Site icon Vistara News

ಮಕ್ಕಳ ಕಥೆ: ಕೆಂಪಂಗಿ ಚಿಣ್ಣಿ

little red children story

ಈ ಕಥೆಯನ್ನು ಇಲ್ಲಿ ಆಲಿಸಿ:

http://vistaranews.com/wp-content/uploads/2023/07/red.mp3

ಬ್ರಿಟನ್‌ ದೇಶದ ಒಂದೂರು. ಆ ಊರಿನ ಅಂಚಿನಲ್ಲಿ ಪುಟ್ಟ ಹುಡುಗಿಯೊಬ್ಬಳು ತನ್ನ ತಂದೆ-ತಾಯಿಯೊಂದಿಗೆ ವಾಸ ಮಾಡ್ತಾ ಇದ್ದಳು. ಅದೇ ಊರಿನ ಮತ್ತೊಂದು ತುದಿಯಲ್ಲಿ, ಆ ಹುಡುಗಿಯ ಅಜ್ಜಿಯ ಮನೆಯಿತ್ತು. ಊರಿನ ತುದಿಯಲ್ಲಿ ಅಂದರೆ, ಊರು ದಾಟಿ ಸ್ವಲ್ಪ ಕಾಡಂಚಿನಲ್ಲಿತ್ತು ಅಜ್ಜಿಯ ಮನೆ. ಊರಲ್ಲಿ ಎಲ್ಲರಿಗೂ ಬೇಕಾದವಳಾಗಿ, ಎಲ್ಲರೊಂದಿಗೂ ಚೆನ್ನಾಗಿ ಮಾತಾಡ್ತಾ ಇದ್ದಳು ಈ ಹುಡುಗಿ. ಅವಳಿಗೊಂದು ಹೆಸರು ಇರಬೇಕಲ್ವ? ತನ್ನ ಅಜ್ಜಿ ಹೊಲಿದು ಕೊಟ್ಟಿದ್ದ ಕೆಂಪುಬಣ್ಣದ ಫ್ರಾಕ್‌ ಧರಿಸುವುದು ಅವಳಿಗೆ ಪ್ರಿಯವಾಗಿದ್ದರಿಂದ, ಹೆಚ್ಚಾಗಿ ಕೆಂಪು ಫ್ರಾಕ್‌ನಲ್ಲೇ ಆಕೆ ಇರುತ್ತಿದ್ದರು. ಹಾಗಾಗಿ ಊರಲ್ಲಿ ಎಲ್ಲರೂ ಆಕೆಯನ್ನು ಕೆಂಪಂಗಿ ಚಿಣ್ಣಿ ಎಂದು ಕರೆಯುತ್ತಿದ್ದರು.

ಒಂದು ಸಾರಿ ಆಕೆಯ ಅಜ್ಜಿಗೆ ಜ್ವರ, ನೆಗಡಿ, ಕೆಮ್ಮು ಎಲ್ಲಾ ಆಗೋಯ್ತು. ಪಾಪ! ಒಬ್ಬಳೇ ಮನೆಯಲ್ಲಿ ಇರುವುದರಿಂದ ಸ್ವಲ್ಪ ಸಹಾಯವಾಗಲಿ ಆಕೆಗೆ ಅಂತ ಯೋಚಿಸಿದ ಕೆಂಪಂಗಿ ಚಿಣ್ಣಿಯ ಅಮ್ಮ, ಒಂದಿಷ್ಟು ಕೇಕ್‌ಗಳನ್ನು ಸಿದ್ಧ ಮಾಡಿ ಒಂದು ಬುಟ್ಟಿಗೆ ತುಂಬಿಸಿದರು. ಜೊತೆಗೆ ಚಕ್ಕೆ ಮತ್ತು ಶುಂಠಿ ಹಾಕಿ ಮಾಡಿದ ಕಟುವಾದ ಪೆಪ್ಪರ್ಮಿಂಟುಗಳನ್ನು ಒಂದು ಸಣ್ಣ ಡಬ್ಬಿಗೆ ತುಂಬಿಸಿ, ಆ ಬುಟ್ಟಿಯಲ್ಲಿಟ್ಟರು. ನೆಗಡಿ ಮತ್ತು ಕೆಮ್ಮಿನಿಂದ ಬಳಲುತ್ತಿದ್ದ ಅಜ್ಜಿಗೆ ಸ್ವಲ್ಪ ಬೇಗ ಗುಣವಾಗಲಿ ಎಂದು ಇದನ್ನೆಲ್ಲಾ ಅಮ್ಮ ಮಾಡಿದ್ದರು. ಕೆಂಪಂಗಿ ಚಿಣ್ಣಿಯನ್ನು ಕರೆದು- “ನಿನ್ನಜ್ಜಿಗೆ ಆರಾಮಿಲ್ಲ. ಅವರಿಗೆ ಬೇಗ ಆರಾಮಾಗಲಿ ಎಂದು ಒಂದಿಷ್ಟು ಕೇಕ್‌ ಮಾಡಿರಿಸಿದ್ದೇನೆ ಈ ಬುಟ್ಟಿಯಲ್ಲಿ. ಜೊತೆಗೆ ನೆಗಡಿ, ಕೆಮ್ಮಿಗಾಗಿ ಒಳ್ಳೆಯ ಕಟುವಾದ ಶುಂಠಿ ಪೆಪ್ಪರ್ಮಿಂಟುಗಳನ್ನು ಈ ಡಬ್ಬಿಯಲ್ಲಿರಿಸಿದ್ದೇನೆ. ಒಂದು ತಿಂದರೂ ನೆಗಡಿ ವಾಸಿಯಾಗತ್ತೆ. ಇವನ್ನೆಲ್ಲಾ ಹೋಗಿ ಅಜ್ಜಿಗೆ ಕೊಟ್ಟು ಬಾ. ಆದರೆ ನೆನಪಿರಲಿ, ಎಲ್ಲೂ ದಾರಿ ತಪ್ಪಿ ಕಾಡೊಳಗೆ ಹೋಗಕೂಡದುʼ ಎಂದರು ಅಮ್ಮ.

ಅಮ್ಮ ಕೊಟ್ಟ ಬುಟ್ಟಿಯನ್ನು ಹಿಡಿದುಕೊಂಡು ಅಜ್ಜಿ ಮನೆಯ ದಾರಿ ತುಳಿದಳು ಕೆಂಪಂಗಿ ಚಿಣ್ಣಿ. ಅಜ್ಜಿ ಮನೆಗೆ ಹೋಗುವ ದಾರಿಯು ಆ ಊರಿನ ಪೇಟೆಯ ನಡುವಿನಿಂದಲೇ ಹೋಗುತ್ತಿತ್ತು. ಪೇಟೆಯಲ್ಲಿ ಹಲವಾರು ಮಂದಿ ಆಕೆಯನ್ನು ಮಾತಾಡಿಸುತಿದ್ದರು. ಎಲ್ಲರನ್ನೂ ನಗೆಮೊಗದಿಂದಲೇ ಮಾತಾಡಿಸಿ ಮುಂದುವರಿಯುತಿದ್ದಳು ಹುಡುಗಿ. ಅದೇ ಹೊತ್ತಿನಲ್ಲಿ ಪೇಟೆಯ ಬೀದಿಯ ಸುತ್ತಲೇ ಠಳಾಯಿಸುತ್ತಿದ್ದ ಖದೀಮನೊಬ್ಬನಿಗೆ ಈ ಎಳೆ ಹುಡುಗಿ ಕಂಡಳು. ಅವಳ ಕೈಯಲ್ಲೊಂದು ಬುಟ್ಟಿಯೂ ಕಂಡಿತು. ತನಗೆ ಆಗುವಂಥದ್ದು ಏನಾದರೂ ಆ ಬುಟ್ಟಿಯಲ್ಲಿ ಇರಬಹುದು ಎಂಬ ನಿರೀಕ್ಷೆಯಿಂದ ಆತ ಗುಟ್ಟಾಗಿ ಹಿಂಬಾಲಿಸತೊಡಗಿದ.

ಪೇಟೆ ಬೀದಿಯಲ್ಲಿದ್ದ ಹಣ್ಣು ಮಾರುವವ, ತರಕಾರಿ ಮಾರುವವಳು, ಸೊಪ್ಪು ಮಾರುವ ಅಜ್ಜಿ, ದರ್ಜಿ, ಮಿಠಾಯಿ ಅಂಗಡಿಯಾತ- ಹೀಗೆ ಎಲ್ಲರೊಂದಿಗೆ ಚುಟುಕು ಮಾತಾಡಿ ಆಕೆ ಮುಂದುವರಿಯುತ್ತಿರುವಾಗ ಆಕೆಯ ಬುಟ್ಟಿಯಲ್ಲಿ ರುಚಿಕರವಾದ ಕೇಕ್‌ ಇದೆ ಎಂಬುದು ಖದೀಮನಿಗೆ ತಿಳಿಯಿತು. ಅದನ್ನಾಕೆ ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದಾಳೆ ಎಂಬುದು ಆತನಿಗೆ ತಿಳಿಯಲಿಲ್ಲ. ಬೆಳಗಿನಿಂದ ಹೊಟ್ಟೆಗೇನೂ ಬೀಳದೆ ಚೆನ್ನಾಗಿ ಹಸಿದಿದ್ದ ಆತ, ಬುಟ್ಟಿಯೊಳಗಿನ ತಿಂಡಿಯನ್ನು ಲಪಟಾಯಿಸಬೇಕು ಎಂದು ನಿರ್ಧರಿಸಿದ.

ಕೆಂಪಂಗಿ ಚಿಣ್ಣಿ ಪೇಟೆಯ ದಾರಿಯನ್ನು ದಾಟಿ ಕಾಡಿನತ್ತ ಮುಖ ಮಾಡುತ್ತಿದ್ದಂತೆಯೇ ಮೆಲ್ಲಗೆ ಆಕೆಯ ಬಳಿಗೇ ಬಂದು ಜೊತೆಯಾಗಿ ನಡೆಯತೊಡಗಿದ ಖದೀಮ. ಉಪಾಯವಾಗಿ ಚಿಣ್ಣಿಯನ್ನು ಮಾತಿಗೆಳೆದ. ಹುಷಾರಿಲ್ಲದ ತನ್ನಜ್ಜಿಗಾಗಿ ಕೇಕ್‌ ತೆಗೆದುಕೊಂಡು, ತಾನೊಬ್ಬಳೇ ಹೋಗುತ್ತಿರುವುದಾಗಿ ಚಿಣ್ಣಿ ಹೇಳಿದಳು. ಇದ್ದಕ್ಕಿದ್ದಂತೆ ಖೊಕ್‌ ಖೊಕ್‌ ಎಂದು ಕೆಮ್ಮತೊಡಗಿದ ಖದೀಮ, ತನಗೂ ನೆಗಡಿ-ಕೆಮ್ಮು, ಹುಷಾರಿಲ್ಲ. ಹಾಗಾಗಿ ಬುಟ್ಟಿಯಲ್ಲಿದ್ದ ಕೇಕ್‌ ಕೊಟ್ಟರೆ ಆರಾಮಾಗುತ್ತದೆ ಎಂದು ಕೇಳಿದ. ʻಆದರೆ ಇದನ್ನು ತಂದಿದ್ದು ಅಜ್ಜಿಗಾಗಿ. ಹಾಗೆಲ್ಲಾ ಕೊಡಲಾಗದುʼ ಎಂದಳು ಹುಡುಗಿ. ಅವಳು ಕೊಡುವುದಿಲ್ಲ ಎಂಬುದನ್ನು ತಿಳಿದ ಖದೀಮ, ಅವಳ ದಾರಿಯನ್ನು ಬಿಟ್ಟು ಅಡ್ಡದಾರಿ ಹಿಡಿದು ಅವಳಗಿಂತ ಬೇಗನೇ ಅಜ್ಜಿಮನೆ ಸೇರಿದ.

ʻಅಜ್ಜಮ್ಮಾ ಅಜ್ಜಮ್ಮಾ… ಬಾಗಿಲು ತೆಗೀʼ ಎಂದು ಕೂಗಿದ ಕಳ್ಳಧ್ವನಿಯಲ್ಲಿ ಕೂಗಿದ ಕಳ್ಳ.

ʻಯಾರದು ಬಂದಿದ್ದು?ʼ ಕೇಳಿದರು ಅಜ್ಜಮ್ಮ

ʻನಾನು…. ನಿನ್ನ ಮೊಮ್ಮಗಳು. ನಿನಗಾಗಿ ರುಚಿಕರ ತಿಂಡಿ ತಂದಿದ್ದೇನೆʼ

ʻಬಾಗಿಲು ತೆಗೆದೇ ಇದೆ, ಬಾ ಮರೀ…ʼ ಹೇಳಿದರು ಅಜ್ಜಿ.

ಬಾಗಿಲೊಳಗೆ ಕುಪ್ಪಳಿಸಿದ ಖದೀಮ, ನೇರವಾಗಿ ಅಜ್ಜಿ ಮಲಗಿದ್ದ ಮಂಚಕ್ಕೆ ನಡೆದ. ಅಜ್ಜಿಯ ಕೈ-ಕಾಲು-ಬಾಯಿಗಳನ್ನು ಕಟ್ಟಿ, ಮಂಚದಡಿಗೆ ಉರುಳಿಸಿದ. ತಾನು ಅಜ್ಜಿಯ ವಸ್ತ್ರಗಳನ್ನು ತೊಟ್ಟು ಮುಸುಕಿಕ್ಕಿ ಮಲಗಿಬಿಟ್ಟ. ಇದ್ಯಾವುದನ್ನೂ ಅರಿಯದ ಕೆಂಪಂಗಿ ಚಿಣ್ಣಿ ಅಜ್ಜಿ ಮನೆಗೆ ಬಂದಳು.

ಅರೆ! ಬಾಗಿಲು ತೆರೆದೇ ಇದೆಯಲ್ಲ ಎಂದು ಸೋಜಿಗಪಡುತ್ತಾ ಒಳಗೆ ನಡೆದ ಚಿಣ್ಣಿಗೆ ಮಂಚದ ಮೇಲೆ ಅಜ್ಜಿ ಮುಸುಕಿಕ್ಕಿ ಮಲಗಿದ್ದು ಕಾಣಿಸಿತು. ʻಅಜ್ಜೀ… ನಿನ್ನ ಮೊಮ್ಮಗಳು ಬಂದಿದ್ದೀನಿ, ಮುಸುಕು ತೆಗಿʼ ಎಂದಳು ಕೆಂಪಂಗಿ ಚಿಣ್ಣಿ. ʻಆಗದು!ʼ ಎಂದ ಅಜ್ಜಿ ರೂಪದಲ್ಲಿದ್ದ ಖದೀಮ.

ʻಅಜ್ಜೀ, ನಿನ್ನ ಧ್ವನಿ ಎಷ್ಟು ದೊಡ್ಡದಾಗಿದೆ!ʼ ಎಂದಳು ಚಿಣ್ಣಿ.

ʻನಿನ್ನನ್ನು ಕರೆಯೋದಕ್ಕೆ ಮರೀʼ ಎಂದು ರಾಗವಾಗಿ ಸುಳ್ಳಜ್ಜಿ.

ʻಅಜ್ಜೀ, ನಿನ್ನ ಕೈಗಳು ಎಷ್ಟು ದಪ್ಪವಾಗಿವೆ!ʼ ಅಚ್ಚರಿಪಟ್ಟಳು ಚಿಣ್ಣಿ.

ʻನಿನ್ನ ಎತ್ತಿಕೊಳ್ಳೋದಕ್ಕೆ ಮರಿʼ ಎಂದಳು ಸುಳ್ಳಜ್ಜಿ

ʻಅಜ್ಜೀ, ನಿನ್ನ ಹೊಟ್ಟೆ ಎಷ್ಟೊಂದು ಡುಮ್ಮಕ್ಕಿದೆ!ʼ ಆಶ್ಚರ್ಯಪಟ್ಟಳು ಹುಡುಗಿ

ʻನಿನ್ನ ತಿಂಡಿಯನ್ನೆಲ್ಲಾ ತಿಂದು ಹಾಕುವುದಕ್ಕೆʼ ಎಂದು ಕರ್ಕಶವಾಗಿ ಹೇಳಿದ ಖದೀಮ, ತನ್ನ ಮುಸುಕು ತೆಗೆದವನೇ ಚಿಣ್ಣಿಯ ಕೈಯಲ್ಲಿದ್ದ ಬುಟ್ಟಿಯ ಮುಚ್ಚಳ ಕಿತ್ತು, ಕೈಗೆ ಸಿಕ್ಕಿದ್ದನ್ನು ಬಾಯಿಗೆ ಸುರಿದುಕೊಂಡ. ಎಂಥಾ ಕೆಲಸ ಆಯ್ತು ಅಂತೀರಾ!!

ಇದನ್ನೂ ಓದಿ: ಮಕ್ಕಳ ಕಥೆ: ಹಳ್ಳಿ ಇಲಿ ಮತ್ತು ಪಟ್ಟಣದ ಇಲಿ

ಅಜ್ಜಿಯ ನೆಗಡಿ-ಕೆಮ್ಮಿಗಾಗಿ ಇರಿಸಿದ್ದ ಶುಂಠಿ ಪೆಪ್ಪರ್ಮಿಂಟಿನ ಇಡೀ ಡಬ್ಬಿಯನ್ನೇ ಆತ ಬಾಯಿಗೆ ಸುರಿದುಕೊಂಡಿದ್ದ! ಮೊದಲಿಗೆ ಒಂದೆರಡು ಕ್ಷಣ ಏನೂ ತಿಳಿಯಲಿಲ್ಲ. ಆಮೇಲಾಮೇಲೆ ಬಾಯಿಯ ಉರಿ ಹೆಚ್ಚುತ್ತಲೇ ಹೋಯ್ತು. ʻಖಾರಾ… ಖಾರಾ…ʼ ಎಂದು ಬೊಬ್ಬೆ ಹೊಡೆಯುತ್ತಾ, ಕೆಮ್ಮುತ್ತಾ ಕ್ಯಾಕರಿಸುತ್ತಾ ಕುಣಿದಾಡಿದ ಖದೀಮ. ʻನೀರು, ನೀರುʼ ಎನ್ನುತ್ತಾ ಹೊರಗೋಡಿ, ಅಲ್ಲಿ ಬಾವಿಯಿಂದ ನೀರು ಸೇದಿ ಸೇದಿ ಕುಡಿಯತೊಡಗಿದ. ಶುಂಠಿ ಪೆಪ್ಪರ್ಮಿಂಟಿನ ಬಾಯಿಗೆ ನೀರು ತಾಗುತ್ತಲೇ ಉರಿ ಇನ್ನೂ ಹೆಚ್ಚಾಗಿ, ಬಾಯಿ-ಗಂಟಲು-ಎದೆಯೆಲ್ಲಾ ಉರಿ ಹತ್ತಿ ಚೀರಾಡುತ್ತಾ ಕಾಡಿನತ್ತ ಓಡಿದ ಕಳ್ಳ.

ಇದನ್ನೆಲ್ಲಾ ನೋಡುತ್ತಾ ಕಲ್ಲಿನಂತೆ ನಿಂತಿದ್ದಳು ಚಿಣ್ಣಿ. ಆತ ಓಡಿಹೋದ ಮೇಲೆ ಮಂಚದಡಿಯಿಂದ ಕ್ಷೀಣವಾದ ಧ್ವನಿಯೊಂದು ಕೇಳಿದಂತಾಯಿತು. ಬಗ್ಗಿ ನೋಡಿದರೆ… ನಿಜವಾದ ಅಜ್ಜಿ! ಲಗುಬಗೆಯಿಂದ ಆಕೆಯನ್ನು ಹೊರತೆಗೆದು ಉಪಚಾರ ಮಾಡಿದಳು ಚಿಣ್ಣಿ. ಸಂಜೆಯವರೆಗೂ ಅಲ್ಲಿಯೇ ಇದ್ದು, ಆಕೆಗೆ ಕೇಕ್‌ ತಿನ್ನಿಸಿ, ಬಿಸಿಯಾದ ಮಸಾಲೆ ಚಹಾ ಮಾಡಿಕೊಟ್ಟು ಹುಡುಗಿ ಆರೈಕೆ ಮಾಡಿದಳು. ಅಜ್ಜಿಯ ಆರೋಗ್ಯ ಚೇತರಿಸಿಕೊಂಡ ಮೇಲೆ ಕೆಂಪಂಗಿ ಚಿಣ್ಣಿಯ ಸವಾರಿ ಮನೆಯತ್ತ ಸಾಗಿತು

(ಲಿಟ್ಲ್‌ ರೆಡ್‌ ರೈಡಿಂಗ್‌ ಹುಡ್‌ ಕಥೆಯಿಂದ ಪ್ರೇರಿತ)

ಇದನ್ನೂ ಓದಿ: ಮಕ್ಕಳ ಕಥೆ: ಒವೆನ್‌ನ ಬ್ಲಾಂಕೆಟ್

Exit mobile version