Site icon Vistara News

ಮಕ್ಕಳ ಕಥೆ: ಒವೆನ್‌ನ ಬ್ಲಾಂಕೆಟ್

blanket boy

ಈ ಕಥೆಯನ್ನು ಇಲ್ಲಿ ಕೇಳಿ:

https://vistaranews.com/wp-content/uploads/2023/07/WhatsApp-Audio-2023-07-01-at-162.mp3

ಬ್ರಿಟನ್‌ ದೇಶದ ಒಂದೂರಿನಲ್ಲಿ ಒವೆನ್‌ ಎಂಬ ಪುಟ್ಟ ಬಾಲಕನಿದ್ದ. ಮನೆಯಲ್ಲೇ ಹಾಯಾಗಿ ಆಡಿಕೊಂಡಿದ್ದ ಆತನನ್ನು ಬರುವ ವರ್ಷದಿಂದ ಶಾಲೆಗೆ ಸೇರಿಸುವ ಬಗ್ಗೆ ಅಪ್ಪ-ಅಮ್ಮ ಮನೆಯಲ್ಲಿ ಚರ್ಚಿಸುತ್ತಿದ್ದರು. ಶಾಲೆಯ ಬಗ್ಗೆ ವಿಶೇಷ ಕಲ್ಪನೆಗಳೇನೂ ಆತನಿಗೆ ಇರದಿದ್ದರೂ, ಹೋಗಲು ಸ್ವಲ್ಪ ಅಳುಕಿತ್ತು. ಆ ಅಳುಕಿಗೊಂದು ಕಾರಣವೂ ಇತ್ತು. ‌

ಒವೆನ್‌ನದ್ದೊಂದು ಪುಟ್ಟ ಬ್ಲಾಂಕೆಟ್‌ ಇತ್ತು. ಬ್ಲಾಂಕೆಟ್‌ ಎಂದರೆ… ಆತ ತೊಟ್ಟಿಲ ಮಗುವಾಗಿದ್ದಾಗ ಹೊದೆಯುತ್ತಿದ್ದ ಹಳದಿ ಬಣ್ಣದ, ಮೆತ್ತಗಿನ ವಸ್ತ್ರ. ಈಗ ಬ್ಲಾಂಕೆಟ್‌ ಇದ್ದಷ್ಟೇ ಇತ್ತು, ಒವೆನ್‌ ದೊಡ್ಡವನಾಗಿದ್ದ. ಹಾಗಾಗಿ ಅದೀಗ ಆತನಿಗೆ ಬ್ಲಾಂಕೆಟ್‌ ಬದಲು ಟವೆಲ್‌ನಂತಾಗಿತ್ತು. ಬ್ಲಾಂಕೆಟ್‌ ಹೋಗಿ ಟವೆಲ್‌ ಆಗಿದ್ದು ಸಮಸ್ಯೆಯಲ್ಲ, ಹೋದಲ್ಲೆಲ್ಲಾ ಆತ ಆ ಬ್ಲಾಂಕೆಟ್‌ ತೆಗೆದುಕೊಂಡು ಹೋಗುತ್ತಿದ್ದುದು ಸಮಸ್ಯೆಯ ಮೂಲವಾಗಿತ್ತು.

ಪಾರ್ಕಿಗೆ ಆಡಲು ಹೋದರೆ ಬ್ಲಾಂಕೆಟ್ ಬೇಕು, ಅಮ್ಮನೊಡನೆ ತರಕಾರಿ ತರಲು ಹೋದರೆ ಬ್ಲಾಂಕೆಟ್ ಜೊತೆಗಿರಬೇಕು, ಗೆಳೆಯರ ಮನೆಯ ಹುಟ್ಟುಹಬ್ಬದ ಪಾರ್ಟಿಗೆ ಹೋದರೆ ಅದರಲ್ಲೇ ಕೈ ಒರೆಸಿಕೊಳ್ಳಬೇಕು, ಟ್ರೈನ್‌ ಆಟ ಆಡುತ್ತಿದ್ದರೆ ನಿಲ್ದಾಣವೆಂದು ಬ್ಲಾಂಕೆಟ್ ಹಾಸಿ ಅಲ್ಲೇ ನಿದ್ದೆ ಮಾಡಬೇಕು, ಪಿಕ್ನಿಕ್‌ ಆಟದಲ್ಲಿ ಅದರ ಮೇಲೆ ಎಲ್ಲರೂ ಕುಳಿತುಕೊಳ್ಳಬೇಕು, ಹಲ್ಲಿನ ಡಾಕ್ಟರ್‌ ಬಳಿಗೆ ಹೋದರೆ ಅಳುವ ಕಣ್ಣು-ಮೂಗುಗಳನ್ನು ಒರೆಸಿಕೊಳ್ಳಲು ಇದೇ ಬ್ಲಾಂಕೆಟ್ ಬೇಕು, ಸುಪರ್‌ಮ್ಯಾನ್‌ ಆಟದಲ್ಲಿ ಇದನ್ನೇ ಕುತ್ತಿಗೆಗೆ ಕಟ್ಟಿಕೊಳ್ಳಬೇಕು… ಎಚ್ಚರ ಇದ್ದಷ್ಟು ಹೊತ್ತೂ ಬ್ಲಾಂಕೆಟ್ ಬೇಕು ಎಂದು ಲೆಕ್ಕಹಾಕಿದರೆ ಹಾಗಲ್ಲ, ರಾತ್ರಿ ಮಲಗುವಾಗ ಹಾಸಿಗೆಯ ಮೇಲೂ ಅದು ಬೇಕು!

ಅವನ ಅಮ್ಮನಿಗಂತೂ ಒವೆನ್‌ನ ಆ ಕೊಳಕು ಬ್ಲಾಂಕೆಟ್ ಕಂಡು ತಲೆ ಚಿಟ್ಟು ಹಿಡಿದಿತ್ತು. ಎಲ್ಲಿಂದ ಎಲ್ಲಿಗೆ ಹೋದರೂ ಬ್ಲಾಂಕೆಟ್ ಬೇಕಾದ್ದರಿಂದ, ಅದರ ಮೂಲ ಬಣ್ಣ ಯಾವುದು ಎಂದು ಕಂಡು ಹಿಡಿಯಲೇ ಆಗದಷ್ಟು ಕೊಳಕಾಗಿತ್ತು. ಅದನ್ನು ತೊಳೆದು ಸ್ವಚ್ಛ ಮಾಡಲು ಆಕೆ ಸಾಹಸವನ್ನೇ ಮಾಡಬೇಕಿತ್ತು. ಏಕೆಂದರೆ, ಒವೆನ್‌ ಕೈಯಿಂದ ಆ ಬ್ಲಾಂಕೆಟ್ ಬಿಡಿಸಿಕೊಳ್ಳಲೇ ಆಗುತ್ತಿರಲಿಲ್ಲ. ಬಲವಂತದಿಂದ ಬಿಡಿಸಿಕೊಂಡರೆ ಅತ್ತು ರಂಪ ಮಾಡುತ್ತಿದ್ದ. ಬ್ಲಾಂಕೆಟ್ ಕಾಣದಿದ್ದರೆ ಕಂಗಾಲಾಗಿ ಕಿರುಚಾಡುತ್ತಿದ್ದ. ಆತ ನಿದ್ದೆಯಲ್ಲಿರುವಾಗ ಅದನ್ನು ತೊಳೆಯಲು ಹೋದರೆ ಗಂಟೆಗಟ್ಟಲೆ ಬೇಕಾಗುತ್ತಿತ್ತು ಅದನ್ನು ಶುಚಿ ಮಾಡಲು.

ಹಾಲು, ಸಾಂಬಾರು, ಟೊಮೇಟೊ ಕೆಚಪ್‌, ಕೇಕಿನ ಕ್ರೀಮ್‌, ಚಾಕಲೇಟ್‌ ಸಿರಪ್‌, ಮಣ್ಣು-ಮಸಿ ಎಲ್ಲವೂ ಆ ಬ್ಲಾಂಕೆಟ್ಗೆ ಅಂಟಿಕೊಂಡು ಹಳದಿ ಬಣ್ಣದ ಮೃದುವಾದ ಬಟ್ಟೆಯೀಗ ಬಣ್ಣಗೆಟ್ಟು ರಟ್ಟಿನಂತಾಗಿರುತ್ತಿತ್ತು. ಸೋಪು, ಬಿಸಿನೀರು ಎಂದೆಲ್ಲಾ ಹಾಕಿ ಅಮ್ಮ ಅದನ್ನು ಸ್ವಚ್ಛ ಮಾಡಲು ಒದ್ದಾಡುತ್ತಿದ್ದರು. ಆ ಹಾಳು ಬ್ಲಾಂಕೆಟನ್ನು ಆತ ಊಟದ ಟೇಬಲ್ಲಿಗೂ ತರುತ್ತಿದ್ದ, ಮಲಗುವಾಗ ಹಾಸಿಗೆಯಲ್ಲೂ ಇರಿಸಿಕೊಳ್ಳುತ್ತಿದ್ದರಿಂದ ಅದನ್ನು ಸ್ವಚ್ಛ ಮಾಡುವುದು ಅಮ್ಮನಿಗೆ ಅನಿವಾರ್ಯವಾಗಿತ್ತು. ಇದೀಗ ಶಾಲೆಗೆ ಹೋಗುವಾದ ಅದನ್ನು ಮನೆಯಲ್ಲೇ ಬಿಟ್ಟು ಹೋಗಬೇಕಲ್ಲ ಎಂಬುದಕ್ಕಾಗಿ ಶಾಲೆಗೆ ಹೋಗುವ ಬಗ್ಗೆಯೇ ಒವೆನ್‌ಗೆ ಅಳುಕು ಪ್ರಾರಂಭವಾಗಿತ್ತು.

ʻಈ ಬಣ್ಣಗೆಟ್ಟ ಮೂದೇವೀನೂ ಶಾಲೆಗೆ ಅಡ್ಮಿಶನ್‌ ಮಾಡ್ಸಿದಾರಂತಾ ನಿಮ್ಮಮ್ಮʼ ಪಕ್ಕದ ಮನೆಯ ಅಜ್ಜಿ ಕೇಳಿದ್ದರು ಬ್ಲಾಂಕೆಟ್ ತೋರಿಸುತ್ತಾ. ಆಗಲೇ ಆತನಿಗೆ ತಿಳಿದಿದ್ದು ಶಾಲೆಯಲ್ಲಿ ಬ್ಲಾಂಕೆಟ್ಗೆ ಅಡ್ಮಿಶನ್‌ ದೊರೆತಿಲ್ಲ ಎಂಬುದು! ಆದರೆ ಅದನ್ನು ಬಿಟ್ಟು ಹೋಗುವುದಕ್ಕೆ ಆತನಿಗೆ ಎಳ್ಳಿನಷ್ಟೂ ಮನಸ್ಸಿರಲಿಲ್ಲ. ಹಾಗಾಗಿ ಎಳೆಯ ಮಕ್ಕಳಿಗೆ ಹಾಲಿನ ಬಾಟಲಿ ಬಿಡಿಸುವ ಯಜ್ಞದಂತೆ, ಒವೆನ್‌ ಕೈಯಿಂದ ಬ್ಲಾಂಕೆಟ್ ಬಿಡಿಸುವ ನಾನಾ ಯೋಜನೆಗಳನ್ನು ಅಮ್ಮ-ಅಪ್ಪ ತಯಾರಿಸತೊಡಗಿದರು. ಇದಕ್ಕೆ ಆಚೆ ಮನೆ ಅಜ್ಜಿ ಮತ್ತು ಈಚೆ ಮನೆಯ ತಾತನ ನೆರವೂ ಇತ್ತು.

ಹಾಲುಹಲ್ಲು ಬಿದ್ದಾಗ ಅದನ್ನು ರಾತ್ರಿ ದಿಂಬಿನಡಿ ಇರಿಸಿಕೊಂಡರೆ, ಟೂತ್‌ಫೇರಿ ಅಥವಾ ಹಲ್ಕಿನ್ನರಿ ಬಂದು ಆ ಮಗುವಿಗೆ ದುಡ್ಡು ಅಥವಾ ಚಾಕಲೇಟ್‌ ಇರಿಸುತ್ತಾಳೆ ಎಂಬುದು ಪಶ್ಚಿಮ ದೇಶಗಳಲ್ಲಿ ಪ್ರತೀತಿ. ಅದೇ ಉಪಾಯವನ್ನು ಈಗ ಉಪಯೋಗಿಸಲು ಒವೆನ್‌ನ ಹೆತ್ತವರು ನಿರ್ಧರಿಸಿದರು. ಬ್ಲಾಂಕೆಟನ್ನು ದಿಂಬಿನಡಿ ಇರಿಸಿಕೊಂಡು ಮಲಗಿದರೆ ಕಿನ್ನರಿ ಬಂದು ಬ್ಲಾಂಕೆಟ್ ತೆಗೆದುಕೊಂಡು ಚಾಕಲೇಟ್‌ ಇರಿಸುತ್ತಾಳೆ ಎಂದು ಆತನಿಗೆ ಹೇಳಿದರು. ಒವೆನ್‌ ರಾತ್ರಿ ನಿದ್ದೆ ಮಾಡುತ್ತಿದ್ದಾಗ ಅಪ್ಪ ಬಂದು ಬ್ಲಾಂಕೆಟ್ ಮಾಯ ಮಾಡುವುದು, ಅಮ್ಮ ಬಂದು ಚಾಕಲೇಟ್‌ ಇರಿಸುವುದು ಎಂದು ಅವರಿಬ್ಬರೂ ನಿರ್ಧರಿಸಿಕೊಂಡಿದ್ದರು.

ಇದನ್ನೂ ಓದಿ: ಮಕ್ಕಳ ಕಥೆ: ರೈತನ ಪ್ರಾಮಾಣಿಕತೆ

ಬೆಳಗೆದ್ದು ನೋಡಿದರೆ, ಖುಷಿಯಿಂದ ಚಾಕಲೇಟ್‌ ತಿನ್ನುತ್ತಾ ಬ್ಲಾಂಕೆಟ್ ನೇತಾಡಿಸಿಕೊಂಡು ಬಂದ ಒವೆನ್! ಬ್ಲಾಂಕೆಟ್ ಕಿನ್ನರಿ ಬಂದು, ನನ್ನ ಬ್ಲಾಂಕೆಟ್ ವಾಸನೆಯನ್ನು ಸಹಿಸಲಾರದೆ ಅಲ್ಲೇ ಬಿಟ್ಟು ಚಾಕಲೇಟ್‌ ಮಾತ್ರ ಕೊಟ್ಟು ಹೋದಳು ಎಂದು ಒವೆನ್‌ ಕುಣಿದಾಡುತ್ತಿದ್ದ. ವಿಷಯವೇನೆಂದರೆ ಆತ ಬ್ಲಾಂಕೆಟನ್ನು ದಿಂಬಿನಡಿ ಇಟ್ಟೇ ಇರಲಿಲ್ಲ. ಹಾಗಾಗಿ ಅಪ್ಪನಿಗೆ ಬ್ಲಾಂಕೆಟ್ ಹುಡುಕಿದರೂ ಸಿಗಲಿಲ್ಲ; ಬ್ಲಾಂಕೆಟ್ ಮಾಯವಾಗಿಲ್ಲ ಅಮ್ಮನಿಗೆ ತಿಳಿಯಲೇ ಇಲ್ಲ. ʻಅದಕ್ಕೊಂದಷ್ಟು ವಿನೇಗರ್‌ ಸುರಿ. ಅದರ ಗಲೀಜು ವಾಸನೆಗೆ ತಾನೇ ಬ್ಲಾಂಕೆಟ್ ಬಿಸಾಡುತ್ತಾನೆʼ ಎಂದರು ನೆರೆಮನೆಯ ತಾತ. ಅಪ್ಪ ಅದನ್ನೇ ಮಾಡಿದರು. ಅದರ ವಾಸನೆ ಸಹಿಸಲಾರದೆ ಇಡೀ ಬ್ಲಾಂಕೆಟನ್ನು ಮರಳಿನೊಳಗೆ ಹುಗಿದಿಟ್ಟ ಒವೆನ್‌. ಸ್ವಲ್ಪ ಹೊತ್ತಿನ ನಂತರ ಅದನ್ನು ಮನೆಯೊಳಗೆ ತರುತ್ತಿದ್ದಂತೆ ಮನೆಯೆಲ್ಲಾ ಮರಳು ಚೆಲ್ಲಾಡುತ್ತಿದೆಯೆಂದು ಅಮ್ಮ ಅದನ್ನು ತೊಳೆದು ಸ್ವಚ್ಛ ಮಾಡಿಬಿಟ್ಟರು. ವಾಸನೆಯೆಲ್ಲಾ ಶುದ್ಧ, ಒವೆನ್‌ ಮತ್ತೆ ಗೆದ್ದ!

ಈ ಬ್ಲಾಂಕೆಟ್ ಕಥೆಯನ್ನು ಹೇಗೆ ಮುಗಿಸಬೇಕು ಎಂಬುದೇ ಅಮ್ಮನಿಗೆ ತಿಳಿಯುತ್ತಿರಲಿಲ್ಲ. ಅಷ್ಟರಲ್ಲೇ ಮನೆ ಪಕ್ಕದ ಮರದಲ್ಲಿ ಹಕ್ಕಿಯೊಂದು ಗೂಡು ಕಟ್ಟಿದ್ದನ್ನು ಅಪ್ಪ ತೋರಿಸಿದರು. ಆ ಗೂಡಿನೊಳಗೆ ಮೊಟ್ಟೆ ಇಟ್ಟು ಮರಿ ಮಾಡಿದ್ದ ಹಕ್ಕಿ ದೊಡ್ಡ ಕೀಟವೊಂದನ್ನು ತಂದು ಎಲ್ಲಾ ಮರಿಗಳಿಗೂ ಹಂಚುತ್ತಿತ್ತು. ಅದನ್ನು ನೋಡುತ್ತಿದ್ದಂತೆ ಅಮ್ಮನಿಗೊಂದು ಉಪಾಯ ಹೊಳೆಯಿತು. ಆ ಬ್ಲಾಂಕೆಟ್ ಮರಳಿ ಕೊಡುವುದಾಗಿ ಹೇಳಿ, ಆತನಿಂದ ಅದನ್ನು ಪಡೆದುಕೊಂಡರು ಅಮ್ಮ. ನೋಡುತ್ತಿದ್ದಂತೆಯೇ ಇಡೀ ಬ್ಲಾಂಕೆಟನ್ನು ಕತ್ತರಿಸಿ ಹಲವಾರು ಚೌಕಗಳನ್ನು ಮಾಡಿದರು. ಅವುಗಳಿಗೆಲ್ಲಾ ಚಂದಕ್ಕೆ ಅಂಚು ಹೊಲಿದರು. ಸ್ವಲ್ಪವೇ ಹೊತ್ತಿನಲ್ಲಿ ಒವೆನ್‌ ತೊಟ್ಟಿಲ ಬ್ಲಾಂಕೆಟ್ ಹೋಗಿ, ಶಾಲೆಗೆ ಹೋಗುವ ಹುಡುಗನ ಕರವಸ್ತ್ರಗಳು ಸಿದ್ಧವಾದವು.

ಮೊದಲಿಗೆ ಅಮ್ಮ ಏನು ಮಾಡುತ್ತಿದ್ದಾರೆ ಎಂಬುದು ಅರ್ಥವಾಗದೆ ಪಿಳಿಪಿಳಿ ನೋಡುತ್ತಿದ್ದ ಒವೆನ್‌ ಈಗ ಖುಷಿಯಿಂದ ಕುಣಿದಾಡಿದ. ಕರವಸ್ತ್ರ ಹಿಡಿದುಕೊಂಡು ಶಾಲೆಗೆ ಹೋಗಲು ಯಾರ ಅಭ್ಯಂತರವೂ ಇರಲಿಲ್ಲ. ಅವನೀಗ ಯಾವುದೇ ಅಳುಕಿಲ್ಲದೆ, ಶಾಲೆ ಯಾವತ್ತು ಪ್ರಾರಂಭ ಎಂದು ಸಂತೋಷದಿಂದ ಕಾಯುತ್ತಿದ್ದಾನೆ.

ಇದನ್ನೂ ಓದಿ: ಮಕ್ಕಳ ಕಥೆ: ಕೈಗೆಟುಕಿದ ದ್ರಾಕ್ಷಿ ಸಿಹಿ!

Exit mobile version