Site icon Vistara News

ಮಕ್ಕಳ ಕಥೆ: ಸನ್ಯಾಸಿ ಮತ್ತು ಇಲಿ

sanyasi and rat children story

ಈ ಕಥೆಯನ್ನು ಇಲ್ಲಿ ಆಲಿಸಿ:

https://vistaranews.com/wp-content/uploads/2023/07/WhatsApp-Audio-2023-07-29-at-111.mp3

ಒಂದೂರಿನ ಹೊರಗೊಂದು ದೇವಸ್ಥಾನವಿತ್ತು. ಅಲ್ಲೊಬ್ಬ ಸನ್ಯಾಸಿ ವಾಸವಾಗಿದ್ದ. ಅವನು ಊರಿನವರಿಗೆಲ್ಲಾ ಪರಿಚಿತ ಆಗಿದ್ದು ಸನ್ಯಾಸಿಗಿಂತಲೂ ಒಬ್ಬ ವೈದ್ಯನಾಗಿ. ತುಂಬಾ ವರ್ಷಗಳ ಕಾಲ ದೇಶಾಂತರ ಹೋಗಿದ್ದ ಆತ, ಯಾವ್ಯಾವುದೋ ಊರಿನ ಏನೇನೋ ಔಷಧಗಳ ಬಗ್ಗೆ ತಿಳಿದುಕೊಂಡಿದ್ದ. ಸುತ್ತ ಹತ್ತೂರಲ್ಲಿ ಯಾರಿಗೂ ಗೊತ್ತಿಲ್ಲದ ಗಿಡ-ಮೂಲಿಕೆಗಳೆಲ್ಲಾ ಆತನಿಗೆ ಗೊತ್ತಿದ್ದವು. ಹಾಗಾಗಿ ಸುತ್ತಮುತ್ತಲ ಜನರೆಲ್ಲಾ ಆತನಲ್ಲಿ ಔಷಧಿ ಕೇಳಿಕೊಂಡು ಬರ್ತಾ ಇದ್ದರು. ಔಷಧಿ ಕೇಳಿಕೊಂಡು ಬಂದವರು ತಾವಾಗಿಯೇ ಏನಾದರೂ ಕೊಟ್ಟರೆ ಆತ ತೆಗೆದುಕೊಳ್ತಾ ಇದ್ದ. ಹಾಗೆ ಜನರಿಂದ ಸ್ವೀಕರಿಸಿದ ಕಾಣಿಕೆಯನ್ನು ತನ್ನ ಅಗತ್ಯಕ್ಕೆ ಬೇಕಷ್ಟು ಬಳಸಿಕೊಂಡು, ಉಳಿದಿದ್ದನ್ನು ಆತ ಆ ದೇವಸ್ಥಾನದಲ್ಲಿ ಕೆಲಸ ಮಾಡ್ತಾ ಇದ್ದವರಿಗೆ ಕೊಡ್ತಾ ಇದ್ದ.

ಈವರೆಗೆ ಎಲ್ಲವೂ ಚನ್ನಾಗಿಯೇ ಇತ್ತು. ಆದರೆ ಇತ್ತೀಚೆಗೆ ಆ ದೇವಾಲಯದ ಆವರಣದಲ್ಲಿ ಇಲಿಯೊಂದು ಬಂದು ಸೇರಿಕೊಂಡಿತ್ತು. ಬಿಲ ಮಾಡಿಕೊಂಡಿದ್ದರೆ ತೊಂದರೆಯಿಲ್ಲ, ಅದರದ್ದು ಒಂದೆರಡೇ ಅಲ್ಲ ಉಪಟಳ! ಸನ್ಯಾಸಿಯ ಭಕ್ತರು ಅಥವಾ ರೋಗಿಗಳು ನೀಡಿದ್ದ ಧವಸ-ಧಾನ್ಯಗಳ ಕಾಣಿಕೆಗೆ ಕನ್ನ ಹಾಕುತ್ತಿತ್ತು; ಆತ ಔಷಧಿಗಾಗಿ ಒಣಗಿಸಿಟ್ಟುಕೊಂಡಿದ್ದ ನಾರು-ಬೇರುಗಳನ್ನು ಮಾಯ ಮಾಡುತ್ತಿತ್ತು; ಆತ ಸಂಗ್ರಹಿಸಿದ್ದ ಕಾಯಿಗಳನ್ನು ಮುರಿದು ಮುಕ್ಕುತ್ತಿತ್ತು; ಕಾಯಿಸಿಟ್ಟಿದ್ದ ಲೇಹಗಳ ರುಚಿ ನೋಡುತ್ತಿತ್ತು. ಸನ್ಯಾಸಿ ಮಾಡುವುದೆಲ್ಲವೂ ತನ್ನದೇ ಪೋಷಣೆಗಾಗಿ ಎಂಬಂತೆ ರಾಜಾರೋಷವಾಗಿ ಲೂಟಿ ಮಾಡುತ್ತಿತ್ತು.

ತನ್ನ ಔಷಧಿ ವಸ್ತುಗಳನ್ನು ರಕ್ಷಿಸಿಕೊಳ್ಳಲು ಸನ್ಯಾಸಿ ಒದ್ದಾಡುತ್ತಿದ್ದ. ಔಷಧೀಯ ಹಣ್ಣ-ಕಾಯಿಗಳು ಮತ್ತು ಬೇರು-ನಾರುಗಳನ್ನು ಎಲ್ಲೆಲ್ಲೋ ಬಚ್ಚಿಡುತ್ತಿದ್ದ. ಕಾಯಿಸಿದ್ದ ಲೇಹಗಳನ್ನು ಗಡಿಗೆಗಳಲ್ಲಿ ಹಾಕಿ ಗೋಕುಲದ ಗೋಪಿಕೆಯರಂತೆ ನೆಲುವಿನಲ್ಲಿ ತೂಗಾಡಿಸುತ್ತಿದ್ದ. ತಮ್ಮ ಕಾಣಿಕೆಗೆಂದು ಬಂದ ಧವಸ-ಧಾನ್ಯಗಳನ್ನಂತೂ ಕಾಪಾಡಿಕೊಳ್ಳಲು ಹರಸಾಹಸ ಪಡುತ್ತಿದ್ದ. ಇಲಿ ಹಿಡಿಯುವುದಕ್ಕಾಗಿ ಆತ ಬೆಕ್ಕೊಂದನ್ನು ಸಾಕಿದ್ದರೆ, ಆ ಬೆಕ್ಕನ್ನೇ ಹೆದರಿಸುತ್ತಿತ್ತು ಇಲಿ. ಸಿಕ್ಕಸಿಕ್ಕಲ್ಲಿ ಸನ್ಯಾಸಿ ಕೋಲಿಟ್ಟುಕೊಂಡು ಇಲಿಗೆ ಬಡಿಯುತ್ತಿದ್ದ. ಆದರೆ ಆತನನ್ನು ದೇಗುಲದ ತುಂಬೆಲ್ಲಾ ಓಡಾಡಿಸುತ್ತಿತ್ತೇ ಹೊರತು, ಕೋಲಿನ ಪೆಟ್ಟಿನಿಂದ ಸರಾಗವಾಗಿ ತಪ್ಪಿಸಿಕೊಳ್ಳುತ್ತಿತ್ತು. ಸನ್ಯಾಸಿಗಂತೂ ಇಲಿ ಕಾಟದಿಂದ ಸಾಕುಸಾಕಾಗಿತ್ತು.

ಇದೇ ದಿನಗಳಲ್ಲಿ ಇನ್ನೊಬ್ಬ ಸನ್ಯಾಸಿ ಆ ಊರಿಗೆ ಬಂದ. ದೇಶ-ದೇಶಗಳನ್ನು ಸುತ್ತಿ ಬಂದಿದ್ದ ಆತನಿಗೆ ಆ ರಾತ್ರಿ ಉಳಿಯುವುದಕ್ಕೆ ಜಾಗವೊಂದು ಬೇಕಿತ್ತು. ಊರಾಚೆಯ ದೇಗುಲಕ್ಕೆ ಆತ ಬಂದ. ಬಂದಂಥ ಹೊಸ ಸನ್ಯಾಸಿಯನ್ನು ಬರಮಾಡಿಕೊಳ್ಳುವ ಗೋಜೂ ಇಲ್ಲದಂತೆ ಇಲಿಯ ಹಿಂದೆ ಓಡುತ್ತಿದ್ದ ವೈದ್ಯ ಸನ್ಯಾಸಿ. ಹೊಸ ಸನ್ಯಾಸಿಯ ಯಾವ ಮಾತುಗಳನ್ನೂ ಸರಿಯಾಗಿ ಕೇಳಿಸಿಕೊಳ್ಳದಷ್ಟು ಚಿಂತೆಯಲ್ಲಿದ್ದ ವೈದ್ಯನನ್ನು ಕಂಡ ಹೊಸಬ, ವಿಷಯವೇನು ಎಂದು ಕೇಳಿದ.

ʻಏನು ಹೇಳಲಿ ಮಹಾತ್ಮ! ಲೋಕದೆಲ್ಲಾ ಚಿಂತೆಗಳನ್ನು ಬಿಟ್ಟು, ನಿಮ್ಮಂತೆಯೇ ದೇಶಾಂತರ ಮಾಡಿ, ಈಗ ವಯಸ್ಸಾಯಿತು ಎಂಬ ಕಾರಣಕ್ಕೆ ಈ ಊರಾಚೆಗಿನ ದೇವಾಲಯದಲ್ಲಿ ತಂಗಿದ್ದೇನೆ. ನನಗೆ ತಿಳಿದಿರುವ ಅಲ್ಪಸ್ವಲ್ಪ ವೈದ್ಯ ವೃತ್ತಿಯನ್ನೂ ಮಾಡಿಕೊಂಡು, ಊರಿನವರಿಗೆ ಉಪಕಾರಿಯಾಗಿದ್ದೇನೆ. ಆದರೆ ನನ್ನ ಗ್ರಹಚಾರಕ್ಕೆ ಇಲಿಯೊಂದು ಗಂಟುಬಿದ್ದಿದೆ ಸ್ವಾಮಿ. ಎಷ್ಟು ಪ್ರಯತ್ನ ಮಾಡಿದರೂ ಅದನ್ನು ದೇವಾಲಯದ ಪ್ರಾಂಗಣದಿಂದ ಓಡಿಸಲಾಗುತ್ತಿಲ್ಲ. ಮಾತ್ರವಲ್ಲ, ನನ್ನ ಔಷಧೀಯ ಮೂಲಿಕೆಗಳನ್ನೂ ನನಗೆ ಅದರಿಂದ ರಕ್ಷಿಸಿಕೊಳ್ಳಲಾಗುತ್ತಿಲ್ಲ. ರೋಗಿಗಳು ನೆರವು ಕೇಳಿ ಬಂದಾಗ, ನನ್ನಲ್ಲಿ ಮೂಲಿಕೆಗಳೇ ಇಲ್ಲದಿದ್ದರೆ ಏನು ಔಷಧಿ ಕೊಟ್ಟೇನು ನಾನು?ʼ ಎಂದು ಆತ ತನ್ನ ಕಷ್ಟವನ್ನೆಲ್ಲಾ ಹೇಳಿಕೊಂಡ.

ಇದನ್ನೂ ಓದಿ: ಮಕ್ಕಳ ಕಥೆ: ಕೆಂಪಂಗಿ ಚಿಣ್ಣಿ

ʻಸ್ವಾಮಿಗಳೇ! ನಿಮ್ಮ ಕಷ್ಟ ನನಗೆ ಅರ್ಥ ಆಯ್ತು. ಬೆಕ್ಕು, ಬಡಿಗೆ ಅಂತ ಯಾವುದಕ್ಕೂ ಬಗ್ಗದ ಈ ಇಲಿಯನ್ನು ಹಾಗೆಯೇ ಮಟ್ಟ ಹಾಕೋದಕ್ಕೆ ಆಗೋದಿಲ್ಲ ಅನ್ಸತ್ತೆ. ಅದರ ಬಿಲವನ್ನು ಮೊದಲು ಪತ್ತೆ ಮಾಡೋಣ. ನಿಮ್ಮಿಂದ ಕದ್ದಿರುವ ಆಹಾರವನ್ನೆಲ್ಲಾ ಅದು ಅಲ್ಲಿಯೇ ಅಡಗಿಸಿಟ್ಟಿರಬೇಕು. ಶತ್ರು ಸಣ್ಣದಾದರೇನು, ಅದರ ಮೂಲ ಸಣ್ಣದಾಗದೇ ಇರಬಹುದು. ಹಾಗಾಗಿ ಅದನ್ನು ನಾವು ಮೊದಲು ಕಂಡುಹಿಡಿದರೆ ಇಲಿಯ ಬಲವನ್ನು ಕುಗ್ಗಿಸಬಹುದುʼ  ಅಂತ ಹೇಳಿದ ಹೊಸ ಸನ್ಯಾಸಿ. ವೈದ್ಯ ಸನ್ಯಾಸಿಗೂ ಈ ಮಾತು ಹೌದು ಅನಿಸಿತು.

ಅಂದು ಮತ್ತೆ ಇಲಿ ಕಾಣಿಸಿಕೊಂಡಾಗ, ಅದನ್ನು ಹೊಡೆಯುವುದಕ್ಕೆಂದು ಬೆನ್ನಟ್ಟದೇ ಉಪಾಯದಿಂದ ಹಿಂಬಾಲಿಸಿದರು. ತನಗೆ ಬೇಕಾದ್ದನ್ನೆಲ್ಲಾ ತೆಗೆದುಕೊಂಡ ಇಲಿ, ದೇವಸ್ಥಾನದ ಹೊರಗೋಡೆಯ ಮೂಲೆಯಲ್ಲಿದ್ದ ತನ್ನ ಬಿಲದೊಳಗೆ ಹೋಯಿತು. ಕೂಡಲೇ ದೊಡ್ಡ ಹಾರೆಗಳಿಂದ ಆ ಬಿಲವನ್ನು ಅಗೆದು ನೋಡಿದ ಸನ್ಯಾಸಿ. ಅದರೊಳಗೆ ಏನೇನೋ ಕಾಯಿ, ಬೀಜ, ನಾರು-ಬೇರುಗಳಿಂದ ಹಿಡಿದು ಸಾಕಷ್ಟು ವಸ್ತುಗಳನ್ನು ಇಲಿ ದಾಸ್ತಾನು ಮಾಡಿಕೊಂಡಿತ್ತು. ತನ್ನ ಮೇಲೆ ಮಾತ್ರವೇ ಆಕ್ರಮಣ ಮಾಡುತ್ತಾರೆಂದು ತಿಳಿದಿದ್ದ ಇಲಿಗೆ, ಈಗ ತನ್ನ ಬಿಲದ ಮೇಲೂ ಪ್ರಹಾರ ಮಾಡಿದ್ದು ಅನಿರೀಕ್ಷಿತವಾಗಿತ್ತು. ಕೋಲಿನಿಂದ ಬಿದ್ದ ಒಂದೇ ಪೆಟ್ಟಿಗೆ ಇಲಿ ತತ್ತರಿಸಿತು. ಅದರ ಜೀವ ಹೋಗದಿದ್ದರೂ, ಈ ಪ್ರಹಾರಕ್ಕೆ ಇಲಿ ಕಂಗಾಲಾಗಿತ್ತು. ಜೀವದಾಸೆಯಿಂದ ಈ ಸ್ಥಳವನ್ನೇ ಬಿಟ್ಟು ಓಡಿಹೋಯಿತು. ಅಂದಿನಿಂದ ವೈದ್ಯ ಸನ್ಯಾಸಿಗೆ ಔಷಧಿ ದಾಸ್ತಾನಿನ ಚಿಂತೆ ಕಾಡಲಿಲ್ಲ.

ಇದನ್ನೂ ಓದಿ: ಮಕ್ಕಳ ಕಥೆ: ಹಳ್ಳಿ ಇಲಿ ಮತ್ತು ಪಟ್ಟಣದ ಇಲಿ

Exit mobile version