ಬೆಂಗಳೂರು: ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಅವರಿಗೆ ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ. 40ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳು ಜಮೀರ್ ಒಡೆತನದಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಿ ಶೋಧಕಾರ್ಯ ಮುಂದುವರೆಸಿದ್ದಾರೆ. ಕಳೆದ ವರ್ಷ ಇ.ಡಿ. ದಾಳಿ ನಡೆಸಿ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿತ್ತು. ಇದಾದ ಬಳಿಕ ಮತ್ತೆ ಆರು ತಿಂಗಳಿಗೆ ಐಟಿ ದಾಳಿ ಕೂಡ ಮಾಡಲಾಗಿತ್ತು. ಈಗ ಐಟಿ ಹಾಗೂ ಇಡಿ ಕೊಟ್ಟ ಮಾಹಿತಿ ಮೇರೆಗೆ ಎಸಿಬಿ ಕೂಡ ದಾಳಿ ನಡೆಸಿದೆ.
ಅಕ್ರಮ ಆಸ್ತಿ ಗಳಿಕೆ ಆರೋಪದಡಿ ನಗರದ ಐದು ಕಡೆ ಎಸಿಬಿ ತಂಡ ದಾಳಿ ನಡೆಸಿದೆ. ಈ ಹಿಂದೆ ಇಡಿ ದಾಳಿ ನಡೆಸಿದ್ದಾಗ. ಜಮೀರ್ ನಿರ್ಮಿಸಿರುವ ಐಷರಾಮಿ ಬಂಗಲೆಯೇ ಹೆಚ್ಚು ಸುದ್ದಿ ಮಾಡಿತ್ತು. ಕಂಟೋನ್ಮೆಂಟ್ ಬಳಿ ಈ ಭವ್ಯ ಬಂಗಲೆಯನ್ನು ಕಟ್ಟಿಸಲಾಗಿದೆ.
100 ಕೋಟಿ ರೂ. ವೆಚ್ಚದಲ್ಲಿ ಐಷರಾಮಿ ಬಂಗಲೆ ನಿರ್ಮಾಣ
ಬರೋಬ್ಬರಿ 100 ಕೋಟಿ ರೂ. ವೆಚ್ಚದಲ್ಲಿ ಈ ಐಷಾರಾಮಿ ಬಂಗಲೆಯನ್ನು ನಿರ್ಮಾಣ ಮಾಡಲಾಗಿದೆ. ಸುಮಾರು 20 ಗುಂಟೆ ವಿಸ್ತೀರ್ಣದಲ್ಲಿ ಇರುವ ಮನೆ ಇದಾಗಿದ್ದು, 10 ಗುಂಟೆಯಲ್ಲಿ ಮನೆ, ಉಳಿದ 10 ಗುಂಟೆಯಲ್ಲಿ ಅಂದರೆ ಸುಮಾರು 10 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಭವ್ಯ ಬಂಗಲೆ ಇದೆ. ಈ ಜಾಗದ ಒಟ್ಟು ಮೌಲ್ಯ 15 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಈ ಭವ್ಯ ಬಂಗಲೆ ನಿರ್ಮಾಣಕ್ಕೆ ಗ್ರಾನೈಟ್ ಶ್ವೇತ ಶಿಲೆ ಬಳಸಿದ್ದು, ಅರೇಬಿಕ್ ಶೈಲಿಯಲ್ಲಿ ಮನೆಯ ನಿರ್ಮಾಣ ಮಾಡಲಾಗಿದೆ. ಇದರ ಜತೆಗೆ 5 ಕೋಟಿ ರೂ. ಮೌಲ್ಯದ ಇಟಾಲಿಯನ್ ಮಾರ್ಬಲ್ಸ್ ಬಳಸಿ ಮನೆಯನ್ನು ಅದ್ದೂರಿಯಾಗಿ ನಿರ್ಮಾಣ ಮಾಡಲಾಗಿದ್ದು, ಕಣ್ಣುಕುಕ್ಕುವಂತಿದೆ.
ಇದನ್ನು ಓದಿ |ACB raid| ಎಸಿಬಿ ಕಾರ್ಯಾಚರಣೆಗೆ ಅಡಚಣೆ ಮಾಡದಿರುವಂತೆ ಸಿಎಂ ಬೊಮ್ಮಾಯಿ ಮನವಿ
ದಾಖಲೆ ನೀಡದೆ ಇರುವುದೇ ಎಸಿಬಿ ದಾಳಿಗೆ ಕಾರಣವಾಯ್ತಾ?
ಕಳೆದ ವರ್ಷ ಇಡಿ ದಾಳಿ ವೇಳೆ ಜಮೀರ್ ಈ ಭವ್ಯ ಬಂಗಲೆ ಭಾರಿ ಸದ್ದು ಮಾಡಿತ್ತು. ಮನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ನೋಡುಗರು ಬಾಯಿ ಮೇಲೆ ಬೆರಳಿಟ್ಟಿಕೊಳ್ಳುವಂತಿದ್ದ ಅರಮನೆಯಂತಹ ಮನೆಯನ್ನು ಜಮೀರ್ ನಿರ್ಮಾಣ ಮಾಡಿದ್ದಾರೆ. ಹೀಗಾಗಿ ಇ.ಡಿ. ಕೂಡ ದಾಳಿ ನಡೆಸಿದಾಗ ಈ ಮನೆ ನಿರ್ಮಾಣಕ್ಕೆ ಹಣ ಎಲ್ಲಿಂದ ಬಂತು ಎಂದು ದಾಖಲೆ ಕೇಳಿತ್ತು. ಇದಕ್ಕೆ ಉತ್ತರಿಸಿದ್ದ ಜಮೀರ್, ಸಹಕಾರಿ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿದ್ದಾಗಿ ಹೇಳಿಕೆ ನೀಡಿದ್ದರು. ಈ ಸಂಬಂಧ ದಾಖಲೆ ನೀಡುವಂತೆ ಸೂಚಿಸಿ ಕಾಲಾವಕಾಶವನ್ನು ಇ.ಡಿ. ನೀಡಿತ್ತು. ಆದರೆ ಈವರೆಗೂ ಮನೆ ನಿರ್ಮಾಣಕ್ಕೆ ಪಡೆದ ಸಾಲದ ಬಗ್ಗೆ ಸೂಕ್ತ ದಾಖಲೆ ನೀಡಿಲ್ಲ. ಜಮೀರ್ ಆದಾಯಕ್ಕೂ ಅವರ ಬಳಿ ಇರುವ ಆಸ್ತಿಗೂ ಅಜಾಗಜಾಂತರ ವ್ಯತ್ಯಾಸವಿರುವ ಕಾರಣ ಅಕ್ರಮ ಆಸ್ತಿ ಗಳಿಕೆ ಬಗ್ಗೆ ಅನುಮಾನ ಇರುವುದರಿಂದ ಎಸಿಬಿಗೆ ಇ.ಡಿ. ಮಾಹಿತಿ ನೀಡಿದೆ. ಅದರ ಆಧಾರದಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನು ಓದಿ| ACB raid| ಮೊದಲ ಬಾರಿಗೆ ಹಾಲಿ ಶಾಸಕ ಜಮೀರ್ ಮನೆಗೆ ಎಸಿಬಿ ಭರ್ಜರಿ ದಾಳಿ, ಬೆಂಬಲಿಗರ ಪ್ರತಿಭಟನೆ