ಈ ಕಥೆಯನ್ನು ಇಲ್ಲಿ ಆಲಿಸಿ:
ಅಂದು ಬೆಳಗ್ಗೆಯೇ ಚಕ್ರವರ್ತಿ ಅಕ್ಬರನ ಆಸ್ಥಾನಕ್ಕೆ ವ್ಯಕ್ತಿಯೊಬ್ಬ ದೂರು ತಂದ. ದೂರು ತಂದಂಥ ವ್ಯಕ್ತಿ ಸಾಮಾನ್ಯನಲ್ಲ, ಮೊಘಲ್ ಸಾಮ್ರಾಜ್ಯದ ಸಚಿವರಲ್ಲಿ ಒಬ್ಬನಾಗಿದ್ದ. ಆತನ ಮನೆಯೊಳಗಿಂದ ಪೆಟ್ಟಿಗೆ ತುಂಬಾ ಚಿನ್ನದ ನಾಣ್ಯಗಳು ನಾಪತ್ತೆಯಾಗಿದ್ದವು. ಸಚಿವರ ನಿವಾಸಗಳಿದ್ದ ಪ್ರದೇಶಗಳು ರಾಜ್ಯದ ಅತ್ಯಂತ ಸುರಕ್ಷಿತ ತಾಣಗಳಾಗಿದ್ದವು. ಸಾಕಷ್ಟು ಭದ್ರತೆಯಿದ್ದ ಈ ಜಾಗಗಳಿಗೆ ಹೊರಗಿನಿಂದ ಯಾರೂ ಬರುವುದಕ್ಕೆ ಸಾಧ್ಯವಿಲ್ಲ ಎಂಬ ಕಾರಣದಿಂದ ಮನೆಯ ಆಳು-ಕಾಳುಗಳನ್ನೆಲ್ಲಾ ವಿಚಾರಿಸಿ ಆಗಿತ್ತು. ಆದರೆ ಕದ್ದಿದ್ದು ಯಾರು ಎಂಬ ಬಗ್ಗೆ ಯಾವ ಸುಳಿವೂ ದೊರೆತಿರಲಿಲ್ಲ.
ಈ ಸೂಕ್ಷ್ಮ ವಿಷಯವನ್ನು ಬಿಡಿಸುವುದಕ್ಕೆ ಬೀರಬಲ್ಲನೇ ಸರಿ ಎನಿಸಿತು ಅಕ್ಬರನಿಗೆ. ಆದರೆ ಜಾಣ ಬೀರಬಲ್ಲನಿಗೆ ಒಂದು ವಿಷಯವಂತೂ ಖಾತ್ರಿ ಇತ್ತು. ಇದು ಖಂಡಿತಕ್ಕೂ ಒಳಗಿನವರದ್ದೇ ಕೈವಾಡ ಎಂದು. ಮನೆಯ ನೌಕರರನ್ನು ಈಗಾಗಲೇ ವಿಚಾರಿಸಿದ್ದಾಗಿದೆ. ಅದರಿಂದ ಪ್ರಯೋಜನವೂ ಆಗಿಲ್ಲ ಎಂದಾದರೆ, ಆಚೀಚೆ ಮನೆಯವರ ಚಾಲಾಕಿತನ ಇರಬಹುದು. ಆದರೆ ಆ ಬೀದಿಯಲ್ಲಿ ಇರುವುದೆಲ್ಲಾ ಸಚಿವರ ಮನೆಗಳೇ! ಯಾರ ಮೇಲೆ ಸಂಶಯ ಪಟ್ಟರೂ ಕಷ್ಟವೇ. ಈ ಸಿಕ್ಕನ್ನು ಬಿಡಿಸುವುದು ಹೇಗೆ ಎಂದು ಕೆಲಕಾಲ ಆಲೋಚಿಸಿದ ಬೀರಬಲ್ಲ. ಕಡೆಗೊಂದು ಉಪಾಯ ಮಾಡಿದ.
ಅಂದು ರಾತ್ರಿಯ ಹೊತ್ತಿಗೆ ಆ ಮೊಹಲ್ಲೆಯ ನಡುಬೀದಿಯಲ್ಲಿ ಕಂಬವೊಂದನ್ನು ಹುಗಿದು, ಕತ್ತೆಯೊಂದನ್ನು ಕಟ್ಟಿದ. “ನಡುರಾತ್ರಿಯಲ್ಲಿ ಆ ಕತ್ತೆಯ ಬಳಿ ಬಂದು, ಅದರ ಬಾಲ ಹಿಡಿದು, `ಚಿನ್ನದ ನಾಣ್ಯಗಳನ್ನು ನಾನು ಕದ್ದಿಲ್ಲ’ ಎಂದು ಹೇಳ್ಬೇಕು. ಬಾಲ ಮುಟ್ಟಿ ಸುಳ್ಳು ಹೇಳಿದರೆ ಕತ್ತೆಗೆ ವಿದ್ಯುತ್ ಆಘಾತವಾದಂತೆ ಆಡುತ್ತದೆ. ಎಲ್ಲರೂ ಅವರವರ ಸಮಯಕ್ಕೆ ಬಂದು ಈ ಕೆಲಸ ಮಾಡಬಹುದು” ಎಂದು ಆ ಮೊಹಲ್ಲೆಯ ಎಲ್ಲಾ ಸಚಿವರಿಗೂ ಒಸಗೆ ಕಳಿಸಿದ. ಕತ್ತೆಯ ಬಾಲಕ್ಕೆ ಕಪ್ಪು ಮಸಿಯನ್ನು ಬಳಿದಿದ್ದ. ಕತ್ತಲೆಯಲ್ಲಿ ಅದು ಯಾರಿಗೂ ಕಾಣಲು ಸಾಧ್ಯವೇ ಇರಲಿಲ್ಲ.
ಮಾರನೇ ದಿನ ಬೆಳಗಾಗುತ್ತಿದ್ದಂತೆಯೇ ಎಲ್ಲರಿಗೂ ರಾಜಸಭೆಗೆ ಹಾಜರಾಗುವಂತೆ ಸೂಚನೆ ಹೋಯಿತು. ಎಲ್ಲರೂ ಲಗುಬಗೆಯಿಂದ ಆಸ್ಥಾನಕ್ಕೆ ಹಾಜರಾದರು. ಪ್ರತಿಯೊಬ್ಬೊಬ್ಬರದ್ದೂ ಅಂಗೈ ನೋಡುತ್ತಾ ಬಂದ ಬೀರಬಲ್ಲ. ಒಳಾಡಳಿತ ಸಚಿವರ ಒಬ್ಬರ ಹೊರತಾಗಿ ಉಳಿದ ಎಲ್ಲರ ಕೈಗಳಿಗೂ ಮಸಿ ಬಳಿದಿತ್ತು. “ಬಂಗಾರದ ನಾಣ್ಯ ಕದ್ದ ವ್ಯಕ್ತಿ ಖಂಡಿತಕ್ಕೂ ಕತ್ತೆಯ ಬಾಲ ಮುಟ್ಟುವುದಿಲ್ಲ ಎಂಬ ನನ್ನ ನಿರೀಕ್ಷೆ ತಪ್ಪಾಗಲಿಲ್ಲ. ಕದ್ದ ಸಂಪತ್ತು ಮರಳಿಸಿ ಸಚಿವರೇ” ಎಂದು ಒಳಾಡಳಿತ ಸಚಿವರನ್ನು ಉದ್ದೇಶಿಸಿ ಹೇಳಿದ ಬೀರಬಲ್ಲ. ಸಚಿವರ ಕೈ ಕಪ್ಪಾಗದಿದ್ದರೂ, ಮುಖ ಕಪ್ಪಿಟ್ಟಿತ್ತು. ಬೀರಬಲ್ಲನ ಬುದ್ಧಿವಂತಿಕೆ ಮತ್ತೆ ಸಾಬೀತಾಗಿತ್ತು.
ಇದನ್ನೂ ಓದಿ: ಮಕ್ಕಳ ಕಥೆ: ಸಿಟ್ಟಿನ ಕೈಗೆ ಬುದ್ಧಿ ಕೊಟ್ಟರೇನಾಗುತ್ತದೆ?