ಈ ಕಥೆಯನ್ನು ಇಲ್ಲಿ ಕೇಳಿ:
ನರಿ ಮತ್ತು ಹುಳಿ ದ್ರಾಕ್ಷಿಯ ಕಥೆಯನ್ನು ಸಾಮಾನ್ಯವಾಗಿ ಕೇಳಿರುತ್ತೇವೆ. ಈ ಕಥೆಯಲ್ಲೂ ನರಿ ಮತ್ತು ದ್ರಾಕ್ಷಿ ಇರುವುದು ಹೌದಾದರೂ ಹುಳಿಯಲ್ಲ, ದ್ರಾಕ್ಷಿ ಸಿಹಿಯಾದ ಕಥೆಯಿದು. ಕಾಡಿನಲ್ಲಿ ವಾಸ ಮಾಡ್ತಿದ್ದ ನರಿಯೊಂದು ಒಮ್ಮೆ ಕಾಡಂಚಿನ ಊರಿಗೆ ಬಂತು. ಅಲ್ಲೊಂದು ಹಸಿರಾಗಿರುವ ತೋಟ ಕಂಡಿತು ಅದಕ್ಕೆ. ಜನರಾರೂ ಕಾಣದೆ ಇದ್ದಿದ್ದರಿಂದ ನೇರವಾಗಿ ತೋಟದೊಳಗೆ ಹೋಯಿತು. ಅಲ್ಲಿ ಹಲವಾರು ಹಣ್ಣಿನ ಮರಗಳನ್ನು ಬೆಳೆಸಲಾಗಿತ್ತು. ಈ ಕಥೆಯ ನರಿಗೂ ದ್ರಾಕ್ಷಿ ಹಣ್ಣುಗಳೆಂದರೆ ತುಂಬಾ ಇಷ್ಟ. ಆದರೆ ಅಲ್ಲೆಲ್ಲೂ ದ್ರಾಕ್ಷಿ ತೋಟವೇ ಕಾಣಲಿಲ್ಲ ಅದಕ್ಕೆ. ನಿರಾಸೆಯಿಂದ ಸುಮ್ಮನೆ ಗೊತ್ತು-ಗುರಿ ಇಲ್ಲದ ಹಾಗೆ ತೋಟವನ್ನೆಲ್ಲ ಸುತ್ತೋದಕ್ಕೆ ಶುರು ಮಾಡಿತು.
ಇದಕ್ಕಿದ್ದ ಹಾಗೆ ತಲೆ ಮೇಲೇನೋ ಬಿದ್ದ ಹಾಗಾಯ್ತು ನರಿಗೆ. ಮೇಲೆ ನೋಡಿದ್ರೆ, ಮರದ ಮೇಲೊಂದು ಮಂಗಣ್ಣ ಪುರುಸೊತ್ತಿಲ್ಲದ ಹಾಗೆ ಏನನ್ನೋ ತಿನ್ನುತ್ತಾ ಕುಳಿತಿತ್ತು. ಅದು ಕಿತ್ತು ತಿನ್ನುವಾಗ ಒಂದು ಸಣ್ಣ ಹಣ್ಣು ಕೈಯಿಂದ ಜಾರಿ ನರಿಯ ತಲೆಯ ಮೇಲೆ ಬಿದ್ದಿದ್ದು. ನೋಡಿದರೆ- ಅರೆ! ಆ ಮರವನ್ನು ಆವರಿಸಿದ್ದು ದ್ರಾಕ್ಷಿ ಬಳ್ಳಿ! ನರಿಯ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ʻದ್ರಾಕ್ಷಿ ತೋಟ ಇಲ್ಲದಿದ್ದರೇನಾಯ್ತು, ಚೆನ್ನಾಗಿ ಫಲ ಬಿಡುತ್ತಿರುವ ದ್ರಾಕ್ಷಿ ಬಳ್ಳಿ ಸಿಕ್ಕಿತಲ್ಲ, ಸಾಕುʼ ಎಂದುಕೊಂಡಿತು ನರಿ. ಆದರೆ ಕೊಯ್ಯುವುದು ಹೇಗೆ?
ದ್ರಾಕ್ಷಿ ಬಳ್ಳಿ ಹಬ್ಬಿಕೊಂಡಿದ್ದು ಮರವೊಂದಕ್ಕೆ. ಬಳ್ಳಿಯಲ್ಲಿ ಗೊಂಚಲುಗಳು ತೂಗಾಡುತ್ತಿದ್ದರೂ, ಕೆಳಗೆ ನಿಂತಿದ್ದ ನರಿಯ ಬಾಯಿಗೆ ಎಟಕುವುದು ಸಾಧ್ಯವಿರಲಿಲ್ಲ. ಹಾಗಾದರೆ ದ್ರಾಕ್ಷಿ ಹಣ್ಣು ತಿನ್ನುವುದು ಹೇಗೆ? ಯೋಚಿಸಿತು ನರಿ. ಮೇಲಿರುವ ಮಂಗಣ್ಣ ಕಣ್ಣಿಗೆ ಬಿತ್ತು. ʻಹೇಗಿದ್ದಿ ಮಂಗಣ್ಣಾ?ʼ ವಿಚಾರಿಸಿತು ನರಿ. ʻಏನೋ ಪರವಾಗಿಲ್ಲ ನರಿಯಣ್ಣ. ಕೈಲಾದಷ್ಟು ತಿಂದುಂಡುಕೊಂಡು ಇದ್ದೀನಿ!ʼ ಅಂತು ಮಂಗ. ʻಇತ್ತೀಚೆಗೆ ಮಳೆ-ಬೆಳೆ ಎಲ್ಲಾ ಹೇಗೆ? ಗದ್ದೆ-ತೋಟಗಳ ಫಸಲೆಲ್ಲಾ ಕೈಗೆ ಸಿಗ್ತಾ ಇದ್ದೀಯ?ʼ ಮಾತು ಮುಂದುವರಿಸಿತು ನರಿ. ʻಹೂಂ, ಫಸಲೇನೋ ಚೆನ್ನಾಗಿದೆ. ಆದ್ರೆ ಎಲ್ಲೋದರೂ ಹಾಳು ಮನುಷ್ಯರ ಕಾಟ! ಅವರು ಓಡ್ಸೋದ್ರೊಳಗೆ ಅಷ್ಟೋ ಇಷ್ಟೋ ಕೈಗೆ ಸಿಗ್ತಾ ಇದೆʼ ತನ್ನ ಕಷ್ಟ ಹೇಳಿತು ಕೋತಿ. ʻಹೋಗ್ಲಿ ಬಿಡು, ಪಾಲಿಗೆ ಬಂದಿದ್ದೇ ಪಂಚಾಮೃತ. ಅದ್ಸರಿ, ಮೇಲಿರೋ ದ್ರಾಕ್ಷಿ ಹಣ್ಣು ಹೇಗಿದೆ? ಒಂದೆರಡು ಕೆಳಗೆ ಹಾಕು ನೋಡೋಣʼ ನರಿ ಉಪಾಯದಿಂದ ಕೇಳಿತು.
ನರಿಯ ಮಾತಿಗೆ, ತನ್ನ ಕೈಯಲ್ಲಿದ್ದ ದ್ರಾಕ್ಷಿ ಹಣ್ಣುಗಳನ್ನೇ ನಾಲ್ಕಾರು ಕೆಳಗೆಸೆಯಿತು ಮಂಗ. ಮೇಲಿಂದ ಎಸೆದಿದ್ದನ್ನು ತಿಂದ ನರಿಯ ಮುಖ ಸೊಟ್ಟಗಾಯಿತು. ʻಯಾಕೆ ನರಿಯಣ್ಣ, ದ್ರಾಕ್ಷಿ ರುಚಿಯಿಲ್ಲವೇ?ʼ ಎಂಬ ಮಂಗಣ್ಣನ ಮಾತಿಗೆ, ʻಪರವಾಗಿಲ್ಲ, ಸುಮಾರಾಗಿದೆ. ಹಣ್ಣು ಕೊಟ್ಟಿದ್ದಕ್ಕೆ ಧನ್ಯವಾದಗಳುʼ ಅಂತ ಹೇಳಿ ಅಲ್ಲಿಂದ ಹೊರಟಿತು ನರಿಯಣ್ಣ. ಹಾಗೆ ನೋಡಿದರೆ ದ್ರಾಕ್ಷಿಯ ರುಚಿ ಚೆನ್ನಾಗೇ ಇತ್ತು. ಆದರೆ ನರಿಯ ಮನಸ್ಸಿಗೆ ತಿಂದ ಹಣ್ಣಿನ ಬಗ್ಗೆ ಸಮಾಧಾನ ಇರಲಿಲ್ಲ. ಮಾರನೇ ದಿನ ಅದು ಮತ್ತೆ ಆ ತೋಟಕ್ಕೆ ಹೋಯಿತು.
ಇದನ್ನೂ ಓದಿ: ಮಕ್ಕಳ ಕಥೆ: ಚಿನ್ನದ ಬಣ್ಣದ ಕುಂಬಳಕಾಯಿ
ಮಂಗಣ್ಣನ ಸವಾರಿ ಆಗಲೇ ಆಗಮಿಸಿತ್ತು, ರಸಭರಿತ ದ್ರಾಕ್ಷಿ ಹಣ್ಣುಗಳನ್ನದು ಮೆಲ್ಲುತ್ತಿತ್ತು. ಸ್ವಲ್ಪ ದೂರದಿಂದ ಓಡೋಡುತ್ತಲೇ ಬಂದ ನರಿ ಛಂಗನೆ ದ್ರಾಕ್ಷಿ ಗೊಂಚಲುಗಳತ್ತ ಜಿಗಿಯಿತು. ಊಹುಂ, ಬಾಯಿಯ ಹತ್ತಿರಕ್ಕೂ ಸಿಗಲಿಲ್ಲ ಹಣ್ಣುಗಳು. ಆದರೆ ನರಿಯನ್ನು ಕಂಡ ಮಂಗಣ್ಣ ಹಿಂದಿನ ದಿನದಂತೆ ನಾಲ್ಕಾರು ಹಣ್ಣುಗಳನ್ನು ಕೆಳಗೆಸೆಯಿತು. ಆ ಹಣ್ಣುಗಳನ್ನು ಬಾಯಿಗೆ ಹಾಕುತ್ತಿದ್ದಂತೆಯೇ ಮತ್ತೆ ನರಿಯ ಮುಖದಲ್ಲಿ ಅತೃಪ್ತಿ ಕಾಣಿಸಿಕೊಂಡಿತು. ʻಹಣ್ಣು ಹೇಗಿದೆ?ʼ ಎಂಬ ಮಂಗನ ಪ್ರಶ್ನೆಗೆ, ʻಪರವಾಗಿಲ್ಲʼ ಎಂಬ ಹಳೆಯ ಉತ್ತರವನ್ನೇ ನೀಡಿತು ನರಿ. ಮಾರನೇ ದಿನವೂ ನರಿ ಬಂತು. ದಿನವೂ ಬಂದಾಗ ಎಷ್ಟು ದೂರದಿಂದ ಬಂದು, ಎಷ್ಟು ಎತ್ತರ ಹಾರಿದರೆ ದ್ರಾಕ್ಷಿ ಗೊಂಚಲು ಬಾಯಿಗೆ ದೊರೆಯಬಹುದು ಎಂಬುದೇ ಅದರ ಲೆಕ್ಕಾಚಾರವಾಗಿತ್ತು. ಪ್ರತಿದಿನ ಹಾರಿ ಪ್ರಯತ್ನಿಸಿದರೂ, ಊಹುಂ, ಸ್ವಲ್ಪ ಎತ್ತರ ಕಡಿಮೆಯಾಗುತ್ತಿತ್ತು. ಮಂಗಣ್ಣ ಕೆಳಗೆಸೆದ ಹಣ್ಣು ತಿಂದು ಅತೃಪ್ತಿಯಿಂದ ನರಿ ಮರಳುತ್ತಿತ್ತು.
ಹೀಗೆ ವಾರಗಟ್ಟಲೆ ಪ್ರಯತ್ನಿಸಿದ ಮೇಲೆ, ಒಂದು ದಿನ ದ್ರಾಕ್ಷಿಯ ಗೊಂಚಲು ನರಿಯ ಬಾಯಿಗೆ ಸಿಕ್ಕೇಬಿಟ್ಟಿತು. ಖುಷಿಯಿಂದ ಕುಣಿದಾಡಿತು ನರಿ. ʻಮಂಗಣ್ಣಾ, ಈ ದ್ರಾಕ್ಷಿ ಹಣ್ಣುಗಳು ಎಷ್ಟೊಂದು ರುಚಿಯಾಗಿವೆ ಅಲ್ಲವಾ?ʼ ಎಂದು ಮತ್ತೆಮತ್ತೆ ಹಾರಿ ಹಣ್ಣುಗಳನ್ನು ತಿಂದಿತು. ನರಿಯ ಅವತಾರ ಕಂಡ ಮಂಗನಿಗೆ ಅಚ್ಚರಿ. ʻಅರೆ! ದಿನವೂ ತಿಂದಿದ್ದು ಇದೇ ಬಳ್ಳಿಯ ಹಣ್ಣುಗಳನ್ನೇ ಅಲ್ಲವೇ? ಪ್ರತಿ ಬಾರಿ ತಿಂದಾಗಲೂ ಹಣ್ಣು ಪರವಾಗಿಲ್ಲ, ಸುಮಾರಾಗಿದೆ ಎನ್ನುತ್ತಿದ್ದ ನಿನಗೆ ಇವತ್ತು ಈ ಹಣ್ಣು ರುಚಿಯಾಗಿದ್ದು ಹೇಗೆ?ʼ ಕೇಳಿತು ಮಂಗ.
ʻಮಂಗಣ್ಣಾ, ಸುಲಭಕ್ಕೆ ದೊರೆಯುವುದಕ್ಕೆ ರುಚಿ ಕಡಿಮೆ, ಅದರಿಂದ ತೃಪ್ತಿಯೂ ದೊರೆಯುವುದಿಲ್ಲ. ಈ ಹಣ್ಣುಗಳನ್ನೀಗ ನಾನೇ ಕಷ್ಟಪಟ್ಟು ದಕ್ಕಿಸಿಕೊಂಡೆ. ಕಷ್ಟದ ಫಲ ಮಧುರವಾಗಿಯೇ ಇರುತ್ತದೆʼ ಎಂದು ಬಾಯಿ ಚಪ್ಪರಿಸುತ್ತಾ ಹೇಳಿತು ನರಿ.
ಇದನ್ನೂ ಓದಿ: ಮಕ್ಕಳ ಕಥೆ: ಭೂದೇವತೆಗಳು ಮತ್ತು ಸಹೋದರರು