ಈ ಕಥೆಯನ್ನು ಇಲ್ಲಿ ಕೇಳಿ:
ಒಂದಾನೊಂದು ಊರಿನಲ್ಲಿ ಒಬ್ಬ ರೈತನಿದ್ದ. ಅವನ ಪ್ರಾಯ ಸುಮಾರು 50 ವರ್ಷಗಳ ಮೇಲಾಗಿತ್ತು. ಜೀವನವಿಡೀ ಆತ ಪ್ರಾಮಾಣಿಕತೆಯಿಂದ ಕಷ್ಟಪಟ್ಟು ದುಡಿದಿದ್ದರೂ ಇನ್ನೂ ಬಡವನಾಗಿಯೇ ಇದ್ದ. ಹೊಟ್ಟೆಬಟ್ಟೆಗೆ ಹೊಂದಿಸುವಷ್ಟರಲ್ಲಿ ಸಾಕೋಸಾಕಾಗುತ್ತಿತ್ತು.
ಒಂದು ದಿನ ಆತನಿಗೊಂದು ಆಲೋಚನೆ ಬಂತು. ಇಷ್ಟು ವರ್ಷ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರ ಪ್ರತಿಫಲವಾಗಿ, ಒಂದು ಚೀಲದ ತುಂಬಾ ಹಣ ತನ್ನ ಮನೆಯೊಳಗೇ ಸಿಕ್ಕಿದ್ದರೆ ಎಷ್ಟು ಒಳ್ಳೆಯದಿತ್ತು! ಯಾರದ್ದೋ ಹಣ ತನಗೆ ಸೇರಿತು ಎಂಬಂಥ ಅನುಮಾನಗಳೇ ಇಲ್ಲದೇ, ಸಂತೋಷದಿಂದ ಅಷ್ಟೂ ಸಂಪತ್ತನ್ನು ತಾನೇ ಇರಿಸಿಕೊಳ್ಳಬಹುದಿತ್ತು ಎಂದುಕೊಂಡ. ಆದರೆ ಹಾಗೆಲ್ಲಾ ಆಗುವುದಕ್ಕೆ ಸಾಧ್ಯವಿಲ್ಲ ಎಂದುಕೊಂಡರೂ, ಆಗಿದ್ದರೆ ಒಳ್ಳೇದಿತ್ತು ಎಂಬ ಭಾವ ಮತ್ತೆಮತ್ತೆ ಆತನ ಮನದಲ್ಲಿ ಬರುತ್ತಿತ್ತು.
ಒಮ್ಮೆ ಆತ ತನ್ನ ಹೊಲದಲ್ಲಿ ಕೆಲಸ ಮಾಡುತ್ತಿದ್ದ. ನೆಲ ಅಗೆಯುವಾಗ ಗುದ್ದಲಿಯ ಅಂಚಿಗೆ ಏನೋ ತಾಗಿದಂತಾಯ್ತು. ಇನ್ನಷ್ಟು ಅಗೆದ. ಭೂಮಿಯೊಳಗೊಂದು ಹಳೆಯ ಮಣ್ಣಿನ ಗಡಿಗೆಯಂತೆ ಇರುವುದು ಕಾಣಿಸಿತು. ಹೇಗೋ ಕಷ್ಟಪಟ್ಟು ಅದನ್ನು ಹೊರತೆಗೆದ. ಒಳಗೇನಿದೆ ಎಂದು ಕುತೂಹಲದಿಂದ ನೋಡಿದರೆ- ಗಡಿಗೆಯ ತುಂಬಾ ಬೆಳ್ಳಿಯ ನಾಣ್ಯಗಳಿದ್ದವು. ಎಷ್ಟೋ ದಿನಗಳಿಂದ ತಾನಂದುಕೊಂಡಂತೆ ಈ ಸಂಪತ್ತು ಸಿಕ್ಕಿತು ಎಂದು ಸಂಭ್ರಮಿಸಿದ. ಆದರೆ ಅಷ್ಟರಲ್ಲಿ ಆತನಿಗೊಂದು ಅನುಮಾನ ಬಂತು.
ʻಈ ಸಂಪತ್ತು ನನ್ನದಂತೂ ಅಲ್ಲ. ಯಾರದ್ದು ಎಂಬುದೂ ಗೊತ್ತಿಲ್ಲ. ಯಾರೋ ಇದನ್ನು ಇಲ್ಲಿರಿಸಿ, ಅದನ್ನು ಮತ್ತೆ ತೆಗೆಯುವುದಕ್ಕೆಂದು ಬಂದರೆ? ಅವರ ಶ್ರಮದ ದುಡಿಮೆಯೆಲ್ಲ ನಾನು ತೆಗೆದಂತಾಗುವುದಿಲ್ಲವೇ? ನನಗೇ ಸೇರಬೇಕಾದ ಸಂಪತ್ತಾಗಿದ್ದರೆ, ಅದು ನನ್ನ ಮನೆಯಲ್ಲೇ ದೊರೆಯಬೇಕಿತ್ತು. ಛೇ! ಇದು ನನ್ನದಲ್ಲʼ ಎಂದುಕೊಳ್ಳುತ್ತಾ ಅದನ್ನು ಅಲ್ಲಿಯೇ ಹುಗಿದು ಮನೆಗೆ ಹಿಂದಿರುಗಿದ. ನಡೆದಿದ್ದನ್ನು ತನ್ನ ಮಡದಿಗೆ ವಿವರಿಸಿದ.
ಆತನ ಹೆಂಡತಿಗೆ ಇದನ್ನೆಲ್ಲಾ ಕೇಳಿ ಸಿಕ್ಕಾಪಟ್ಟೆ ಸಿಟ್ಟು ಬಂತು. ʻಅಯ್ಯೋ ದೇವ್ರೆ! ನಿಮ್ಮ ಬುದ್ಧಿಗೇನು ಮಂಕು ಬಡಿಯಿತು ಎನ್ನುವುದೇ ತಿಳಿಯುವುದಿಲ್ಲ! ನಿಮಗೆ ಸೇರಬೇಕಾದ ಸಂಪತ್ತು ಅಲ್ಲದಿದ್ದರೆ, ನಿಮಗದು ಹೇಗಾದರೂ ಸಿಗುತ್ತದೆ ಹೊಲದಲ್ಲಿ. ನಿಮ್ಮ ಬುದ್ಧಿ ಹೀಗೇ ಇದ್ದರೆ ಈ ಜನ್ಮದಲ್ಲಿ ನಾವು ಹೊಟ್ಟೆ ತುಂಬಾ ಉಣ್ಣುವುದಿಲ್ಲʼ ಎಂದು ಕೂಗಾಡಿದಳು. ರಾತ್ರಿ ಆತ ಮಲಗಿದ ನಂತರ, ಒಂದು ಹಳೆಯ ಗಡಿಗೆ ತುಂಬಾ ಇದ್ದಿಲು ತುಂಡುಗಳನ್ನು ಹೊತ್ತುಕೊಂಡು ಹೊಲಕ್ಕೆ ಹೋದಳು. ಆತ ಹೇಳಿದ ಸ್ಥಳವನ್ನು ನೆನಪಿಟ್ಟುಕೊಂಡು ಹೋಗಿ ಅಗೆದಳು. ಅಲ್ಲಿ ಆಕೆಗೆ ಬೆಳ್ಳಿಯ ನಾಣ್ಯ ತುಂಬಿದ ಗಡಿಗೆ ಸಿಕ್ಕಿತು. ಅದನ್ನು ಹೊರತೆಗೆದು, ಬದಲಿಗೆ ಇದ್ದಿಲು ತುಂಬಿದ ಗಡಿಗೆಯನ್ನು ಅಲ್ಲಿರಿಸಿ ಮುಚ್ಚುವ ಉದ್ದೇಶ ಆಕೆಗಿತ್ತು. ಆದರೆ ಬೆಳ್ಳಿಯ ನಾಣ್ಯದ ಗಡಿಗೆ ಎಷ್ಟು ಭಾರವಿತ್ತೆಂದರೆ ಅದನ್ನೆಳೆದು ಹೊರಗಿಡುವಷ್ಟರಲ್ಲಿ ಆಕೆಗೆ ಸುಸ್ತಾಯಿತು. ಇದನ್ನು ಹೊತ್ತುಕೊಂಡು ಮನೆಗೆ ಹೋಗುವುದು ದೂರದ ಮಾತು ಎಂದುಕೊಂಡ ಆಕೆ, ನೇರವಾಗಿ ತನ್ನ ನೆರೆಮನೆಯಾತನಲ್ಲಿಗೆ ಹೋದಳು. ಹೊಲದಲ್ಲಿ ಬೆಳ್ಳಿ ನಾಣ್ಯದ ಗಡಿಗೆ ಸಿಕ್ಕಿದ್ದನ್ನು ತಿಳಿಸಿ, ಅದನ್ನು ಹೊತ್ತುಕೊಂಡು ಬಂದರೆ, ಅರ್ಧ ನೀನಿಟ್ಟುಕೊಳ್ಳಬಹುದು ಎಂದು ಹೇಳಿದಳು.
ಇದನ್ನೂ ಓದಿ: ಮಕ್ಕಳ ಕಥೆ: ಕೈಗೆಟುಕಿದ ದ್ರಾಕ್ಷಿ ಸಿಹಿ!
ಮರುಕ್ಷಣದಲ್ಲೆ ನೆರೆಯಾತ ಹೊಲಕ್ಕೆ ಓಡಿದ. ಆಕೆ ಹೇಳಿದ ಜಾಗವನ್ನೇ ಗುರುತಿಟ್ಟುಕೊಂಡು ಹೋದ. ಆತನಿಗೆ ಬೆಳ್ಳಿಯ ರುಪಾಯಿಯ ಗಡಿಗೆ ಮಾತ್ರವಲ್ಲದೆ, ಇದ್ದಿಲು ತುಂಬಿದ ಗಡಿಗೆಯೂ ಅಲ್ಲಿರುವುದು ತಿಳಿದಿರಲಿಲ್ಲ. ಕತ್ತಲೆಯಲ್ಲಿ ಸಿಕ್ಕಿದ ಗಡಿಗೆಗೆ ಕೈಹಾಕಿದ. ಒಳಗೆ ದೊರೆತಿದ್ದು ಇದ್ದಿಲು ಚೂರುಗಳು. ʻಛೇ! ಎಂಥಾ ದುಷ್ಟ ಹೆಂಗಸು ಈಕೆ. ಸರಿರಾತ್ರಿಯ ಹೊತ್ತಿನಲ್ಲಿ ಇಂಥಾ ಕುಚೋದ್ಯ ಮಾಡುತ್ತಾಳಲ್ಲʼ ಎಂದು ಕೋಪಗೊಂಡ ಆತ, ಆ ಗಡಿಗೆಯನ್ನು ಹೊತ್ತುತಂದು ಎಲ್ಲವನ್ನೂ ಆಕೆಯ ಮನೆಯ ಹೊಗೆ ಕೊಳವೆಯೊಳಗೆ ಸುರಿಯುವುದಾಗಿ ನಿಶ್ಚಯಿಸಿದ. ಹೊರಲಾರದಷ್ಟು ಭಾರವಾಗಿದ್ದ ಆ ಗಡಿಗೆಯನ್ನು ಹೊತ್ತುಕೊಂಡು ಬಂದ ಆತ, ನಿಧಾನವಾಗಿ ಮನೆಯ ಮಾಡಿನ ಮೇಲೆ ಹತ್ತಿ ಗಡಿಗೆಯಲ್ಲಿದ್ದಿದ್ದನ್ನು ಹೊಗೆಕೊಳವೆಯೊಳಗೆ ಸುರಿದು ಮನೆಗೆ ಹೋಗಿ ನಿದ್ದೆಮಾಡಿದ.
ಬೆಳಗ್ಗೆ ಎದ್ದು ಬಂದ ರೈತನಿಗೆ ಅಚ್ಚರಿ ಕಾದಿತ್ತು. ಅರೆ! ತನ್ನ ಮನೆಯ ಹೊಗೆಕೊಳವೆಯ ಕೆಳಗೆ ಒಂದು ರಾಶಿ ಬೆಳ್ಳಿ ನಾಣ್ಯಗಳು! ಇದ್ದಿಲಿನ ಗಡಿಗೆಯನ್ನು ಹೊತ್ತು ತರುವ ಬದಲು, ನೆರೆಮನೆಯಾತ ರಾತ್ರಿಯ ಕತ್ತಲಿನಲ್ಲಿ ಬೆಳ್ಳಿಯ ರುಪಾಯಿಯ ಗಡಿಗೆಯನ್ನು ಹೊತ್ತುತಂದಿದ್ದ. ಈಗ ರೈತನಿಗೆ ಈ ಸಂಪತ್ತು ತನ್ನದು ಎನ್ನುವುದಕ್ಕೆ ಯಾವುದೇ ಅನುಮಾನ ಉಳಿದಿರಲಿಲ್ಲ. ತನ್ನದಲ್ಲ ಎಂದು ಹೊಲದಲ್ಲೇ ಬಿಟ್ಟು ಬಂದರೂ, ತನ್ನ ಮನೆಯೊಳಗೇ ಇದು ಬಂತು ಎಂದಾದರೆ, ತನ್ನ ಅದೃಷ್ಟ ದೊಡ್ಡದು ಎಂದುಕೊಂಡು ಆ ಸಂಪತ್ತನ್ನು ತೆಗೆದಿರಿಸಿಕೊಂಡ. ತನ್ನ ಕುಟುಂಬದೊಂದಿಗೆ ಸುಖವಾಗಿ ಬಾಳಿದ.
ಇದನ್ನೂ ಓದಿ: ಮಕ್ಕಳ ಕಥೆ: ಚಿನ್ನದ ಬಣ್ಣದ ಕುಂಬಳಕಾಯಿ