ಬೆಂಗಳೂರು: ಅಕ್ರಮ ಆಸ್ತಿ ಸಂಪಾದನೆ ಅರೋಪದ ಮೇಲೆ ಎಸಿಬಿ ದಾಳಿಗೆ ಒಳಗಾಗಿರುವ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಅವರು ಭ್ರಷ್ಟಾಚಾರ ತನಿಖಾ ದಳದ ಮುಂದೆ ವಿಚಾರಣೆಗೆ ಹಾಜರಾಗಲು ಹಿಂದೇಟು ಹಾಕುತ್ತಿರುವುದು ಬೆಳಕಿಗೆ ಬಂದಿದೆ.
ಇತ್ತೀಚೆಗೆ ಜಮೀರ್ ಅವರ ಮನೆಗೆ ದಾಳಿ ಮಾಡಿದ ಎಸಿಬಿ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿತ್ತು. ಅದಕ್ಕಿಂತ ಮೊದಲು ಇ.ಡಿ. ಅಧಿಕಾರಿಗಳು ಶೋಧ ನಡೆಸಿದ್ದರು. ಜಮೀರ್ ಅವರು ಹೊಂದಿರುವ ಐಷಾರಾಮಿ ಬಂಗಲೆಯೇ ಅಕ್ರಮ ಆಸ್ತಿ ಸಂಗ್ರಹ ಆಪಾದನೆಯ ಕೇಂದ್ರ ಬಿಂದು ಎಂದು ಹೇಳಲಾಗಿದೆ.
ದಾಳಿ ನಡೆಸಿದ ಬಳಿಕ ಎಸಿಬಿ ಜಮೀರ್ ಅವರಿಗೆ ಎರಡು ಬಾರಿ ನೋಟಿಸ್ ನೀಡಿದೆ. ಆದರೆ, ಎರಡು ಬಾರಿಯೂ ಜಮೀರ್ ನಾನಾ ಕಾರಣಗಳನ್ನು ವಿಚಾರಣೆಗೆ ಹಾಜರಾಗಿರಲಿಲ್ಲ. ಈಗ ಸಿದ್ದರಾಮೋತ್ಸವದ ಬಳಿಕ ಹಾಜರಾಗುವುದಾಗಿ ಹೇಳುತ್ತಿದ್ದಾರೆ ಎನ್ನಲಾಗಿದೆ. ಈ ನಡುವೆ, ಎಸಿಬಿ ಜಮೀರ್ ಅವರಿಗೆ ಮೂರನೇ ನೋಟಿಸ್ ನೀಡಲು ಸಿದ್ಧತೆ ನಡೆಸುತ್ತಿದೆ ಎನ್ನಲಾಗಿದೆ.
ಸಿಕ್ಕಿದ್ದವು ಹಲವು ದಾಖಲೆಗಳು
ಜಮೀರ್ ಆಹ್ಮದ್ ಖಾನ್ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ಮಾಡಿದ್ದ ಎಸಿಬಿ, ಈ ವೇಳೆ ಸಾಕಷ್ಟು ಪ್ರಮಾಣದ ಆದಾಯ ಮೀರಿದ ಆಸ್ತಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಎಸಿಬಿ ನೋಟಿಸ್ ನೀಡುತ್ತಿದೆ. ಶಾಸಕ ಜಮೀರ್ ಖಾನ್ ಅವರ ಅಧಿಕೃತ ಆದಾಯ ವರ್ಷಕ್ಕೆ ನಾಲ್ಕು ಕೋಟಿ ಮಾತ್ರ. ಆದರೆ, ಅವರ ಬಳಿ ೮೭ ಕೋಟಿ ರೂ. ಆಸ್ತಿ ಇದೆ ಎಂದು ಈ ಹಿಂದೆ ಜಾರಿ ನಿರ್ದೇಶನಾಲಯ ತನ್ನ ವರದಿಯಲ್ಲಿ ತಿಳಿಸಿತ್ತು.
ಇದನ್ನೂ ಓದಿ| ಶಾಸಕ ಜಮೀರ್ ಆದಾಯ ₹4 ಕೋಟಿ, ಅಕ್ರಮ ಆಸ್ತಿ ₹87 ಕೋಟಿ: ಇ.ಡಿ. ವರದಿಯಲ್ಲಿ ಬಹಿರಂಗ