ರಾಯಚೂರು: ಕೊರೊನಾ ಸೋಂಕಿನ ಬಳಿಕ ಜನರಿಗೆ ಈಗ ಹೊಸ ತಲೆನೋವು ಶುರುವಾಗುವ ಲಕ್ಷಣ ಕಾಣಿಸಿಕೊಂಡಿದ್ದು, ಝಿಕಾ ವೈರಸ್ ಪತ್ತೆಯಾಗಿದೆ. ನೆರೆಯ ಕೇರಳ, ಮಹಾರಾಷ್ಟ್ರ ಸೇರಿ ವಿವಿಧ ರಾಜ್ಯಗಳಲ್ಲಿ ಈ ಸೋಂಕು ಕಾಣಿಸಿಕೊಂಡಿದ್ದು, ಇದೀಗ ಕರ್ನಾಟಕಕ್ಕೂ ಕಾಲಿಟ್ಟಿದ್ದು, ಆತಂಕ ಮೂಡಿಸಿದೆ. ರಾಜ್ಯದಲ್ಲೇ ಮೊದಲ ಝಿಕಾ ವೈರಸ್ (Zika virus) ರಾಯಚೂರಿನಲ್ಲಿ ಪತ್ತೆ ಆಗಿದೆ. ಈ ಸಂಬಂಧ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಖಚಿತಪಡಿಸಿದ್ದಾರೆ.
ರಾಯಚೂರು ಜಿಲ್ಲೆಯ ಬಾಲಕಿಯ ರಕ್ತ ಹಾಗೂ ಮೂತ್ರದ ಸ್ಯಾಂಪಲ್ ಅನ್ನು ಪುಣೆಯಲ್ಲಿ ಲ್ಯಾಬ್‌ಗೆ ಕಳುಹಿಸಲಾಗಿತ್ತು. ಅಲ್ಲಿಂದ ವರದಿ ಬಂದಿದ್ದು, 5 ವರ್ಷದ ಬಾಲಕಿಗೆ ಝಿಕಾ ವೈರಸ್ ಇರುವುದು ತಿಳಿದು ಬಂದಿದೆ. ಮಾನ್ವಿ ತಾಲೂಕಿನ ಕೋಳಿ ಕ್ಯಾಂಪ್ ನಿವಾಸಿ ಪವಿತ್ರಾ (5) ಎಂಬ ಬಾಲಕಿಗೆ ವೈರಸ್ ತಗುಲಿದೆ.
ಕಳೆದ 15 ದಿನಗಳ ಹಿಂದೆ ಜ್ವರ, ವಾಂತಿ ಭೇದಿಯಿಂದ ಬಾಲಕಿ ಬಳಲುತ್ತಿದ್ದಳು. ಮೊದಲು ಸಿಂಧನೂರು ತಾಲೂಕಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಬಳಿಕ ಡೆಂಗ್ಯು ಎಂದು ಭಾವಿಸಿ ವಿಜಯನಗರದ ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಡೆಂಗ್ಯು ಸಂಬಂಧ ಚಿಕಿತ್ಸೆ ನೀಡಿದರೂ ಅನುಮಾನಗೊಂಡ ವೈದ್ಯರು ಡಿಸೆಂಬರ್ 5 ರಂದು ಬಾಲಕಿಯ ರಕ್ತ ಹಾಗೂ ಮೂತ್ರದ ಸ್ಯಾಂಪಲ್ ಪಡೆದು ಪುಣೆಯ ವೈರಾಲಜಿ ಲ್ಯಾಬ್‌ಗೆ ಕಳುಹಿಸಿಕೊಟ್ಟಿದ್ದರು. ಈ ಲ್ಯಾಬ್‌ನಿಂದ ಬಂದ ವರದಿಯಲ್ಲಿ ಬಾಲಕಿಗೆ ಝಿಕಾ ವೈರಸ್ ಇರುವುದು ದೃಢಪಟ್ಟಿದೆ. ಬಾಲಕಿಯ ಸಂಪರ್ಕದಲ್ಲಿದ್ದ ಕುಟುಂಬಸ್ಥರ ರಕ್ತ ಹಾಗೂ ಮೂತ್ರ ಸ್ಯಾಂಪಲ್ ಅನ್ನು ಈಗ ಪಡೆಯಲಾಗಿದೆ.
ಜಿಲ್ಲೆಯಲ್ಲಿ ಸೋಂಕು ಪತ್ತೆ ಆಗುತ್ತಿದ್ದಂತೆ ರಾಯಚೂರು ಜಿಲ್ಲಾಡಳಿತ ಅಲರ್ಟ್ ಆಗಿದ್ದು, ಅಗತ್ಯ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸುತ್ತಿದೆ. ಇದರ ಜತೆಗೆ ಆರೋಗ್ಯ ಇಲಾಖೆ ಸಹ ಮಾರ್ಗಸೂಚಿಯನ್ನು ಪ್ರಕಟಿಸಲು ಸಿದ್ಧತೆ ನಡೆಸಿಕೊಳ್ಳುತ್ತಿದೆ. ರಾಜ್ಯದಲ್ಲೇ ಪ್ರಥಮ ಕೇಸ್ ಇದಾಗಿದ್ದು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆ ಮುಂದಾಗಿದೆ.
ಮದ್ದಿಲ್ಲದ ವೈರಸ್
ಝಿಕಾ ವೈರಸ್ ಸಾಂಕ್ರಾಮಿಕ ರೋಗವಾಗಿದ್ದು, ಇದಕ್ಕೆ ನಿಗದಿತ ಚಿಕಿತ್ಸೆ ಆಗಲಿ, ಲಸಿಕೆಯಾಗಲಿ ಇಲ್ಲ. ಈ ವೈರಸ್ ಗರ್ಭಿಣಿಯರಿಗೆ ಹೆಚ್ಚು ಅಪಾಯವೆಂದು ಅಧ್ಯಯನದಿಂದ ತಿಳಿದು ಬಂದಿದೆ. ಹಗಲಿನಲ್ಲಿ ಬರುವ ಈಡಿಸ್ ಸೊಳ್ಳೆಗಳ ಕಡಿತದಿಂದ ಝಿಕಾ ವೈರಸ್ (Zika virus) ಹರಡಲಿದೆ. ಹೀಗಾಗಿ ಆದಷ್ಟು ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕಿದೆ. ಜತೆಗೆ ಸೊಳ್ಳೆ ನಿವಾರಕ ಕ್ರೀಮ್ ಬಳಕೆ ಅಥವಾ ಸೊಳ್ಳೆ ಪರದೆ ಬಳಕೆ ಮಾಡುವ ಮೂಲಕ ಸೋಂಕಿನಿಂದ ತಪ್ಪಿಸಿಕೊಳ್ಳಲು ವೈದ್ಯರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ | ವಿಸ್ತಾರ Explainer | ಲೂಸ್ ಸಿಗರೇಟ್ ಮಾರಾಟ ನಿಷೇಧಕ್ಕೆ ಚಿಂತನೆ ಏಕೆ? ಇದರ ಹಿಂದಿನ ಉದ್ದೇಶ ಏನು?