Site icon Vistara News

Zameer Ahmed Khan: ಎಚ್‌ಡಿಕೆ ಪ್ಯಾಂಟ್‌ನಲ್ಲಿ ಖಾಕಿ ಚೆಡ್ಡಿ ಇದೆ, ಅವರ ಆಸ್ತಿಯಿಂದ 3 ಬಜೆಟ್‌ ಮಾಡಬಹುದು ಎಂದ ಜಮೀರ್‌

Zameer Ahmed Khan

ರಾಮನಗರ: ಕುಮಾರಸ್ವಾಮಿ ಕೇವಲ 37 ಸೀಟ್ ಗೆದ್ದು ನಮ್ಮ ಜೊತೆ ಬಂದಿದ್ದರು. ಅವರದು ಮ್ಯಾಚ್ ಫಿಕ್ಸಿಂಗ್, ಅವರನ್ನು ನಂಬಬೇಡಿ ಅಂತ ಕಾಂಗ್ರೆಸ್‌ನವರಿಗೆ ಅಂದೇ ಹೇಳಿದ್ದೆ. ನಾನು ಅವರನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ. ಕುಮಾರಸ್ವಾಮಿ ಪ್ಯಾಂಟ್‌ನಲ್ಲಿ ಖಾಕಿ ಚೆಡ್ಡಿ ಇದೆ. ಬಿಜೆಪಿಗಿಂತ ಬಿಗಿಯಾದ ಖಾಕಿ ಚೆಡ್ಡಿ ಹಾಕಿದ್ದಾರೆ ಎಂದು ನಾನು ಹೇಳಿದಾಗ ಕೆಲವರು ಕೇಳಲಿಲ್ಲ ಎಂದು ಸಚಿವ ಜಮೀರ್ ಅಹ್ಮದ್‌ (Zameer Ahmed Khan) ವಾಗ್ದಾಳಿ ನಡೆಸಿದರು.

ಚನ್ನಪಟ್ಟಣದಲ್ಲಿ ನಡೆದ ಜನಾಂದೋಲನ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರದಲ್ಲಿ ಬಡವರಿಗೆ ಒಂದು‌ ಮನೆಯನ್ನೂ ಕೊಟ್ಟಿಲ್ಲ. ಯಾಕೆ ಬಿಜೆಪಿ-ಜೆಡಿಎಸ್‌ಗೆ ಬಡವರ ಬಗ್ಗೆ ಕಾಳಜಿ ಇಲ್ವಾ? ಕುಮಾರಸ್ವಾಮಿ ಅವರೇ ರಾಮನಗರದ ಜನ್ಮಕೊಟ್ಟ ಕ್ಷೇತ್ರ ಅಂತೀರಿ. ರಾಮನಗರದಲ್ಲಿ ಎಷ್ಟು ಮನೆ ಕೊಟ್ಟಿದ್ದೀರಿ? ನಿಮಗೆ ಓಪನ್ ಚಾಲೆಂಜ್ ಹಾಕುತ್ತೀನಿ, ಕೇವಲ 330 ಮನೆ ಕೊಟ್ಟಿದ್ದೀರಿ. ನಾವು ಎಷ್ಟು ಮನೆ ಕೊಟ್ಟಿದ್ದೀವಿ ಬನ್ನಿ ಚರ್ಚೆ ಮಾಡೋಣ ಎಂದು ಸವಾಲು ಹಾಕಿದರು.

ಚನ್ನಪಟ್ಟಣಕ್ಕೆ 5 ಸಾವಿರ ಮನೆ ಮಂಜೂರು ಮಾಡುತ್ತೇವೆ

ಡಿ.ಕೆ.ಸುರೇಶ್ ಸೋತಿದ್ದು ನನಗೆ ಹೊಟ್ಟೆ ಉರೀತಿದೆ. ಕ್ಷೇತ್ರದಲ್ಲಿ ಕ್ಲರ್ಕ್ ರೀತಿ ಕೆಲಸ ಮಾಡಿದ್ದಾರೆ. ಅವರು ಕ್ಷೇತ್ರಕ್ಕಾಗಿ ಹಲವು ರಾತ್ರಿ ಕೆಲಸ ಮಾಡಿದ್ದಾರೆ. ಅಂತವರು ಸೋತಿದ್ದರಿಂದ ಹೊಟ್ಟೆ ಉರೀತಿದೆ. ಡಿ.ಕೆ. ಸುರೇಶ್ ಅವರ 1 ಪರ್ಸೆಂಟ್ ಕೆಲಸ ಕುಮಾರಸ್ವಾಮಿ ಮಾಡಿಲ್ಲ. ಕೇವಲ ಡಂಗುರ ಹೊಡೆದುಕೊಂಡು ಬರುತ್ತಾರೆ. ಚನ್ನಪಟ್ಟಣಕ್ಕೆ ಸಾಕಷ್ಟು ಅಭಿವೃದ್ಧಿ ಕಾಮಗಾರಿ ಬೇಕು ಅಂತ ಡಿ.ಕೆ.ಸುರೇಶ್ ಕೇಳಿದ್ದರು. ಹೀಗಾಗಿ ಚನ್ನಪಟ್ಟಣಕ್ಕೆ ಐದು ಸಾವಿರ ಮನೆ ಮಂಜೂರು ಮಾಡುತ್ತೇವೆ, ಇನ್ನು 15 ದಿನಗಳಲ್ಲಿ 5 ಸಾವಿರ ಮನೆ ಮಂಜೂರು ಮಾಡುತ್ತೇವೆ. ಮೈನಾರಿಟಿ ಅಭಿವೃದ್ಧಿಗೆ 10ಕೋಟಿ ಹಣ ಕೊಡುತ್ತೇನೆ ಎಂದು ಸಚಿವ ಜಮೀರ್ ಅಹ್ಮದ್‌ ಘೋಷಣೆ ಮಾಡಿದರು.

ಬಿಜೆಪಿ-ಜೆಡಿಎಸ್ ಪಾದಯಾತ್ರೆಯಿಂದ ಏನೂ ಆಗಲ್ಲ. ನಾವೆಲ್ಲಾ ಇರೋವರೆಗೂ ಸಿದ್ದರಾಮಯ್ಯ ಹಾಗೂ ಡಿಕೆಶಿಗೆ ಏನೂ‌ ಮಾಡೋಕಾಗಲ್ಲ. ಯಾರೋ ಅವರನ್ನು ಮುಟ್ಟೋಕೆ ಸಾಧ್ಯವಿಲ್ಲ. ನಾವೆಲ್ಲಾ ನಮ್ಮ ನಾಯಕರ ಜೊತೆ ಇದ್ದೀವಿ. ಡಿಕೆಶಿ ಆಸ್ತಿ ಬಗ್ಗೆ ಬಿಚ್ಚಿಡ್ತೀನಿ ಅಂತ ಕುಮಾರಸ್ವಾಮಿ ಹೇಳುತ್ತಿದ್ದಾರೆ. ಕುಮಾರಸ್ವಾಮಿ ನಿಮ್ಮ ಕುಟುಂಬದ ಆಸ್ತಿ ತೆಗೆದರೆ ಕರ್ನಾಟಕದ 3 ಬಜೆಟ್ ಮಾಡಬಹುದು. ನಿಮ್ಮ ಅಣ್ಣ, ಅಕ್ಕ, ಬಾವ, ಅನುಸೂಯಕ್ಕ ಎಲ್ಲರ ಆಸ್ತಿ ತೆಗಿಯಿರಿ. ದಯಮಾಡಿ ಎರಡು ಬಜೆಟ್ ಗಾಗುವಷ್ಟಾದರೂ ಜನರಿಗೆ ಕೊಡಿ ಎಂದು ಕುಮಾರಸ್ವಾಮಿಗೆ ಒತ್ತಾಯ ಮಾಡಿದರು.

ಇದನ್ನೂ ಓದಿ | PSI Parashuram Case: ಸರ್ಕಾರಿ ಯೋಜನೆ ಹಣ ಬಿಡುಗಡೆಗೂ ಕಮಿಷನ್‌ಗೆ ಬೇಡಿಕೆ; ಎ2 ಪಂಪನಗೌಡ ವಿರುದ್ಧ ಮತ್ತೊಂದು ಆರೋಪ

ಯಾವ ಉದ್ದೇಶಕ್ಕೆ ಪಾದಯಾತ್ರೆ ಮಾಡುತ್ತಿದ್ದೀರಿ: ಪರಮೇಶ್ವರ್

ಗೃಹಸಚಿವ ಜಿ.ಪರಮೇಶ್ವರ್ ಮಾತನಾಡಿ, ಪಾದಯಾತ್ರೆ ಬೇಡ ಅಂದವರು ಪೋಟೊದಲ್ಲಿ ಮುಂದೆ ನಿಂತಿದ್ದಾರೆ. ಪಾದಯಾತ್ರೆ ಮಾಡಲೇಬೇಕು ಅಂತಿರುವ ಬಿಜೆಪಿ ಅಧ್ಯಕ್ಷರು ಹಿಂದೆ ನಿಂತಿದ್ದಾರೆ. ಇದರ ಅರ್ಥ ಏನು ಅಂತ ಹೇಳಬೇಕು. ನಿನ್ನೆ ಬಿಜೆಪಿ ನಾಯಕ ಯತ್ನಾಳ್ ಒಂದು ಮಾತು ಹೇಳಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಭ್ರಷ್ಟಾಚಾರಿಗಳು ಪಾದಯಾತ್ರೆ ಮಾಡ್ತಿದ್ದಾರೆ ಎಂದಿದ್ದಾರೆ. ನಿಮಗೆ ನಾಚಿಕೆ ಆಗಬೇಕು, ಯಾವ ಉದ್ದೇಶಕ್ಕೆ ಪಾದಯಾತ್ರೆ ಮಾಡುತ್ತಿದ್ದೀರಿ. ಅಸತ್ಯ ಹೇಳಲು ಪಾದಯಾತ್ರೆ ಮಾಡುತ್ತಿದ್ದೀರಿ, ಜನ ನಿಮಗೆ ಬುದ್ಧಿ ಕಲಿಸಿ ಅಧಿಕಾರ ಕಿತ್ತುಕೊಂಡಿದ್ದಾರೆ ಎಂದು ಕಿಡಿಕಾರಿದರು.‌

ಇದನ್ನೂ ಓದಿ | HD Deve Gowda: ದೆಹಲಿ ಮೆಟ್ರೋದಲ್ಲಿ ಸಂಚರಿಸಿದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ

ನಿಮ್ಮದು 40% ಭ್ರಷ್ಟಾಚಾರ ಇಡೀ ದೇಶಕ್ಕೆ ಗೊತ್ತು. ನೀವು ನಮ್ಮ ಸರ್ಕಾರದ ಮೇಲೆ ಆಪಾದನೆ ಮಾಡ್ತಿದ್ದೀರಿ. ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ನಮ್ಮ ತಟ್ಟೆಯ ನೊಣದ ಬಗ್ಗೆ ಮಾತನಾಡ್ತೀರಿ. ದೇವರಾಜ ಅರಸು ಟ್ರಕ್ ಟರ್ಮಿನಲ್‌ನಲ್ಲಿ 47 ಕೋಟಿ ಹಗರಣ ಆಗಿದೆ. ಅದರ ಎಂಡಿಯನ್ನು ಬಂಧನ ಮಾಡಲಾಗಿದೆ. 30 ಅಕೌಂಟ್‌ಗೆ ಚೆಕ್ ಮೂಲಕ ಹಣ ಹೋಗಿದೆ. ಭೋವಿ ನಿಗಮದಲ್ಲಿ ಹಗರಣ ಮಾಡಿದ್ದೀರಿ, ಇದರ ಲೆಕ್ಕ ಕೊಡಿ. ಮಾಜಿ ಪ್ರಧಾನಿ ಎಡಿಡಿ ಭೂಕಬಳಿಕೆಯ ಬಗ್ಗೆ ಪತ್ರಿಕೆಯಲ್ಲಿ ನೋಡಿದ್ದೇವೆ. ಇದನ್ನ ಪ್ರಕಟಣೆ ಮಾಡಿದ್ದು ಇದೇ ಬಿಜೆಪಿ ನಾಯಕರು. ದೇವೇಗೌಡರ ಕುಟುಂಬ ಮುಡಾದಲ್ಲಿ 36 ಸೈಟ್ ಪಡೆದಿದೆ. ಇದಕ್ಕೆ ಉತ್ತರ ಕೊಡಿ ಅಂತ ಬಿಜೆಪಿಯವರು ಕೇಳಿದ್ದರು. ಕುಮಾರಸ್ವಾಮಿ ಇದಕ್ಕೆ ನೀವು ಉತ್ತರ ಕೊಡಿ, ನಿಮಗೆ ಪಾದಯಾತ್ರೆ ಮಾಡಲು ಮಾನ-ಮರ್ಯಾದೆ ಇದ್ಯಾ. ಎಂದು ಪ್ರಶ್ನಿಸಿದರು.

Exit mobile version