Site icon Vistara News

ಮಕ್ಕಳ ಕಥೆ: ವರ್ತಕ ಮತ್ತು ಜಾಣ ಗಿಳಿ

merchant and parakeet

ಈ ಕಥೆಯನ್ನು ಇಲ್ಲಿ ಕೇಳಿ:

http://vistaranews.com/wp-content/uploads/2023/03/WhatsApp-Audio-2023-03-11-at-110.mp3

ಪರ್ಷಿಯಾ ದೇಶದಲ್ಲಿ ಒಬ್ಬ ಶ್ರೀಮಂತ ವರ್ತಕನಿದ್ದ. ಆತನಿಗೆ ಒಂದು ಮುದ್ದಾದ ಹಸಿರು ಬಣ್ಣದ ಗಿಳಿಯನ್ನು ಯಾರೋ ಉಡುಗೊರೆಯಾಗಿ ಕೊಟ್ಟರು. ಚಟಪಟನೆ ಅರಳು ಹುರಿದಂತೆ ಮಾತಾಡುತ್ತಿದ್ದ ಆ ಗಿಳಿ, ಮನೆಗೆ ಬರುತ್ತಿದ್ದ ಹಾಗೆ ಅವನಿಗೆ ತುಂಬ ಪ್ರಿಯವೆನಿಸಿತು. ಅದಕ್ಕಾಗಿ ಒಂದು ಬಂಗಾರದ ಪಂಜರವನ್ನು ಮಾಡಿಸಿ, ದಿನವೂ ಅದಕ್ಕೆ ಮೆಣಸಿನ ಕಾಯಿ ತಿನ್ನಿಸುತ್ತಿದ್ದ. ಮನೆಯ ಎಲ್ಲರೊಂದಿಗೆ ಪ್ರೀತಿಯಿಂದ ಮಾತಾಡುತ್ತಿದ್ದ ಆ ಗಿಳಿ, ಕೆಲವೊಮ್ಮೆ ತನ್ನಷ್ಟಕ್ಕೇ ಹಾಡುತ್ತಿತ್ತು. ಆದರೆ ಒಮ್ಮೊಮ್ಮೆ ಎಷ್ಟು ಮಾತಾಡಿಸಿದರೂ ಪ್ರತಿಕ್ರಿಯೆ ನೀಡದೆ ಸುಮ್ಮನಿರುತ್ತಿತ್ತು.

ಒಂದು ಬಾರಿ ಭಾರತಕ್ಕೆ ಪ್ರಯಾಣ ಮಾಡುವ ಸಂದರ್ಭ ವರ್ತಕನ ಪಾಲಿಗೆ ಬಂತು. ʻಭಾರತದಿಂದ ನಿಮಗೆಲ್ಲ ಏನು ತರಲಿ?ʼ ಎಂದು ಮನೆಮಂದಿಯನ್ನೆಲ್ಲಾ ಕೇಳಿದ ವರ್ತಕ. ʻನನಗೆ ಅಲ್ಲಿಂದ ಚಂದದ ರೇಷ್ಮೆ ವಸ್ತ್ರ ತನ್ನಿʼ ಎಂದು ಕೇಳಿದಳು ಹೆಂಡತಿ. ʻನನಗೆ ಸುಂದರ ಆಟಿಕೆ ಬೇಕುʼ ಎಂದಳು ಮಗಳು. ಸುಮ್ಮನೆ ಎಲ್ಲರ ಮಾತು ಕೇಳುತ್ತಿದ್ದ ಗಿಳಿಯತ್ತ ತಿರುಗಿ, ʻನಿನಗೇನು ಬೇಕು?ʼ ಕೇಳಿದ ವರ್ತಕ.

“ಭಾರತದಲ್ಲಿ ನಿಮಗೆ ಹಸಿರು ಗಿಳಿಗಳು ಕಂಡರೆ, ಅವರ ಬಳಿ ಹೋಗಿ ʼನಾನು ಇಲ್ಲಿದ್ದೇನೆ ಮತ್ತು ಚಿನ್ನದ ಪಂಜರದಲ್ಲಿ ಒಬ್ಬಳೇ ಇದ್ದೇನೆʼ ಎಂದು ತಿಳಿಸಿ. ಅಷ್ಟು ಹೇಳಿದರೆ ಸಾಕು” ಎಂದಿತು ಗಿಳಿ. ವರ್ತಕ ಭಾರತಕ್ಕೆ ಪ್ರಯಾಣ ಬೆಳೆಸಿದ.

ಭಾರತದಲ್ಲಿನ ತನ್ನೆಲ್ಲಾ ಕೆಲಸಗಳನ್ನು ಮುಗಿಸಿದ ಮೇಲೆ, ಮಡದಿ ಮತ್ತು ಮಗಳು ಕೇಳಿದ ವಸ್ತುಗಳನ್ನೆಲ್ಲಾ ಖರೀದಿಸಿದ ಆತ. ಗಿಳಿಯ ಕೋರಿಕೆಯಂತೆ ಸಮೀಪದ ಉದ್ಯಾನವನಕ್ಕೆ ತೆರಳಿದ. ಅಲ್ಲಿ ಹಸಿರು ಗಿಳಿಗಳ ಹಿಂಡೊಂದು ಕಲರವ ಮಾಡುತ್ತಿತ್ತು. ಅವುಗಳ ಬಳಿಗೆ ತೆರಳಿದ ವರ್ತಕ, “ಗಿಳಿಗಳೇ, ನಿಮ್ಮ ಸಹೋದರಿ ಗಿಳಿಯಿಂದ ಸಂದೇಶವೊಂದನ್ನು ನಾನು ತಂದಿದ್ದೇನೆ” ಎಂದ. ಆಗ ಎಲ್ಲಾ ಗಿಳಿಗಳೂ ತಮ್ಮ ಗಲಾಟೆ ಬಿಟ್ಟು ಆತನ ಮಾತಿನೆಡೆಗೆ ಗಮನ ನೀಡಿದವು.

“ನಿಮ್ಮ ಜೊತೆಗಾರ್ತಿಯನ್ನು ಭಾರತದಲ್ಲಿ ಹಿಡಿದು ಪರ್ಷಿಯಾಗೆ ಕರೆದೊಯ್ಯಲಾಗಿದೆ. ಅವಳೀಗ ನನ್ನ ಜೊತೆ ಇದ್ದಾಳೆ ಮತ್ತು ಕ್ಷೇಮವಾಗಿದ್ದಾಳೆ. ಅವಳೊಂದು ಸುಂದರವಾದ ಬಂಗಾರ ಪಂಜರದಲ್ಲಿ ಒಬ್ಬಳೇ ಹಾಡುತ್ತಿರುತ್ತಾಳೆ” ಎಂದೆಲ್ಲಾ ವಿವರಿಸಿದ ವರ್ತಕ.

ಅದನ್ನು ಕೇಳುತ್ತಿದ್ದಂತೆ ಎಲ್ಲಾ ಗಿಳಿಗಳೂ ಸಂತೋಷಪಟ್ಟರೆ, ಒಂದು ಗಿಳಿ ಮಾತ್ರ ಗಡಗಡನೇ ನಡುಗಿ, ಗಿರ್ರನೆ ತಿರುಗಿ ಮಗುಚಿ ಬಿತ್ತು. ಉಳಿದೆಲ್ಲಾ ಗಿಳಿಗಳೂ ಶೋಕಿಸತೊಡಗಿದವು. ʻಛೇ! ಇವರ ಜೊತೆಗಾತಿ ಕ್ಷೇಮವಾಗಿದ್ದಾಳೆ ಎಂಬ ಸುದ್ದಿಯನ್ನು ಮಾತ್ರವೇ ನಾ ಹೇಳಿದ್ದು. ಅಷ್ಟಕ್ಕೇ ಈ ಗಿಳಿ ಸತ್ತೇ ಹೋಯಿತಲ್ಲಾʼ ಎಂದು ಬೇಸರಿಸಿದ ವರ್ತಕ. ಆದರೆ ಏನು ಮಾಡುವುದಕ್ಕೂ ತೋಚದೆ ಅಲ್ಲಿಂದ ಮರಳಿದ.

ಮನೆಗೆ ಹಿಂದಿರುಗಿದ ಆತ ತನ್ನ ಹೆಂಡತಿ ಮತ್ತು ಮಗಳಿಗೆ ಅವರ ಉಡುಗೊರೆಗಳನ್ನು ನೀಡಿದ. ತಮ್ಮ ಉಡುಗೊರೆಗಳನ್ನು ಕಂಡು ಅವರಿಗೆಲ್ಲಾ ಸಂತೋಷವಾಯಿತು. ʻನನ್ನ ಸಂದೇಶ ತಲುಪಿಸಿದಿರಾ?ʼ ಕೇಳಿತು ಗಿಳಿ. “ಹೌದು. ಆದರೆ ನನ್ನ ಮಾತು ಕೇಳಿದ ತಕ್ಷಣ ಅಲ್ಲಿದ್ದ ಗಿಳಿಯೊಂದು ಗಡಗಡನೇ ನಡುಗಿ, ಗಿರ್ರನೆ ತಿರುಗಿ ಮಗುಚಿ ಬಿತ್ತು. ಬಹುಶಃ ಸತ್ತೇ ಹೋಗಿರಬೇಕು ಅದು. ಆದರೆ ಅದಕ್ಕೆ ಆಘಾತವಾಗುವಂಥ ಏನನ್ನೂ ನಾನು ಹೇಳಲಿಲ್ಲ” ಎಂದು ಸಪ್ಪೆ ಮುಖ ಮಾಡಿದ ವರ್ತಕ.

ಇದನ್ನೂ ಓದಿ: ಮಕ್ಕಳ ಕಥೆ: ಧೈರ್ಯವಂತ ರಾಜಕುಮಾರಿ

ಆತನ ಈ ಮಾತಿಗೆ ಕ್ಷಣಕಾಲ ಗಿಳಿ ಮೌನವಾಯಿತು. ನಂತರ ಇದ್ದಕ್ಕಿದ್ದಂತೆ ಗಡಗಡನೇ ನಡುಗಿ, ಗಿರ್ರನೆ ತಿರುಗಿ ಮಗುಚಿ ಬಿತ್ತು. ಈಗಂತೂ ವರ್ತಕನಿಗೆ ನಿಜಕ್ಕೂ ಆಘಾತವಾಯಿತು. ʻಅರೆ! ಇದೇನಾಗುತ್ತಿದೆ? ಅಂಥದ್ದೇನು ಹೇಳಿದೆ ನಾನು!ʼ ಎಂದು ಗಾಬರಿಗೊಂಡು ಗಿಳಿಯನ್ನು ಪಂಜರದಿಂದ ಹೊರತೆಗೆದ. ಗಿಳಿ ನಿಶ್ಚಲವಾಗಿತ್ತು. ಅದನ್ನು ಮಣ್ಣು ಮಾಡೋಣ ಎಂದು ಗಿಳಿಯನ್ನು ತನ್ನ ಉದ್ಯಾನವನಕ್ಕೆ ತಂದು, ಅದನ್ನೊಂದು ಕಲ್ಲು ಬೆಂಚಿನ ಮೇಲಿಟ್ಟು ಗುಂಡಿ ತೋಡಿದ. ಆ ಗುಂಡಿಯೊಳಗೆ ಹಾಕುವುದಕ್ಕೆಂದು ನೋಡಿದರೆ, ಗಿಳಿಯಿಲ್ಲ! ಅದಾಗಲೇ ಹಾರಿ ಹೋಗಿ ಸಮೀಪದ ಮರದ ಮೇಲೆ ಕುಳಿತುಕೊಂಡಿತ್ತು. ಗಿಳಿ ಬದುಕಿರುವುದನ್ನು ಕಂಡು ವರ್ತಕನಿಗೆ ಸಂತೋಷವಾಯಿತು. ʻನಿನಗೇನಾಗಿತ್ತು? ಯಾಕೆ ಹಾಗೆ ಬಿದ್ದೆ?ʼ ಎಂದಾತ ಗಿಳಿಯನ್ನು ಕೇಳಿದ.

“ನನಗೇನೂ ಆಗಿರಲಿಲ್ಲ. ಆದರೆ ಪಂಜರದ ಬದುಕು ನನಗೆ ಬೇಕಿರಲಿಲ್ಲ. ಅದಕ್ಕಾಗಿಯೇ ಭಾರತದಲ್ಲಿರುವ ನನ್ನ ಜೊತೆಗಾರರಿಗೆ ಸಂದೇಶ ಕಳುಹಿಸಿದ್ದೆ. ಆ ಗಿಳಿಯು ತನ್ನ ವರ್ತನೆಯ ಮೂಲಕ ನನಗೆ ಮರಳಿ ಸಂದೇಶವನ್ನು ಕಳುಹಿಸಿತ್ತು. ಅದು ಹೇಳಿದಂತೆಯೇ ಮಾಡಿದ್ದಕ್ಕೆ ನಿನ್ನ ಪಂಜರದಿಂದ ಹೊರಬರಲು ನನಗೆ ಸಾಧ್ಯವಾಯಿತು. ಚಿನ್ನದ್ದಾದರೂ ಅದು ಪಂಜರವೇ ತಾನೆ! ನನಗೆ ನೀಲಾಕಾಶವೇ ಮನೆ” ಎಂದಿತು ಗಿಳಿ.

“ನೀನು ಪಂಜರದಲ್ಲಿ ಬಂಧಿಯಾಗಿದ್ದೆ ಎಂಬುದೇ ನನಗೆ ಅರಿವಾಗಲಿಲ್ಲ. ಆಗಲಿ, ಹಾರು ನಭಕ್ಕೆ. ನನಗೇನೂ ಬೇಸರವಿಲ್ಲ. ಆಗಾಗ ಬಂದು ಮಾತಾಡಿ ಹೋಗು” ಎನ್ನುತ್ತಾ ರೆಕ್ಕೆಬಿಚ್ಚಿದ್ದ ಗಿಳಿಯತ್ತ ಕೈಬೀಸಿದ ವರ್ತಕ.

ಇದನ್ನೂ ಓದಿ: ಮಕ್ಕಳ ಕಥೆ: ಭೂಮಿಯಲ್ಲಿ ಸಿಕ್ಕಿದ ನಿಧಿ ರಕ್ಷಿಸಿಕೊಂಡ ಬಡವ

Exit mobile version