ ಫಲಾನುಭವಿಗಳಿಗೆ
- ಸರ್ಕಾರಿ ಅಥವಾ ಖಾಸಗಿ ವಲಯದಲ್ಲಿ ಉದ್ಯೋಗದಲ್ಲಿರುವವರಿಗೆ
- ಸ್ವಯಂ ಉದ್ಯೋಗಿಗಳಾಗಿರುವವರಿಗೆ
- ಸರ್ಕಾರದ ಇತರೆ ಆರ್ಥಿಕ ನೆರವು ಯೋಜನೆಯ ಫಲಾನುಭವಿ.
ಯುವ ನಿಧಿ ಯೋಜನೆ ಪಡೆಯಲು ಅರ್ಹತೆ ಏನು?
- ಅರ್ಜಿದಾರರು ಕರ್ನಾಟಕದ ಕಾಯಂ ನಿವಾಸಿಯಾಗಿರಬೇಕು.
- ಪದವೀಧರರಾಗಿರಬೇಕು ಅಥವಾ ಡಿಪ್ಲೊಮಾ ಪದವಿಯನ್ನು ಹೊಂದಿರಬೇಕು
- 2022-2023ನೇ ಸಾಲಿನಲ್ಲಿ ಪದವಿ ಅಥವಾ ಡಿಪ್ಲೊಮಾದಲ್ಲಿ ಉತ್ತೀರ್ಣರಾಗಿರಬೇಕು
- ಪದವಿ ಅಥವಾ ಡಿಪ್ಲೊಮಾಗೆ ತೇರ್ಗಡೆಯಾದ ದಿನಾಂಕದ ನಂತರ ಕನಿಷ್ಠ 180 ದಿನಗಳವರೆಗೆ ನಿರುದ್ಯೋಗಿಯಾಗಿರಬೇಕು.
ಯುವ ನಿಧಿಗೆ ಬೇಕಾದ ದಾಖಲೆಗಳ ಪಟ್ಟಿ
- ಕರ್ನಾಟಕದ ನಿವಾಸಿ ಎಂಬ ಪುರಾವೆ
- ಆಧಾರ್ ಕಾರ್ಡ್
- 10ನೇ ತರಗತಿ ಅಂಕಪಟ್ಟಿ
- ದ್ವಿತೀಯ ಪಿಯುಸಿ ಅಂಕಪಟ್ಟಿ
- ಪದವಿ ಅಂಕಪಟ್ಟಿ ಮತ್ತು ಪ್ರಮಾಣಪತ್ರ
- ಡಿಪ್ಲೊಮಾ ಪ್ರಮಾಣಪತ್ರ
- ಜಾತಿ ಪ್ರಮಾಣ ಪತ್ರ (ಅನ್ವಯವಾದಲ್ಲಿ)
- ಆದಾಯ ಪ್ರಮಾಣಪತ್ರ
- ಮೊಬೈಲ್ ನಂಬರ್
- ಬ್ಯಾಂಕ್ ಖಾತೆ ವಿವರಗಳು
- ಸೆಲ್ಫ್ ಡಿಕ್ಲೆರೇಷನ್ ಪ್ರತಿ
ಇದನ್ನೂ ಓದಿ: Police Constable: ನಾಳೆ ಕಾನ್ಸ್‌ಟೇಬಲ್ ನೇಮಕಾತಿ ಲಿಖಿತ ಪರೀಕ್ಷೆ; ಈ ದಾಖಲೆ ಮರೆಯಬೇಡಿ!
ಎಲ್ಲಿಯವರೆಗೆ ಸಿಗಲಿದೆ ಯುವ ನಿಧಿ ಭತ್ಯೆ?
ಯುವ ನಿಧಿ ಯೋಜನೆಯಡಿ ಒಮ್ಮೆ ಫಲಾನುಭವಿಗಳಾಗಿ ಆಯ್ಕೆಯಾಗುವ ಯುವ ಜನತೆಗೆ 2 ವರ್ಷಗಳ ಅವಧಿವರೆಗೆ ಭತ್ಯೆಯನ್ನು ಪಡೆದುಕೊಳ್ಳಬಹುದಾಗಿದೆ. ಹೀಗಾಗಿ ಪದವೀಧರರಿಗೆ ಮಾಸಿಕ 3 ಸಾವಿರ ರೂ. ಹಾಗೂ ಡಿಪ್ಲೊಮಾ ಪದವೀಧರರಿಗೆ ಮಾಸಿಕ 1500 ರೂಪಾಯಿ ಕೊಡಲಾಗುತ್ತದೆ. ಆದರೆ, ಎರಡು ವರ್ಷಗಳ ಅವಧಿಯೊಳಗೆ ಅವರಿಗೆ ಕೆಲಸ ಸಿಕ್ಕರೆ, ತತ್ ಕ್ಷಣವೇ ಈ ಭತ್ಯೆಯನ್ನು ನಿಲ್ಲಿಸಲಾಗುತ್ತದೆ. ಇನ್ನು ಫಲಾನುಭವಿಗೆ 2 ವರ್ಷಗಳ ನಂತರ ಯೋಜನೆಯ ಹಣವನ್ನು ನೀಡಲಾಗುವುದಿಲ್ಲ.