Site icon Vistara News

ಮಕ್ಕಳ ಕಥೆ | ಹರಿಶರ್ಮ ಮತ್ತು ಪರಾರಿಯಾದ ಕುದುರೆ

horse

ಧನದತ್ತ ಆ ಊರಿನ ಧನಿಕ. ಅಂಥವನ ಒಬ್ಬಳೇ ಮಗಳ ಮದುವೆಯೆಂದರೆ ಕೇಳಬೇಕೆ? ಅದ್ಧೂರಿಯಿಂದ ಸಿದ್ಧತೆಗಳು ನಡೆಯುತ್ತಿದ್ದವು. ಒಳ್ಳೆಯ ಔತಣದ ನಿರೀಕ್ಷೆಯಲ್ಲಿ ಊರಿನ ಜನರೂ ಉತ್ಸುಕರಾಗಿದ್ದರು, ಹರಿ ಶರ್ಮನನ್ನೂ ಸೇರಿದಂತೆ.

ʻಲೋ ಮಂಡೂಕ, ಅಂತೂ ಒಂದು ದಿನವಾದರೂ ಹೊಟ್ಟೆತುಂಬಾ ರುಚಿರುಚಿಯಾಗಿ ಊಟ ಮಾಡಬಹುದುʼ ಎಂದು ತನಗೆ ತಾನೇ ಹೇಳಿಕೊಂಡ. ʻನೀನೇಕೆ ನಿನ್ನಷ್ಟಕ್ಕೆ ಮಾತಾಡಿಕೊಳ್ಳುತ್ತೀಯ?ʼ ಅವನ ಹೆಂಡತಿ ಕೇಳಿದಳು ಕುತೂಹಲದಿಂದ. ಕೆಲವು ಸಂದರ್ಭಗಳಲ್ಲಿ ಆತ ತನ್ನಷ್ಟಕ್ಕೇ ಮಾತಾಡಿಕೊಳ್ಳುವುದಿತ್ತು. ಹಾಗಂತ ಹೆಂಡತಿಗೆ ಹೇಳುವುದು ಹೇಗೆ? ಇವನಿಗೆಲ್ಲೋ ಮರುಳು ಎನ್ನುವುದಿಲ್ಲವೇ? ಅದಕ್ಕೊಂದು ಕಾರಣ ಸೃಷ್ಟಿಸಿದ.

ʻನನಗೆ ಯಾರೊಂದಿಗಾದರೂ ಮಾತಾಡಬೇಕು. ಆದರೆ ಈ ಬಡವನಲ್ಲಿ ಯಾರು ಮಾತಾಡುತ್ತಾರೆ? ಹಾಗಾಗಿ ನಾನು ನನ್ನಲ್ಲಿಯೇ ಮಾತಾಡಿಕೊಳ್ಳುತ್ತೇನೆʼ ಎಂದ ಹರಿ ಶರ್ಮ. ʻಅದ್ಸರಿ, ಆದರೆ ನಿನ್ನನ್ನು ನೀನೇಕೆ ಮಂಡೂಕ ಎಂದು ಕರೆದುಕೊಳ್ಳುತ್ತೀಯ?ʼ ಹೆಂಡತಿಯ ಪ್ರಶ್ನೆಗಳು ಮುಗಿದಿರಲಿಲ್ಲ.

ʻನಾನು ಚಿಕ್ಕವನಿದ್ದಾಗ ಮಂಡೂಕದಂತೆ ಕುಪ್ಪಳಿಸುತ್ತಿದ್ದೆ. ಅದಕ್ಕೆ ನನ್ನಮ್ಮ ಪ್ರೀತಿಯಿಂದ ಹಾಗಂತ ಹೆಸರಿಟ್ಟಿದ್ದಳುʼ ಎಂದ ಹರಿ ಶರ್ಮ. ಆತನ ಬಳಿ ಬಂದ ಮಡದಿ, ʻಬೇಸರ ಮಾಡಬೇಡ. ಒಂದಲ್ಲಾ ಒಂದು ದಿನ ನೀನೂ ಹಣ, ಹೆಸರು ಎಲ್ಲವನ್ನೂ ಗಳಿಸುತ್ತೀಯʼ ಎಂದು ಸಮಾಧಾನ ಮಾಡಿದಳು.

ಆದರೆ ಹಣ ಗಳಿಸಿ ಶ್ರೀಮಂತನಾಗುವ ಆಸೆಯನ್ನು ಹರಿ ಶರ್ಮ ಎಂದೋ ಬಿಟ್ಟುಬಿಟ್ಟಿದ್ದ. ಅದ್ಧೂರಿ ಮದುವೆಯೊಂದರಲ್ಲಿ ಹೊಟ್ಟೆ ತುಂಬಾ ಊಟಮಾಡಬಹುದೆಂಬ ಆಸೆಯನ್ನು ಮಾತ್ರವೇ ಇರಿಸಿಕೊಂಡಿದ್ದ. ಆದರೆ ಅವನ ದುರದೃಷ್ಟಕ್ಕೆ, ಮದುವೆಯ ಕರೆಯಾದರೂ ಬರಬೇಡವೇ ಅವನಿಗೆ! ʻಮದುವೆಯ ಸಿದ್ಧತೆಯಲ್ಲಿ ಮರೆತಿರಬಹುದು ಧನದತ್ತ. ಅದನ್ನೆಲ್ಲಾ ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಹೋಗು ಮದುವೆಗೆʼ ಎಂದು ಹೇಳಿದಳು ಅವನ ಹೆಂಡತಿ.

ಹರಿ ಶರ್ಮ ಬಡವ ಎಂಬುದು ನಿಜ, ಆದರೆ ಸ್ವಾಭಿಮಾನಿಯಾಗಿದ್ದ. ಕರೆಯಿಲ್ಲದ ಮದುವೆಗೆ ಹೋಗುವುದಕ್ಕೆ ಅವನಿಗೆ ಮನಸ್ಸು ಬರಲಿಲ್ಲ. ʻನೀನು ಬೇಕಿದ್ದರೆ ಹೋಗು. ನಾನಂತೂ ಖಂಡಿತ ಬರಲಾರೆʼ ಎಂದು ಖಡಾಖಂಡಿತವಾಗಿ ಹೇಳಿದ ಹರಿ ಶರ್ಮ. ಹೆಚ್ಚು ಯೋಚಿಸದ ಆತನ ಹೆಂಡತಿ, ಸಿದ್ಧಳಾಗಿ ಮದುವೆಮನೆಗೆ ಹೋದಳು. ʻಬಡತನ ಕೆಟ್ಟದ್ದು ಮಂಡೂಕ. ನಿನ್ನ ಹೆಂಡತಿಯೂ ನಿನಗೆ ಗೌರವ ಕೊಡುವುದಿಲ್ಲʼ ಎಂದು ಹೇಳಿಕೊಳ್ಳುತ್ತಾ, ಮನೆಯಿಂದ ಹೊರಬಂದು ಕಾಡಿನ ದಾರಿಯಲ್ಲಿ ಆತ ನಡೆಯತೊಡಗಿದ.

ಇತ್ತ ಮದುವೆಮನೆಯಲ್ಲಿ, ವರನ ಕಡೆಯ ದಿಬ್ಬಣ ಬಂತು. ಮದುಮಗ ಕುದುರೆ ಮೇಲೆ ಬರುತ್ತಿದ್ದಂತೆ ಜೋರಾಗಿ ಬಾಜಾ, ಭಜಂತ್ರಿ, ಪಟಾಕಿ, ಸಿಡಿಮದ್ದು ಎಲ್ಲವೂ ಗದ್ದಲ ಮಾಡತೊಡಗಿದವು. ಹೆದರಿ ಗಾಬರಿಯಾಗಿದ್ದ ಕುದುರೆ, ಮದುಮಗ ಕುದುರೆಯಿಂದ ಇಳಿಯುತ್ತಿದ್ದಂತೆಯೇ ಅಲ್ಲಿಂದ ದಿಕ್ಕೆಟ್ಟು ಓಡತೊಡಗಿತು. ಓಡುತ್ತಾ ಸಾಗಿದ ಕುದುರೆ ಕಾಡಿನೊಳಗೆ ಕಣ್ಮರೆಯಾಯಿತು.

ಇದನ್ನೂ ಓದಿ: ಮಕ್ಕಳ ಕಥೆ | ರಾಜಕುಮಾರನ ಹೊಟ್ಟೆಯೊಳಗಿನ ಹಾವು

ಕಾಡಿನೊಳಗೆ ನಡೆಯುತ್ತಾ ಹೋಗುತ್ತಿದ್ದ ಹರಿ ಶರ್ಮ, ಕೊಳವೊಂದರ ಬಳಿ ನಿಂತ. ಮನಸ್ಸಿಗೆ ಬೇಸರವಾದ್ದರಿಂದ ಏನು ಮಾಡುವುದೆಂದು ತಿಳಿಯುತ್ತಿರಲಿಲ್ಲ. ಅಷ್ಟರಲ್ಲಿ ಕುದುರೆಯ ಹೆಜ್ಜೆಯ ಸದ್ದು ಕೇಳಿಬರತೊಡಗಿತು. ಕ್ರಮೇಣ ಹತ್ತಿರವಾದ ಆ ಶಬ್ದ ಆತನ ಸಮೀಪದವರೆಗೂ ಬಂತು. ಹೆದರಿ ಕಂಗಾಲಾಗಿದ್ದ ಆ ಕುದುರೆಯನ್ನು ಹಿಡಿದು ಸಮಾಧಾನಪಡಿಸಿದ ಹರಿ ಶರ್ಮ, ಅದನ್ನು ಕೊಳದ ಬಳಿ ಕರೆದೊಯ್ದು ನೀರು ಕುಡಿಸಿದ. ಮೈಮೇಲೆಲ್ಲಾ ನೀರೆರಚಿ ಸಮಾಧಾನ ಪಡಿಸಿದ. ಹಾಗೆಯೆ ಸಮೀಪದಲ್ಲಿದ್ದ ಒಂದಿಷ್ಟು ಹುಲ್ಲು ಕಿತ್ತು ತಂದು ಅದಕ್ಕೆ ನೀಡಿದ. ಕುದುರೆ ನೆಮ್ಮದಿಯಿಂದ ಮೇಯತೊಡಗಿತು. ಇದರ ಬಗ್ಗೆ ಹೆಚ್ಚು ಯೋಚಿಸದೆ, ತನ್ನ ಮನೆಯತ್ತ ನಡೆದ ಹರಿ ಶರ್ಮ.

ಮನೆಗೆ ಬರುವಷ್ಟರಲ್ಲಿ ಆತನ ಹೆಂಡತಿಯೂ ಮನೆಗೆ ಮರಳಿದ್ದಳು. ಧನದತ್ತನ ಮಗಳ ದಿಬ್ಬಣದಲ್ಲಿ ಮದುಮಗನ ಕುದುರೆ ಹೇಗೆ ಹೆದರಿ ಪಲಾಯನ ಮಾಡಿತು, ಇದರಿಂದ ಎಲ್ಲರೂ ಹೇಗೆ ಚಿಂತಿತರಾಗಿದ್ದಾರೆ ಎಂಬುದನ್ನೆಲ್ಲಾ ವಿಸ್ತಾರವಾಗಿ ಆಕೆ ವರ್ಣಿಸಿದಳು. ʻಯಾವುದಾದರೂ ಒಳ್ಳೆಯ ಜೋಯಿಸರನ್ನು ಕೇಳಿದ್ದರೆ ಕುದುರೆಯ ಬಗ್ಗೆ ತಿಳಿಯುತ್ತಿತ್ತುʼ ಎಂದ ಹರಿ ಶರ್ಮ.

ʻಅಯ್ಯೋ, ಕೇಳದೇ ಏನು! ಆದರೆ ಯಾರಿಂದಲೂ ಏನೂ ತಿಳಿಯಲಿಲ್ಲವಂತೆ. ಪಾಪ, ಹೀಗೇ ಆದರೆ ಈ ಹುಡುಗಿ ತಮಗೆ ಬೇಡ ಎನ್ನುತ್ತಿದ್ದಾರಂತೆ ವರನ ಕಡೆಯವರು. ಧನದತ್ತನಂತೂ ತಲೆಮೇಲೆ ಕೈ ಹೊತ್ತು ಕುಳಿತಿದ್ದಾನೆ, ಪಾಪʼ ಎಂದು ವಿವರಿಸಿದಳು ಹೆಂಡತಿ. ಶರ್ಮ ಸುಮ್ಮನಾದ.

ಇದನ್ನೂ ಓದಿ: ಮಕ್ಕಳ ಕಥೆ: ಸಹೋದರರ ಉಗ್ರಾಣದಲ್ಲಿ ಧಾನ್ಯ ಯಾಕೆ ಕಡಿಮೆ ಆಗಲಿಲ್ಲ?

ʻನಿನ್ನ ತಂದೆ ಒಳ್ಳೆಯ ಜೋತಿಷ್ಯ ಹೇಳುತ್ತಿದ್ದರಲ್ಲವೇ?ʼ ನೆನಪಿಸಿಕೊಂಡಳು ಹೆಂಡತಿ. ಶರ್ಮ ಆಗಲೂ ಸುಮ್ಮನಿದ್ದ. ʻನೀನೂ ಹಿಂದೆ ಕಲಿತಿದ್ದೆಯಲ್ಲವೇ?ʼ ಮತ್ತೆ ಕೇಳಿದಳು ಮಡದಿ. ʻಅದೆಲ್ಲಾ ಹಿಂದೊಂದು ಕಾಲದಲ್ಲಿ. ಈಗೆಲ್ಲ ಸಾಧ್ಯವಿಲ್ಲʼ ಎಂದು ಹರಿ ಶರ್ಮ. ʻಹಾಗಲ್ಲ, ಧನದತ್ತನಿಗೆ ನೀನು ನೆರವಾಗಬಹುದಲ್ಲʼ ಬಿಡದೆ ಕೇಳಿದಳು ಹೆಂಡತಿ. ʻಅಯ್ಯೋ! ನನ್ನಂಥ ಬಡವನ ಮಾತು ಅವನಿಗೇಕೆ ಬೇಕು? ಅವನ ನೆರವಿಗೆ ಬೇಕಷ್ಟು ಜನರಿದ್ದಾರೆ, ಬಿಡುʼ ಎಂದ ಶರ್ಮ. ಆದರೆ ಹೆಂಡತಿ ಸುಮ್ಮನಿರದೆ, ನೇರ ಧನದತ್ತನ ಬಳಿಗೆ ತೆರಳಿದಳು.

ಸ್ವಲ್ಪ ಹೊತ್ತಿನಲ್ಲಿ ಧನದತ್ತನೇ ಬಂದು ಹರಿ ಶರ್ಮನ ಎದುರು ನಿಂತಿದ್ದ. ʻನಿನ್ನನ್ನು ಮದುವೆಗೆ ಆಮಂತ್ರಿಸದೆ ತಪ್ಪು ಮಾಡಿದ್ದು ಹೌದು ನಾನು. ಹಾಗಂತ ಅದನ್ನೆಲ್ಲ ಮನಸ್ಸಿನಲ್ಲಿ ಇಟ್ಟುಕೊಳ್ಳದೆ ನನಗೆ ಸಹಾಯ ಮಾಡುʼ ಎಂದು ಬೇಡಿಕೊಂಡ. ಹರಿ ಶರ್ಮನಿಗೆ ನಗು ಬಂತು. ಅವನಿಗೆ ಕಲಿತ ಜೋತಿಷ್ಯವೆಲ್ಲಾ ಮರೆತು ಹೋಗಿತ್ತು. ಆದರೂ ಏನಾದರೊಂದು ಮಾಡಬೇಕಿತ್ತು. ಸುಮ್ಮನೆ ಕಣ್ಣು ಮುಚ್ಚಿ ಕುಳಿತ. ಬಾಯಲ್ಲಿ ಒಂದಿಷ್ಟು ಮಣಮಣ ಮಾಡಿದ. ʻಕುದುರೆಯ ಬಣ್ಣ ಯಾವುದಾಗಿತ್ತು?ʼ ಕೇಳಿದ ಶರ್ಮ. ಧನದತ್ತ ಉತ್ತರಿಸಿದ. ಹಾಗೆಯೇ ಇನ್ನೊಂದಿಷ್ಟು ಪ್ರಶ್ನೆಗಳನ್ನೂ ಕೇಳಿದ. ಎಲ್ಲವಕ್ಕೂ ಧನದತ್ತನಿಂದ ಉತ್ತರ ಬಂತು. ತಕ್ಷಣವೇ ಕಾಡಿನ ಕೊಳದ ಬಳಿಯಲ್ಲಿ ಕಂಡ ಆ ಕುದುರೆಯ ನೆನಪಾಯಿತು ಶರ್ಮನಿಗೆ. ಹೌದು! ಅದೇ ಕುದುರೆ, ಅನುಮಾನವೇ ಇಲ್ಲ ಎಂದುಕೊಂಡ ಆತ, ʻಊರಿನ ಪಶ್ಚಿಮ ದಿಕ್ಕಿಗಿರುವ ಕಾಡಿಗೆ ಹುಡುಕಲು ಜನರನ್ನು ಕಳಿಸಿ. ಕಾಡೊಳಗಿರುವ ಕೊಳದವರೆಗೂ ಹೋಗಿ ಹುಡುಕಬೇಕು. ಬೆಳದಿಂಗಳ ಬೆಳಕು ಕೊಳದ ಮೇಲೆ ಬೀಳುವ ಹೊತ್ತಿಗೆ ಅಲ್ಲಿಯೇ ಎಲ್ಲಾದರೂ ಕುದುರೆ ದೊರೆಯುತ್ತದೆʼ ಎಂದು ಹೇಳಿದ ಹರಿ ಶರ್ಮ.

ಅವನ ಮಾತಿನಂತೆಯೇ ತನ್ನ ಜನರನ್ನು ಹುಡುಕಲು ಕಳಿಸಿದ ಧನದತ್ತನಿಗೆ ಕುದುರೆ ಮರಳಿ ದೊರೆಯಿತು. ರಾಜವೈಭವದಿಂದ ಹರಿ ಶರ್ಮನನ್ನು ಮದುವೆ ಮನೆಗೆ ಕರೆದೊಯ್ಯಲಾಯಿತು. ಬಹಳಷ್ಟು ಉಪಚಾರ-ಉಡುಗೊರೆಗಳನ್ನು ನೀಡಿ ಸತ್ಕರಿಸಲಾಯಿತು. ಅದ್ಧೂರಿಯಾಗಿ ನಡೆದ ಮದುವೆಯನ್ನು ನೋಡಿ, ಉಂಡು, ತಣಿದ ಹರಿ ಶರ್ಮ ಮತ್ತವನ ಹೆಂಡತಿ ಸಂತೋಷದಿಂದ ಮನೆಗೆ ಮರಳಿದರು.

Exit mobile version