Site icon Vistara News

Karnataka Election Results: ಕೈ – ಕಮಲ ಅದಲು ಬದಲಾದ ಸ್ಥಿತಿ, ಯಾವ ವಲಯದಲ್ಲಿ ಯಾವ ಪಕ್ಷಕ್ಕೆ ಹೆಚ್ಚಿನ ಸ್ಥಾನ?

Karnataka Election Results

Karnataka Election Results

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯ (Karnataka Election Results) ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್‌ ಸ್ಪಷ್ಟ ಬಹುಮತ ಪಡೆದು, ಅಧಿಕಾರದ ಗದ್ದುಗೆ ಏರಲು ಸಜ್ಜಾಗಿದೆ. 136 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪಾರಮ್ಯ ಸಾಧಿಸಿದ್ದು, ಸರ್ಕಾರ ರಚನೆಗೆ ಪಕ್ಷದ ನಾಯಕರು ಕಾತರದಿಂದ ಕಾಯುತ್ತಿದ್ದಾರೆ. ಇನ್ನು, ಚುನಾವಣೆ ಫಲಿತಾಂಶದಲ್ಲಿ ಯಾವ ವಲಯದ ಮತದಾರರು ಯಾರಿಗೆ ಮಣೆ ಹಾಕಿದ್ದಾರೆ, ಯಾವ ವಲಯದಲ್ಲಿ ಯಾವ ಪಕ್ಷ ಹೆಚ್ಚು ಸ್ಥಾನ ಗಳಿಸಿದೆ ಎಂಬುದರ ಮಾಹಿತಿ ಇಲ್ಲಿದೆ.

ಹಳೇ ಮೈಸೂರು ಭಾಗದಲ್ಲಿ ಎಂದಿನಂತೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪ್ರಾಬಲ್ಯ ಮುಂದುವರಿಸಿವೆ. ಕಾಂಗ್ರೆಸ್‌ 36 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ, ಜೆಡಿಎಸ್‌ 14 ಕ್ಷೇತ್ರ ಹಾಗೂ ಬಿಜೆಪಿ ಕೇವಲ 5 ಕ್ಷೇತ್ರಗಳಲ್ಲಿ ಗೆದ್ದಿದೆ. ಹಾಗೆಯೇ, ಕರಾವಳಿ ಹಾಗೂ ಗ್ರೇಟರ್‌ ಬೆಂಗಳೂರು ಹೊರತುಪಡಿಸಿ ರಾಜ್ಯದ ಬೇರೆ ವಲಯದಲ್ಲಿ ಬಿಜೆಪಿಗೆ ಮತದಾರರು ಮಣೆ ಹಾಕಿಲ್ಲ ಎಂಬುದು ಗಮನಾರ್ಹ.

ಹಳೇ ಮೈಸೂರು: ಜೆಡಿಎಸ್ ವೋಟ್ ಕಾಂಗ್ರೆಸ್‌ಗೆ ಶಿಫ್ಟ್

ಬಹುಶಃ ಜೆಡಿಎಸ್ ಇಷ್ಟು ಕೆಟ್ಟದಾಗಿ ಪ್ರದರ್ಶನ ತೋರಬಹುದು ಎಂದು ಯಾರೂ ಪರಿಗಣಿಸಿರಲಿಲ್ಲ. ತನ್ನ ಭದ್ರಕೋಟೆ ಹಳೇ ಮೈಸೂರನ್ನೇ ಕಾಂಗ್ರೆಸ್‌ಗೆ ಧಾರೆ ಎರೆದಿದೆ. ಮೈಸೂರು, ಮಂಡ್ಯ ಸೇರಿದಂತೆ ಈ ಭಾಗದಲ್ಲಿ ಒಟ್ಟು 57 ಕ್ಷೇತ್ರಗಳಿದ್ದು ಒಕ್ಕಲಿಗ ಮತದಾರರು ಅಧಿಕ ಪ್ರಮಾಣದಲ್ಲಿದ್ದಾರೆ. ಜತೆಗೆ, ಮುಸ್ಲಿಮ್ ಮತದಾರರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಕಾಂಗ್ರೆಸ್ ಈ ಚುನಾವಣೆಯಲ್ಲಿ 36 ಕ್ಷೇತ್ರಗಳನ್ನು ಗೆದ್ದುಕೊಂಡರೆ, ಜೆಡಿಎಸ್ 14 ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದೆ. ಜೆಡಿಎಸ್‍‌ ಸ್ಟ್ರಾಂಗ್ ಹೋಲ್ಡ್ ಎನಿಸಿದ್ದ ಮಂಡ್ಯದಲ್ಲಿ ಸಂಪೂರ್ಣವಾಗಿ ನೆಲಕಚ್ಚಿದೆ. ಅದರ ಲಾಭ ನೇರವಾಗಿ ಕಾಂಗ್ರೆಸ್‌ಗೆ ಆಗಿದೆ.

ಮೈಸೂರು ಜಿಲ್ಲೆಯ 11 ಕ್ಷೇತ್ರಗಳಲ್ಲಿ ಕಾಂಗ್ರೆಸ್ 8, ಜೆಡಿಎಸ್ ಹಾಗೂ ಬಿಜೆಪಿ 1 ಕ್ಷೇತ್ರದಲ್ಲಿ ಗೆಲುವು ಕಂಡಿದೆ. ಜೆಡಿಎಸ್ ಮಾತ್ರವಲ್ಲದೇ ಬಿಜೆಪಿ ಕೂಡ ತನ್ನ ಸ್ಥಾನಗಳನ್ನು ಕಳೆದುಕೊಂಡಿದೆ. ಈ ಹಿಂದೆ ಗೆದ್ದಿದ್ದ ಚಾಮರಾಜ ಮತ್ತು ನಂಜನಗೂಡು ಕ್ಷೇತ್ರದಲ್ಲಿ ಬಿಜೆಪಿ ಸೋಲು ಕಂಡಿದೆ. ಅಚ್ಚರಿ ಎಂದರೆ, ಕೊಡಗು ಜಿಲ್ಲೆಯ ಫಲಿತಾಂಶ. ದಶಕಗಳಿಂದ ಬಿಜೆಪಿಯ ಭದ್ರಕೋಟೆಯಾಗಿದ್ದ ಕೊಡಗಿನಲ್ಲಿ ಈ ಬಾರಿ ಕಾಂಗ್ರೆಸ್ ಎರಡೂ ಸ್ಥಾನಗಳನ್ನು ಗೆಲ್ಲುವ ಮೂಲಕ ಅಚ್ಚರಿ ಫಲಿತಾಂಶವನ್ನು ನೀಡಿದೆ. ಹಾಸನದಲ್ಲೂ ಜೆಡಿಎಸ್ ತನ್ನ ಪ್ರಭಾವವನ್ನು ಉಳಿಸಿಕೊಳ್ಳಲು ಸೋತಿದೆ. ಚಾಮರಾಜನಗರ ಪೂರ್ತಿ ಕಾಂಗ್ರೆಸ್‌ಮಯವಾಗಿದೆ.

ಫಲಿತಾಂಶ: ಒಟ್ಟು-57, ಬಿಜೆಪಿ-5, ಕಾಂಗ್ರೆಸ್-36, ಜೆಡಿಎಸ್-14, ಇತರೆ-0

ಕಿತ್ತೂರು ಕರ್ನಾಟಕದಲ್ಲಿ ಕಾಂಗ್ರೆಸ್ ಜಯದ ಪತಾಕೆ!

ಇತ್ತೀಚಿನ ಎರಡು ದಶಕದಲ್ಲಿ ಸಂಪೂರ್ಣವಾಗಿ ಬಿಜೆಪಿಯ ಪರವಾಗಿ ನಿಂತಿದ್ದ ಲಿಂಗಾಯತ ಸಮುದಾಯವು ಈ ಬಾರಿ ಕಾಂಗ್ರೆಸ್ ಕೈ ಹಿಡಿದಿದೆ. ವೀರೇಂದ್ರ ಪಾಟೀಲರಿಗೆ ಅವಮಾನ ಮಾಡಿದ ಕರ್ನಾಟಕಕ್ಕೆ ಕಾಂಗ್ರೆಸ್‌ನಿಂದ ದೂರ ಹೋಗಿದ್ದ ಲಿಂಗಾಯತ ಮತದಾರರು ಮತ್ತೆ ಕಾಂಗ್ರೆಸ್ ತೆಕ್ಕೆಗೆ ಬಂದಿದ್ದಾರೆ ಎಂಬುದು ಫಲಿತಾಂಶ ಲೆಕ್ಕಾಚಾರ ಹೇಳುತ್ತಿದೆ. ಈ ಭಾಗದಲ್ಲಿ ಒಟ್ಟು 56 ಕ್ಷೇತ್ರಗಳಿದ್ದು, ಈ ಪೈಕಿ ಕಾಂಗ್ರೆಸ್ 37, ಬಿಜೆಪಿ 18 ಮತ್ತು ಜೆಡಿಎಸ್ 1 ಕ್ಷೇತ್ರವನ್ನು ಗೆದ್ದುಕೊಂಡಿವೆ. 2018ರಲ್ಲಿ ಬಿಜೆಪಿ 36 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆದರೆ, ಈ ಬಾರಿ ಹೊಡೆತ ಬಿದ್ದಿದೆ. ಕಿತ್ತೂರು ಕರ್ನಾಟಕದ ಏಳೂ ಜಿಲ್ಲೆಗಳಲ್ಲಿ ಲಿಂಗಾಯತರು ಪ್ರಮುಖ ನಿರ್ಣಾಯಕ ಸ್ಥಿತಿಯಲ್ಲಿದ್ದಾರೆ. ಹಾಗಾಗಿ, ಲಿಂಗಾಯತರನ್ನು ಎದುರು ಹಾಕಿಕೊಂಡು ಯಾವ ಪಕ್ಷವೂ ಇಲ್ಲಿ ರಾಜಕೀಯ ಮಾಡಲು ಸಾಧ್ಯವಿಲ್ಲ. ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿ ಲಿಂಗಾಯತ ವಿರೋಧಿ ಎಂಬ ಭಾವನೆ ಮೂಡಿತ್ತು. ಅದರ ಪರಿಣಾಮವನ್ನು ನಾವು ಫಲಿತಾಂಶದಲ್ಲಿ ಕಾಣಬಹುದಾಗಿದೆ. ಏಳೂ ಜಿಲ್ಲೆಗಳಲ್ಲಿ ಕಾಂಗ್ರೆಸ್ ಈ ಬಾರಿ ಪ್ರಾಬಲ್ಯ ಮೆರೆದಿದೆ.

ಫಲಿತಾಂಶ: ಒಟ್ಟು-56, ಬಿಜೆಪಿ-18, ಕಾಂಗ್ರೆಸ್-37, ಜೆಡಿಎಸ್-01, ಇತರೆ-0

ಕಲ್ಯಾಣ ಕರ್ನಾಟಕದಲ್ಲೂ ಕಾಂಗ್ರೆಸ್ ಪ್ರಾಬಲ್ಯ

ಹೈದ್ರಾಬಾದ್ ಕಲ್ಯಾಣದಲ್ಲಿ ಮೊದಲಿನಿಂದಲೂ ಕಾಂಗ್ರೆಸ್ ತನ್ನ ಪ್ರಭಾವವನ್ನು ಹೊಂದಿದೆ. 41 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 26 ಕ್ಷೇತ್ರಗಳಲ್ಲಿ ಗೆಲುವು ಕಂಡಿದೆ. ಕಳೆದ ಚುನಾವಣೆಯಲ್ಲಿ19 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಈ ಬಾರಿ 10 ಸ್ಥಾನಕ್ಕೆ ಕುಸಿದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರೂರು ಆಗಿರುವ ಈ ಭಾಗದಲ್ಲಿ ಕಾಂಗ್ರೆಸ್ ಭರ್ಜರಿ ಕೊಯ್ಲು ಮಾಡಿದೆ. ವಿಶೇಷ ಎಂದರೆ, ಬಿಜೆಪಿ ಎರಡು ಜಿಲ್ಲೆಗಳಲ್ಲಿ ಬಿಜೆಪಿ ಶೂನ್ಯ ಸಾಧನೆ ಮಾಡಿದೆ. ಯಾದಗಿರಿಯಲ್ಲಿ ನಾಲ್ಕು ಸ್ಥಾನಗಳ ಪೈಕಿ 3 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದುಕೊಂಡಿದೆ. ಇಲ್ಲಿ ಖರ್ಗೆ ಅವರ ಲೋಕಲ್ ಅಸ್ಮಿತೆ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದೆ. ಕೆಆರ್‌ಪಿ ಒಂದು ಮತ್ತು ಜೆಡಿಎಸ್ 3 ಸ್ಥಾನಗಳನ್ನು ತಮ್ಮದಾಗಿಸಿಕೊಂಡಿವೆ.

ಫಲಿತಾಂಶ: ಒಟ್ಟು-41, ಬಿಜೆಪಿ-10, ಕಾಂಗ್ರೆಸ್-26, ಜೆಡಿಎಸ್-3, ಇತರೆ-2

ಕಾಂಗ್ರೆಸ್ ಕೈ ಹಿಡಿದ ಮಧ್ಯ ಕರ್ನಾಟಕ

ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ಈ ಬಾರಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಕಳೆದ ಬಾರಿ ಬಿಜೆಪಿ ಇಲ್ಲಿ ಸಮೃದ್ಧ ಗೆಲುವಿನ ಬೆಳೆ ತೆಗಿದತ್ತು. ಈಗ ಆ ಫಸಲು ಕೈ ಪಾಲಾಗಿದೆ. ಒಟ್ಟು 13 ಕ್ಷೇತ್ರಗಳ ಪೈಕಿ 11ರಲ್ಲಿ ಕಾಂಗ್ರೆಸ್ ಗೆದ್ದರೆ 2 ಸ್ಥಾನದಲ್ಲ ಬಿಜೆಪಿ ಗೆದ್ದಿದೆ. ಒಟ್ಟಾರೆ ಮಧ್ಯ ಕರ್ನಾಟಕದಲ್ಲಿರುವ 25 ಸ್ಥಾನಗಳ ಪೈಕಿ ಆರು ಕ್ಷೇತ್ರಗಳಷ್ಟೇ ಬಿಜೆಪಿಯ ಪಾಲಾಗಿವೆ. ಕಾಂಗ್ರೆಸ್ 18 ಸ್ಥಾನಗಳನ್ನು ಗೆದ್ದುಕೊಂಡಿದೆ. ಜೆಡಿಎಸ್ ಕೂಡ ಒಂದು ಸ್ಥಾನವನ್ನು ಗೆದ್ದುಕೊಂಡು ಅಸ್ತಿತ್ವವನ್ನು ಕಾಯ್ದುಕೊಂಡಿದೆ. ಕೆಲವು ಅಚ್ಚರಿ ಫಲಿತಾಂಶಗಳನ್ನು ಇಲ್ಲಿ ಕಾಣಬಹುದು. ಚಿಕ್ಕಮಗಳೂರು ಜಿಲ್ಲೆಯ ಐದಕ್ಕೂ ಐದೂ ಸ್ಥಾನಗಳನ್ನು ಬಾಚಿಕೊಂಡಿದೆ. ಶಿವಮೊಗ್ಗದಲ್ಲೂ ಹೆಚ್ಚಿನ ಸ್ಥಾನಗಳನ್ನು ಗೆದ್ದಿದೆ. ಈ ಬಾರಿ ಬಿಜೆಪಿ ಹೀನಾಯ ಪ್ರದರ್ಶನವನ್ನು ತೋರಿದೆ. ಈ ಭಾಗದಲ್ಲಿ ಅದು ಕೇವಲ 6 ಸ್ಥಾನಗಳಿಗೆ ತೃಪ್ತಿ ಪಡಬೇಕಾಗಿದೆ. ಜೆಡಿಎಸ್ ಕೂಡ ಒಂದು ಕ್ಷೇತ್ರವನ್ನುಗೆದ್ದಿದೆ. ಇತರರಿಗೆ ಯಾವುದೇ ಲಕ್ ಕುದುರಿಲ್ಲ.

ಫಲಿತಾಂಶ: ಒಟ್ಟು-25, ಬಿಜೆಪಿ-6, ಕಾಂಗ್ರೆಸ್-18, ಜೆಡಿಎಸ್-1, ಇತರೆ-0

ಕರಾವಳಿ ಕರ್ನಾಟಕದಲ್ಲಿ ಮುಂದುವರಿದ ಬಿಜೆಪಿ ಪ್ರಾಬಲ್ಯ

ಇಡೀ ಕರ್ನಾಟಕದಲ್ಲಿ ಬಿಜೆಪಿ ಸೋತು ಮಕಾಡೆ ಮಲಗಿದರೆ, ಕರಾವಳಿ ಭಾಗದಲ್ಲಿ ಮಾತ್ರ ಅದು ತನ್ನ ಹಿಡಿತವನ್ನು ಮತ್ತಷ್ಟು ಗಟ್ಟಿಗೊಳಿಸಿದು. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 19 ಕ್ಷೇತ್ರಗಳಿವೆ. ಈ ಪೈಕಿ ಬಿಜೆಪಿ 13 ಕ್ಷೇತ್ರಗಳನ್ನು ಗೆದ್ದರೆ ಕಾಂಗ್ರೆಸ್ 6 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ. ಜೆಡಿಎಸ್ ಶೂನ್ಯ ಸಾಧನೆ ಮಾಡಿದೆ. ಉಡುಪಿಯಲ್ಲಿ ಐದಕ್ಕೂ ಐದು ಸ್ಥಾನಗಳನ್ನು ಬಿಜೆಪಿ ಬಾಚಿಕೊಂಡರೆ, ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಒಂದು ಸ್ಥಾನವನ್ನು ಮಾತ್ರವೇ ಗೆಲ್ಲುತ್ತಿತ್ತು. ಪುತ್ತೂರು ಕ್ಷೇತ್ರವನ್ನು ಬಿಜೆಪಿಯೇ ಕಾಂಗ್ರೆಸ್ ಕಾಣಿಕೆ ಕೊಟ್ಟಿರುವ ಹಾಗಿದೆ.

ಫಲಿತಾಂಶ: ಒಟ್ಟು-19, ಬಿಜೆಪಿ-13 ಮತ್ತು ಕಾಂಗ್ರೆಸ್ 6

ಇದನ್ನೂ ಓದಿ: Haveri Election Results: ಹಾವೇರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ರುದ್ರಪ್ಪ ಲಮಾಣಿ ವಿಜಯ

ಬೃಹತ್ ಬೆಂಗಳೂರಲ್ಲಿ ಬಿಜೆಪಿ ಉತ್ತಮ ಪ್ರದರ್ಶನ

ಬೃಹತ್ ಬೆಂಗಳೂರು ವ್ಯಾಪ್ತಿಯಲ್ಲಿ ಒಟ್ಟು 28 ಕ್ಷೇತ್ರಗಳಿದ್ದು, ಈ ಪೈಕಿ ಬಿಜೆಪಿ 16, ಕಾಂಗ್ರೆಸ್ 12 ಸ್ಥಾನಗಳನ್ನು ಗೆದ್ದುಕೊಂಡಿದೆ. ಕಳೆದ ಬಾರಿ ಸ್ಥಾನಗಳನ್ನು ಗೆದ್ದುಕೊಂಡಿದ್ದ ಜೆಡಿಎಸ್ ಈ ಶೂನ್ಯ ಸಾಧನೆ ಮಾಡಿದೆ. ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿ ಬೆಂಗಳೂರಲ್ಲಿ ನಷ್ಟವಾಗಿಲ್ಲ. ಅಸಲಿಗೆ ಲಾಭವೇ ಆಗಿದೆ. ಕಳೆದ ಬಾರಿ ಒಂದು ಸ್ಥಾನವನ್ನುಗೆದ್ದಿದ್ದ ಜೆಡಿಎಸ್ ಈ ಬಾರಿ ಶೂನ್ಯ ಸಾಧನೆ ಮಾಡಿದೆ. ಈ ಬಾರಿ ಒಂದಿಷ್ಟು ಕ್ಷೇತ್ರಗಳು ಅದಲು ಬದಲಾಗಿವೆ. ಉದಾಹರಣೆಗೆ, ಬಿಜೆಪಿ ವಿ ಸೋಮಣ್ಣ ಅವರು ಪ್ರತಿನಿಧಿಸುತ್ತಿದ್ದ ಗೋವಿಂದರಾಜನಗರವನ್ನು ಕಾಂಗ್ರೆಸ್ ಗೆದ್ದರೆ, ಜಯನಗರ ಕ್ಷೇತ್ರವನ್ನು ಬಿಜೆಪಿ ಗೆದ್ದುಕೊಂಡಿದೆ. ಈ ಬಾರಿ ಸ್ಪರ್ಧಿಸಿದ್ದ 8 ಮಾಜಿ ಕಾರ್ಪೊರೇಟರ್‌ಗಳ ಪೈಕಿ ಜಯನಗರದಲ್ಲಿ ಸಿ ಕೆ ರಾಮಮೂರ್ತಿ ಅವರು ಮಾತ್ರವೇ ಗೆದ್ದಿದ್ದಾರೆ. ಪ್ರಚಾರದ ಅಂತಿಮ ಹಂತದಲ್ಲಿ ಪ್ರಧಾನಿ ಮೋದಿ ಅವರು ಕೈಗೊಂಡ ಎರಡು ಭರ್ಜರಿ ರೋಡ್ ಶೋಗಳು ಬಿಜೆಪಿ ಮತದಾರರ ಮೇಲೆ ಸಾಕಷ್ಟು ಪ್ರಭಾವ ಬೀರಿರುವುದನ್ನು ಕಾಣಬಹುದು.

ಫಲಿತಾಂಶ: ಒಟ್ಟು-28, ಬಿಜೆಪಿ-16, ಕಾಂಗ್ರೆಸ್-12

ಚುನಾವಣೆ ಫಲಿತಾಂಶ ಮತ್ತು ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Exit mobile version