Site icon Vistara News

Zameer Ahmad Khan : ರಾಜ್ಯದಲ್ಲಿ ಮುಸ್ಲಿಮ್‌ ಮತಗಳಿಂದಲೇ ಕಾಂಗ್ರೆಸ್‌ ಅಧಿಕಾರಕ್ಕೆ ಎಂದ ಜಮೀರ್‌

Zameer ahmad Khan in Jaipur

ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ಮುಸ್ಲಿಮರೇ ಕಾರಣ. ಮುಸ್ಲಿಮ್‌ ಮತಗಳಿಂದಲೇ ಕಾಂಗ್ರೆಸ್‌ ಅಧಿಕಾರಕ್ಕೆ ಬಂತು (Congress won by Muslim Votes) ಎಂದು ಸಚಿವ ಜಮೀರ್‌ ಅಹಮದ್‌ ಖಾನ್‌ (Zameer Ahmad Khan) ಅವರು ಹೇಳಿರುವುದು ಈಗ ಸುದ್ದಿಯಾಗಿದೆ. ಕಳೆದ ಆಗಸ್ಟ್‌ 25ರಂದು ರಾಜಸ್ಥಾನಕ್ಕೆ ಭೇಟಿ (Rajastan visit) ನೀಡಿದ್ದ ಜಮೀರ್‌ ಅಹಮದ್‌ ಖಾನ್‌ ಅವರು, ಜೈಪುರದ ಕಾಂಗ್ರೆಸ್ ಶಾಸಕರು ಹಾಗೂ ರಾಜಸ್ಥಾನ ಹಜ್ ಸಮಿತಿ ಅಧ್ಯಕ್ಷರು ಭಾಗವಹಿಸಿದ್ದ ಸಭೆಯಲ್ಲಿ ಈ ಮಾತುಗಳನ್ನು ಆಡಿದ್ದರು. ಜಮೀರ್‌ ಅಹಮದ್‌ ಖಾನ್‌ ಅವರ ಈ ಹೇಳಿಕೆಯನ್ನು ರಾಜ್ಯದ ಗೃಹ ಸಚಿವ ಜಿ. ಪರಮೇಶ್ವರ್‌ (G Parameshwar) ಅವರು ಸಮರ್ಥಿಸಿದ್ದಾರೆ.

ರಾಜಸ್ಥಾನ ಹಜ್ ಸಮಿತಿಯ ಅಧ್ಯಕ್ಷರಾಗಿರು ಜನಾಬ್ ಅಮೀನ್ ಖಾಗ್ಜಿ ಅವರು ಜೈಪುರದಲ್ಲಿ ಈ ಸಮಾರಂಭವನ್ನು ಆಯೋಜಿಸಿದ್ದರು. ಅಲ್ಲಿ ಜಮೀರ್‌ ಅಹ್ಮದ್‌ ಖಾನ್‌ ಅವರನ್ನು ಸನ್ಮಾನಿಸಿದ್ದರು. ಲಕ್ನೋದ ಕಿಚ್ಚೌಚ ಶರೀಫ್ ದರ್ಗಾದ ಸೂಫಿ ಗುರು ಖಾಸಿಂ ಅಶ್ರಫ್ ಜಿಲಾನಿ, ಮಾಜಿ ಸಚಿವ ಜನಾಬ್ ಇಮಾಮುದ್ದೀನ್ ಮತ್ತಿತರ ಮುಸ್ಲಿಂ ಮುಖಂಡರು ಮತ್ತು ಜೈಪುರದ ಕಾಂಗ್ರೆಸ್‌ ಶಾಸಕರು ಉಪಸ್ಥಿತರಿದ್ದರು.

ಅಲ್ಲಿ ಮಾತನಾಡಿದ ಜಮೀರ್‌ ಅಹ್ಮದ್‌ ಖಾನ್‌ ಕರ್ನಾಟಕದಲ್ಲಿ ಮುಸ್ಲಿಮರು ಯಾಕೆ ಕಾಂಗ್ರೆಸ್‌ಗೆ ಮತ ಹಾಕಿದರು, ಅವರ ಮತಗಳನ್ನು ಕಾಂಗ್ರೆಸ್‌ ಹೇಗೆ ಕ್ರೋಡೀಕರಿಸಿತು ಎಂಬುದರ ವಿವರಣೆಯನ್ನು ಕೊಡುತ್ತಾರೆ. ರಾಜಸ್ಥಾನ ಚುನಾವಣೆಯ ಹಿನ್ನೆಲೆಯಲ್ಲಿ ಅವರು ಕರ್ನಾಟಕದ ಕಾರ್ಯತಂತ್ರವನ್ನು ಅಲ್ಲಿ ವಿವರಿಸಿದ್ದಾರೆ ಎನ್ನಲಾಗಿದೆ.

Zameer ahmad Khan in Jaipur

ʻʻಮುಸ್ಲಿಮರ ಒಗ್ಗಟ್ಟಿನಿಂದ ನಾವು ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದೇವೆ. 2014ರ ಬಳಿಕ ದೇಶದಲ್ಲಿ ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಧರ್ಮಗಳ ನಡುವೆ ಕಂದಕ ಸೃಷ್ಟಿ ಆಗಿದೆ. ಕರ್ನಾಟಕದಲ್ಲಿ ನಾವು ಮಸೀದಿಗಳಲ್ಲಿ ಸಭೆ ಮಾಡಿ ಒಗ್ಗಟ್ಟು ಪ್ರದರ್ಶನ ಮಾಡುವಂತೆ ಮನವಿ ಮಾಡಿದೆವು. ಈ ಮೂಲಕ ಸರ್ಕಾರವನ್ನು ತಂದೆವುʼʼ ಎಂದು ಜಮೀರ್‌ ವಿವರಣೆ ನೀಡಿದ್ದಾರೆ.

ಕರ್ನಾಟಕದಲ್ಲಿ ಕಳೆದ ಮೂರುವರೆ ವರ್ಷಗಳಲ್ಲಿ ಬಿಜೆಪಿ ಮುಸ್ಲಿಮರನ್ನು ಟಾರ್ಗೆಟ್‌ ಮಾಡಿತ್ತು. ಹಿಜಾಬ್‌, ಹಲಾಲ್‌ ಕಟ್‌, ಜಟ್ಕಾ ಕಟ್‌, ಆಜಾನ್‌ ವಿವಾದಗಳ ಮೂಲಕ ಮುಸ್ಲಿಮರನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು ಎಂದು ಜಮೀರ್‌ ಸಭೆಯಲ್ಲಿ ವಿವರಿಸಿದ್ದಾರೆ.

ಹಿಂದುಗಳ ವಿರುದ್ಧ ಮುಸ್ಲಿಮರನ್ನು ಮುಸ್ಲಿಮರ ವಿರುದ್ಧ ಹಿಂದುಗಳನ್ನು ಎತ್ತಿಕಟ್ಟುವ ಕೆಲಸವನ್ನು ಅದು ಮಾಡಿತು. ಆದರೆ, ನಿಜವೆಂದರೆ, ಬಿಜೆಪಿಗೆ ಹಿಂದುಗಳ ಮೇಲೂ ಪ್ರೀತಿ ಇಲ್ಲ, ಮುಸ್ಲಿಮರ ಮೇಲಂತೂ ಇಲ್ಲವೇ ಇಲ್ಲ. ಅದಕ್ಕೆ ಪ್ರೀತಿ ಇರುವುದು ಕೇವಲ ಅಧಿಕಾರದ ಮೇಲೆ ಮಾತ್ರ ಎಂದು ಹೇಳಿದ್ದರು.

ʻನಾವು ಮುಸ್ಲಿಂ ಸಮುದಾಯದ ಮುಖಂಡರ ಸಭೆಗಳನ್ನು ಮಾಡಿದೆವು. ಎಲ್ಲ ಹಂತಗಳಲ್ಲಿ ಅವರನ್ನು ರೀಚ್‌ ಮಾಡಿದೆವು. ಈ ಮೂಲಕ ಅವರ ವಿಶ್ವಾಸವನನ್ನು ಗಳಿಸಿಕೊಂಡೆವುʼʼ ಎಂದು ಜಮೀರ್‌ ಅಹ್ಮದ್‌ ಖಾನ್‌ ಅವರು ನಿರರ್ಗಳವಾಗಿ ವಿವರಿಸಿದ್ದರು. ಅದಕ್ಕಿಂತಲೂ ಮುಖ್ಯವಾಗಿ ಮುಸ್ಲಿಮರ ಮೀಸಲಾತಿಯನ್ನು ಕಿತ್ತು ಹಾಕಿದ್ದು ದೊಡ್ಡ ಹೊಡೆತವಾಗಿತ್ತು. ಅದೆಲ್ಲವನ್ನೂ ನಾವು ವಿವರಿಸಿದೆವು ಎಂದಿದ್ದಾರೆ. ಹೀಗೆ ಮುಸ್ಲಿಮರು ಒಗ್ಗಟ್ಟಾಗಿ ಕಾಂಗ್ರೆಸ್‌ ಪರವಾಗಿ ಮತ ಹಾಕಿದರು ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: CM Siddaramaiah : ಬೇಡ ಬೇಡ ಎನ್ನುತ್ತಲೇ ಬಂದು ಕುಣಿದ ಸಿದ್ದರಾಮಯ್ಯ; ಡ್ಯಾನ್ಸ್‌ ಮಾಡಲು ಕಾರಣ ಇವರು!

ಸಮರ್ಥನೆ ಮಾಡಿದ ಜಿ. ಪರಮೇಶ್ವರ್‌

ಜಮೀರ್‌ ಅಹಮದ್‌ ಖಾನ್‌ ಅವರ ಈ ಹೇಳಿಕೆಯನ್ನು ಗೃಹ ಸಚಿವ ಜಿ. ಪರಮೇಶ್ವರ್‌ ಸಮರ್ಥನೆ ಮಾಡಿದ್ದಾರೆ. ಜಮೀರ್‌ ಅವರು ಹೇಳಿರುವುದು ಸರಿಯಾಗಿಯೇ ಇದೆ. ಮುಸ್ಲಿಮರು ದೊಡ್ಡ ಪ್ರಮಾಣದಲ್ಲಿ ನಮಗೆ ಬೆಂಬಲ ನೀಡಿದ್ದಾರೆ. ಅದಕ್ಕಿಂತಲೂ ಹೆಚ್ಚಾಗಿ ಪ್ರತಿಯೊಂದು ಪಕ್ಷವೂ ಮತ ಗಳಿಸಲು ಒಂದು ಕಾರ್ಯತಂತ್ರವನ್ನು ಮಾಡುತ್ತದೆ. ಆ ಕಾರ್ಯತಂತ್ರವನ್ನು ಜಮೀರ್‌ ಅಹಮದ್‌ ಅವರು ವಿವರಿಸಿದ್ದಾರೆ. ಇದರಲ್ಲಿ ತಪ್ಪೇನಿಲ್ಲ ಎಂದು ಹೇಳಿದರು.

Exit mobile version