Site icon Vistara News

Zamir Ahmed Khan : ಅಕ್ರಮ ಗಳಿಕೆ ಆರೋಪ; ಎಸಿಬಿ ಎಫ್‌ಐಆರ್‌ಗೆ ತಡೆ ಕೋರಿದ್ದ ಜಮೀರ್‌ ಅಹಮದ್‌ ಖಾನ್‌ ಮನವಿ ತಿರಸ್ಕೃತ

High court zamir Khan

#image_title

ಬೆಂಗಳೂರು: ಗೊತ್ತಾದ ಆದಾಯ ಮೀರಿ ಆಸ್ತಿ ಸಂಗ್ರಹಿಸಿದ ಆರೋಪ ಸಂಬಂಧ ಭ್ರಷ್ಟಾಚಾರ ನಿಗ್ರಹ ದಳ ದಾಖಲಿಸಿರುವ ಎಫ್‌ಐಆರ್‌ಗೆ ತಡೆಯಾಜ್ಞೆ ನೀಡಬೇಕೆಂಬ ಕಾಂಗ್ರೆಸ್‌ ಶಾಸಕ ಜಮೀರ್ ಅಹಮದ್ ಖಾನ್ (Zamir Ahmed Khan) ಅವರ ಮನವಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ. ಜಮೀರ್ ಅಹಮದ್ ಖಾನ್ ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ ನಟರಾಜನ್ ಅವರ ಏಕಸದಸ್ಯ ಪೀಠವು ತಡೆ ನೀಡಲಾಗದು ಎಂದು ಹೇಳಿದೆ.

ಆದಾಯ ಮೀರಿ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಮನೆ ಮೇಲೆ ದಾಳಿ ನಡೆದಿತ್ತು. ಎಸಿಬಿಯು ಈ ಬಗ್ಗೆ 2022ರ ಮೇನಲ್ಲಿ ಎಫ್‌ಐಆರ್ ದಾಖಲಿಸಿತ್ತು. ಶಾಸಕರು ಆದಾಯ ಮೀರಿ 87 ಕೋಟಿ ರೂಪಾಯಿ ಹೆಚ್ಚುವರಿ ಆಸ್ತಿ ಗಳಿಸಿದ್ದಾರೆ ಎಂದು ಅದರಲ್ಲಿ ಉಲ್ಲೇಖಿಸಲಾಗಿತ್ತು.

ಇದರಿಂದ ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದ ಜಮೀರ್ ಅಹಮದ್‌ ಖಾನ್ ಅವರು ತಮ್ಮ ವಿರುದ್ಧ ಎಸಿಬಿ ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿದ್ದರು. ಹಾಗೆಯೇ, ಅರ್ಜಿ ಇತ್ಯರ್ಥವಾಗುವರೆಗೆ ಎಫ್‌ಐಆರ್‌ಗೆ ತಡೆಯಾಜ್ಞೆ ನೀಡುವಂತೆ ಕೋರಿ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಮುಂದೆ ಎಸಿಬಿ ರಚನೆಯನ್ನು ಹೈಕೋರ್ಟ್ ರದ್ದುಪಡಿಸಿತ್ತು. ಇದರಿಂದಾಗಿ ಎಸಿಬಿ ದಾಖಲಿಸಿದ ಪ್ರಕರಣಗಳನ್ನು ಲೋಕಾಯುಕ್ತ ಸಂಸ್ಥೆ ಮುಂದುವರಿಸುತ್ತಿದೆ.

ಅರ್ಜಿ ವಿಚಾರಣೆ ವೇಳೆ ಜಮೀರ್ ಪರ ವಕೀಲರು, ಅಕ್ರಮ ಆಸ್ತಿ ಗಳಿಕೆ ಆರೋಪ ಸಂಬಂಧ ಎಫ್‌ಐಆರ್ ದಾಖಲಿಸುವ ಮುನ್ನ ತನಿಖಾ ಸಂಸ್ಥೆ ಪ್ರಾಥಮಿಕ ವಿಚಾರಣೆ ನಡೆಸುವುದು ಕಡ್ಡಾಯ. ಈ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಆದರೆ, ಈ ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ಎಸಿಬಿ ನೇರವಾಗಿ ಎಫ್‌ಐಆರ್ ದಾಖಲಿಸಿ, ತನಿಖೆ ಕೈಗೊಂಡಿದೆ. ಅರ್ಜಿದಾರರು ಆದಾಯ ಮೀರಿ ಅಕ್ರಮವಾಗಿ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯ (ಇಡಿ) ವರದಿ ಸಲ್ಲಿಸಿತ್ತು. ಆ ವರದಿ ಆಧರಿಸಿ ಎಸಿಬಿ ಎಫ್‌ಐಆರ್ ದಾಖಲಿಸಿದೆ. ಇದು ಕಾನೂನು ಬಾಹಿರ ಕ್ರಮವಾಗಿದೆ. ಆದ್ದರಿಂದ, ಎಸಿಬಿ ದಾಖಲಿಸಿರುವ ಎಫ್‌ಐಆರ್‌ಗೆ ತಡೆ ನೀಡಬೇಕು ಎಂದು ಕೋರಿದ್ದರು.

ಲೋಕಾಯುಕ್ತ ಪರ ವಕೀಲರು, ಅಕ್ರಮವಾಗಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸುವ ಮುನ್ನ ಪ್ರಾಥಮಿಕ ವಿಚಾರಣೆ ನಡೆಸುವ ಅಗತ್ಯವೇನೂ ಇಲ್ಲ. ಹೀಗಾಗಿ, ಎಸಿಬಿಯು ಅರ್ಜಿದಾರರ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಕ್ರಮ ಕಾನೂನುಬದ್ಧವಾಗಿದ್ದು, ತಡೆ ನೀಡಬಾರದು ಎಂದು ವಾದಿಸಿದ್ದರು. ಹೈಕೋರ್ಟ್‌ ಅವರ ವಾದವನ್ನು ಪುರಸ್ಕರಿಸಿದೆ. ಹೀಗಾಗಿ ಮುಂದಿನ ಕಾನೂನು ಪ್ರಕ್ರಿಯೆಗಳಿಗೆ ದಾರಿ ಸುಗಮವಾದಂತಾಗಿದೆ.

ಇದನ್ನೂ ಓದಿ : High court order : ಶಾಸಕ ನೆಹರು ಓಲೆಕಾರ್‌ ವಿರುದ್ಧದ 2 ವರ್ಷಗಳ ಶಿಕ್ಷೆಗೆ ತಡೆಯಾಜ್ಞೆ; ಅನರ್ಹತೆ ಭೀತಿಯಿಂದಲೂ ಪಾರು

Exit mobile version